Education: ವಿದ್ಯಾಗಮ 2.0 ಶುರು ಮಾಡಲು ಮುಂದಾದ ಶಿಕ್ಷಣ ಇಲಾಖೆ

ಮೊದಲಿಗೆ ಪಿಯು ತರಗತಿಗಳು ಆನಂತರ 6-10ನೇ ತರಗತಿಗಳಿಗೆ ವಿದ್ಯಾಗಮ ಆರಂಭವಾಗುತ್ತವೆ. ಇದಾದ ಬಳಿಕ ಪ್ರಾಥಮಿಕ ತರಗತಿ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಈ ವರುಷ ಸದ್ಯಕ್ಕಂತೂ ಶಾಲೆ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ. ಕಾಲೇಜು ಆರಂಭವಾಗುವವರೆಗೂ ಶಾಲೆಗಳು ಮತ್ತೆ ತೆರೆಯುವ ಮಾತೇ ಇಲ್ಲ.

ಈ ಹಿನ್ನೆಲೆ ಶಿಕ್ಷಣ ಇಲಾಖೆ ವಿದ್ಯಾಗಮ ಶುರು ಮಾಡಲು ಮುಂದಾಗಿದೆ. ಅಷ್ಟಕ್ಕೂ ಈ ವರ್ಷ ವಿದ್ಯಾಗಮ‌ 2.0 ಹೇಗಿರುತ್ತೆ ಗೊತ್ತಾ? ಈ ವರದಿ ಓದಿ.

ಕೊರೊನಾದಿಂದಾಗಿ ಕಳೆದ ವರ್ಷ ಯಾವುದೇ ಶಾಲೆಗಳು ತೆರೆಯಲಾಗಿಲ್ಲ. ಈ ವರುಷವೂ ಮೂರನೆ ಅಲೆ ಆತಂಕ ಹಿನ್ನೆಲೆ‌ ಸರ್ಕಾರ ಎಲ್ಲ ವಲಯಗಳನ್ನು ಸಡಿಲಿಸಿದರು ಶಾಲೆ ತೆರೆಯಲು ಧೈರ್ಯ ಮಾಡುತ್ತಿಲ್ಲ. ಈ ಬಾರಿ ಮಕ್ಕಳಿಗೆ ಹೆಚ್ಚು ತೊಂದರೆಯಾಗುತ್ತೆ ಎಂಬ ಸೂಚನೆ ಕಾರಣದಿಂದ ಈ ಬಾರಿಯೂ ಸಹ ಆನ್ ಲೈನ್ ಕ್ಲಾಸ್ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಇಂಟರ್ ನೆಟ್ ಸಮಸ್ಯೆಯಿಂದ ಮಕ್ಕಳು ಆನ್ ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಶೇ.30ರಷ್ಟು  ಮಕ್ಕಳಿಗೆ ಮೊಬೈಲ್, ಟಿವಿ, ಲ್ಯಾಪ್ ಟಾಪ್ ವ್ಯವಸ್ಥೆ ಇಲ್ಲ ಎಂದು‌ ಇಲಾಖೆಯೇ ನಡೆಸಿದ ಸಮೀಕ್ಷೆಯೇ  ಹೇಳುತ್ತಿದೆ. ಇದರಿಂದಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಂತರ ವಿದ್ಯಾಗಮ 2.0 ಶುರು ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಶಾಲೆಯ ಆರಂಭ ವಿಳಂಬವಾದರೆ ವಿದ್ಯಾಗಮದಂತಹ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ. ಕಳೆದ ವರುಷ ಸಾಕಷ್ಟು ಯಶಸ್ವಿಯಾಗಿತ್ತು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಹೇಳುತ್ತಾರೆ. ಆದರೆ ಒಂದಷ್ಟು ಜನ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಪರಿಣಾಮ ಈ ಯೋಜನೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈಗ ಮತ್ತೆ ಈ ಯೋಜನೆಗೆ ಚಾಲನೆ ನೀಡುವ ಸಂಭವ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ವಿದ್ಯಾಗಮ 2.0 ಹೇಗಿರುತ್ತೆ?

ಕಳೆದ ವರುಷದಂತೆ ಈ ವರುಷವೂ ವಿದ್ಯಾಗಮ ತರಗತಿ ಸರ್ಕಾರಿ ಶಾಲಾಮಕ್ಕಳಿಗೆ ಸಮ- ಬೆಸ ಪಾಳಿ ಪದ್ಧತಿಯಲ್ಲಿ ದೇವಸ್ಥಾನ, ಮರದ ಕೆಳಗಡೆ, ಶಾಲಾ ಆವರಣ, ಬಯಲು ಪ್ರದೇಶಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಮೊದಲಿಗೆ ಪಿಯು ತರಗತಿಗಳು ಆನಂತರ 6-10ನೇ ತರಗತಿಗಳಿಗೆ ವಿದ್ಯಾಗಮ ಆರಂಭವಾಗುತ್ತವೆ. ಇದಾದ ಬಳಿಕ ಪ್ರಾಥಮಿಕ ತರಗತಿ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಆನ್​ಲೈನ್​ ತರಗತಿಗೆ ಸರಿಯಾಗಿ ಹಾಜರಾಗಲು ಆಗದ ಹಾಗು ನೆಟ್ವರ್ಕ್​ ಸಮಸ್ಯೆಯಿಂದ ತೊಂದರೆಗೆ ಈಡಾಗಿರುವ  ಗ್ರಾಮಾಂತರ ಪ್ರದೇಶ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಇದು ಸಹಾಯಕವಾಗಲಿದೆ. ಸದ್ಯ ಕಾಲೇಜು ಆರಂಭ ನಂತರ ಶಾಲೆ ತೆರೆಯಲು ಚಿಂತನೆ ನಡೆಯುತ್ತಿದೆ. ಮಕ್ಕಳು ಕಲಿಕೆಯಿಂದ ವಂಚಿತರಾಗದಂತೆ ಇರಲು ಈ ಕ್ರಮಕ್ಕೆ ಮುಂದಾದ ಶಿಕ್ಷಣ ಇಲಾಖೆ ಮುಂದಾಗಿದೆ.

ಕಳೆದ ವರುಷ ಆರಂಭಿಸಿದ್ದ ವಿದ್ಯಾಗಮ 1.0 ಸಕ್ಸಸ್ ಆಗಿತ್ತು. ಶಾಲೆ ಆರಂಭಿಸಿ ಎಂದು ತಜ್ಞರ ಸಮಿತಿ ವರದಿ ನೀಡಿದೆ. ಆದರೂ ಸರ್ಕಾರ ಶಾಲೆಗಳನ್ನು ತೆರೆಯಲು ಯಾಕೋ ಮನಸ್ಸು ಮಾಡುತ್ತಿಲ್ಲ.  ವಿದ್ಯಾಗಮವನ್ನಾದರೂ ಬೇಗ ಶುರು ಮಾಡಲಿ ಎಂದು ರುಪ್ಸಾ ಕರ್ನಾಟಕ ಖಾಸಗಿ ಶಾಲೆ ಒಕ್ಕೂಟ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Nepal: 5ನೇ ಬಾರಿ ನೇಪಾಳದ ಪ್ರಧಾನಿಯಾದ ಶೇರ್ ಬಹದ್ದೂರ್ ದೇವುಬಾ!

ಶಾಲೆ ಆರಂಭ ಕುರಿತು ಇನ್ನೂ ಟಾಸ್ಕ್ ಫೋರ್ಸ್ ಸಮಿತಿ ರಚನೆಯಾಗಬೇಕಿದೆ. ಸಮಿತಿ ರಚನೆಯಾಗಿ ಸಭೆ ಸೇರಿ ವರದಿ ನೀಡುವವರೆಗೂ ವಿದ್ಯಾಗಮ ಆರಂಭಿಸಲು ಇಲಾಖೆ ಉತ್ಸುಕತೆ ತೋರುತ್ತಿದೆ.  ಎಸ್ಸೆಲ್ಸೆಲ್ಸಿ ಪರೀಕ್ಷೆ ಬಳಿಕ  ವಿದ್ಯಾಗಮ 2.0 ಕಾರ್ಯಕ್ರಮವನ್ನು ಮತ್ತೆ ಜಾರಿಗೆ ತರುವ ಸಾಧ್ಯತೆಯಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: