ಮನಸ್ಸಿನ ಭಾರ ಇಳೀತಾ?; ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ ಸಚಿವ ಸುರೇಶ್ ಕುಮಾರ್

ಸಚಿವರಾದವರಿಗೆ ನೂರೆಂಟು ಜವಾಬ್ದಾರಿಗಳಿರುತ್ತವೆ. ಇಂತಹ ಜವಾಬ್ದಾರಿಗಳ ನಡುವೆಯೂ ಸಾಮಾನ್ಯ ವಿದ್ಯಾರ್ಥಿನಿಗೆ ತಾವೇ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸಿ ಧೈರ್ಯ  ತುಂಬಿದ  ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್  ಅವರ ನಡೆಗೆ ಶ್ಲಾಘನೆ ವ್ಯಕ್ತವಾಗಿದೆ.

ಸಚಿವ ಸುರೇಶ್ ಕುಮಾರ್

ಸಚಿವ ಸುರೇಶ್ ಕುಮಾರ್

  • Share this:
ಚಾಮರಾಜನಗರ: ಭಾರೀ  ವಿರೋಧದ ನಡುವೆಯು ಯಶಸ್ವಿಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಿ ಸೈ ಎನಿಸಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್  ಇದೀಗ ಸ್ವತ: ತಾವೇ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯೊಬ್ಬರಿಗೆ ಕರೆ ಮಾಡಿ ಪರೀಕ್ಷೆ ಎದುರಿಸಿದ ಬಗ್ಗೆ ವಿಚಾರಿಸಿ ಮತ್ತಷ್ಟು  ಧೈರ್ಯ ತುಂಬಿದ್ದಾರೆ.

ಕೊರೋನಾ  ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆಯೂ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿ ಪೋಷಕರೊಬ್ಬರು ಫೇಸ್​ಬುಕ್​ನಲ್ಲಿ ಫೋಸ್ಟ್ ಮಾಡಿದ್ದರು. ಈ ಪೋಸ್ಟ್ ಗಮನಿಸಿದ ಸಚಿವ ಸುರೇಶ್ ಕುಮಾರ್ ಅಂದೇ ಅವರಿಗೆ ಕರೆ ಮಾಡಿ ಪರೀಕ್ಷೆ ನಡೆಸಲು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿ ಆತಂಕ ದೂರ ಮಾಡುವ ಪ್ರಯತ್ನ ನಡೆಸಿದ್ದರು.

ಇದೀಗ ಅದೇ ಪೋಷಕರ ಪುತ್ರಿ ಗೌರಿ ಎಂಬ ವಿದ್ಯಾರ್ಥಿನಿಗೆ ಸ್ವತಃ ತಾವೇ ಕರೆ ಮಾಡಿ  ಪರೀಕ್ಷಾ ಕೇಂದ್ರದಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು? ಪರೀಕ್ಷೆ ಬರೆಯಲು ಧೈರ್ಯ ಬಂತು ತಾನೇ? ಮನಸ್ಸಿನ ಭಾರ ಎಲ್ಲಾ ಇಳಿತಾ? ಈಗ ಹೇಗಿದ್ದೀಯಾ? ಅಂತೆಲ್ಲಾ ಯೋಗ ಕ್ಷೇಮ ವಿಚಾರಿಸಿದ್ದಾರೆ. ಆಗಸ್ಟ್ ಮೊದಲ ವಾರ ಫಲಿತಾಂಶ ಬರುತ್ತೆ. ಆಗ ನೀನೇ ನನಗೆ ಫೋನ್ ಮಾಡಿ ತಿಳಿಸಬೇಕು. ಈಗ ಆರಾಮವಾಗಿ ಇರು, ಯೋಚನೆ ಮಾಡಬೇಡ. ಚನ್ನಾಗಿ ನಿದ್ದೆ ಮಾಡು ಎಂದು ವಿದ್ಯಾರ್ಥಿನಿಗೆ ಹೇಳಿದ ಸಚಿವರು ಪರೀಕ್ಷೆ ಮುಗಿದ ಖುಷಿಗೆ ಪಾಯಸ ಮಾಡಸಿಕೊಂಡು ಕುಡೀಬೇಕಿತ್ತು. ನಮ್ಮ ಮನೇಲಿ ಮಾಡಿದ್ದಾರೆ ಕಳುಹಿಸಲಾ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ ಗೌರಿ.


ಪರೀಕ್ಷಾ ಸಮಯದಲ್ಲಿ ಅನುಸರಿಸಿದ ಸಾಮಾಜಿಕ ಅಂತರ ಕಾಪಾಡೋದು, ಕಡ್ಡಾಯವಾಗಿ ಮಾಸ್ಕ್  ಧರಿಸೋದು, ಆಗಾಗ್ಗೆ ಸ್ಯಾನಿಟೈಸರ್ ನಿಂದ ಕೈ ಸ್ವಚ್ಛಗೊಳಿಸುವುದನ್ನು ಮುಂದೆಯೂ ಅನುಸರಿಸಿಕೊಂಡು ಹೋಗುವಂತೆ ವಿದ್ಯಾರ್ಥಿನಿ ಗೌರಿಗೆ ಸಚಿವರು ಸಲಹೆ ನೀಡಿದ್ದಾರೆ.

ಆಕೆಯ  ಪೋಷಕರಾದ ಅಂಜನಾಬನಶಂಕರ ಅವರೊಂದಿಗೆ  ಮಾತನಾಡಿದ ಸಚಿವ ಸುರೇಶ್ ಕುಮಾರ್, ಪೋಷಕರಲ್ಲಿದ್ದ ದುಗಡವೆಲ್ಲಾ ಕರಗಿ ಹೋಗಿದೆ. ಅತ್ಯುತ್ತಮವಾಗಿ  ಪರೀಕ್ಷೆ ನಡೆಸಿದ್ದೇವೆ. ನೆರೆ ರಾಜ್ಯಗಳು ನಮ್ಮನ್ನು ಅನುಸರಿಸಬೇಕು. ಹಾಗೆ ಮಾಡಿದ್ದೇವೆ ಎಂದಿದ್ದಾರೆ. ನಿಮ್ಮ ಮಗಳನ್ನು ನಮ್ಮ ಮಗಳಂತೆ ನೋಡಿಕೊಂಡಿದ್ದೇವೆ. ಜೋಪಾನವಾಗಿ ನೋಡಿಕೊಂಡು ವಾಪಸ್ ಕಳುಹಿಸಿದ್ದೇವೆ. ಆಕೆಗೆ ಮುಂದೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಎಂದು ಸಲಹೆ ನೀಡಿದರು.

ಇದನ್ನು ಓದಿ: ರಾಜ್ಯದಲ್ಲಿ SSLC ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆ; ಪಾಲಕರಲ್ಲಿ ಹೆಚ್ಚಿದ ಆತಂಕ

ಸಚಿವರಾದವರಿಗೆ ನೂರೆಂಟು ಜವಾಬ್ದಾರಿಗಳಿರುತ್ತವೆ. ಇಂತಹ ಜವಾಬ್ದಾರಿಗಳ ನಡುವೆಯೂ ಸಾಮಾನ್ಯ ವಿದ್ಯಾರ್ಥಿನಿಗೆ ತಾವೇ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸಿ ಧೈರ್ಯ  ತುಂಬಿದ  ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್  ಅವರ ನಡೆಗೆ ಶ್ಲಾಘನೆ ವ್ಯಕ್ತವಾಗಿದೆ.
Published by:HR Ramesh
First published: