• Home
  • »
  • News
  • »
  • district
  • »
  • ಚಾಮರಾಜನಗರ ಗಡಿಯಂಚಿನ ಸೋಲಿಗರ ಜಮೀನಿನ ಮಧ್ಯೆಯೇ ಆನೆ ಕಂದಕ ನಿರ್ಮಾಣ: ರೈತರು ಕಂಗಾಲು!

ಚಾಮರಾಜನಗರ ಗಡಿಯಂಚಿನ ಸೋಲಿಗರ ಜಮೀನಿನ ಮಧ್ಯೆಯೇ ಆನೆ ಕಂದಕ ನಿರ್ಮಾಣ: ರೈತರು ಕಂಗಾಲು!

ಜಮೀನಿನ ಮಧ್ಯೆ ಆನೆ ಕಂದಕ ತೊಡುತ್ತಿರುವುದು.

ಜಮೀನಿನ ಮಧ್ಯೆ ಆನೆ ಕಂದಕ ತೊಡುತ್ತಿರುವುದು.

ಇಲ್ಲಿ ದಿಶಾಂಕ್ ಆ್ಯಪ್ ಮೂಲಕ ಸರ್ವೆ ನಡೆಸಲಾಗಿದೆ. ಈ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ಇದ್ದು ನಿಖರವಾಗಿ ಗಡಿ ಗುರುತಿಸಲು ಸಾಧ್ಯವಿಲ್ಲ. ಆದರೂ ಒತ್ತುವರಿಯಾಗಿದೆ ಎಂದು  ಹೇಳಿ ಬಲವಂತವಾಗಿ ಜಮೀನುಗಳಿಗೆ ನುಗ್ಗಿ ಆನೆಕಂದಕ ತೆಗೆಯಲಾಗಿದೆ. 1930 ರಿಂದಲೂ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ತಮ್ಮ ಬಳಿ ಎಲ್ಲಾ ದಾಖಲೆಗಳಿದ್ದರೂ ಅರಣ್ಯಾಧಿಕಾರಿಗಳು ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ  ಎಂದು ಸುಬ್ಬಣ್ಣ ಎಂಬ ರೈತರು ಆರೋಪಿಸಿದ್ದಾರೆ.

ಮುಂದೆ ಓದಿ ...
  • Share this:

ಚಾಮರಾಜನಗರ (ಮೇ.15) ಚಾಮರಾಜನಗರ ಜಿಲ್ಲೆಯ ಗಡಿಯಂಚಿನಲ್ಲಿ ಎಸ್ಸಿ- ಎಸ್ಟಿ ಕಾರ್ಪೋರೇಷನ್​ನಿಂದ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಸೋಲಿಗರಿಗೆ ಖರೀದಿಸಿಕೊಟ್ಟಿದ್ದ ಜಮೀನು ಹಾಗು ರೈತರ ಪಟ್ಟಾ ಜಮೀನುಗಳಲ್ಲಿ ಅರಣ್ಯ ಇಲಾಖೆಯಿಂದ  ಏಕಾಏಕಿ ಆನೆ ಕಂದಕ ತೆಗೆದಿದ್ದು ರೈತರು ಕಂಗಾಲಾಗಿದ್ದಾರೆ.  ಚಾಮರಾಜನಗರ ತಾಲೂಕಿನ ಚಂದಕವಾಡಿ ಹೋಬಳಿ ಹೊನ್ನೇಗೌಡನಹಳ್ಳಿ ಬಳಿ  ರೈತರ ಜಮೀನುಗಳಿವೆ. ಇಲ್ಲಿ 2001-02 ನೇ ಸಾಲಿನಲ್ಲಿ ಎಸ್ಸಿ ಎಸ್ಟಿ ಕಾರ್ಪೊರೇಷನ್ ನಿಂದ  ಜಮೀನು ಖರೀದಿಸಿ  20ಕ್ಕೂ ಹೆಚ್ಚು ಬುಡಕಟ್ಟು ಸೋಲಿಗರ ಕುಟುಂಬಗಳಿಗೆ ತಲಾ ಎರಡು ಎಕರೆಯಂತೆ ಹಂಚಿಕೆ ಮಾಡಲಾಗಿತ್ತು. ಉಳಿದಂತೆ 15 ಕ್ಕು ಹೆಚ್ಚು ರೈತರು ಬಹಳ ಹಿಂದೆ  ಗಡಿಯಂಚಿನ ತಮಿಳುನಾಡು ವ್ಯಾಪ್ತಿಯಲ್ಲಿ ಬರುವ ಗುಮಟಾಪುರಕ್ಕೆ ವಲಸೆ ಹೋದರೂ ಸಹ ಹೊನ್ನೇಗೌಡನಹಳ್ಳಿಯಲ್ಲಿ ಇರುವ ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ.


ಆದರೆ 8 ತಿಂಗಳ ಹಿಂದೆ ಬಿ.ಆರ್.ಟಿ ಅರಣ್ಯಾಧಿಕಾರಿಗಳು ರೈತರಿಗೆ ಯಾವುದೇ ನೋಟೀಸ್ ನೀಡದೆ  ಅರಣ್ಯ ಇಲಾಖೆಯ ಭೂಮಿ ಒತ್ತುವರಿಯಾಗಿದೆ ಎಂದು ಗಡಿ ರೇಖೆ ಗುರುತಿಸುವ ಕಲ್ಲು ನೆಟ್ಟಿದ್ದರು. ಈ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ಸಹ ಮಾಡಿದ್ದರು. ಈ ವೇಳೆ ದಾಖಲೆಗಳನ್ನು ಸಲ್ಲಿಸುವಂತೆ ನಲ್ಲೂರು ವಲಯ ಅರಣ್ಯಾಧಿಕಾರಿ ಮೂಲಕ  ರೈತರಿಗೆ ನೋಟೀಸ್ ಜಾರಿ ಮಾಡಲಾಗಿತ್ತು. ಅದರಂತೆ ರೈತರು ತಮ್ಮ ಜಮೀನುಗಳ  ದಾಖಲೆಗಳನ್ನು ಸಲ್ಲಿಸಿದ್ದರು. ಇದೀಗ ಜಂಟೀ ಸರ್ವೆ ಮಾಡಿದ್ದೇವೆ, ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಸುಳ್ಳು ಹೇಳಿ ರಾತ್ರೋರಾತ್ರಿ 5 ಜೆಸಿಬಿಗಳನ್ನು ತಂದು ಏಕಾಏಕಿ ತಮ್ಮ  ಜಮೀನುಗಳ ಮಧ್ಯೆಯೇ ಆನೆಕಂದಕ ತೆಗೆಯಲಾಗಿದೆ. ನಮ್ಮ ಅಭಿಪ್ರಾಯವನ್ನೂ ಆಲಿಸದೆ ವಲಯ ಅರಣ್ಯಾಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಎಂದು  ಮಂಜುನಾಥ್ ಹೊನ್ನೇಗೌಡನಹಳ್ಳಿ ಆರೋಪಿಸಿದ್ದಾರೆ.


ಮೊದಲು ಭೌತಿಕ ಸರ್ವೆ ನಡೆಸಬೇಕು, ಒತ್ತುವರಿ ಆಗಿದ್ದರೆ   ಆನೆಕಂದಕ ತೆಗೆಯಲು ನಮ್ಮ ಅಭ್ಯಂತರವಿಲ್ಲ. ಆದರೆ ಇಲ್ಲಿ ದಿಶಾಂಕ್ ಆ್ಯಪ್ ಮೂಲಕ ಸರ್ವೆ ನಡೆಸಲಾಗಿದೆ. ಈ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ಇದ್ದು ನಿಖರವಾಗಿ ಗಡಿ ಗುರುತಿಸಲು ಸಾಧ್ಯವಿಲ್ಲ. ಆದರೂ ಒತ್ತುವರಿಯಾಗಿದೆ ಎಂದು  ಹೇಳಿ ಬಲವಂತವಾಗಿ ಜಮೀನುಗಳಿಗೆ ನುಗ್ಗಿ ಆನೆಕಂದಕ ತೆಗೆಯಲಾಗಿದೆ. 1930 ರಿಂದಲೂ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ತಮ್ಮ ಬಳಿ ಎಲ್ಲಾ ದಾಖಲೆಗಳಿದ್ದರೂ ಅರಣ್ಯಾಧಿಕಾರಿಗಳು ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ  ಎಂದು ಸುಬ್ಬಣ್ಣ ಎಂಬ ರೈತರು ಆರೋಪಿಸಿದ್ದಾರೆ.


ಇದನ್ನು ಓದಿ: Tauktae Cyclone: ಎನ್​ಡಿಆರ್​ಎಫ್ ಅಧಿಕಾರಿಗಳೊಂದಿಗೆ ಸಚಿವರ ಸಭೆ; ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್!


ಯಾವುದೇ ನೋಟೀಸ್ ನೀಡದೆ ಇಷ್ಟಬಂದಂತೆ  ಜಮೀನುಗಳಲ್ಲಿ ಅರಣ್ಯ ಇಲಾಖೆಯಿಂದ ಗಡಿ ರೇಖೆ ಗುರುತಿಸುವ ಕಲ್ಲು ಹಾಕಿ ಆನೆಕಂದಕ ತೆಗೆದಿರುವುದು ಕಾನೂನು ಬಾಹಿರ. ಅರಣ್ಯ ಇಲಾಖೆಯ ಈ ಕ್ರಮದಿಂದ ಸೋಲಿಗರು ಜಮೀನು ಕಳೆದುಕೊಳ್ಳುವಂತಾಗಿದೆ.  ಅರಣ್ಯ ಹಾಗು ಕಂದಾಯ ಇಲಾಖೆಯಿಂದ ಜಂಟೀ ಸರ್ವೆ ನಡೆಸಬೇಕು. ಮೊಬೈಲ್ ನೆಟ್ ವರ್ಕ್ ಸಮಸ್ಯೆ ಇರುವುದರಿಂದ ಜಿಪಿಎಸ್ ರೀಡಿಂಗ್ ಸರಿಯಾಗಿ ತೋರಿಸುವುದಿಲ್ಲ, ಯಾವುದೇ ನಿಖರತೆ ಇರುವುದಿಲ್ಲ. ಹಾಗಾಗಿ ಭೌತಿಕ ಸರ್ವೆ ನಡೆಸಿ ಗಡಿ ಗುರ್ತಿಸಬೇಕು ಎಂದು ಚಾಮರಾಜನಗರ ಜಿಲ್ಲಾ ಬುಡಕಟ್ಟು ಗಿರಿಜನರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಆಗ್ರಹಿಸಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿ.ಆರ್.ಟಿ. ಅರಣ್ಯ ಸಂರಕ್ಷಾಣಾಧಿಕಾರಿ ಸಂತೋಷ್ ಕುಮಾರ್ ಮೂರು ಮಂದಿ ಒತ್ತುವರಿ ಮಾಡಿಕೊಂಡಿದ್ದು ಒತ್ತುವರಿ ತೆರವುಗೊಳಿಸುವಂತೆ ಆದೇಶ ನೀಡಿದ್ದೇನೆ. ತಾವು  ಈಗ ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿರುವುದರಿಂದ ಅಲ್ಲಿ ಏನಾಗಿದೆ ಎಂಬುದರ ಮಾಹಿತಿ ಇಲ್ಲ, ಗಮನಹರಿಸುತ್ತೇನೆ ಎಂದು  ತಿಳಿಸಿದ್ದಾರೆ.


ವರದಿ: ಎಸ್.ಎಂ.ನಂದೀಶ್

Published by:HR Ramesh
First published: