• Home
  • »
  • News
  • »
  • district
  • »
  • Kukke Subrahmanya: ಈ ಬಾರಿ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥ ಎಳೆಯಲು ಭಕ್ತರಿಗಿಲ್ಲ ಅವಕಾಶ

Kukke Subrahmanya: ಈ ಬಾರಿ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥ ಎಳೆಯಲು ಭಕ್ತರಿಗಿಲ್ಲ ಅವಕಾಶ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ಡಿಸೆಂಬರ್ 12 ರಿಂದ ಕ್ಷೇತ್ರದಲ್ಲಿ ಜಾತ್ರೆಗೆ ಚಾಲನೆ ದೊರೆಯಲಿದ್ದು, ಡಿಸೆಂಬರ್ 19 ರಂದು ಪಂಚಮಿ ರಥೋತ್ಸವ ಹಾಗೂ ಡಿಸೆಂಬರ್ 20 ರಂದು ಬ್ರಹ್ಮರಥೋತ್ಸವ ನಡೆಯಲಿದ್ದು, ಈ ಬಾರಿ ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳಿಂದ ಮಾತ್ರ ಬ್ರಹ್ಮರಥವನ್ನು ಎಳೆಯಲು ತೀರ್ಮಾನಿಸಲಾಗಿದೆ

  • Share this:

ಪುತ್ತೂರು(ಡಿಸೆಂಬರ್​. 02): ಹೆಸರಾಂತ ನಾಗಕ್ಷೇತ್ರ, ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿ ರಥೋತ್ಸವದಲ್ಲಿ ಭಕ್ತರ ಪಾಲ್ಗೊಳ್ಳುವಿಕೆಗೆ ನಿಷೇಧ ಹೇರಲಾಗಿದೆ. ಪ್ರತೀ ವರ್ಷ ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತಿದ್ದು, ಈ ರಥೋತ್ಸವದಲ್ಲಿ ರಥ ಎಳೆಯಲು ಭಕ್ತರಿಗೂ ಅವಕಾಶವನ್ನು ಕಲ್ಪಿಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್-19 ಹಿನ್ನಲೆಯಲ್ಲಿ ಭಕ್ತರಿಗೆ ರಥ ಎಳೆಯುವ ಅವಕಾಶವನ್ನು ನಿರಾಕರಿಸಲಾಗಿದೆ. ಕ್ಷೇತ್ರದ ಸಂಪ್ರದಾಯಕ್ಕೆ ಯಾವುದೇ ರೀತಿಯ ಧಕ್ಕೆ ಬಾರದ ರೀತಿಯಲ್ಲಿ ಈ ಬಾರಿ ಚಂಪಾಷಷ್ಠಿ ಮಹೋತ್ಸವ ನಡೆಸಲು ಸರಕಾರ ತೀರ್ಮಾನಿಸಿದೆ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಧಿಪತಿ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವಕ್ಕೂ ಕೊರೊನಾ ಕರಿಛಾಯೆ ಆವರಿಸಿದೆ. ಪ್ರತೀ ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವದ ಜೊತೆಗೆ ಶಿವ-ಪಾರ್ವತಿಯರ ರಥೋತ್ಸವ ನಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ.


ಈ ಧಾರ್ಮಿಕ ವಿಧಿ ವಿಧಾನದಲ್ಲಿ ಭಕ್ತರನ್ನೂ ಸೇರಿಸಿಕೊಳ್ಳುವ ಪದ್ಧತಿ ಕ್ಷೇತ್ರದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿತ್ತು. ಬ್ರಹ್ಮರಥ ಎಳೆಯುವುದು ಪುಣ್ಯದ ಕೆಲಸ ಎನ್ನುವ ನಂಬಿಕೆ ಕ್ಷೇತ್ರದಲ್ಲಿದ್ದು, ಈ ಕಾರಣಕ್ಕಾಗಿಯೇ ಮುಂಜಾನೆ ನಡೆಯುವ ಈ ರಥೋತ್ಸವದಲ್ಲಿ ರಥ ಎಳೆಯಲು ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಸೇರುತ್ತಾರೆ. ಸೇವೆಯ ರೂಪದಲ್ಲೂ ಬ್ರಹ್ಮರಥ ಎಳೆಯುವ ಅವಕಾಶವನ್ನೂ ಕ್ಷೇತ್ರದಲ್ಲಿ ನೀಡಲಾಗಿದೆ.


25 ಸಾವಿರ ರೂಪಾಯಿಗಳ ಬ್ರಹ್ಮರಥ ಸೇವೆ ಮಾಡಿಸಿಕೊಂಡವರ ಇಡೀ ಕುಟುಂಬ ಸದಸ್ಯರಿಗೆ ರಥ ಎಳೆಯುವ ಅವಕಾಶವನ್ನೂ ನೀಡಲಾಗುತ್ತದೆ. ಕಳೆದ ವರ್ಷ ಒಟ್ಟು 99 ಬ್ರಹ್ಮರಥ ಸೇವೆಯನ್ನು ಮಾಡಿಸಲಾಗಿತ್ತು. ಅದೇ ಪ್ರಕಾರ 2018 ರಲ್ಲಿ 109 ಮಂದಿ ಬ್ರಹ್ಮರಥ ಸೇವೆ ನೆರವೇರಿಸಿದ್ದರು. ಆದರೆ ಈ ಬಾರಿ ಕೋವಿಡ್-19 ಮಾರ್ಗಸೂಚಿ ಹಿನ್ನಲೆಯಲ್ಲಿ ಜನಸಂದಣಿ ತಡೆಯುವ ಕಾರಣಕ್ಕಾಗಿ ಭಕ್ತರಿಗೆ ಈ ಬಾರಿ ರಥ ಎಳೆಯುವ ಅವಕಾಶವನ್ನು ನಿರಾಕರಿಸಲಾಗಿದೆ.


ಡಿಸೆಂಬರ್ 12 ರಿಂದ ಕ್ಷೇತ್ರದಲ್ಲಿ ಜಾತ್ರೆಗೆ ಚಾಲನೆ ದೊರೆಯಲಿದ್ದು, ಡಿಸೆಂಬರ್ 19 ರಂದು ಪಂಚಮಿ ರಥೋತ್ಸವ ಹಾಗೂ ಡಿಸೆಂಬರ್ 20 ರಂದು ಬ್ರಹ್ಮರಥೋತ್ಸವ ನಡೆಯಲಿದ್ದು, ಈ ಬಾರಿ ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳಿಂದ ಮಾತ್ರ ಬ್ರಹ್ಮರಥವನ್ನು ಎಳೆಯಲು ತೀರ್ಮಾನಿಸಲಾಗಿದೆ. ಕ್ಷೇತ್ರದ ಧಾರ್ಮಿಕ ಆಚರಣೆಗೆ ಯಾವುದೇ ರೀತಿಯ ಧಕ್ಕೆ ಬರದ ರೀತಿಯಲ್ಲಿ ಈ ಬಾರಿ ಚಂಪಾಷಷ್ಠಿ ಮಹೋತ್ಸವ ನಡೆಸಲು ಸರಕಾರ ತೀರ್ಮಾನಿಸಿದೆ.


ಕ್ಷೇತ್ರದ ಅತೀ ಪ್ರಮುಖ ಸೇವೆಗಳೆಂದು ಗುರುತಿಸಿಕೊಂಡಿರುವ ಎಡೆಸ್ನಾನ ಸೇವೆಗೂ ಈ ಬಾರಿ ಅವಕಾಶ ನೀಡುವುದೂ ಅನುಮಾನವಾಗಿದೆ. ದೇವಸ್ಥಾನದ ಆವರಣದಲ್ಲಿ ದೇವರಿಗೆ ಬಡಿಸಿದ ನೈವೇದ್ಯವನ್ನು ಬಾಳೆ ಎಲೆಯಲ್ಲಿ ಗೋವುಗಳಿಗೆ ತಿನ್ನಿಸಿದ ಬಳಿಕ ಆ  ಎಲೆಯ ಮೇಲೆ ಭಕ್ತಾಧಿಗಳು ಉರುಳು ಸೇವೆ ನಡೆಸುವುದು ಎಡೆಸ್ನಾನದ ವಿಶೇಷವಾಗಿದೆ. ಈ ಸೇವೆ ನೆರವೇರಿಸಿದಲ್ಲಿ ಚರ್ಮರೋಗ ಸೇರಿದಂತೆ ಹಲವು ರೀತಿಯ ರೋಗಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ.


ಇದನ್ನೂ ಓದಿ : ಕೊರೋನಾ ನಡುವೆ ಅದ್ದೂರಿ ಮದುವೆ : ಹೆಲಿಕಾಪ್ಟರ್​ನಲ್ಲಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ ವರ


ಈ ಹಿಂದೆ ಬ್ರಾಹ್ಮಣರು ತಿಂದ ಎಲೆಯ ಮೇಲೆ ಉರುಳು ಸೇವೆ ನಡೆಸಲಾಗುತ್ತಿತ್ತು. ಈ ಸೇವೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ದೇವರ ನೈವೇದ್ಯವನ್ನು ಗೋವುಗಳಿಗೆ ತಿನ್ನಿಸಿ, ಆ ಎಲೆಯಲ್ಲಿ ಉರುಳು ಸೇವೆಯ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಆದರೆ ಈ ಬಾರಿ ಬೀದಿ ಉರುಳು ಸೇವೆಗೆ ಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.


ಕ್ಷೇತ್ರದಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಕುಮಾರಧಾರಾ ಸ್ನಾನಘಟ್ಟದಿಂದ ,ಕ್ಷೇತ್ರದವರೆಗೆ ಉರುಳು ಸೇವೆ ಮಾಡುವುದು ಈ ಸೇವೆಯ ವಿಶೇಷತೆಯಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಸೇವೆಗಳನ್ನು ಕಡಿತಗೊಳಿಸುವುದಕ್ಕೆ ಭಕ್ತರ ಅಸಮಾಧಾನವಿಲ್ಲದಿದ್ದರೂ, ಬ್ರಹ್ಮರಥದ ಸೇವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿರುವುದು ಭಕ್ತರ ನಿರಾಶೆಗೆ ಕಾರಣವಾಗಿದೆ.

Published by:G Hareeshkumar
First published: