Ex Mayor Tea Seller- ಫುಟ್​ಪಾತ್​ನಲ್ಲಿ ಟೀ ಮಾರಿ ಜೀವನ ಸಾಗಿಸುತ್ತಿರುವ ಮಾಜಿ ಮೇಯರ್

ಕಾರ್ಪೊರೇಟರ್ ಆದವರು ಐಷಾರಾಮಿ ಬಂಗಲೆ, ಕೋಟ್ಯಂತರ ಹಣ ಗಿಟ್ಟಿಸಿ ಝುಂ ಎಂದು ಮೆರೆಯುತ್ತಾರೆ. ಆದರೆ, ಮೇಯರ್ ಹುದ್ದೆಗೇರಿ ಖ್ಯಾತರಾದ ಮಹಿಳೆಯೊಬ್ಬರು ಕಲಬುರ್ಗಿಯಲ್ಲಿ ಚಹಾ ಮಾರಿ ಜೀವನ ನಡೆಸುತ್ತಿದ್ದಾರೆ.

ಸುನಂದಾ ರಾಜಾರಾಮ್ ಐಹೊಳೆ

ಸುನಂದಾ ರಾಜಾರಾಮ್ ಐಹೊಳೆ

 • Share this:
  ಕಲಬುರ್ಗಿ: ರಾಜಕೀಯ ಪ್ರವೇಶ ಮಾಡಿ ಒಂದು ಬಾರಿ ಎಂಥದ್ದಾದರೂ ಅಧಿಕಾರ ಸಿಕ್ಕರೆ ಸಾಕು ಹಿಡಿಯೋರೆ ಇಲ್ಲದಂತೆ ಬೆಳೆದು ಬಿಡ್ತಾರೆ. ಮನೆ, ಆಸ್ತಿ, ಬ್ಯುಸಿನೆಸ್, ಓಡಾಡೋಕೆ ಐಷಾರಾಮಿ ಕಾರು, ಲಕ್ಷ ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಮಾಡ್ತಾರೆ. ಆದ್ರೆ ಇಲ್ಲಿ ನೀವು ಓದುವ ಈ ಸ್ಟೋರಿ ನೋಡಿದ್ರೆ ನೀವು ಒಂದು ಕ್ಷಣ ಅಚ್ಚರಿ ಆಗುತ್ತೀರಿ. ಇಲ್ಲೊಬ್ಬ ಮಹಿಳೆ ಮೇಯರ್ ಗದ್ದುಗೆ ಏರಿ ಕೆಳಗಿಳಿದಿದ್ದರೂ ಫುಟ್ ಪಾತ್ ಮೇಲೆ ಟೀ (ಚಹಾ) ಮಾರಾಟ ಮಾಡಿ ಜೀವನ ನಡೆಸ್ತಿದ್ದಾರೆ. ಈ ಮಾಜಿ ಮೇಯರ್ ಹೆಸರು ಸುನಂದಾ ರಾಜಾರಾಮ್ ಐಹೊಳೆ. ಬಹುಶಃ ನಿಮಗೆ ನಂಬೋಕೆ ಆಗದೇ ಇದ್ದರೂ ಸತ್ಯ. ಕಲಬುರಗಿ ನಗರದ ಹಳೆ ಜೇವರ್ಗಿ ಕ್ರಾಸ್ ಬಳಿ ರಸ್ತೆಯ ಫುಟ್ ಪಾತ್ ಮೇಲೆ ಟೀ ಅಂಗಡಿ ಇಟ್ಟುಕೊಂಡು ಮಾಜಿ ಮೇಯರ್ ಸುನಂದಾ ಐಹೊಳೆ ಟೀ ಮಾರಾಟ ಮಾಡಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ‌.

  ಅಂದಹಾಗೆ 2007ರಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಂದಿನ ವಾರ್ಡ್ ಸಂಖ್ಯೆ 49 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜನಾಶಿರ್ವಾದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಕಾಂಗ್ರೆಸ್ ಮತ್ತು ಬಿಎಸ್​ಪಿ ಸದಸ್ಯರ ಸಪೋರ್ಟ್​ನಿಂದ 2010-11 ರಲ್ಲಿ ಸುನಂದಾ ರಾಜಾರಾಮ್ ಅವರು ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಗದ್ದುಗೆ ಏರಿದರು. ಸಮುದಾಯ ಭವನಗಳ ನಿರ್ಮಾಣ, ಕುಡಿಯುವ ನೀರು, ಸುಸಜ್ಜಿತ ರಸ್ತೆ, ಬೀದಿ ದೀಪ, ಚರಂಡಿ ವ್ಯವಸ್ಥೆ, ಫುಟ್ ಪಾತ್ ಹೀಗೆ ಮೂಲಭೂತ ಸೌಲಭ್ಯಗಳನ್ನು ಜನರಿಗೆ ಕಲ್ಪಿಸಿ ಕಲಬುರಗಿ ನಗರಾಭಿವೃದ್ಧಿಗೆ ಒತ್ತು ಕೊಟ್ಟವರು. ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತವನ್ನು ಸುನಂದಾ ನೀಡಿದ್ದರು. ಅಂಥ ಜನೋಪಯೋಗಿ ಮೇಯರ್ ಆಗಿದ್ದ (ಮಾಜಿ ಮೇಯರ್‌) ಸುನಂದಾ ಐಹೊಳೆ ಅವರು ಈಗ ತಮ್ಮ ಉಪ ಜೀವನಕ್ಕಾಗಿ ಟೀ ಅಂಗಡಿ ಇಟ್ಟುಕೊಂಡಿದ್ದಾರೆ.

  ಒಂದು ಬಾರಿ ಗ್ರಾಮ ಪಂಚಾಯತಿ ಸದಸ್ಯರಾದ್ರೆ ಸಾಕು ಎಷ್ಟೋ ಜನ ವೈಯಕ್ತಿಕ ಅಭಿವೃದ್ದಿ ಆಗ್ತಾರೆ. ಅದರಲ್ಲೂ ಆಡಳಿತ ‌ನಡೆಸುವ ಅಧಿಕಾರ ಸಿಕ್ಕರಂತೂ ಮುಗೀತು. ಆಸ್ತಿ- ಪಾಸ್ತಿ, ಐಷಾರಾಮಿ ಕಾರು, ಬಂಗಲೆ, ಲಕ್ಷ, ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಮಾಡಿಕೊಂಡಿರುವ ಬಹಳಷ್ಟು ಜನರನ್ನು ಕಂಡಿರುತ್ತಿರಿ.  ಆದ್ರೆ ಸುನಂದಾ ರಾಜಾರಾವ್ ಅವರು ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಒಂದು ವರ್ಷ ಅವಧಿ ಪೂರ್ಣಗೊಳಿಸಿ, ಜನಪರ ಕೆಲಸ ಮಾಡಿದ್ದಾರೆ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆಸದೆ ಪ್ರಾಮಾಣಿಕವಾಗಿ ಪಾರದರ್ಶಕ ಆಡಳಿತ ಕೊಟ್ಟಿರೋದಕ್ಕೆ ಸಾಕ್ಷ್ಯವಾಗಿ ಇವರ ಟೀ ಅಂಗಡಿಯೇ ನಮ್ಮ ಕಣ್ಮುಂದೆ ಇದೆ‌. ನಿತ್ಯ ಮಾಜಿ ಮೇಯರ್ ಸುನಂದಾ ಅವರ ಟೀ ಅಂಗಡಿಗೆ ನೂರಾರು ಜನ ಬಂದು ಟೀ ಕುಡಿದು ಹೊಗುತ್ತಿದ್ದರೂ ಬಹಳಷ್ಟು ಜನರಿಗೆ ಇದು ಮಾಜಿ ಮೇಯರ್ ಟೀ ಅಂಗಡಿ ಅಂತಾನೆ ಗೊತ್ತಿಲ್ಲ.

  ಇದನ್ನೂ ಓದಿ: ಮದುವೆಯಾಗುತ್ತೇನೆಂದು ಯುವತಿಯರಿಗೆ ವಂಚಿಸುತ್ತಿದ್ದ ವ್ಯಕ್ತಿ ಬಂಧನ; ಈತನ ತಂತ್ರಕ್ಕೆ ಪೊಲೀಸರೇ ಶಾಕ್

  ಒಟ್ಟಿನಲ್ಲಿ, ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಸುನಂದಾ ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ. ಬಿಜೆಪಿ ಪಕ್ಷ ಗುರುತಿಸಿ ಮತ್ತೆ ಟಿಕೆಟ್ ನೀಡಿದ್ರೆ ಕಲಬುರ್ಗಿ ಪಾಲಿಕೆ ಚುನಾವಣೆ ಅಖಾಡಕ್ಕೆ ಇಳಿಯೋದಾಗಿ ಮಾಜಿ ಮೇಯರ್ ಸುನಂದಾ ಹೇಳ್ತಿದ್ದರು. ಆದ್ರೆ ದುರದೃಷ್ಟಕ್ಕೆ ಸಿಕ್ಕಿಲ್ಲ. ಈಗಿನ ರಾಜಕೀಯ ಬೆಳವಣಿಗೆಯಲ್ಲಿ ಇಂತಹಹವರಿಗೆ ಟಿಕೆಟ್ ಸಿಗುತ್ತೆ ಅಂತ ನಿರೀಕ್ಷಿಸೋದು ಕಷ್ಟವೇ. ಒಟ್ನಲ್ಲಿ ಟೀ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿರುವ ಮಾಜಿ ಮೇಯರ್ ಸುನಂದಾ ಐಹೊಳೆ ಅವರ ಪ್ರಾಮಾಣಿಕತೆ ಮಾತ್ರ ಇತರರಿಗೆ ಮಾದರಿಯಾಗಿದೆ.

  ವರದಿ: ಅರುಣ್ ಕುಮಾರ್ ಕದಂ
  Published by:Vijayasarthy SN
  First published: