ಕೊರೋನಾ ಸಂಕಷ್ಟ : ಸರ್ಕಾರಿ ಶಾಲೆಗಳತ್ತ ಒಲವು ತೋರುತ್ತಿರುವ ಪೋಷಕರು

ಸರ್ಕಾರಿ ಶಾಲೆ

ಸರ್ಕಾರಿ ಶಾಲೆ

ಶಾಲೆಗಳು ಇನ್ನೂ ತೆರೆಯದ ಕಾರಣ ವಿದ್ಯಾಗಮ ಯೋಜನೆಯಡಿ ಮಕ್ಕಳು ಇರುವ ಸ್ಥಳಗಳಿಗೆ ತೆರಳಿ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ಒದಗಿಸಲಾಗಿದೆ. ಇದೂ ಸಹ ಬಹುತೇಕ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುತ್ತಿದೆ

  • Share this:

ಚಾಮರಾಜನಗರ(ಆಗಸ್ಟ್. 30): ಕೋವಿಡ್ 19 ನಿಂದ ಉಂಟಾಗಿರುವ ಸಂಕಷ್ಟದ ಪರಿಣಾಮ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಒಲವು ತೋರುತ್ತಿದ್ದಾರೆ. ಕೊರೋನಾ ಸೋಂಕು ತಗಲುವ ಭೀತಿ, ಆರ್ಥಿಕ ಹೊರೆ, ಸಂಚಾರ ಹೀಗೆ ಹಲವಾರು ಸಮಸ್ಯೆಗಳಿಂದ ಬೇಸತ್ತು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ವರ್ಷ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದು ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ  ಪಡೆದಿದ್ದಾರೆ.


ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಉಚಿತ ಶಿಕ್ಷಣ, ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಮಧ್ಯಾಹ್ನ ಬಿಸಿಯೂಟ,  ಮಕ್ಕಳಿಗೆ ಉಚಿತ ಹಾಲು ಹೀಗೆ ನಾನಾ ರೀತಿಯ ಸೌಲಭ್ಯ ನೀಡಿದರೂ ಸಹ ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದರು. ದುಬಾರಿ ಶುಲ್ಕ ತೆತ್ತು ಖಾಸಗಿ ಶಾಲೆಗಳಿಗೆ ಸೇರಿಸುವುದು ಪೋಷಕರ ಪ್ರತಿಷ್ಟೆಯವೂ ವಿಷಯವಾಗಿತ್ತು. ಆದರೀಗ ಕೋವಿಡ್ -19 ಪರಿಣಾಮ ತದ್ವಿರುದ್ದವಾದ ವಾತಾವರಣ ಸೃಷ್ಟಿಯಾಗುತ್ತಿದೆ.


ಉದ್ಯೋಗ ಅರಸಿ ನಗರಪ್ರದೇಶ  ಸೇರಿದ್ದವರು ವಾಪಸ್ ಹಳ್ಳಿಗೆ ಬಂದಿದ್ದಾರೆ. ಮತ್ತೆ ನಗರಗಳಿಗೆ ಹೋಗಲು ಕೊರೋನಾ ಭಯ ಕಾಡುತ್ತಿದೆ. ಇನ್ನೊಂದೆಡೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಲಾಕ್ ಡೌನ್ ಪರಿಣಾಮ ಆರ್ಥಿಕ ಸಂಕಷ್ಟವೂ ಎದುರಾಗಿದೆ.


ಕೆಲವು ಖಾಸಗಿ ಶಾಲೆಗಳು ಆನ್ ಲೈನ್ ಶಿಕ್ಷಣ ನೀಡುತ್ತಿವೆ. ಇದೇ ಕಾರಣಕ್ಕೆ ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡುತ್ತಿವೆ. ಶುಲ್ಕದ ಹೊರೆ, ಆನ್ ಲೈನ್ ಶಿಕ್ಷಣಕ್ಕೆ ಬೇಕಾದ ಸ್ಮಾರ್ಟ್ ಪೋನ್, ಲ್ಯಾಪ್ ಟಾಪ್ ಹಾಗು ನೆಟ್ ವರ್ಕ್ ಸಮಸ್ಯೆಯು  ಇದೆ.  ಕೊರೋನಾ ಹರಡುತ್ತಿರುವುದರಿಂದ ಮಕ್ಕಳನ್ನು ವಾಹನಗಳ ಮೂಲಕ ಪಟ್ಟಣ ಪ್ರದೇಶಗಳಿಗೆ ಕಳುಹಿಸುವುದು ಹೇಗೆ ಎಂಬ ಚಿಂತೆ ಪೋಷಕರನ್ನು ಕಾಡುತ್ತಿದೆ. ಈ ಎಲ್ಲಾ ಕಾರಣಗಳಿಂದ ಹತ್ತಿರದ ಸರ್ಕಾರಿ ಶಾಲೆಗಳೆ ಉತ್ತಮ ಎಂಬ ತೀರ್ಮಾನಕ್ಕೆ ಬಂದಿರುವ ಹಲವಾರು ಪೋಷಕರು ಖಾಸಗಿ ಶಾಲೆಗಳತ್ತ ಒಲವು ತೋರುತ್ತಿದ್ದಾರೆ.


ಇದನ್ನೂ ಓದಿ : ಜಾನುವಾರುಗಳಲ್ಲಿ ಕಾಣಿಸಿಕೊಂಡ ಲಂಪಿಸ್ಕಿನ್ ರೋಗ : ಹೊಸ ವೈರಲ್ ರೋಗಕ್ಕೆ ರೈತ ಸಮುದಾಯ ತತ್ತರ


ಶಾಲೆಗಳು ಇನ್ನೂ ತೆರೆಯದ ಕಾರಣ ವಿದ್ಯಾಗಮ ಯೋಜನೆಯಡಿ ಮಕ್ಕಳು ಇರುವ ಸ್ಥಳಗಳಿಗೆ ತೆರಳಿ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ಒದಗಿಸಲಾಗಿದೆ. ಇದೂ ಸಹ ಬಹುತೇಕ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುತ್ತಿದೆ.


ಈ ವರ್ಷ ಸರ್ಕಾರಿ ಶಾಲೆಗಳ ಪ್ರವೇಶಾತಿ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಗಳಲ್ಲಿ  ಪ್ರವೇಶಾತಿ ಪಡೆದಿದ್ದಾರೆ ಎಂದು ಡಿಡಿಪಿಐ ಜವರೇಗೌಡ ಮಾಹಿತಿ ನೀಡಿದ್ದಾರೆ.


ಒಟ್ಟಾರೆ ಕೋವಿಡ್ 19 ನಿಂದ ಎದುರಾಗಿರುವ  ಸಂಕಷ್ಟ ಸರ್ಕಾರಿ ಶಾಲೆಗಳ ಪ್ರವೇಶಾತಿ ಹೆಚ್ಚಿಸುತ್ತಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದವರು ಈಗ ಖಾಸಗಿ ಶಾಲೆಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳತೊಡಗಿದ್ದಾರೆ. ಈ ಬದಲಾವಣೆ ಶೈಕ್ಷಣಿಕ ಕ್ಷೇತ್ರದಲ್ಲಿ  ಸಂಚಲನ ಉಂಟುಮಾಡಿದೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು