ಎಂದೋ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ವಿದೇಶಿಗರು ಈಗ ಕೊರೋನಾ ಸಂಕಷ್ಟ ಕಾಲದಲ್ಲಿ ಕೈಹಿಡಿದರು!

ದೇವರಂತೆಯೇ ಅವರು ನಮ್ಮ ಕಷ್ಟಕ್ಕೆ ಆಗೋದು ನಿಜಕ್ಕೂ ಹೃದಯಸ್ಪರ್ಶಿ. ಆಂಗ್ಲರ ನಾಡಿನ ಸಹೃದಯಿ ಸಹೋದರರಿಗೆ ಕನ್ನಡಿಗರಿಂದ ಹೃತ್ಪೂರ್ವಕ ವಂದನೆಗಳು.

ಹಂಪಿಯ ಜನಕ್ಕೆ ನೆರವಾದ ವಿದೇಶಿಗರು

ಹಂಪಿಯ ಜನಕ್ಕೆ ನೆರವಾದ ವಿದೇಶಿಗರು

  • Share this:
ಕೊಪ್ಪಳ : ಸ್ನೇಹ, ಆತ್ಮೀಯತೆಯೇ ಹಾಗೆ ಎಲ್ಲೋ ಇದ್ದವರನ್ನು ನಮ್ಮವರನ್ನಾಗಿಸಿ ಬಿಡುತ್ತೆ. ದೇಶ-ಭಾಷೆಯಾಚೆಗೂ ಭಾಂದವ್ಯವನ್ನು ಬೆಳೆಸಿ ಬಿಡುತ್ತೆ. ಅಂತಹದ್ದೇ ಕಥೆ ಈಗ ಹಂಪಿಯ ಜನರಿಗೆ ನೆರವಾಗಿದ್ದು, ಇಡೀ ಕರ್ನಾಟಕದ ಮನ ಗೆದ್ದಿದೆ. ಎಂದೋ ಪ್ರವಾಸಕ್ಕೆಂದು ಬಂದಿದ್ದ ಬ್ರಿಟನ್​ನ ಇಬ್ಬರು ಸಹೋದರರು ಈಗ ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಪ್ರವಾಸದ ವೇಳೆ ತಾವು ಭೇಟಿ ನೀಡಿದ ದೇಶ, ಅಲ್ಲಿನ ಜನ ನರಳಬಾರದು ಎಂದು ಸಾವಿರಾರು ಕಿಲೋ ಮೀಟರ್​ ದೂರದಲ್ಲಿದ್ದರೂ ಅವರ ಮನಸ್ಸು ಮಿಡಿದಿದೆ. ಈ ಮನ ಮುಟ್ಟುವ ಪ್ರಸಂಗ ವಿದೇಶಿಗರ ಮೇಲೆ ಭಾರತೀಯರ ವಿಶ್ವಾಸವನ್ನು ಹೆಚ್ಚಿಸುತ್ತಿದೆ.

ರೋಸ್​​ ಹಾಗೂ ಲಿಯಂ ಎಂಬ ಸಹೋದರರು ಹಲವು ವರ್ಷಗಳಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಆಂಗ್ಲರ ನಾಡಿನ ಈ ಸೋದರರಿಗೆ ಹಂಪಿ ಎಂದರೆ ಎಲ್ಲಿಲ್ಲದ ಅಕ್ಕರೆ. ಆನೇಗೊಂದಿ, ಪಕ್ಕದ ಹನುಮನ ಜನ್ಮ ಸ್ಥಳ ಆಂಜನಾದ್ರಿ, ಪಂಪಾಸರೋವರ್ ಸೇರಿ ಇಲ್ಲಿನ ಹಲವು ಐತಿಹಾಸಿ ಸ್ಥಳಗಳಿಗೆ ಇವರು ಭೇಟಿ ನೀಡಿದ್ದಾರೆ. ಒಮ್ಮೆ ಪ್ರವಾಸಕ್ಕೆ ಬಂದರೆ ಎರಡ್ಮೂರು ತಿಂಗಳು ಹಂಪಿಯಲ್ಲೇ ತಂಗುತ್ತಿದ್ದರು. ಪ್ರವಾಸಕ್ಕೆಂದು ಬರುತ್ತಿದ್ದ ಇವರು ಇಲ್ಲಿನ ಗೈಡ್​ ವಿರೂಪಾಕ್ಷ ಎಂಬುವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಇಂಗ್ಲೆಂಡ್​​ನಲ್ಲಿರುವಾಗಲು ಇವರೊಂದಿಗೆ ರೋಸ್​ ಹಾಗೂ ಲಿಯಂ ಸದಾ ಸಂಪರ್ಕದಲ್ಲಿರುತ್ತಿದ್ದರು.

ಇತ್ತೀಚೆಗೆ ಭಾರತದಲ್ಲಿ ಕೊರೋನಾ ಪರಿಸ್ಥಿತಿ ಬಿಗಡಾಯಿಸಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಇದೆ. ಈ ಬಗ್ಗೆ ತಿಳಿದ ಕೂಡಲೇ ರೋಸ್​ ಹಾಗೂ ಲಿಯಂ ಹಂಪಿಯಲ್ಲಿರುವ ಗೈಡ್​ ವಿರೂಪಾಕ್ಷ ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಹಂಪಿಯಲ್ಲಿ, ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ ಎಂದು ಕಳಕಳಿಯಿಂದ ಕೇಳಿ ತಿಳಿದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕೊರೋನಾ ಕರ್ಫ್ಯೂ-ಲಾಕ್​ಡೌನ್​ ಜಾರಿಯಾಗಿದ್ದು, ಯಾವುದೇ ವ್ಯಾಪಾರವಿಲ್ಲ. ಪ್ರವಾಸೋದ್ಯಮ ಸಂಪೂರ್ಣ ಬಂದ್​ ಆಗಿರುವುದರಿಂದ ಇದನ್ನೇ ಅವಲಂಬಿಸಿರುವ ಹಂಪಿಯ ಜನ ಸಂಕಷ್ಟದಲ್ಲಿರುವ ಬಗ್ಗೆ ತಿಳಿದುಕೊಂಡಿದ್ದಾರೆ.

ಹಂಪಿಯ ಜನ ದುರ್ದಿನಗಳನ್ನು ಎದುರಿಸುತ್ತಿರುವುದಕ್ಕೆ ಮರುಗಿದ ಇಂಗ್ಲೆಂಡ್​ನ ಸಹೋದರರು ನೆರವಿಗೆ ಮುಂದಾಗಿದ್ದಾರೆ. ಗೈಡ್​ ವಿರೂಪಾಕ್ಷ ಅವರ ಬ್ಯಾಂಕ್​​ ಅಕೌಂಟ್​ಗೆ ಹಣ ಕಳುಹಿಸಿ ಕಷ್ಟದಲ್ಲಿರುವವರಿಗೆ ನೆರವಾಗಿ ಎಂದು ರೋಸ್​ ಹಾಗೂ ಲಿಯಂ ತಿಳಿಸಿದ್ದಾರೆ. ಈ ಹಣದಲ್ಲಿ ವಿರೂಪಾಕ್ಷ ಅವರು ಅಕ್ಕಿ, ಬೇಳೆ, ತರಕಾರಿ, ಸ್ಯಾನಿಟೈಸರ್ ಹಾಗೂ ಮಾಸ್ಕ್  ಒಳಗೊಂಡ 100ಕ್ಕೂ ಹೆಚ್ಚು ಆಹಾರ ಕಿಟ್​ಗಳನ್ನು ಸಿದ್ಧಪಡಿಸಿದ್ದಾರೆ. ಹನುಮನಹಳ್ಳಿ, ಮಹ್ಮದ್​ ನಗರದಲ್ಲಿರುವ ಕಡು ಬಡವರಿಗೆ ಹಂಚಿದ್ದಾರೆ.

ವಿದೇಶಿಗರ ಹೃದಯವೈಶಾಲ್ಯಕ್ಕೆ ಗೈಡ್​ ವಿರೂಪಾಕ್ಷ ಸೇರಿದಂತೆ ಆಹಾರ ಕಿಟ್​ ಪಡೆದವರು ಬೆರಗಾಗಿದ್ದಾರೆ. ರೋಸ್​ ಮತ್ತು ಲಿಯಂರನ್ನು ಮನದುಂಬಿ ಅಭಿನಂದಿಸಿದ್ದಾರೆ. ಅತಿಥಿಗಳನ್ನು ದೇವರ ಸಮಾನರನ್ನಾಗಿ ನೋಡುವ ದೇಶ ನಮ್ಮದು. ಒಮ್ಮೊಮ್ಮೆ ದೇವರಂತೆಯೇ ಅವರು ನಮ್ಮ ಕಷ್ಟಕ್ಕೆ ಆಗೋದು ನಿಜಕ್ಕೂ ಹೃದಯಸ್ಪರ್ಶಿ. ಆಂಗ್ಲರ ನಾಡಿನ ಸಹೃದಯಿ ಸಹೋದರರಿಗೆ ಕರುನಾಡಿನ ಕನ್ನಡಿಗರಿಂದ ಹೃತ್ಪೂರ್ವಕ ವಂದನೆಗಳು.
Published by:Kavya V
First published: