• Home
  • »
  • News
  • »
  • district
  • »
  • ಕೊರೋನಾ ಎಫೆಕ್ಟ್​​ : ಬಂಡೀಪುರ ಹಾಗೂ ಕೆ.ಗುಡಿ ಸಫಾರಿ ಸ್ಥಗಿತ

ಕೊರೋನಾ ಎಫೆಕ್ಟ್​​ : ಬಂಡೀಪುರ ಹಾಗೂ ಕೆ.ಗುಡಿ ಸಫಾರಿ ಸ್ಥಗಿತ

ಬಂಡೀಪುರ

ಬಂಡೀಪುರ

ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ

  • Share this:

ಚಾಮರಾಜನಗರ(ಜುಲೈ. 03): ಕೊರೋನಾ ಭೀತಿ ಹಿನ್ನಲೆಯಲ್ಲಿ ಇಂದಿನಿಂದ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹಾಗು ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ಸಫಾರಿ ಸ್ಥಗಿತಗೊಂಡಿದೆ. ಜೊತೆಗೆ ಈ ವ್ಯಾಪ್ತಿಯ ಹೋಟೆಲ್, ರೆಸಾರ್ಟ್ ಗಳನ್ನು ಬಂದ್ ಮಾಡಲಾಗುತ್ತಿದೆ.

ಜಿಲ್ಲೆಯ ಸಾರ್ವಜನಿಕರ ಹಾಗು ಪ್ರವಾಸಿಗರ ಸುರಕ್ಷತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಪ್ರೇಕ್ಷಣೀಯ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡೀಪುರ ಹಾಗು ಬಿ.ಆರ್.ಟಿ. ಹುಲಿರಕ್ಷಿತಾರಣ್ಯಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಸಫಾರಿ ಸ್ಥಗಿತಗೊಳಿಸಲಾಗಿದೆ.

ಲಾಕ್ ಡೌನ್ ಘೋಷಣೆ ಹಿನ್ನಲೆಯಲ್ಲಿ ಹಿಂದೆ ಮಾರ್ಚ್ 15 ರಿಂದ ಬಂಡೀಪುರ ಹಾಗು ಬಿ.ಆರ್.ಟಿ. ಹುಲಿ ರಕ್ಷಿತಾರಣ್ಯಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಸಫಾರಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ಜೂನ್ 8 ರಿಂದ ಮತ್ತೆ ಸಫಾರಿ ಆರಂಭಿಸಲಾಗಿತ್ತು. ಆದರೆ, ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶ ಹೊರಡಿಸಿರುವುದರಿಂದ ಮತ್ತೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಪಾಲಿಸುತ್ತೇವೆ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಬಾಲಚಂದ್ರ ಹೇಳುತ್ತಾರೆ.

ರಾಜ್ಯದಲ್ಲೇ ಅತಿ  ಹೆಚ್ಚು ಹುಲಿಗಳ ತಾಣವಾಗಿರುವ ಬಂಡೀಪುರಕ್ಕೆ ದೇಶ ವಿದೇಶಗಳಿಂದ ಹಾಗೂ ರಾಜ್ಯದ ನಾನಾ ಮೂಲೆಗಳಿಂದ ನಿತ್ಯ ನೂರಾರು ಪ್ರವಾಸಿಗರು ಬರುವುದು ಸಾಮಾನ್ಯ. ಈ ಹಿನ್ನಲೆಯಲ್ಲಿ ಪ್ರವಾಸಿಗರಿಂದ ಸದಾ ತುಂಬಿ ತುಳುಕುತ್ತಿದ್ದ ಬಂಡೀಪುರ ಸಫಾರಿ ಕೇಂದ್ರ ಇದೀಗ ಪ್ರವಾಸಿಗರಿಲ್ಲದೆ ಬಣಗುಡುವಂತಾಗಿದೆ.

ಇದನ್ನೂ ಓದಿ : ಪೊಲೀಸರು, ವೈದ್ಯರಲ್ಲಿ ಸೋಂಕು ಹೆಚ್ಚಳ ; ಕಲಬುರ್ಗಿಯಲ್ಲಿ ಕೊರೋನಾ ವಾರಿಯರ್ಸ್ ತತ್ತರ

ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧದ ಜೊತೆಗೆ ಸುತ್ತಮುತ್ತ ಇರುವ ಹೋಟೆಲ್ ಹಾಗು ರೆಸಾರ್ಟ್ ಗಳನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.


ಹಾಗಾಗಿ ಬಂಡೀಪುರ ಹಾಗು ಬಿ.ಆರ್.ಟಿ. ವ್ಯಾಪ್ತಿಯ ಹೋಟೆಲ್ ಹಾಗು ರೆಸಾರ್ಟ್ ಗಳು ಇಂದಿನಿಂದ ಬಂದ್ ಆಗುತ್ತಿವೆ. ರೆಸಾರ್ಟ್ ಗಳ ಮುಂಗಡ ಬುಕಿಂಗ್ ಕೂಡ ರದ್ದಾಗಲಿದೆ. ಒಟ್ಟಾರೆ ಕೊರೋನಾ ಕರಿನೆರಳು ಜಿಲ್ಲೆಯ ಪ್ರವಾಸೋದ್ಯಮಕ್ಕೆ  ಭಾರೀ ಪೆಟ್ಟು ನೀಡಿದೆ.

 

First published: