ಕಾಮಗಾರಿ ಮುಗಿದು ತಿಂಗಳು ಕಳೆಯುವ ಮೊದಲೇ ಕಿತ್ತು ಬಂದ ರಸ್ತೆ; ಕೋಲಾರದಲ್ಲಿ ಗುತ್ತಿಗೆದಾರನಿಂದ ಕಳಪೆ ಕಾಮಗಾರಿ

ರಸ್ತೆಯ ಗುಣಮಟ್ಟ ಯಾವ ಮಟ್ಟದಲ್ಲಿ ಇದೆ  ಎಂದರೆ ಚಿಕ್ಕ ಮಕ್ಕಳು ಕೈಯಿಂದ ಕಿತ್ತರೂ ರಸ್ತೆ ಡಾಂಬರು ಕೈಗೆ ಕಿತ್ತು ಬರುತ್ತಿದೆ. ಇನ್ನು ವಾಹನ ಸವಾರರ ಪ್ರಾಣಕ್ಕೂ ಸಂಚಕಾರ ತರುವಂತಿದೆ ಈ ರಸ್ತೆ.  ಕಾಮಗಾರಿ ಮೊದಲು ಕೈಗೊಳ್ಳಬೇಕಿದ್ದ ಕ್ರಮಗಳನ್ನು ಪಾಲಿಸದೆ ಕಳಪೆ ಗುಣಮಟ್ಟದ ವಸ್ತುಗಳನ್ನ ಬಳಸಿ ರಸ್ತೆ ನಿರ್ಮಿಸಿದ್ದೆ ಇದಕ್ಕೆಲ್ಲಾ ಕಾರಣವೆಂದು ಹೇಳಲಾಗಿದೆ.

news18-kannada
Updated:May 29, 2020, 10:22 PM IST
ಕಾಮಗಾರಿ ಮುಗಿದು ತಿಂಗಳು ಕಳೆಯುವ ಮೊದಲೇ ಕಿತ್ತು ಬಂದ ರಸ್ತೆ; ಕೋಲಾರದಲ್ಲಿ ಗುತ್ತಿಗೆದಾರನಿಂದ ಕಳಪೆ ಕಾಮಗಾರಿ
ಮಳೆಗೆ ಕೊಚ್ಚಿ ಹೋಗಿರುವ ಕಳಪೆ ಕಾಮಗಾರಿಯ ಮೋರಿ
  • Share this:
ಕೋಲಾರ(ಮೇ 29): ಬಯಲುಸೀಮೆ ಕೋಲಾರ ಜಿಲ್ಲೆಗೆ ಕಳಪೆ ರಸ್ತೆ ಕಾಮಗಾರಿಗಳೇನು‌ ಹೊಸದಲ್ಲ. ಸರ್ಕಾರದಿಂದ ಹಣ ಮಂಜೂರಾಗದಿದ್ದರೂ, ಯೋಜನೆ ಕಾಮಗಾರಿಗೆ ಪ್ಲಾನ್ ಸಿದ್ದಪಡಿಸಿ ಮಂಜೂರಾತಿ ಪಡೆದು ಹಣವಿಲ್ಲದಿದ್ದರೂ ಮೊದಲೇ ಕಾಮಗಾರಿ ಮಾಡಿ ನಂತರ ಬಿಲ್ ಮಾಡಿಕೊಳ್ತಾರೆ ಎಂದರೆ ಜಿಲ್ಲೆಯಲ್ಲಿ ಯಾವ ಮಟ್ಟಿಗೆ ಕಾಮಗಾರಿಗಳು ನಡೆಯುತ್ತಿದೆಯೆಂದು ಎಲ್ಲರೂ ಯೋಚಿಸಬಹುದು. ಹೀಗೆ ನಡೆಯುವ ಕಾಮಗಾರಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಕಾಮಗಾರಿ ಆರಂಭಕ್ಕೂ ಮೊದಲು ತೋರುವ ವೃತ್ತಿಪರತೆ ಕಾಮಗಾರಿ ನಡೆಯುವ ವೇಳೆ ಹಾಗೂ ಮುಗಿದ ನಂತರ ತೋರಿಸದೆ ಇದ್ದಲ್ಲಿ ಎಂತಹ  ಅನಾಹುತ ಆಗುತ್ತದೆ ಎಂಬುದಕ್ಕೆ ಇಲ್ಲಿ ಉತ್ತಮ ಉದಾಹರಣೆಯಿದೆ.

ಹೌದು, ಕೊರೋನಾ  ಮಹಾಮಾರಿ ಮಧ್ಯೆಯೂ ಪೂರ್ಣಗೊಂಡ ರಸ್ತೆ ಹಾಗೂ ಮೋರಿ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ. ರಸ್ತೆ ಕಾಮಗಾರಿ ನಡೆದು ಎರಡು ವಾರ ಕಳೆಯುವಷ್ಟರಲ್ಲಿ ರಸ್ತೆ ಡಾಂಬರು ಕಿತ್ತು ಬಂದಿದ್ದು, ಒಂದೇ ಮಳೆಗೆ ರಸ್ತೆ ಮೋರಿಯೂ ಕಿತ್ತು ಬಂದಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ.

ಇದೇ ಮೇ ತಿಂಗಳ 4 ರಂದು ಕೆಜಿಎಫ್​ ಶಾಸಕಿ ಎಂ.ರೂಪಕಲಾ ಅವರು ಸುಮಾರು 1.80  ಕಿಮೀ ಉದ್ದದ ರಸ್ತೆ ಹಾಗೂ ರಸ್ತೆ ಮಧ್ಯೆ ಮೋರಿ ನಿರ್ಮಿಸಲು ನಬಾರ್ಡ್ ಯೋಜನೆಯಡಿ ಅನುಮೋದನೆ ಆಗಿದ್ದ ಸುಮಾರು 75 ಲಕ್ಷ ವೆಚ್ಚದ ಕಾಮಗಾರಿಗೆ  ಚಾಲನೆ ನೀಡಿದ್ದರು, ಕಾಮಗಾರಿಗೆ ಖುದ್ದು ಚಾಲನೆ ನೀಡಿದ್ದ ಶಾಸಕರು ಮೊದಲ ಆದ್ಯತೆ ಗುಣಮಟ್ಟವೇ ಎಂದು ಗುತ್ತಿಗೆದಾರನಿಗೆ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನ ಆದಂತೆ ಕಂಡಿಲ್ಲ. ಇದರ ಪರಿಣಾಮ ರಸ್ತೆಯ ಡಾಂಬರು ಕೈಗೆ ಕಿತ್ತು ಬರುತ್ತಿದ್ದು ಮೋರಿಯು ಮೊನ್ನೆ ಸುರಿದ ಮಳೆಗೆ ಕೊಚ್ಚಿಹೋಗಿ ಚೆಲ್ಲಾಪಿಲ್ಲಿಯಾಗಿದೆ.

ಕಾಮಗಾರಿ ಕಳಪೆಯಾದ್ದರಿಂದಲೇ ಡಾಂಬರು ಹಾಗು ಮೋರಿ ಕಿತ್ತು ಹೋಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಖುದ್ದು ಗ್ರಾಮಸ್ಥರೇ ರಸ್ತೆಯ ಡಾಂಬರನ್ನ ಕೈಗೆ ಕಿತ್ತು ತೋರಿಸಿದ್ದಾರೆ. ಕೂಡಲೇ ಕಾಮಗಾರಿ ನಡೆಸಿದ ಗುತ್ತಿಗೆದಾರನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.  ರಸ್ತೆಯ ಗುಣಮಟ್ಟ ಯಾವ ಮಟ್ಟದಲ್ಲಿ ಇದೆ  ಎಂದರೆ ಚಿಕ್ಕ ಮಕ್ಕಳು ಕೈಯಿಂದ ಕಿತ್ತರೂ ರಸ್ತೆ ಡಾಂಬರು ಕೈಗೆ ಕಿತ್ತು ಬರುತ್ತಿದೆ. ಇನ್ನು ವಾಹನ ಸವಾರರ ಪ್ರಾಣಕ್ಕೂ ಸಂಚಕಾರ ತರುವಂತಿದೆ ಈ ರಸ್ತೆ.  ಕಾಮಗಾರಿ ಮೊದಲು ಕೈಗೊಳ್ಳಬೇಕಿದ್ದ ಕ್ರಮಗಳನ್ನು ಪಾಲಿಸದೆ ಕಳಪೆ ಗುಣಮಟ್ಟದ ವಸ್ತುಗಳನ್ನ ಬಳಸಿ ರಸ್ತೆ ನಿರ್ಮಿಸಿದ್ದೆ ಇದಕ್ಕೆಲ್ಲಾ ಕಾರಣವೆಂದು ಹೇಳಲಾಗಿದೆ.

ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಚರ್ಚೆ, ಖುದ್ದು ಭೇಟಿ ನೀಡಿ ಅಗತ್ಯ ಕ್ರಮ ಭರವಸೆ ನೀಡಿದ ಸಿಇಒ ದರ್ಶನ್

ಕೆಜಿಎಫ್ ತಾಲೂಕಿನ ಬಂಗಾರು ತಿರುಪತಿ ಹಂಗಳ ಗ್ರಾಮದ ಮಧ್ಯೆಯ ರಸ್ತೆಯ ಈ ದುಸ್ತಿತಿಯನ್ನ ಜಿಲ್ಲಾ ಪಂಚಾಯಿತಿ ಸದಸ್ಯರು ಪ್ರಶ್ನೆ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಇಒ ದರ್ಶನ್ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಲೋಪ ಕಂಡುಬಂದಲ್ಲಿ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಇನ್ನು ಸಣ್ಣ ಮಳೆಗೆ ಕೊಚ್ಚಿ ಹೋಗಿರುವ ಮೋರಿಯನ್ನ ಮತ್ತೆ ಸರಿಪಡಿಸೊಕೆ ಗುತ್ತಿಗೆದಾರ ಕೈ ಹಾಕಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಕಳಪೆ ಕಾಮಗಾರಿ ಪೋಟೋಗಳು ವೈರಲ್ ಆಗುತ್ತಿದ್ದಂತೆ ಕಿತ್ತು ಹೋದ ಮೋರಿಗೆ ತೇಪೆ ಹಚ್ಚುವ ಕಾರ್ಯವೈ ಬರದಿಂದ ಸಾಗಿದೆ.

ಒಟ್ಟಿನಲ್ಲಿ ಗಡಿಭಾಗದ ಗ್ರಾಮಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸದುದ್ದೇಶದಿಂದ ಜಾರಿ ಮಾಡುವ ರಸ್ತೆ ಯೋಜನೆಗಳು ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ನಡೆಯುತ್ತಿದೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ ಎಂದರೂ ತಪ್ಪಾಗಲಾರದು. ಹೀಗೆ ತಪ್ಪು ಕಂಡು ಬಂದಾಗ ಕ್ರಮ, ತನಿಖೆ, ಗುತ್ತಿಗೆದಾರನ ಕಪ್ಪು ಪಟ್ಟಿಗೆ ಸೇರಿಸುವ ಮಾತನ್ನಾಡುವ ಹಿರಿಯ ಅಧಿಕಾರಿಗಳು ಕಾಮಗಾರಿ ನಡೆಸುವಾಗಲೇ ಸ್ವಲ್ಪ ಜಾಗರೂಕತೆಯಿಂದ ಎಚ್ಚರ ವಹಿಸಿದ್ದರೂ ಇಂದು ಡಾಂಬರು ಕೈಗೆ ಕಿತ್ತು ಬರುತ್ತಿರಲಿಲ್ಲ, ಮೋರಿಯು ಕೊಚ್ಚಿ ಹೋಗುತ್ತಿರಲಿಲ್ಲ ಎಂದು ಸಾರ್ವಜನಿಕರು ಬೇಸರ ಹೊರ ಹಾಕಿದ್ದಾರೆ.
First published: May 29, 2020, 10:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading