Ganesha Festival 2020 : ವಿಜಯಪುರದಲ್ಲಿ ಸದ್ದಿಲ್ಲದೆ ನಡೆದಿದೆ ಪರಿಸರಕ್ಕೆ ಪೂರಕವಾದ ಗಣೇಶೋತ್ಸವ ಆಚರಣೆ

ಮಣ್ಣಿನಿಂದ ಮಾಡಿರುವ ಮತ್ತು ಯಾವುದೇ ರಾಸಾಯನಿಕ ಬಣ್ಣ ಬಳಸದ ಹಾಗೂ ನೋಡಲು ಅಷ್ಟೇ ಅಂದವಾಗಿರುವ ಗಣೇಶ ವಿಗ್ರಹಗಳು ಇಲ್ಲಿ ಗಮನ ಸೆಳೆಯುತ್ತಿವೆ.

news18-kannada
Updated:August 21, 2020, 3:07 PM IST
Ganesha Festival 2020 : ವಿಜಯಪುರದಲ್ಲಿ ಸದ್ದಿಲ್ಲದೆ ನಡೆದಿದೆ ಪರಿಸರಕ್ಕೆ ಪೂರಕವಾದ ಗಣೇಶೋತ್ಸವ ಆಚರಣೆ
ಪರಿಸರ ಪೂರಕ ಗಣೇಶನ ಮೂರ್ತಿಗಳು
  • Share this:
ವಿಜಯಪುರ(ಆಗಸ್ಟ್​.21): ಗಣೇಶ ಚತುರ್ಥಿ ಬಂತೆಂದರೆ ಸಾಕು. ಎಲ್ಲೆಡೆ ಹಬ್ಮ ಮನೆ ಮಾಡುತ್ತದೆ. ಅದರಲ್ಲಿಯೂ ಪರಿಸರವಾದಿಗಳು ಈ ಗಣೇಶೋತ್ಸವ ಆಚರಣೆಯ ಬಗ್ಗೆಯೇ ಹೆಚ್ಚು ಅರಿವು ಮೂಡಿಸುತ್ತ ತಕರಾರನ್ನು ಮಾಡುತ್ತಾರೆ.  ಪಿಓಪಿ ಗಣಪ, ರಾಸಾಯನಿಕ ಬಣ್ಣಗಳನ್ನು ಬಳಸಿ ತಯಾರಿಸಿದ ವಿಗ್ರಹಗಳ ಬಗ್ಗೆ ಆಗಾಗ ಪ್ರಶ್ನೆಗಲು ಏಳುತ್ತಲೇ ಬಂದಿವೆ. ಆದರೆ, ಇತ್ತ ಸಂಪ್ರದಾಯಕ್ಕೂ ತೊಂದರೆಯಾಗಬಾರದು.  ಪರಿಸರಕ್ಕೂ ಹಾನಿಯಾಗಬಾರದು ಎಂಬ ಉದ್ದೇಶದಿಂದ ವಿಜಯಪುರದ ನನ್ನ ಗಿಡ ನನ್ನ ಭೂಮಿ ಸಂಘಟನೆ ಕಳೆದ ನಾಲ್ಕು ವರ್ಷಗಳಿಂದ ಮನೆಮನೆಗೂ ಮಣ್ಣಿನ ಗಣಪ ಅಭಿಯಾನ ಆರಂಭಿಸಿದೆ. 

ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಗಳ ಕೊರತೆ ನೀಗಿಸಲು ಈ ಸಂಘಟನೆ ಸ್ವತಃ ಮೂರ್ತಿಗಳನ್ನು ತಯಾರಿಸಿ ಮತ್ತು ಬೇರೆ ಕಡೆಯಿಂದ ತರಿಸಿ ವಿಘ್ನ ನಿವಾರಕ ಲಂಬೋದರನ ಭಕ್ತರಿಗಾಗಿ ನೀಡುತ್ತಿದೆ. ಮಣ್ಣಿನಿಂದ ಮಾಡಿರುವ ಮತ್ತು ಯಾವುದೇ ರಾಸಾಯನಿಕ ಬಣ್ಣ ಬಳಸದ ಹಾಗೂ ನೋಡಲು ಅಷ್ಟೇ ಅಂದವಾಗಿರುವ ಗಣೇಶ ವಿಗ್ರಹಗಳು ಇಲ್ಲಿ ಗಮನ ಸೆಳೆಯುತ್ತಿವೆ.

ಪಿಓಪಿ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಿದರೂ ಹಲವಾರು ಬಾರಿ ಪೂರ್ಣವಾಗಿ ಮುಳುಗದೇ, ವಿಘ್ನವಾಗಿ ಅದರ ಭಾಗಗಳು ಅಲ್ಲಲ್ಲಿ ತೇಲುತ್ತಿರುತ್ತವೆ. ಅಲ್ಲದೇ, ಈ ಗಣೇಶ ಮೂರ್ತಿಗಳಿಗೆ ಬಳಸಲಾದ ರಾಸಾಯನಿಕ ಬಣ್ಣ ನೀರಿನಲ್ಲಿ ಬೆರೆತು ಜಲಚರಗಳಿಗೂ ಮತ್ತು ಪರಿಸರಕ್ಕೂ ಹಾನಿಯಾಗುತ್ತಿದೆ. ಇದನ್ನು ತಪ್ಪಿಸಲು ನನ್ನ ಗಿಡ ನನ್ನ ಭೂಮಿ ಸಂಘಟನೆ ಈಗ ಈ ಅಭಿಯಾನಕ್ಕೆ ಮುಂದಾಗಿದ್ದು, ಜನರಿಂದಲು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಕಳೆದ ಬಾರಿ 6 ಸಾವಿರ ಗಣೇಶ ವಿಗ್ರಹಗಳನ್ನು ಮಾರಾಟ ಮಾಡಿದ್ದ ಈ ಸಂಘಟನೆ ಈ ಬಾರಿ ಸಾರ್ವಜನಿಕರಿಂದ ಬಹಳ ಬೇಡಿಕೆ ಬಂದ ಹಿನ್ನೆಲೆಯಲ್ಲಿ 10 ಸಾವಿರ ಏಕದಂತನ ವಿಗ್ರಹಗಳನ್ನು ತರಿಸಿ ಮಾರಾಟ ಮಾಡುತ್ತಿದೆ. ಈ ಗಣೇಶ ಮೂರ್ತಿಗಳು ಗಣೇಶ ಉತ್ಸವ ಮುಗಿದ ಬಳಿಕ ಮನೆಯಲ್ಲಿ ಬಕೆಟ್​ ನಲ್ಲಿ ನೀರಿನಲ್ಲಿ ಹಾಕಿ ಇಟ್ಟರೆ ಸಾಕು. ಕೇವಲ ನಾಲ್ಕು ಗಂಟೆಗಳಲ್ಲಿ ಮಣ್ಣಾಗಿ ಪರಿವರ್ತನೆಯಾಗುತ್ತದೆ. ಇದೇ ಮಣ್ಣನ್ನು ಜನ ತಮ್ಮ ಹೂವಿನ ಕುಂಡಗಳಿಗೆ ಇಲ್ಲವೆ, ದೇವಸ್ಥಾನಗಳಲ್ಲಿರುವ ಗಿಡಗಿಳಿಗೆ ಅಥವಾ ಹೊಲದಲ್ಲಿ ಕೃಷಿಗೂ ಬಳಸಬಹುದಾಗಿದೆ.

ಅಷ್ಟೇ ಅಲ್ಲ, ಕೊರೊನಾ ಸಂದರ್ಭದಲ್ಲಿ ಜನ ಗಣೇಶ ಮೂರ್ತಿಗಳ ವಿಸರ್ಜನೆಗೆ ಭಾವಿಗಳಿಗೆ ಅಲೆದಾಡುವುದು ತಪ್ಪಲಿದೆ. ಅಲ್ಲದೆ, ಈ ಹಿಂದೆ ಗಣೇಶ ವಿಗ್ರಹಗಳ ವಿಸರ್ಜನೆ ವೇಳೆ ಸಂಭವಿಸಿದ ನೀರಿನಲ್ಲಿ ಜನ ಮುಳುಗಿದ ಘಟನೆಗಳನ್ನು ತಪ್ಪಿಸಬಹುದಾಗಿದೆ ಎನ್ನುತ್ತಾರೆ ನನ್ನ ಗಿಡ ನನ್ನ ಭೂಮಿ ಸಂಘಟನೆ ಮುಖಂಡ ಬಸವರಾಜ ಬೈಚಬಾಳ ಮತ್ತು ಶರಣಬಸು ಕುಂಬಾರ.

ಈ ಬಾರಿ ತುಂಬಾ ಮುಂಚಿತವಾಗಿದೆ ಜನ ಈ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಇಟ್ಟಿದ್ದು, ಈಗಾಗಲೇ ತೆಗೆದುಕೊಂಡು ಹೋಗಿದ್ದಾರೆ. ಪರಿಸರಕ್ಕೆ ಪೂರಕವಾಗಿರುವ ಇಂತಹ ಗಣೇಶ ವಿಗ್ರಹಗಳ ಬಗ್ಗೆಯೂ ಜನರಲ್ಲಿ ಈಗ ಜಾಗೃತಿ ಉಂಟಾಗಿದೆ ಎನ್ನುತ್ತಾರೆ ಸಂಘಟನೆ ಮುಖಂಡರಾದ ಚಿದಾನಂದ ಔರಂಗಾಬಾದ, ಗಿರೀಶ ಪಾಟೀಲ ಮತ್ತು ಮಂಜು ಆಸಂಗಿ.

ಇದನ್ನೂ ಓದಿ : SP balasubrahmanyam – ಎಸ್​ಪಿ ಬಾಲಸುಬ್ರಹ್ಮಣ್ಯಂ ಇನ್ನೂ ಗಂಭೀರ ಸ್ಥಿತಿಯಲ್ಲೇ; ಚಿತ್ರರಂಗಗಳ ದಿಗ್ಗಜರಿಂದ ಸಾಮೂಹಿಕ ಪ್ರಾರ್ಥನೆಈ ಬಾರಿ ಗಣೇಶೋತ್ಸವದಲ್ಲಿ ವಿಜೃಂಭಣೆಗೆ ಆದ್ಯತೆ ನೀಡದೆ ಸರಳತೆಯಿಂದ ಮತ್ತು ಭಕ್ತಿಯಿಂದ ವಿನಾಯಕ ಆರಾಧನೆ ಮಾಡುತ್ತ ಪರಿಸರಕ್ಕೂ ಪೂರಕವಾಗಿರುವ ಈ ಮೂರ್ತಿಗಳನ್ನು ಖರೀದಿಸುತ್ತಿದ್ದೇವೆ ಎಂದು ನಿವೃತ್ತ ಎಂಜಿನಿಯರ್ ಎಸ್. ಎಸ್. ತೊದಲಬಾಗಿ, ಉಪನ್ಯಾಸಕ ಅಮಿತಕುಮಾರ ಬಿರಾದಾರ ಮತ್ತು ಶಂಬುಲಿಂಗಯ್ಯ ಕರ್ಪೂರಮಠ ಗಣೇಶ ಮೂರ್ತಿಗಳನ್ನು ಖರೀದಿಸಿದ ಬಳಿಕ ಸಂತಸ ಹಂಚಿಕೊಂಡಿದ್ದಾರೆ.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಭಾರತೀಯ ಸಂಪ್ರದಾಯ ಉಳಿಸಿಕೊಂಡು ಪರಿಸರವನ್ನೂ ಬೆಳೆಸಲು ನನ್ನ ಗಿಡ ನನ್ನ ಭೂಮಿ ಗಣೇಶ ವಿಗ್ರಹಗಳ ಮಾರಾಟವನ್ನು ನೋ ಪ್ರಾಫಿಟ್ ನೋ ಲಾಸ್ ಮಾದರಿಯಲ್ಲಿ ಕೈಗೆತ್ತಿಕೊಂಡಿದೆ. ಅಷ್ಟೇ ಅಲ್ಲ, ಅಂಗಡಿಗಳಲ್ಲಿ ಮಾರಾಟ ಮಾಡುವ ಬದಲು ವಿಜಯಪುರ ನಗರದಲ್ಲಿ ನಾಲ್ಕು ಕಡೆಗಳಲ್ಲಿ ಸಮುದಾಯ ಭವನದಲ್ಲಿ ಈ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದು, ಸಾಮಾಜಿಕ ಅಂತರ ಕಾಪಾಡಲೂ ವ್ಯವಸ್ಥೆ ಮಾಡಿದೆ. ಸದಾ ಒಂದಿಲ್ಲೊಂದು ಪರಿಸರ ಪೂರಕ ಕೆಲಸಗಳಲ್ಲಿ ತೊಡಗಿರುವ ನನ್ನ ಗಿಡ ನನ್ನ ಭೂಮಿ ಸಂಘಟನೆ ಇತರರಿಗೆ ಸ್ಪೂರ್ತಿಯಾಗಿದೆ.
Published by: G Hareeshkumar
First published: August 21, 2020, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading