ಹೊಳಲ್ಕೆರೆ ಶಾಸಕ ದಡ್ಡ, ಸಾವಿರ ಕೋಟಿ ಸುಳ್ಳುಗಾರ – ಮಾಜಿ ಸಚಿವ ಹೆಚ್ ಆಂಜನೇಯ ವಾಗ್ದಾಳಿ

ನಾನು ಸಚಿವನಾಗಿದ್ದಾಗ ಹೊಳಲ್ಕರೆ ಕ್ಷೇತ್ರಕ್ಕೆ ತಂದ ಅನುದಾನಗಳನ್ನ ಶಾಸಕ ಚಂದ್ರಪ್ಪ ತಾನೇ ತಂದಿರುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅವ ಒಬ್ಬ ದಡ್ಡ, ಸಾವಿರ ಕೋಟಿ ಸುಳ್ಳುಗಾರ ಎಂದು ಹೆಚ್ ಆಂಜನೇಯ ಟೀಕಿಸಿದ್ದಾರೆ.

ಹೆಚ್ ಆಂಜನೇಯ

ಹೆಚ್ ಆಂಜನೇಯ

  • Share this:
ಚಿತ್ರದುರ್ಗ:  ಬೋರ್​​ವೆಲ್ ಕೊರೆಯದಂತೆ ಅಧಿಕಾರಿಗಳಿಗೆ ಪತ್ರ ನೀಡಿರುವ  ಶಾಸಕ ಎಂ ಚಂದ್ರಪ್ಪ ಬಡ ಜನರ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ. ಅವನೊಬ್ಬ ದಡ್ಡ ಶಾಸಕ, ಸಾವಿರ ಕೋಟಿ ಸುಳ್ಳುಗಾರ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಅವರು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್. ಆಂಜನೇಯ, ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ವಿಶೇಷ ಅನುದಾನಗಳನ್ನ ತಂದು ಅನೇಕ ಅಭಿವೃದ್ದಿ ಕಾಮಗಾರಿಗಳನ್ನ ಪ್ರಾರಂಭ ಮಾಡಿದ್ದೆ. 2016-17 ಹಾಗೂ 2018 ರಲ್ಲಿ ಹೆಚ್ಚು ಕಾಮಗಾರಿಗಳು ಪ್ರಾರಂಭ ಆಗಿದ್ದವು. ಅವೆಲ್ಲವೂ ಹೊಳಲ್ಕೆರೆ ಕ್ಷೇತ್ರಕ್ಕೆ ನನ್ನ ಅವಧಿಯಲ್ಲಿ ತಂದ ಕಾಮಗಾರಿಗಳೇ ಹೊರತು ಶಾಸಕ ಎಂ ಚಂದ್ರಪ್ಪನಿಂದ ಯಾವುದೇ ಹೊಸ ಕಟ್ಟಡಗಳ ಕಾಮಗಾರಿ ನಡೆಯುತ್ತಿಲ್ಲ. ಆಸ್ಪತ್ರೆ, ವಸತಿ, ಶಾಲೆ ಕ್ರೀಡಾಂಗಣ, ಶಾಪಿಂಗ್ ಕಾಂಪ್ಲೆಕ್ಸ್, KSRTC ಚಾಲಕರ ತರಬೇತಿ ಕೇಂದ್ರ ಎಲ್ಲವೂ ನಾನು ಮಾಡಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

ಚಿತ್ರಹಳ್ಳಿಗೆ ಮಂಜೂರಾಗಿದ್ದ ಡಿಪ್ಲೊಮಾ ಕಾಲೇಜನ್ನು ಹೊಳಲ್ಕೆರೆ ಕಣಿವೆಯಲ್ಲಿ ನೀರು ಹರಿಯುವ ಜಾಗದಲ್ಲಿ ಕಟ್ಟಲು ಸ್ಥಳಾಂತರ ಮಾಡಿದ್ದಾರೆ. ಹೆಚ್. ಆಂಜನೇಯಗೆ ಹೆಸರು ಬರುತ್ತದೆ ಅಂತ ಹೀಗೆ ಮಾಡಿದ್ದಾರೆ ಎಂದು ಟೀಕಿಸಿದ ಅವರು, ಸರ್ಕಾರದಲ್ಲಿ ದುಡ್ಡಿಲ್ಲ ಅನ್ನೋದು ಜಗಜ್ಜಾಹೀರು ಆಗಿದೆ. ಕೋವಿಡ್​ಗೆ ಹಣ ಕೊಡೋಕೆ ಆಗುತ್ತಿಲ್ಲ ಅವರಿಗೆ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಉಪಚುನಾವಣೆ: ರೌಡಿಶೀಟರ್​ಗಳ ಮನೆ ಮೇಲೆ ಪೊಲೀಸ್ ದಾಳಿ – ಮಾರಕಾಸ್ತ್ರ, ಜಿಂಕೆ ಕೊಂಬು ವಶಕ್ಕೆ

ಇನ್ನು, ಚಾಲಕರ ತರಬೇತಿ ಕೇಂದ್ರ ಶುರುವಾಗಿ ಮೂರು ವರ್ಷಗಳು ಕಳೆದರೂ ಉದ್ಘಾಟನೆಯನ್ನೇ ಮಾಡದೆ ಈಗ ಉದ್ಘಾಟನೆ ಮಾಡುತ್ತಿದ್ದಾರೆ. ನನ್ನ ಅವಧಿಯಲ್ಲಿ ಆಗಿದ್ದನ್ನ ಚಂದ್ರಪ್ಪ ಮಾಡಿಸಿದ್ದು ಹೇಳುತ್ತಿದ್ದಾರೆ. ಇಂದಿರಾ ಗಾಂಧಿ ವಸತಿ ಶಾಲೆಗೆ ಬಿ. ದುರ್ಗದ ವಸತಿ ಶಾಲೆಗೆ ನಾವು ನಮ್ಮ ಸರ್ಕಾರದಲ್ಲಿ 16 ಕೋಟಿ ರೂ ನೀಡಿದ್ದೇವೆ. ಈಗ ಇವರು ಮೂರು ಕೋಟಿ ತಂದು ಮಾಡಿದ್ದೇನೆ ಎಂದು ಶಾಸಕ ಎಂ ಚಂದ್ರಪ್ಪ ಸುಳ್ಳು ಹೇಳಿದ್ದಾರೆ. ಅದನ್ನು ತೋರಿಸಲಿ, ಇಲ್ಲಾ ಅವರೇ ಆ ಹಣವನ್ನ ಡ್ರಾ ಮಾಡಿ ಜೋಬಿಗೆ ಹಾಕಿಕೊಂಡರಾ ಎಂದು ಪ್ರಶ್ನಿಸಿ ಹೆಚ್ ಆಂಜನೇಯ ಗಂಭೀರ ಆರೋಪ ಮಾಡಿದ್ದಾರೆ.

ಹೊಳಲ್ಕರೆ ಕ್ಷೇತ್ರಕ್ಕೆ ಸಾವಿರಾರು ಕೋಟಿ ತಂದಿದ್ದೇನೆ ಎಂದು ಹೇಳುವ ಶಾಸಕ ಎಂ.ಚಂದ್ರಪ್ಪ ಸಾವಿರಾರು ಕೊಟಿಯ ಸುಳ್ಳುಗಾರ. ಸುಳ್ಳುಗಾರ ಶಾಸಕ ಎಂದು ಹೊಳಲ್ಕೆರೆಯಲ್ಲಿ ಜನ ಜನಿತರಾಗಿದ್ದಾರೆ. ಅಲ್ಲದೇ, ನಾನು ಅಭಿವೃದ್ದಿಗಾಗಿ ಕ್ಷೇತ್ರಕ್ಕೆ ತಂದಿದ್ದ 1.5 ಸಾವಿರ ಕೋಟಿಯನ್ನು ತಾನೇ ತಂದಿದ್ದೇನೆ, ಅದಕ್ಕೆ ಶ್ವೇತ ಪತ್ರ ಹೊರಡಿಸುತ್ತೇನೆ ಎಂದು ಚಂದ್ರಪ್ಪ ಹೇಳಿದ್ದಾರೆ. ಹಾಗಿದ್ದರೆ ಶ್ವೆತ ಪತ್ರ ಹೊರಡಿಸಲಿ ನೋಡೋಣ, ಅಥವಾ ಕಾಮಗಾರಿ ಮಾಡದೆಯೇ 2 ಸಾವಿರ ಕೋಟಿ ಎತ್ತಾಕಂಡ್ ಹೋಗಿದ್ದೀಯೋ ಎಂದು ಜನರಿಗೆ ಹೇಳು ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಆಂಜನೇಯ ತಾಕೀತು‌ ಮಾಡಿದ್ದಾರೆ.

ಇದನ್ನೂ ಓದಿ: ಮಸ್ಕಿಯಲ್ಲಿ ರಾಜ್ಯ ಬಿಜೆಪಿಯ ಅತಿರಥರ ಭರ್ಜರಿ ಪ್ರಚಾರ; ಕೊರೋನಾ ನಿಯಮಗಳಿಗೂ ಡೋಂಟ್ ಕೇರ್

ನಾವು ಎಲ್ಲಾ ಜಾತಿಯ ಬಡವರಿಗೂ ಸಾಕಷ್ಟು ಬೋರ್​ವೆಲ್ ಕೊರೆಸಿದ್ದೇವೆ. ಅದರೆ, ಫಲಾನುಭವಿಗಳಿಗೆ ಬೋರ್​ವೆಲ್ ಕೊರೆಯುವುದು ಬೇಡ ಎಂದು ಅಧಿಕಾರಿಗಳುಗೆ ಪತ್ರ ನೀಡಿದ್ದಾರೆ. ಬಡವರ ಅನ್ನ ಕಿತ್ತುಕೊಳ್ಳುವ ಶಾಸಕರನ್ನ ಈ ದೇಶದ ಎಲ್ಲಿಯಾದರೂ ನೋಡಿದ್ದೀರಾ? ಎಂದು ಪ್ರಶ್ನಿಸಿದ್ದು, ಇವನೊಬ್ಬ ದಡ್ಡ ಶಾಸಕ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: