ರಾಮನಗರ(ಏಪ್ರಿಲ್ 12) : ಕಳೆದ 5 ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ರಾಮನಗರ - ಚನ್ನಪಟ್ಟಣದ ಬಸ್ ನಿಲ್ಧಾಣದಲ್ಲಿ ಮಳಿಗೆಗಳು ಡಲ್ ಹೊಡೆಯುತ್ತಿವೆ. ಎರಡೂ ಬಸ್ ನಿಲ್ಧಾಣಗಳಲ್ಲಿ ಸರಿಸುಮಾರು 30 ಕ್ಕೂ ಹೆಚ್ಚು ಅಂಗಡಿ ಮಳಿಗೆಗಳು ಇವೆ. ದಿನನಿತ್ಯ ಎರಡೂ ಬಸ್ ನಿಲ್ದಾಣದಿಂದ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಕೆಲವೊಂದು ಅಂಗಡಿಗಳಲ್ಲಿ ದಿನಕ್ಕೆ 80 ರಿಂದ 1 ಲಕ್ಷದವರೆಗೆ ವ್ಯಾಪಾರ ನಡೆಯುತ್ತಿತ್ತು. ಆದರೆ ಕಳೆದ 5 ದಿನಗಳಿಂದ ಈ ಎಲ್ಲಾ ವ್ಯಾಪಾರಗಳು ಇಲ್ಲದೇ ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ.
ರಾಮನಗರ - ಚನ್ನಪಟ್ಟಣ ಬಸ್ ನಿಲ್ಧಾಣದ ಒಂದು ಅಂಗಡಿಗೆ ಕನಿಷ್ಟ 30 ರಿಂದ 40 ಸಾವಿರ ರೂಪಾಯಿ ಮಾಸಿಕ ಬಾಡಿಗೆ ನಿಗದಿ ಮಾಡಲಾಗಿದೆ. ಇನ್ನು ಕೆಲ ಅಂಗಡಿಗಳಿಗೆ 50 ರಿಂದ 60 ಸಾವಿರ ರೂಪಾಯಿ ಬಾಡಿಗೆಯಿದೆ. ಆದರೆ ಈಗ ವ್ಯಾಪಾರ ಇಲ್ಲದ ಕಾರಣ ರಾಜ್ಯ ಸರ್ಕಾರ ಅಂಗಡಿ ಮಾಲೀಕರ ಪರವಾಗಿ ನಿಲ್ಲಬೇಕು. ಬಸ್ ನಿಲ್ಧಾಣದ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಈ ತಿಂಗಳ ಬಾಡಿಗೆ ಹಣದಲ್ಲಿ ಕಡಿಮೆ ಪಡೆಯಬೇಕೆಂದು ವ್ಯಾಪಾರಸ್ಥರು ಮನವಿ ಮಾಡಿದ್ದಾರೆ.
ಬಸ್ ಇಲ್ಲದೇ ಜನರಿಲ್ಲ, ಜನರಿಲ್ಲದೇ ಬ್ಯುಸಿನೆಸ್ ಮಾಯ: ಬಸ್ ನಿಲ್ಧಾಣದಲ್ಲಿ ಬಸ್ ಗಳು ಇದ್ದರೆ ಜನರು ಸಹ ಹೆಚ್ಚಾಗಿ ಇರುತ್ತಾರೆ. ಜೊತೆಗೆ ನಿಲ್ಧಾಣದ ಒಳಗೆ ಅಂಗಡಿ ಮಳಿಗೆಗಳಲ್ಲಿ ಹೆಚ್ಚಿನ ವ್ಯಾಪಾರವೂ ಸಹ ನಡೆಯಲಿದೆ. ಆದರೆ ಸಾರಿಗೆ ನೌಕರರ ಮುಷ್ಕರದಿಂದಾಗಿ ರಾಮನಗರ - ಚನ್ನಪಟ್ಟಣದ ಬಸ್ ನಿಲ್ಧಾಣದಲ್ಲಿ ಇರುವ ಅಂಗಡಿಮಳಿಗೆಗಳಲ್ಲಿ ವ್ಯಾಪಾರವಿಲ್ಲದೇ ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ. ದಿನನಿತ್ಯ ಸಾವಿರದಿಂದ ಲಕ್ಷದವರೆಗೆ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರು ಈಗ ರೂಪಾಯಿ ಲೆಕ್ಕದಲ್ಲಿ ವ್ಯಾಪಾರ ಮಾಡುವಂತಹ ದುಸ್ಥಿತಿ ಎದುರಾಗಿದೆ.
ಪ್ರಮುಖವಾಗಿ ಗ್ರಾಮಾಂತರ ಭಾಗದಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಿಲ್ಧಾಣಕ್ಕೆ ಬರುತ್ತಿದ್ದರು. ಆದರೆ ಸಾರಿಗೆ ವ್ಯವಸ್ಥೆ ಇಲ್ಲದ ಹಿನ್ನೆಲೆ ಅವರೆಲ್ಲ ಖಾಸಗಿ ವಾಹನಗಳ ಮೊರೆಹೋಗಿದ್ದಾರೆ. ಇದರಿಂದಾಗಿ ಬಸ್ ನಿಲ್ಧಾಣದಲ್ಲಿ ಜನರೇ ಇಲ್ಲದೇ ಬಿಕೋ ಎನ್ನುತ್ತಿದೆ. ಆದರೂ ಸಹ ಅಂಗಡಿ ಮಾಲೀಕರು ಬಾಗಿಲು ತೆರೆದು ವ್ಯಾಪಾರ ಮಾಡಲು ಮುಂದಾಗಿದ್ದಾರೆ. ಅಲ್ಲೋ ಇಲ್ಲೋ ಒಂದಿಬ್ಬರು ವ್ಯಾಪಾರ ಮಾಡುತ್ತಿದ್ದು ಸಂಪೂರ್ಣ ನಷ್ಟದಲ್ಲಿ ಕಾಲಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ