ಶಿವಮೊಗ್ಗ(ಜೂ.18): ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ದೇಶದ ಪ್ರತಿ ನಾಗರೀಕರು ಕೈಜೋಡಿಸಿದರೆ ಮಾತ್ರ ಈ ರೋಗವನ್ನು ಸಂಪೂರ್ಣವಾಗಿ ಹೊಡೆದೋಡಿಸಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಾಸ್ಕ್ ಡೇ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಗೋಪಿ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಚಿವರು. ಕೊರೋನಾ ಹರಡುವಿಕೆಯನ್ನು ಇದುವರೆಗೆ ಎಲ್ಲರ ಸಹಕಾರದಿಂದ ನಾವು ಯಶಸ್ವಿಯಾಗಿ ತಡೆಯಲು ಸಾಧ್ಯವಾಗಿದೆ. ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಹಾಗೂ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕರೋನಾ ಹರಡುವಿಕೆಯನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದೆ. ಸಾರ್ವಜನಿಕರ ಸಹಯೋಗದಿಂದ ಮಾತ್ರ ಕೊರೋನಾ ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದರು.
ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಹೊರಡಿಸುವ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ :
ಒಂದೇ ಕಾಮಗಾರಿಗೆ ಎರಡು ಬಾರಿ ಭೂಮಿ ಪೂಜೆ - ಎರಡು ವರ್ಷಗಳಾದ್ರೂ ಆರಂಭಗೊಳ್ಳದ ಕಾಮಗಾರಿ
ಮಾಸ್ಕ್ ಧರಿಸುವುದರಿಂದ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡುವುದರಿಂದ ಬಹಳಷ್ಟು ಪ್ರಮಾಣದಲ್ಲಿ ಕೊರೋನಾ ಹರಡುವುದನ್ನು ತಪ್ಪಿಸಬಹುದಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಹಾಗೂ ತಮ್ಮ ಕೈಗಳನ್ನು ಆಗಿಂದಾಗ್ಗೆ ಸಾಬೂನಿನಿಂದ ತೊಳೆಯುವ ಮೂಲಕ ಕೊರೋನಾ ವೈರಸ್ ಹರಡುವ ಸಾಧ್ಯತೆಯನ್ನು ಇಲ್ಲವಾಗಿಸಬಹುದು ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಹೇಳಿದರು.
ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಸಾರ್ವಜನಿಕರಿಗೆ ಕೊರೋನಾ ಬಗ್ಗೆ, ಅದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ