Blackbuck Hunting - ಕೃಷ್ಣಮೃಗಗಳ ಬೇಟೆ: ಅಳಿವಿನಂಚಿನಲ್ಲಿರುವ ಈ ವನ್ಯಜೀವಿಗಿಲ್ಲ ರಕ್ಷಣೆ

ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳನ್ನ ಚಾಮರಾಜನಗರದ ಸಂರಕ್ಷಿತ ಅರಣ್ಯ ಪ್ರದೇಶದ ಗ್ರಾಮಗಳ ಬಳಿಯೇ ಹಾಡಹಗಲೇ ಬೇಟೆ ಆಡಲಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಅರಣ್ಯಾಧಿಕಾರಿಗಳಿಗೆ ಇದರ ಮಾಹಿತಿಯೇ ಇಲ್ಲವಾಗಿದೆ.

ಕೃಷ್ಣಮೃಗ ಜಿಂಕೆಗಳು

ಕೃಷ್ಣಮೃಗ ಜಿಂಕೆಗಳು

  • Share this:
ಚಾಮರಾಜನಗರ: ಕೃಷ್ಣಮೃಗಗಳ ಸಂರಕ್ಷಿತ ಮೀಸಲು ಪ್ರದೇಶದಲ್ಲೇ ಕೃಷ್ಣ ಮೃಗಗಳ ಬೇಟೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಚಾಮರಾಜನಗರ ತಾಲೂಕು ಉಮ್ಮತ್ತೂರು ಬಳಿ ಇರುವ ಬಸವನಗುಡ್ಡ, ಕೊಳಲು ಗೋಪಾಲಸ್ವಾಮಿ ಬೆಟ್ಟ ಗುಡ್ಡ,   ಚಾಮರಾಜನಗರ ತಾಲೋಕಿನ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ  ನಂಜನಗೂಡು ತಾಲ್ಲೂಕಿನ ಚಿಕ್ಕಹೊಮ್ಮ ಗುಡ್ಡ , ದೊಡ್ಡಹೊಮ್ಮ ಗುಡ್ಡ ಮೊದಲಾದ ಪ್ರದೇಶಗಳಲ್ಲಿ ಹಾಡು ಹಗಲೇ ಕೃಷ್ಣಮೃಗಗಳನ್ನು ಬಂದೂಕಿನಿಂದ ಕೊಂದು ವಾಹನಗಳಲ್ಲಿ ಕೊಂಡಯ್ಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು ಅಳಿವಿನಂಚಿನಲ್ಲಿರುವ   ಈ ಅಪರೂಪದ ವನ್ಯಜೀವಿಗಳಿಗೆ ರಕ್ಷಣೆ ಇಲ್ಲದಂತಾಗಿದೆ.

2018 ರಲ್ಲೇ ಈ ವ್ಯಾಪ್ತಿಯ 1509 ಎಕರೆ ಪ್ರದೇಶವನ್ಮು ಕೃಷ್ಣಮೃಗಗಳ ಸಂರಕ್ಷಿತ  ಮೀಸಲು ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ ಇದುವರೆಗೂ ಯಾವುದೇ ರೀತಿಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳದೆ ಇದು ಕೇವಲ ಘೋಷಣೆಗೆ ಸೀಮಿತವಾಗಿದೆ. ಈ ಪ್ರದೇಶ ಕೃಷ್ಣಮೃಗಗಳ ಆವಾಸಸ್ಥಾನವಾಗಿದ್ದು ನೂರಾರು ಸಂಖ್ಯೆಯ ಕೃಷ್ಣಮೃಗಗಳು ಇಲ್ಲಿವೆ. ಈ ಪ್ರದೇಶ ರಾಜ್ಯದಲ್ಲೇ ಮೂರನೇ ಕೃಷ್ಣಮೃಗ ಸಂರಕ್ಷಿತ ಮೀಸಲು ಪ್ರದೇಶ ಎನ್ನುವ ಹೆಗ್ಗಳಿಕೆಗು ಪಾತ್ರವಾಗಿದೆ. ಆದರೆ ಈ ಭಾಗದಲ್ಲಿ ಸಾಕಷ್ಟು ಕಳ್ಳಬೇಟೆ ತಡೆ ಶಿಬಿರಗಳಿಲ್ಲ, ಸಮರ್ಪಕ ಗಸ್ತು ನಡೆಯುತ್ತಿಲ್ಲ, ಈ ಪ್ರದೇಶಗಳ ಸುತ್ತ ಸೋಲಾರ್ ತಂತಿ ಬೇಲಿ ಇಲ್ಲವಾಗಿದ್ದು ಬೇಟೆಗಾರರಿಗೆ ವರದಾನವಾಗಿದೆ.

ಇಲ್ಲಿ  ಮಾಂಸಕ್ಕಾಗಿ ಕೃಷ್ಣ ಮೃಗಗಳ ಬೇಟೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ. ಇತ್ತೀಚೆಗಷ್ಟೆ ಚಿಕ್ಕಹೊಮ್ಮ ಗ್ರಾಮದ ಬಳಿ ಚಾಮರಾಜನಗರ ರಸ್ತೆಯಲ್ಲಿ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಬಂದೂಕು ಹಾರಿಸಿ ಕೃಷ್ಣ ಮೃಗವನ್ನು ಕೊಂದಿದ್ದಾರೆ, ಬಂದೂಕಿನ ಸದ್ದು ಕೇಳಿ ಪಕ್ಕದ ತೋಟದವರು ಬರುವಷ್ಟರಲ್ಲಿ ಕೃಷ್ಣಮೃಗವನ್ನು ಕಾರಿನಲ್ಲಿ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ, ನಾವು ಹೋಗಿ ನೋಡುವಷ್ಟರಲ್ಲಿ   ಅಲ್ಲಿ ರಕ್ತ ಚಲ್ಲಿತ್ತು, ಆ ದೃಶ್ಯ ಕಂಡು ಹೊಟ್ಟೆ ಉರಿಯಿತು, ಇಂತಹ ಘಟನೆಗಳು ಆಗಿಂದಾಗ್ಗೆ ನಡೆಯುತ್ತಲೇ ಇವೆ, ಎಂದು ಚಿಕ್ಕ ಹೊಮ್ಮ ಗ್ರಾಮದ ಮಹೇಶ್ ಸ್ವಾಮಿ ಮರುಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮುಸ್ಲಿಮರು ಭಾರತದಲ್ಲಿರಬಾರದು ಎನ್ನುವವ ಹಿಂದೂವೇ ಅಲ್ಲ: ಆರೆಸ್ಸೆಸ್ ಮುಖಸ್ಥ ಭಾಗವತ್

ನಮ್ಮ ಜಮೀನಿನ ಪಕ್ಕದಲ್ಲೇ ಹಿಂಡುಹಿಂಡಾಗಿ ಬರುವ ಕೃಷ್ಣ ಮೃಗಗಳನ್ನು ನೋಡುವುದೇ ಚಂದ. ಇವುಗಳು ಬಂದಾಗ ನಮ್ಮ ಭಾಗದ ರೈತರು ತಮ್ಮ ಜಮೀನು ಗಳಿಗೆ ಅಳವಡಿಸಿರುವ  ತಂತಿಬೇಲಿಯ  ಸೋಲಾರ್ ಆಫ್ ಮಾಡುವ ಮೂಲಕ ಜಮೀನುಗಳಲ್ಲಿ ನೀರು ಕುಡಿದುಹೋಗಲು ಅವುಗಳಿಗೆ ಅವಕಾಶ ಮಾಡಿಕೊಡುತ್ತಾರೆ.  ಎಂದು ಅವರು ನ್ಯೂಸ್18 ಗೆ ತಿಳಿಸಿದರು.

ಅಪರೂಪ ಎನಿಸಿರುವ  ಈ ವನ್ಯಜೀವಿಗಳ  ಉಳಿವಿಗೆ ಅರಣ್ಯ ಇಲಾಖೆ ಎಲ್ಲಾ  ರೀತಿಯ  ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು, ಈ ಭಾಗದಲ್ಲಿ ಕಳ್ಳಬೇಟೆ ತಡೆ ಶಿಬಿರಗಳನ್ನು ತೆರೆಯಬೇಕು, ಗಸ್ತು ಹೆಚ್ಚಳ ಮಾಡಬೇಕು, ಎಲ್ಲಕ್ಕಿಂತ ಮಿಗಿಲಾಗಿ ಸುತ್ತಲೂ ಸೋಲಾರ್ ತಂತಿ ಬೇಲಿ ಅಳವಡಿಸಬೇಕು  ಎನ್ನುತ್ತಾರೆ ಉಪನ್ಯಾಸಕರೂ ಆಗಿರುವ ಆಗಿರುವ ಪರಿಸರಪ್ರಿಯ ಫಣೀಶ್.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್, ತಮಗೆ ಕೃಷ್ಣ ಮೃಗಗಳ ಬೇಟೆಯ ಬಗ್ಗೆ ಯಾವುದೇ ರೀತಿಯ ದೂರುಗಳು ಬಂದಿಲ್ಲ, ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ. ಆ ಭಾಗದಲ್ಲಿ ನಿರಂತರವಾಗಿ ಗಸ್ತು ಹೆಚ್ಚಿಸಲು ಕ್ರಮ ಕೈಗೊಂಡು  ಕೃಷ್ಣಮೃಗಗಳ ಸಂರಕ್ಷಣೆಗೆ ವ್ಯಾಪಕ ಕ್ರಮವಹಿಸುವುದಾಗಿ ಹೇಳಿದರು. ಈ ಪ್ರದೇಶದಲ್ಲಿ  ನೀರಿನ ಸೆಲೆಗಳನ್ನು ಅಭಿವೃದ್ಧಿ ಸೇರಿದಂತೆ ಕೃಷ್ಣ ಮೃಗಗಳ ಸಂರಕ್ಷಣೆಗೆ ಬೇಕಾದ ಪೂರಕ ಕ್ರಮ ಕೈಗೊಳ್ಳಲು ಒಂದು ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಕಳುಹಿಸಲಾಗಿದ್ದು ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ತಿಳಿಸಿದರು.

ವರದಿ: ಎಸ್.ಎಂ. ನಂದೀಶ್
Published by:Vijayasarthy SN
First published: