ಹಾವೇರಿ : ಪ್ರೀತಿಯಿಂದ ಶುರುವಾದ ಈ ಕಥೆ ಮದುವೆಯ ಬಳಿಕ ಕೊಲೆಯಲ್ಲಿ ಕೊನೆಯಾಗಿದೆ. ಹಳೆ ಪ್ರೀತಿಯ ವಿಷಯ ಗೊತ್ತಾಗಿ ಕಟ್ಟಿಕೊಂಡವನು ಮದುವೆಯಾದ 3 ತಿಂಗಳಿಗೆ ನಡುನೀರಲ್ಲಿ ಕೈಬಿಟ್ಟಿದ್ದಾನೆ. ಹಳೆ ಪ್ರೇಮಿಯ ಪಾದವೇ ಗಟ್ಟಿ ಅಂತ ಹೋದವಳು ಹೆಣವಾಗಿದ್ದಾಳೆ. ಪ್ರೀತಿಸಿದವನನ್ನು ಮದುವೆಯಾಗಲಾರದೆ, ಮದುವೆಯಿಂದ ಪ್ರೀತಿ ಸಿಗದೆ 21 ವರ್ಷದ ಹೆಣ್ಣೊಬ್ಬಳು ದುರಂತ ಅಂತ್ಯ ಕಂಡಿದ್ದಾಳೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶಿಲ್ಪಾಳ ಹೆಣ ಪತ್ತೆಯಾಗುವುದರ ಮೂಲಕ ಈ ಕಥೆ ಬಿಚ್ಚಿಕೊಳ್ಳುತ್ತೆ.
ಹಾವೇರಿ ತಾಲೂಕಿನ ಕೌದಿಕಲ್ಲಾಪುರ ಗ್ರಾಮದ ನಿವಾಸಿಯಾಗಿದ್ದ ಶಿಲ್ಪಾಳಿಗೆ ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ರಾಣೆಬೆನ್ನೂರು ತಾಲೂಕಿನ ಯುವಕನೊಬ್ಬನ ಜೊತೆ ಮದುವೆ ಆಗಿತ್ತು. ಆದರೆ ಮದುವೆಗೂ ಮುನ್ನ ಆಕೆಗೆ ಬೇರೊಬ್ಬ ಯುವಕನ ಜೊತೆಗೆ ಪ್ರೀತಿ ಇತ್ತು. ಮದುವೆ ನಂತರ ಪತಿಗೆ ಹಳೆಯ ಸ್ನೇಹಿತನ ವಿಚಾರ ಗೊತ್ತಾಗಿತ್ತು. ಮೂರು ತಿಂಗಳ ಹಿಂದೆ ಪತಿ ಆಕೆಯನ್ನ ತವರು ಮನೆಗೆ ಕಳಿಸಿದ್ದ.
ಏಪ್ರಿಲ್ 22 ರಂದು ಶಿಲ್ಪಾ ಹಾವೇರಿಗೆ ಹೋಗಿ ಬರುತ್ತೇನೆ ಎಂದು ತಾಯಿಗೆ ತಿಳಿಸಿ ಮನೆಯಿಂದ ಹೊರ ಹೋಗಿದ್ದಳು. ಹಾವೇರಿಯಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ತಂಗಿಯನ್ನ ಭೇಟಿಯಾದ್ದಳು. ಸಂಜೆ ಶಿಲ್ಪಾಳ ತಂಗಿ ಮನೆಗೆ ಬಂದಿದ್ದಳು. ಆದರೆ ಶಿಲ್ಪಾ ಬಂದಿರಲಿಲ್ಲ. ಕೊನೆಗೆ ಆಕೆ ಪತ್ತೆಯಾಗಿದ್ದು ಕರ್ಜಗಿ ಗ್ರಾಮದ ಅರಣ್ಯ ಪ್ರದೇಶದ ಪಾಳು ಮನೆಯಲ್ಲಿ ಹೆಣವಾಗಿ. ಕಲ್ಲು ಎತ್ತಿ ಹಾಕಿ ಶಿಲ್ಪಾಳನ್ನು ಹತ್ಯೆ ಮಾಡಲಾಗಿತ್ತು.
ಹತ್ಯೆ ನಡೆದ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಶಂಕರ ಮಾರಿಹಾಳ ಹಾಗೂ ಗ್ರಾಮೀಣ ಠಾಣೆ ಪಿಎಸ್ಐ ಮಂಜಪ್ಪ ಪರಿಶೀಲನೆ ನಡೆಸಿದ್ರು. ಶಿಲ್ಪಾಳ ಹತ್ಯೆ ಬಗ್ಗೆ ಮಾಹಿತಿ ಕಲೆ ಹಾಕಿದರು. ಶಿಲ್ಪಾಳಿಗೆ ಮದುವೆಗೂ ಮುನ್ನ ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಕರಿಬಸವ ಕೋಡಿಹಳ್ಳಿ ಎಂಬ ಯುವಕನ ಜೊತೆಗೆ ಪ್ರೇಮವಿತ್ತು. ಈ ವಿಚಾರ ಮದುವೆ ನಂತರ ಪತಿಗೆ ಗೊತ್ತಾಗಿತಂತೆ. ಇದರಿಂದ ಬೇಸರಗೊಂಡು ಪತಿ ಶಿಲ್ಪಾಳನ್ನು ತವರು ಮನೆಗೆ ಕಳಿಸಿದ್ದ. ಮೂರು ತಿಂಗಳಿನಿಂದ ತಾಯಿಯ ಮನೆಯಲ್ಲಿದ್ದ ಶಿಲ್ಪಾ ಏ.22ರ ಮಧ್ಯಾಹ್ನ ಹಳೆಯ ಸ್ನೇಹಿತ ಕರಿಬಸವನ ಗ್ರಾಮಕ್ಕೆ ಹೋಗಿದ್ದಾಳೆ. ತನ್ನನ್ನು ಮದುವೆ ಆಗುವಂತೆ ದುಂಬಾಲು ಬಿದ್ದಿದ್ದಳಂತೆ. ಈ ವಿಚಾರ ಬಹಿರಂಗವಾದರೆ ಮರ್ಯಾದೆ ಹೋಗುತ್ತೆ ಅಂದುಕೊಂಡ ಕರಿಬಸವ ಕೆಟ್ಟ ನಿರ್ಧಾರ ಮಾಡಿಯೇ ಬಿಟ್ಟಿದ್ದಾನೆ.
ಕರಿಬಸವ ಸ್ನೇಹಿತನೊಬ್ಬರ ಬೈಕ್ ತೆಗೆದುಕೊಂಡು ಅರಣ್ಯ ಪ್ರದೇಶಕ್ಕೆ ಶಿಲ್ಪಾಳನ್ನ ಕರೆದುಕೊಂಡು ಹೋಗಿದ್ದಾನೆ. ನಿರ್ಜನ ಪ್ರದೇಶದಲ್ಲಿದ್ದ ಹಾಳು ಮನೆಯಲ್ಲಿ ಶಿಲ್ಪಾಳ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಆರೋಪಿ ಕರಿಬಸವನನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮದುವೆಯಾದ 3 ತಿಂಗಳಿಗೆ ಮಗಳು ಹೆಣವಾಗಿದ್ದನ್ನು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆ-ತಾಯಿಗೆ ಶಿಲ್ಪಾ ಹಿರಿಯ ಮಗಳು. ಶಿಲ್ಪಾ ಚಿಕ್ಕವಳಿದ್ದಾಗಲೇ ತಂದೆ ತೀರಿಕೊಂಡಿದ್ದರು. ತಾಯಿ ದುಡಿದು ಮಗಳನ್ನು ಬೆಳೆಸಿ ಮದುವೆ ಮಾಡಿ ಕೊಟ್ಟಿದ್ದರು. ಈಗ ಮಗಳು ಸಾವಿನ ಮನೆ ಸೇರಿದ್ದು ತಾಯಿಗೆ ಬರಸಿಡಿಲು ಬಡಿದಂತಾಗಿದೆ.
ವರದಿ: ಮಂಜುನಾಥ್ ತಳವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ