ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಿದರೂ ಮನೆ ತೊರೆಯಲು ಹಿಂದೇಟು ; ನ್ಯೂಸ್ 18 ನಿಂದ ಸಂತ್ರಸ್ತರ ಮನವೊಲಿಕೆ

ಹಲವು ದಶಕಗಳ ನಂತರ ಇದೇ ಮೊದಲ ಬಾರಿಗೆ ಅಫಜಲಪುರ ಪಟ್ಟಣಕ್ಕೆ ಭೀಮಾ ನದಿ ನೀರು ನುಗ್ಗಿದೆ. ನಗರದ ಜೈ ಭೀಮ ಕಾಲೋನಿಯ ಹತ್ತಾರು ಮನೆಗಳಿಗೆ ನೀರು ನುಗ್ಗಿವೆ. ಘತ್ತರಗಾ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ

news18-kannada
Updated:October 18, 2020, 3:27 PM IST
ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಿದರೂ ಮನೆ ತೊರೆಯಲು ಹಿಂದೇಟು ; ನ್ಯೂಸ್ 18 ನಿಂದ ಸಂತ್ರಸ್ತರ ಮನವೊಲಿಕೆ
ಮಗುವನ್ನು ಕರೆ ತರುತ್ತಿರುವ ಎಸ್.ಡಿ.ಆರ್.ಎಫ್ ಸಿಬ್ಬಂದಿ
  • Share this:
ಕಲಬುರ್ಗಿ(ಅಕ್ಟೋಬರ್​. 18): ಭೀಮಾ ನದಿಯಲ್ಲಿ ಪ್ರವಾಹ ಮುಂದುವರಿದಿದೆ. ಭಾರಿ ಪ್ರವಾಹದಿಂದಾಗಿ ಕಲಬುರ್ಗಿ ಜಿಲ್ಲೆಯ ನೂರಾರು ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ನಿಂದ ಇಂದು 8.50 ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ನಿನ್ನೆಗಿಂತಲೂ ಇಂದು ನೀರಿನ ಹರಿವು ಮತ್ತಷ್ಟು ಏರಿಕೆಯಾಗಿದ್ದು, ಹತ್ತಾರು ಗ್ರಾಮಗಳಿಗೆ ಜಲದಿಗ್ಬಂಧನವಾಗಿದೆ. ಸಂತ್ರಸ್ತರ ರಕ್ಷಣೆಗೆಂದು ಸೇನಾ ಪಡೆಯೂ ಜಿಲ್ಲೆಗೆ ಆಗಮಿಸಿದೆ. ಹೊಳಿ ಬೋಸಗಾ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂತ್ರಸ್ತರನ್ನು ಸ್ಥಳಾಂತರಿಸಲಾಗುತ್ತಿದೆ.ಆದರೆ ಅಫಜಲಪುರ ತಾಲೂಕಿನ ಉಡಚಣ ಗ್ರಾಮಸ್ಥರು ಮಾತ್ರ ಮನೆ ತೊರೆಯಲು ನಿರಾಕರಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿತ್ತು. ಕಳೆದ ರಾತ್ರಿ ಒಂದಷ್ಟು ಜನರನ್ನು ಎಸ್.ಡಿ.ಆರ್.ಎಫ್ ತಂಡ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕೆಲವರನ್ನು ರಕ್ಷಿಸಿದ್ದರು. ಬೆಳಗಿನ ಜಾವ ಸಿಕಿಂದರಾಬಾದ್ ನಿಂದ ಉಡಚಣ ಗ್ರಾಮಕ್ಕೆ ಸೇನಾಪಡೆಯೂ ಆಗಮಿಸಿತ್ತು. ಆದರೂ ಮನೆ ತೊರೆಯುವುದಿಲ್ಲವೆಂದು ಸಂತ್ರಸ್ತರು ಪಟ್ಟು ಹಿಡಿದು ಕುಳಿತಿದ್ದರು.

ಈ ವೇಳೆ ನ್ಯೂಸ್ 18 ಕನ್ನಡ ತಂಡ ಬೋಟ್ ಮುಖಾಂತರ ಮುಳುಗಡೆಯಾದ ಉಡಚಣ ಗ್ರಾಮಕ್ಕೆ ಭೇಟಿ ಕೊಟ್ಟಾಗ ಸಂತ್ರಸ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಮನೆಯಲ್ಲಿ ಎಲ್ಲ ಸಾಮಾನುಗಳೂ ಮುಳುಗಿ ಹೋಗಿವೆ. ಯಾವ ಜನಪ್ರತಿನಿಧಿಯೂ ನಮ್ಮ ಸಮಸ್ಯೆ ಆಲಿಸ್ತಿಲ್ಲ. ಪ್ರವಾಹ ಬಂದಾಗಲೆಲ್ಲಾ ಈ ರೀತಿಯ ಸಮಸ್ಯೆ ಸೃಷ್ಟಿಯಾಗುತ್ತಿದೆ. ಆದರೂ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಬದುಕಿದರೂ ಇಲ್ಲೇ ಬದುಕುತ್ತೇವೆ. ಸತ್ತರೂ ಇಲ್ಲೇ ಸಾಯುತ್ತೇವೆ ಎಂದು ಪಟ್ಟು ಹಿಡಿದು ಕುಳಿತರು.

ನಿಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನ್ಯೂಸ್ 18 ಕನ್ನಡ ತಂಡ ಭರವಸೆ ನೀಡಿದ ನಂತರ ಸ್ಥಳಾಂತರಕ್ಕೆ ಸಂತ್ರಸ್ತರು ಒಪ್ಪಿಕೊಂಡರು. ಕೊನೆಗೂ ಬೋಟ್ ಮೂಲಕ ಎತ್ತರದ ಪ್ರದೇಶಕ್ಕೆ ಮಕ್ಕಳು, ಮಹಿಳೆಯರು, ವೃದ್ಧರು ಮತ್ತಿತರರು ಸ್ಥಳಾಂತರಗೊಳ್ಳುತ್ತಿದ್ದಾರೆ.

ಕಾಳಜಿ ಕೇಂದ್ರದ ಅವ್ಯವಸ್ಥೆ ಕಂಡು ಕಣ್ಣೀರು :

ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರವಾಹಕ್ಕೆ ಸಿಲುಕಿದ ಗ್ರಾಮಗಳಲ್ಲಿ ಅಫಜಲಪುರ ತಾಲೂಕಿನ ಉಡಚಣವೂ ಒಂದು. ಗ್ರಾಮದ ಬಿಸಿಎಂ ಹಾಸ್ಟಲ್ ನಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಆದರೆ ಕಾಳಜಿ ಕೇಂದ್ರದಲ್ಲಿ ಯಾರಿಗೂ ಕಾಳಜಿ ಮಾಡುತ್ತಿಲ್ಲ. ಮಕ್ಕಳು ಮರಿ ಉಪವಾಸ ಬಿದ್ದಿವೆ ಎಂದು ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಬಿಸಿಎಂ ವಸತಿ ನಿಲಯದಲ್ಲಿ ಮುನ್ನೂರಕ್ಕೂ ಹೆಚ್ಚು ಜನರನ್ನು ಇಡಲಾಗಿದೆ. ಕಳೆದ ರಾತ್ರಿ 11 ಗಂಟೆಗೆ ಊಟ ಕೊಟ್ಟಿದ್ದಾರೆ.

ಈಗ ಮಧ್ಯಾಹ್ನವಾದರೂ ಉಪಹಾರ ನೀಡಿಲ್ಲ. ಮಕ್ಕಳು ಹಸಿದು ಕುಳಿತಿದ್ದರೂ ಯಾರೂ ಕೇಳುವವರಿಲ್ಲ ಎಂದು ಚಡಚಣ ಗ್ರಾಮದ ಸುನಂದಾ ಎಂಬ ಗೃಹಿಣಿ ಕಣ್ಣೀರು ಹಾಕಿದ್ದಾರೆ. ಸೂಕ್ತ ವ್ಯವಸ್ಥೆ ಕಲ್ಪಿಸದ ಗ್ರಾಮ ಪಂಚಾಯಿತಿ ಪಿಡಿಒ ಸಿದ್ಧರಾಮ್ ಗೆ ಸ್ಥಳೀಯ ಮುಖಂಡ ಜೆ.ಎಂ.ಕೊರಬು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡದೆ, ಸಂತ್ರಸ್ತರ ಗೋಳು ಕೇಳುತ್ತಿಲ್ಲ ಎಂದು ಡಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರವಾಹದಲ್ಲಿ ಸಿಲುಕಿಕೊಂಡ ಸಾರಿಗೆ ಬಸ್ :

ಸಾರಿಗೆ ಬಸ್ಸೊಂದು ಪ್ರವಾಹದಲ್ಲಿ ಸಿಲುಕಿಕೊಂಡ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಶಿರವಾಳ ಬಳಿ ನಡೆದಿದೆ. ಭಾರಿ ಪ್ರವಾಹದಿಂದಾಗಿ ಶಿರವಾಳ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿವೆ. ಈ ವೇಳೆ ರಸ್ತೆ ದಾಟಲು ಹೋದ ಸಾರಿಗೆ ಬಸ್ ಮಧ್ಯದಲ್ಲಿಯೆ ಬಂದ್ ಆಗಿ ಬಿದ್ದಿದೆ. ಅಫಜಲಪುರದಿಂದ ಕರ್ಜಗಿ ಗ್ರಾಮದ ಕಡೆ ಹೊರಟಿದ್ದ ಬಸ್ ಪ್ರವಾಹದಲ್ಲಿ ಸಿಲುಕಿತ್ತು.

ಇದನ್ನೂ ಓದಿ : ಮಳೆಯಿಂದ ಯಾದಗಿರಿಯ ಶಿವನೂರ ಗ್ರಾಮದಲ್ಲಿ ಮುಳುಗಡೆ ಭೀತಿ; 192 ಜನರ ಸ್ಥಳಾಂತರ

ಸೈಲೆನ್ಸರ್ ನಲ್ಲಿ ನೀರು ಹೋಗಿದ್ದರಿಂದ ಬಸ್ ಮಧ್ಯದಲ್ಲಿ ಸಿಲುಕಿಕೊಂಡಾಗ ಪ್ರಯಾಣಿಕರು ಕಂಗಾಲಾಗಿದ್ದಾರೆ. ತಕ್ಷಣ ಸ್ಥಳೀಯರು ಬಸ್ ಗೆ ಹಗ್ಗ ಕಟ್ಟಿ ಟ್ರ್ಯಾಕ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ ಮೇಲ್ಭಾಗಕ್ಕೆ ಹೋದ ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಅಫಜಲಪುರ ಪಟ್ಟಣಕ್ಕೂ ನುಗ್ಗಿದ ನೀರು :

ಹಲವು ದಶಕಗಳ ನಂತರ ಇದೇ ಮೊದಲ ಬಾರಿಗೆ ಅಫಜಲಪುರ ಪಟ್ಟಣಕ್ಕೆ ಭೀಮಾ ನದಿ ನೀರು ನುಗ್ಗಿದೆ. ನಗರದ ಜೈ ಭೀಮ ಕಾಲೋನಿಯ ಹತ್ತಾರು ಮನೆಗಳಿಗೆ ನೀರು ನುಗ್ಗಿವೆ. ಘತ್ತರಗಾ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.

ಒಟ್ಟಾರೆ ಭೀಮಾ ನದಿಯಲ್ಲಿ ಪ್ರವಾಹ ಮುಂದುವರಿದಿದ್ದು, ಸಾವಿರಾರು ಜನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪ್ರವಾಹ ಯಾವಾಗ ಇಳಿಮುಖವಾಗಲಿದೆ ಎಂದು ಜನತೆ ಎದುರು ನೋಡುತ್ತಿದ್ದಾರೆ.
Published by: G Hareeshkumar
First published: October 18, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading