ಚಿಕ್ಕಮಗಳೂರು: ಕಾಂಗ್ರೆಸ್ಸಿಗರ ಫ್ಯೂಸನ್ನ ಹೆಚ್. ಡಿ. ಕುಮಾರಸ್ವಾಮಿ (HD Kumaraswamy) ಅವರು ಕಿತ್ತು ಹಾಕುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ಸಿಗರೇ ಒಬ್ಬರ ಫ್ಯೂಸನ್ನ ಮತ್ತೊಬ್ಬರು ಕಿತ್ತು ಹಾಕಿಕೊಳ್ತಿದ್ದಾರೆ ಎಂದು ಸಚಿವ ಕೆಎಸ್ ಈಶ್ವರಪ್ಪ ಅವರು ಕಾಂಗ್ರೆಸ್ಸಿಗರ ವಿರುದ್ಧ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ಫ್ಯೂಸ್ ಕಿತ್ತಿದ್ದೇನೆ ಎಂದಿದ್ದ ಹೆಚ್ ಡಿ ಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ಮೇಲಿನ ಮಾತುಗಳನ್ನಾಡಿದರು. “ಅಲ್ಲಿರೋದೇ ನಾಲ್ಕೈದು ಜನ ನಾಯಕರು ಮಾತ್ರ. ಅವರ ಹೆಸರನ್ನ ಹೇಳಲು ಇಚ್ಛೆ ಪಡುವುದಿಲ್ಲ. ಆ ಪಕ್ಷದಲ್ಲಿ ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗಲ್ಲ. ನೇರ ಗುಂಪುಗಾರಿಕೆ ಇದೆ. ಹೊರ-ಒಳಗಿನ ಕಾಂಗ್ರೆಸ್ಸಿಗರು ಅಂತ ಒಂದು ಸಲ ಬಹಿರಂಗ ಕೂಡ ಆಗಿದೆ. ಸದ್ಯಕ್ಕೆ ತಲೆ ಮೇಲೆ ತಟ್ಟಿ ನಿಲ್ಲಿಸಿದ್ದಾರೆ. ಅದು ಯಾವಾಗ ಪ್ರಜ್ವಲಿಸಿ ಸ್ಫೋಟ ಆಗುತ್ತೋ ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲ” ಎಂದು ಈಶ್ವರಪ್ಪ ಅವರು ಮೂದಲಿಸಿದರು.
ಇನ್ನು ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಜಾತಿ ಜನಗಣತಿಯನ್ನ ಯಾಕೆ ಬಿಡುಗಡೆ ಮಾಡಲಿಲ್ಲ ಎಂದು ಈ ವೇಳೆ ಸಚಿವರು ಪ್ರಶ್ನಿಸಿದರು. “ತಾವು ಮುಖ್ಯಮಂತ್ರಿಯಾದ ಸಮಯದಲ್ಲೇ ವರದಿ ರೆಡಿಯಾಗಿದ್ದರೂ ಬಿಡುಗಡೆ ಮಾಡಲಿಲ್ಲ. ಆ ಬಳಿಕ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯನವರೇ ಇದ್ದರು. ಆಗಲೂ ಕೂಡ ಬಿಡುಗಡೆ ಮಾಡಿ ಅಂತ ಆ ವೇಳೆ ಸಿಎಂ ಆಗಿದ್ದ ಕುಮಾರಸ್ವಾಮಿ ಅವರಿಗೆ ಹೇಳಲಿಲ್ಲ. ಇದೀಗ ಕುಮಾರಸ್ವಾಮಿ ಬಿಡುಗಡೆ ಮಾಡಲಿಲ್ಲ ಅಂತ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಆಗ ಸುಮ್ಮನಿದ್ದು ಈಗ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ದಲಿತರು, ಹಿಂದುಳಿದವರ ಬಗ್ಗೆ ಆಸಕ್ತಿ ಇರೋದು ಬಿಜೆಪಿಗೆ ಮಾತ್ರ” ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಜಾತಿಗಣತಿ ವರದಿ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಾತಿ ಗಣತಿಗೆ ಹಣ ಬಿಡುಗಡೆ ಮಾಡಲು ಆಸಕ್ತಿ ತೋರಿಸಿದಷ್ಟು ಅದನ್ನು ಬಿಡುಗಡೆ ಮಾಡಲು ಯಾಕೆ ಆಸಕ್ತಿ ತೋರಲಿಲ್ಲ ಎಂಬುದನ್ನು ಅವರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಯಾಗಿದ್ದಾಗ ವರದಿ ಸಿದ್ಧವಾಗಿರಲಿಲ್ಲ ಎಂದು ಸುಳ್ಳು ಹೇಳುತ್ತಾರೆ. ಹೋಗಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಾದರೂ ಬಿಡುಗಡೆ ಮಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದ ಅವರು, ಎಚ್.ಡಿ. ಕುಮಾರಸ್ವಾಮಿಯವರು ಬಿಡುಗಡೆ ಮಾಡಲಿಲ್ಲ ಎಂದರೆ ಅಧಿಕಾರದ ಆಸೆಗಾಗಿ ಅವರ ಜೊತೆ ಇದ್ರಾ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಬಿಜೆಪಿ ಪ್ಲಾನ್; ಮಂಡ್ಯದಲ್ಲಿ ಐತಿಹಾಸಿಕ ಹೆಜ್ಜೆ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯವರಿಗೆ ಜಾತಿಗಣತಿ, ಮೀಸಲಾತಿ ಮೇಲೆ ಆಸಕ್ತಿಯಿಲ್ಲ. ಅದಕ್ಕೆ ಹೋರಾಟ ಮಾಡುತ್ತೇವೆಂದು ಹೇಳುತ್ತಿರುವುದು ರಾಜಕೀಯ ಕುತಂತ್ರವಲ್ಲದೆ ಇನ್ನೇನು ಎಂದು ಪ್ರಶ್ನಿಸಿದ ಅವರು, ಇದಕ್ಕೆ ಉತ್ತರ ನೀಡಬೇಕು ಎಂದು ಸಿದ್ದರಾಮಯ್ಯರನ್ನು ಆಗ್ರಹಿಸಿದರು. ಹಿಂದುಳಿದ ವರ್ಗಗಳ ಕಮಿಟಿ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಗುರುವಾರ ಚರ್ಚಿಸಿ ಮೀಸಲಾತಿ ಸಂಬಂಧ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಅವರು, ಗ್ರಾಮ ಪಂಚಾಯತ್‍ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಬರಬೇಕಿತ್ತು. ಅದು ಬಂದಿದೆ. ಯಾವ ಪಂಚಾಯತ್‍ಗೆ ಹಣ ಬಂದಿಲ್ಲವೆಂಬುದನ್ನು ತನ್ನ ಗಮನಕ್ಕೆ ತಂದರೆ ಸ್ವತಃ ಆಸಕ್ತಿವಹಿಸಿ ಹಣ ಬಿಡುಗಡೆಗೊಳಿಸಲಾಗುವುದು ಎಂದರು.
ಹಿಂದೂ ಧರ್ಮವನ್ನ ಮನು ಧರ್ಮ ಎಂದವರು ಮಂತ್ರಿಯಾಗಲು ನನ್ನ ವಿರೋಧ: ಶಾಸಕ ಎಂ.ಪಿ. ಕುಮಾರಸ್ವಾಮಿ
ಕೊಳ್ಳೆಗಾಲ ಶಾಸಕ ಎನ್. ಮಹೇಶ್ ನೆಲೆ ಕಂಡುಕೊಳ್ಳಲು ಬಿಜೆಪಿಗೆ ಬಂದಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮಹೇಶ್ ಅವರನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಟ್ಟು ಹಾಕಿವೆ. ಬಿಎಸ್ಪಿ ಉಚ್ಛಾಟನೆ ಮಾಡಿದೆ. ಹೀಗಾಗಿ ವಿಧಿಯಿಲ್ಲದೇ ನಮ್ಮ ಪಕ್ಷಕ್ಕೆ ಬಂದಿದ್ದಾರೆ ಎಂದು ಎಂ.ಪಿ. ಕುಮಾರಸ್ವಾಮಿ ಕುಟುಕಿದ್ದಾರೆ. ಹಿಂದೂ ಧರ್ಮ ಮನು ಧರ್ಮ ಅಂತ ಹೀನಾಮಾನ ಬೈದಿದ್ದರು. ಜಾತಿ-ಧರ್ಮವನ್ನ ಎತ್ತಿ ಕಟ್ಟಿ ಶಾಸಕರಾದವರು ಅವರು. ಅವರನ್ನ ನಮ್ಮ ಪಕ್ಷದಲ್ಲಿ ಮಂತ್ರಿ ಮಾಡಲ್ಲ. ಅವರಿಗಿಂತ ಮೊದಲು ಬಂದು ಪಕ್ಷ ಕಟ್ಟಿದವರು ನಾವು ಮೂವರು ಜನರಿದ್ದೇವೆ. ನಮ್ಮಲ್ಲಿ ಯಾರಿಗಾದ್ರೂ ಮಂತ್ರಿ ಸ್ಥಾನ ಕೊಡುತ್ತಾರೆ. ನಾನು 25 ವರ್ಷ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಅವರು ಮೊದಲು 20 ವರ್ಷ ಪಕ್ಷಕ್ಕಾಗಿ ಕೆಲಸ ಮಾಡಲಿ. ಆ ಬಳಿಕ ಮಂತ್ರಿಯಾಗಲಿ. ಮಹೇಶ್ ಈಗ ಮಂತ್ರಿ ಆಗುವುದಕ್ಕೆ ನನ್ನ ವಿರೋಧವಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ಸ್ವಪಕ್ಷೀಯ ಶಾಸಕನ ವಿರುದ್ಧವೇ ಹರಿಹಾಯ್ದಿದ್ದಾರೆ.
ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್ಪಿ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ಎನ್ ಮಹೇಶ್ ಅವರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಅವರನ್ನ ಬಿಎಸ್ಪಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಕೆಲ ದಿನಗಳ ಹಿಂದೆ ಅವರು ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮುಂದೆ ಅವರನ್ನ ಸಚಿವರನ್ನಾಗಿ ಮಾಡುವ ಯೋಜನೆ ಪಕ್ಷದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವರದಿ: ವೀರೇಶ್ ಹೆಚ್.ಜಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ