ಕೋಲಾರ; ಬಯಲುಸೀಮೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿಯಲ್ಲಿ ಆನೆ ಹಾವಳಿಗೆ ಕೊನೆಯೇ ಇಲ್ಲದಂತಾಗಿದೆ. ತಾಲೂಕಿನ ಬೂದಿಕೋಟೆ, ಕಾಮಸಮುದ್ರ ಹೋಬಳಿಗೆ ಸೇರುವ, ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಆನೆ ಉಪಟಳ ಮುಂದುವರೆದಿದೆ. ಎರಡು ದಿನಗಳ ಹಿಂದೆ ಯರಗೋಳ ಬಳಿ ರೈತ ಧರ್ಮೋಜಿರಾವ್ ಎನ್ನುವರು ಹೊಲದಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ, ಆನೆಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ 4 ಮಂದಿ ಆನೆ ದಾಳಿಗೆ ಬಲಿಯಾಗಿದ್ದಾರೆ.
ಬಂಗಾರಪೇಟೆ ತಾಲೂಕಿನ ಬೂದಿಕೋಟೆ, ಕಾಮಸಮುದ್ರ ಹೋಬಳಿಯ ಸುತ್ತಮುತ್ತಲಿನ ಸುಮಾರು 20ಕ್ಕೂ ಹೆಚ್ಚು ಗ್ರಾಮದಲ್ಲಿ ಆನೆ ಹಾವಳಿಯಿಂದ ನಿರಂತರವಾಗಿ ಬೆಳೆ ನಾಶ ಆಗುತ್ತಿದೆ. ವರ್ಷವಿಡೀ ರೈತರು ರಾಗಿ, ತೊಗರಿ, ಶೇಂಗಾ , ಟೊಮೆಟೊ ಬೆಳೆಯುತ್ತಾರೆ. ಆದರೆ ಕಳೆದ 5 ವರ್ಷದಿಂದ ನಿರಂತರವಾಗಿ ಆನೆಗಳ ದಾಳಿಯಿಂದ ಬೆಳೆ ನಾಶ ಆಗುತ್ತಿದ್ದು, ಸ್ಥಳಕ್ಕೆ ಭೇಟಿ ನೀಡುವ ಅರಣ್ಯ ಇಲಾಖೆಯವರು ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ರೈತರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಆನೆ ಹಾವಳಿಯಿಂದ ಬೆಳೆ ನಾಶ ಆದ ಪ್ರದೇಶಕ್ಕೆ ಭೇಟಿ ನೀಡಿ ಆನ್ ಲೈನ್ ಮೂಲಕವೇ ಎಲ್ಲಾ ಪರಿಹಾರ ಪ್ರಕ್ರಿಯೆ ನಡೆಸಲಾಗಿದೆ. ಪರಿಹಾರವು ರೈತರ ಖಾತೆಗೆ ಜಮಾ ಆಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನು ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷದಿಂದ 7.50 ಲಕ್ಷ ಹಣ ಪರಿಹಾರವಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಎರಡು ದಿನದ ಹಿಂದೆ ಬಂಗಾರಪೇಟೆಯ ಡಿ,ಪಿ ಹಳ್ಳಿಯ ಬಳಿ, ಆನೆ ದಾಳಿಗೆ ತುತ್ತಾಗಿದ್ದ ರೈತ ಧರ್ಮೋಜಿರಾವ್ ಮನೆಗೆ, ಜಿಲ್ಲಾಧಿಕಾರಿ ಸಿ ಸತ್ಯಭಾಮ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಇದೇ ವೇಳೆ ಗ್ರಾಮಸ್ಥರು ಆನೆ ಹಾವಳಿ ತಡೆಗಟ್ಟಲು ಆನೆ ಕಾರಿಡಾರ್ ನಿರ್ಮಿಸಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿ, ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನು ಓದಿ: ಸಾಮಾಜಿಕ ಸ್ವಾಸ್ಥ್ಯ ಕದಡುವ ವಿಷಯಗಳ ನಿಯಂತ್ರಣಕ್ಕೆ ಶೀಘ್ರ ಜಾಲತಾಣಗಳ ಮುಖ್ಯಸ್ಥರ ಸಭೆ; ಗೃಹ ಸಚಿವ ಬಸವರಾಜ ಬೊಮ್ಮಾಯಿ
ಮಾತು ತಪ್ಪಿದ ಸಚಿವ ಆನಂದ್ ಸಿಂಗ್?
ಕಳೆದ ಮಾರ್ಚ್ನಲ್ಲಿ ಆನೆ ದಾಳಿಗೆ ಇಬ್ಬರು ಅಸುನೀಗಿದ್ದ ವೇಳೆ, ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಆನಂದ್ ಸಿಂಗ್, ಜಿಲ್ಲೆಯ ಆನೆ ಹಾವಳಿ ಪ್ರದೇಶದಲ್ಲಿ ಆನೆ ಕಾರಿಡಾರ್ ನಿರ್ಮಿಸಲು ಸರ್ಕಾರದ ಗಮನ ಸೆಳೆದು ಶೀಘ್ರವಾಗಿ ಕ್ರಮ ಜರುಗಿಸುವ ಭರವಸೆ ನೀಡಿದ್ದರು. ಆದರೆ ಸಚಿವರು ಬಂದುಹೋದ ನಂತರ ಇಬ್ಬರು ಆನೆ ದಾಳಿಗೆ ತುತ್ತಾಗಿದ್ದಾರೆ. ಸಚಿವರು ಆದಷ್ಟು ಬೇಗ ಕಾರಿಡಾರ್ ನಿರ್ಮಿಸಲು ಯೋಜನೆ ರೂಪಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಅದರೆ 5 ವರ್ಷಗಳಿಂದ ರೈತರು ಎಷ್ಟು ಬಾರಿ ಮನವಿ ಮಾಡಿದರೂ ಈ ಬಗ್ಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಜರುಗಿಸಿಲ್ಲ ಎಂದು ಗಡಿ ಭಾಗದ ರೈತರು ಅರಣ್ಯ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ