HOME » NEWS » District » ENVIRONMENTALISTS DEMANDS WETLAND OF AGHANASHINI TO BE ADDED TO RAMSAR CONVENTION DKK SNVS

ಕರ್ನಾಟಕದ ಅಘನಾಶಿನಿ ಜೌಗು ಮತ್ತು ಮ್ಯಾಂಗ್ರೋವ್​ನ್ನು ರಾಮ್ಸರ್ ಕನ್ವೆನ್ಷನ್​ಗೆ ಸೇರಿಸಲು ಆಗ್ರಹ

ಉತ್ತರ ಕನ್ನಡ ಜಿಲ್ಲೆಯ ಅಘನಾಶಿಯ ಹಿನ್ನೀರಿನ ಪ್ರದೇಶವನ್ನು ಸಂಪೂರ್ಣ ರಾಮ್ಸಾರ್ ಪ್ರದೇಶವನ್ನಾಗಿ (Ramsar Convention list) ಘೋಷಣೆ ಮಾಡಬೇಕು. ಹೀಗಾದರೆ ಸಂರಕ್ಷಣೆಗೆ ಅಂತಾರಾಷ್ಟ್ರೀಯ ನಿಧಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

news18-kannada
Updated:December 31, 2020, 11:35 AM IST
ಕರ್ನಾಟಕದ ಅಘನಾಶಿನಿ ಜೌಗು ಮತ್ತು ಮ್ಯಾಂಗ್ರೋವ್​ನ್ನು ರಾಮ್ಸರ್ ಕನ್ವೆನ್ಷನ್​ಗೆ ಸೇರಿಸಲು ಆಗ್ರಹ
ಅಘನಾಶಿನಿ ನದಿಯ ಅಮೂಲ್ಯ ಜೌಗು ಪ್ರದೇಶ
  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಅಘನಾಶಿನಿ ನದಿಯ ಅಳಿವೆ (Estuary) ಪ್ರದೇಶದಲ್ಲಿರುವ ಜೌಗು (Wetland) ಹಾಗೂ ಮ್ಯಾಂಗ್ರೋವ್ (Mangroves) ​ಗಳನ್ನು ರಕ್ಷಿಸುವ ಉದ್ದೇಶದಿಂದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್  ಸೋಂಶೋಧಕರು, ಪರಿಸರ ವಿಜ್ಞಾನಿಗಳು ಜೊತೆಗೆ ಕಡಲ ಜೀವಶಾಸ್ತ್ರಜ್ಞರು ಅಘನಾಶಿನಿ ಜೌಗು ಪ್ರದೇಶವನ್ನು ರಾಮ್ಸಾರ್ ಕನ್ವೆನ್ಷನ್ (Ramsar Convention) ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿದ್ದಾರೆ.

ಐಐಸಿಎಸ್‌ನ ಪರಿಸರ ವಿಜ್ಞಾನ ಕೇಂದ್ರದ ಪ್ರೊಫೆಸರ್ ಟಿ. ವಿ. ರಾಮಚಂದ್ರ ಅವರು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಉತ್ತರ ಕನ್ನಡ ಜಿಲ್ಲೆಯವರೇ ಆಗಿರುವ ಅನಂತ ಹೆಗಡೆ ಆಶೀಸರ್ ಅವರನ್ನು ಈ ಬಗ್ಗೆ ಒತ್ತಾಯಿಸಿದ್ದಾರೆ. ಎರಡು ವರ್ಷಗಳ ಹಿಂದೆ ರಾಮ್ಸಾರ್ ಮಂಡಳಿಗೆ ಪ್ರಸ್ತಾವನೆ ಕಳಿಸಲಾಗಿತ್ತು. ಇದಕ್ಕೆ ಒಪ್ಪಿಗೆಯನ್ನೂ ನೀಡಿದ ಮಂಡಳಿ, ಪರಿಸರ ಸಚಿವಾಲಯಕ್ಕೆ ಔಪಚಾರಿಕ ಪ್ರಸ್ತಾವನೆ ಕಳಿಸುವಂತೆಯೂ ಕೇಳಿತ್ತು. ಸಚಿವಾಲಯ ರಾಜ್ಯ ಸರ್ಕಾರದಿಂದ ಪ್ರಸ್ತಾವನೆಯನ್ನು ಕೇಳಿತ್ತು. ಆದರೆ ಯಾವುದೂ ಪ್ರಯೋಜನವಾಗಿಲ್ಲ. ಈಗ ನಾವು ಜೀವವೈವಿಧ್ಯ ಮಂಡಳಿಗೆ ಪ್ರಸ್ತಾವನೆಯ ಬಗ್ಗೆ ಗಮನ ಹರಿಸುವಂತೆ ಕೇಳಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಡಲ ಜೀವಶಾಸ್ತ್ರಜ್ಞರ ಅಭಿಪ್ರಾಯದಂತೆ ಜಿಲ್ಲೆಯ ಅಘನಾಶಿನಿಯಾದ್ಯಂತ ನಾಲ್ಕು ತಾಣಗಳನ್ನು ಹಾಗೂ ಕಾಳಿ ನದಿಯಾದ್ಯಂತ ನಾಲ್ಕು ತಾಣಗಳನ್ನು ರಾಮ್ಸಾರ್ ಪ್ರದೇಶವೆಂದು ಘೋಷಣೆ ಮಾಡಲು ಪ್ರಸ್ತಾವನೆ ಕಳಿಸಲಾಗಿತ್ತು. ಅಘನಾಶಿಯ ಹಿನ್ನೀರಿನ ಪ್ರದೇಶವನ್ನು ಸಂಪೂರ್ಣ ರಾಮ್ಸಾರ್ ಪ್ರದೇಶವನ್ನಾಗಿ ಘೋಷಣೆ ಮಾಡಬೇಕು. ಹೀಗಾದರೆ ಸಂರಕ್ಷಣೆಗೆ ಅಂತಾರಾಷ್ಟ್ರೀಯ ನಿಧಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದ ಫಲಾನುಭವಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ರಾಷ್ಟ್ರೀಯ ಪುರಸ್ಕಾರ

ಭಾರತದ ರಾಮ್ಸರ್ ಪ್ರದೇಶಗಳಿವು:

ಈ ವರ್ಷ ಫೆಬ್ರುವರಿ ತಿಂಗಳಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯು ದೇಶದ 10 ಅಳಿವೆ ಹಾಗೂ ಜೌಗು ಪ್ರದೇಶಗಳನ್ನು ರಾಮ್ಸರ್ ಪ್ರದೇಶವಾಗಿ ಘೋಷಿಸಿದೆ. ಅವುಗಳಲ್ಲಿ ಉತ್ತರ ಪ್ರದೇಶದ ನವಾಬಗಂಜ, ಪಾರ್ವತಿ ಆಗ್ರಾ, ಸಮಾನ, ಸಮಸ್ಪುರ, ಸಂಡಿ ಹಾಗೂ ಸರೈ ನವಾರ ಪ್ರದೇಶ, ಮಹಾರಾಷ್ಟದ ನಂದೂರ ಮಾಧಮೇಶ್ವರ ಹಾಗೂ ಪಂಜಾಬದ ಕೆಶೋಪುರ-ಮಿಯಾನಿ, ಬಿಯಾಸ ರಕ್ಷಿತ ಅರಣ್ಯ ಪ್ರದೇಶ ಮತ್ತು ನಂಗಳು ಸೇರಿವೆ. ಓರಿಸ್ಸಾದ ಚಿಲ್ಕಾ, ಆಂಧ್ರದ ಕೊಲ್ಲೆರು ಮತ್ತು ಸುಂದರಬನ್ ಪ್ರದೇಶಗಳು ಮೊದಲಿನಿಂದಲೂ ರಾಮ್ಸರ್ ಪಟ್ಟಿಯಲ್ಲಿ ಸೇರಿವೆ. ಈ ಪ್ರದೇಶಗಳು ಸೇರಿ ಈಗ ಭಾರತದಲ್ಲಿ 37 ರಾಮ್ಸರ್ ಪ್ರದೇಶಗಳಿದ್ದು ಕಾಂಡ್ಲಾ ರಕ್ಷಿತಪ್ರದೇಶಗಳೂ ಸೇರಿವೆ. ಜೌಗು ಹಾಗೂ ನದಿ ಮುಖಜ ಪ್ರದೇಶಗಳು ಇಡೀ ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿವೆ. ಕೆಲವು ನದಿ ಪರಿಸರ ವ್ಯವಸ್ಥೆಗಳು ನೈಸರ್ಗಿಕವಾಗಿವೆ. ಇವಲ್ಲದೇ ನೀರಾವರಿ, ಮೀನುಗಾರಿಕೆ ಮುಂತಾದ ಉದ್ದೇಶಗಳಿಗಾಗಿ ಮಾನವರು ನಿರ್ಮಿಸಿರುವ ಕೊಳಗಳು ಮತ್ತು ಸರೋವರಗಳಂತಹ ಇನ್ನೂ ಸಾಕಷ್ಟು ಇವೆ. ಇವು ಜೀವವೈವಿಧ್ಯತೆಯ ಭಾಗವಾಗಿವೆ.

ರಾಮ್ಸರ್ ಎಂದರೇನು?:

ಜಗತ್ತಿನ ಜೌಗು ಪ್ರದೇಶಗಳ ಪ್ರಾಮುಖ್ಯತೆ ಮತ್ತು ಮೌಲ್ಯದ ಬಗ್ಗೆ ಅರಿವು ಮೂಡಿಸಲು ಹಾಗೂ ಅಧ್ಯಯನ ಮಾಡುವ ಉದ್ದೇಶದಿಂದ 1971ರ ಫೆಬ್ರವರಿ 2ರಂದು ಕ್ಯಾಸ್ಪಿಯನ್ ಸಮುದ್ರ ತೀರದಲ್ಲಿರುವ ಇರಾನ್ ದೇಶದ ಜೌಗು ಪ್ರದೇಶವೆನಿಸಿದ ರಾಮ್ಸರ್ ನಗರದಲ್ಲಿ ಸಭೆ ನಡೆಯಿತು. ಅಲ್ಲಿಂದ ಇದು ರಾಮ್ಸರ್ ಸಭೆ ಎಂದೇ ಹೆಸರು ಪಡೆದಿದೆ. ಜೌಗು ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ದೇಶಗಳ ಸಹಕಾರ ಹೊಂದುವುದು ಈ ಸಭೆಯ ಉದ್ದೇಶವಾಗಿದೆ.ಇದನ್ನೂ ಓದಿ: ತಲಕಾವೇರಿಯ ಗಜಗಿರಿ ಬೆಟ್ಟ ಕುಸಿಯಲು ಇಂಗು ಗುಂಡಿಗಳೇ ಕಾರಣ

1997ರಿಂದ ಜಗತ್ತಿನ ಜೌಗು ಅಥವಾ ಆದ್ರ‍ ಪ್ರದೇಶಗಳ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶ್ವ ಜೌಗು ಪ್ರದೇಶ ದಿನವನ್ನು ಫೆಬ್ರವರಿ 2ರಂದು ಆಚರಿಸಲಾಗುತ್ತದೆ. ನೀರಿರುವ ತೇವ ಭೂಮಿಗಳು ಅನೇಕ ಅಪರೂಪದ ಸಸ್ಯಗಳಿಗೆ ಹಾಗೂ ಜಲಜೀವಿಗಳಿಗೆ ಆಶ್ರಯತಾಣವಾಗಿದೆ. ಅನೇಕ ಬೆಳೆಗಳನ್ನು ಸಹ ಇಂಥ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಕಾರ್ಖಾನೆಗಳಿಂದ ಹೊರ ಬರುವ ರಾಸಾಯನಿಕ ತ್ಯಾಜ್ಯಗಳಿಂದ, ನಗರೀಕರಣದಿಂದ ಇನ್ನಿತರ ಮಾನವನ ಚಟುವಟಿಕೆಯಿಂದ ಹಾಗೂ ನೈಸರ್ಗಿಕ ವಿಕೋಪಗಳಿಂದ ಇಂಥ ಜೌಗು ಪ್ರದೇಶಗಳು ಹಾಳಾಗುತ್ತಿದೆ. ಇಂಥ ಪ್ರದೇಶಗಳ ಮೌಲ್ಯವನ್ನು ಅದರ ಪ್ರಯೋಜನಕಾರಿ ಅಂಶಗಳ ಅರಿವು ಮೂಡಿಸುವುದು ಮತ್ತು ಅದರ ಸಂರಕ್ಷಣೆ ಮಾಡುವುದು ಈ ದಿನದ ಉದ್ದೇಶವಾಗಿದೆ.

ಸರ್ಕಾರಿ ಹಾಗೂ ಖಾಸಗಿ ಸಂಘ ಸಂಸ್ಥೆಗಳು ಈ ಕುರಿತು ವಿಚಾರಗೋಷ್ಠಿ, ಉಪನ್ಯಾಸ, ಪೋಸ್ಟರ್ ಪ್ರದರ್ಶನ, ಜೌಗುಪ್ರದೇಶದ ಚಲನಚಿತ್ರ, ಕಲೆ ಮತ್ತು ರಸಪ್ರಶ್ನೆ, ಚಿತ್ರಕಲೆ, ಛಾಯಾಗ್ರಹಣ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತವೆ. ಹೊಸ ತೇವಾಂಶ ನೀತಿಗಳು ಈ ದಿನದಲ್ಲಿ ಪ್ರಾರಂಭವಾಗುತ್ತದೆ.

ಗದ್ದೆಗಳು ಇಡೀ ಶ್ರೇಣಿಯ ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿವೆ. ಕೆಲವು ನದಿ ಪರಿಸರ ವ್ಯವಸ್ಥೆಗಳು ಸ್ವಾಭಾವಿಕವಾಗಿವೆ… ನೀರಾವರಿ, ಮೀನುಗಾರಿಕೆಯನ್ನು ಬೆಂಬಲಿಸುವುದು ಮುಂತಾದ ಉದ್ದೇಶಗಳಿಗಾಗಿ ಮಾನವರು ನಿರ್ಮಿಸಿರುವ ಕೊಳಗಳು ಮತ್ತು ಸರೋವರಗಳಂತಹ ಇನ್ನೂ ಸಾಕಷ್ಟು ಇವೆ. ಇವು ಜೀವವೈವಿಧ್ಯತೆಯನ್ನು ಸಹ ಪ್ರತಿನಿಧಿಸುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.

ವರದಿ: ದರ್ಶನ್ ನಾಯ್ಕ್
Published by: Vijayasarthy SN
First published: December 31, 2020, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories