Dasara Elephant: ದಸರಾ ಪಟ್ಟದ ಆನೆ ವಿಕ್ರಮ ಸೇರಿ ದುಬಾರೆ ಸಾಕಾನೆ ಶಿಬಿರದ ಮೂರು ಆನೆಗಳು ತಯಾರಿ

ದಸರಾಗೆ ಆಯ್ಕೆ ಆಗಿರುವ ಆನೆಗಳಿಗೆ ಶಿಬಿರದಲ್ಲಿ ನಿತ್ಯವೂ ಬೆಳಿಗ್ಗೆ 6 ಕೆಜಿ ಭತ್ತದ ಹುಲ್ಲು, 6 ಕೆಜಿ ಭತ್ತ, ಬೆಲ್ಲ ಮತ್ತು ಅದರ ಜೊತೆಗೆ ವಿಶೇಷ ಆಹಾರವಾಗಿ ಜೋಳ, ಕುಚಲಕ್ಕಿ, ರಾಗಿಯಿಂದ ಸಿದ್ದಪಡಿಸಿದ ಮುದ್ದೆಯನ್ನು ಆಹಾರವಾಗಿ ನೀಡಿ ದಸಾರಕ್ಕೆ ತಯಾರು ಮಾಡಲಾಗುತ್ತಿದೆ.

ದಸರಾದಲ್ಲಿ ಭಾಗವಹಿಸಲಿರುವ ಆನೆಗಳು.

ದಸರಾದಲ್ಲಿ ಭಾಗವಹಿಸಲಿರುವ ಆನೆಗಳು.

  • Share this:
ಕೊಡಗು: ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ (Mysuru Dasara) ಕೆಲವು ದಿನಗಳು ಮಾತ್ರವೇ ಬಾಕಿ ಇವೆ. ಈ ಬಾರಿ ದಸರಾ ಜಂಬೂ ಸವಾರಿಗೆ (Jambu Savari) ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಿಂದ (Dubare Elephant Camp) ಮೂರು ಆನೆಗಳು ಆಯ್ಕೆ ಆಗಿವೆ. ದುಬಾರೆ ಸಾಕಾನೆ ಶಿಬಿರದಿಂದ 58 ವರ್ಷದ ವಿಕ್ರಮ, 44 ವರ್ಷದ ಕಾವೇರಿ ಮತ್ತು 43 ವರ್ಷದ ಧನಂಜಯ ಆನೆಗಳು ಭಾಗವಹಿಸಲಿವೆ. ಮೂರು ಆನೆಗಳ ವಿಶೇಷವೆಂದರೆ ಬರೋಬ್ಬರಿ 18 ಬಾರಿ ದಸರಾದಲ್ಲಿ ಭಾಗವಹಿಸಿರುವ ವಿಕ್ರಮ ಆನೆ 2008 ರಿಂದ ಅಂದರೆ ಕಳೆದ 12 ವರ್ಷದಿಂದಲೂ ಮೈಸೂರು ರಾಜರ ಪಟ್ಟದ ಆನೆಯಾಗಿ ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ.

ಹೌದು, ವಿಕ್ರಮ ಆನೆ ಪ್ರಮುಖವಾಗಿ ಮೈಸೂರು ಅರಮನೆಯಲ್ಲಿ 9 ದಿನಗಳ ಕಾಲ ನಡೆಯುವ ನವರಾತ್ರಿ ಪೂಜೆಯಲ್ಲಿ ಭಾಗವಹಿಸಲಿದೆ. ರಾಜರ ಮನೆ ದೇವರನ್ನು ಮತ್ತು ದೇವರ ಒಡವೆ ವಸ್ತ್ರಗಳನ್ನು ಹೊತ್ತು ಸಾಗಲಿದೆ. ಅಲ್ಲದೆ ರಾಜ ವಂಶಸ್ಥರ ಆಯುಧಗಳನ್ನು ಸಾಗಿಸುವ ಜವಾಬ್ದಾರಿ ನಿಭಾಯಿಸಲಿದೆ. ಆ ಮೂಲಕ ತನ್ನ ಕರ್ತವ್ಯ ಮತ್ತು ಭಕ್ತಿ ಮೆರೆಯಲಿದೆ ಎನ್ನೋದು ವಿಕ್ರಮ ಆನೆಯ ಮಾವುತ ಹೇಮಂತ್ ಅವರು ಹೇಳಿದ್ದಾರೆ. ಮತ್ತೊಂದು ಆನೆ ಕಾವೇರಿ, ಇದುವರೆಗೆ 7 ಬಾರಿ ದಸರಾದಲ್ಲಿ ಭಾಗವಹಿಸಿರುವ ಕಾವೇರಿ ಆನೆ ಅಷ್ಟು ಬಾರಿಯೂ ಅಂಬಾರಿ ಜೊತೆಗೆ ಹೆಜ್ಜೆ ಹಾಕಿದ್ದು, ಈ ಬಾರಿಯೂ ಅಂಬಾರಿ ಜೊತೆಗೆ ಗಜಗಾಂಭೀರ್ಯದಿಂದ ಸಾಗಲಿದೆ. ಇನ್ನು ಧನಂಜಯ ಆನೆ ಅಂಬಾರಿ ಹಿಂದಿನ ಸಾಲಿನಲ್ಲಿ ಸಾಗಲಿದ್ದಾನೆ.

ಕೊರೋನಾ ಅರ್ಭಟದ ನಡುವೆಯು ಈ ಬಾರಿ ಸರಳ ರೀತಿಯಲ್ಲಿ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾಗೆ ದುಬಾರೆ ಸಾಕಾನೆ ಶಿಬಿರದಿಂದ  ಹೊರಡುವ ಉತ್ಸುಕದಲ್ಲಿವೆ. ಇದೇ 13 ರಂದು ಹೊರಡಲಿರುವ ಸಾಂಪ್ರದಾಯಿಕ ಗಜಪಯಣಕ್ಕಾಗಿ ಆನೆಗಳ ತಂಡ ರೆಡಿಯಾಗುತ್ತಿದ್ದು, ಮಂಗಳವಾರ ಬೀಳ್ಕೊಡಲಾಗುವುದು. ಹೀಗಾಗಿ ದಸರಾದಲ್ಲಿ ಗಾಂಭೀರ್ಯದಿಂದ ನಡೆಯಲಿರುವ ಗಜಗಳು ಸಾಕಾನೆ ಶಿಬಿರದಲ್ಲಿ ಮಾವುತ ಹಾಗೂ ಕಾವಾಡಿಗಳ ಆಜ್ಞೆಯಂತೆ ತಾಲೀಮಿನಲ್ಲಿ ತೊಡಗಿವೆ. ಪ್ರತಿವರ್ಷ ದುಬಾರೆ ಸಾಕಾನೆ ಶಿಬಿರದಿಂದ ಮೈಸೂರು ದಸರಾಕ್ಕೆ ಆರು ಆನೆಗಳು ಮೈಸೂರಿನತ್ತ ಪ್ರಯಾಣ ಬೆಳಸುತ್ತಿದ್ದವು. ಆದರೆ ಈ ಬಾರಿ ಕೊರೋನಾದ ಆತಂಕ ಮನೆ ಮಾಡಿರುವುದರಿಂದ ಶಿಬಿರದಿಂದ ಕೇವಲ ಮೂರು ಸಾಕಾನೆಗಳು ಮಾತ್ರವೇ ಭಾಗಿಯಾಗುತ್ತಿವೆ. ದಸರಾಗೆ ಆಯ್ಕೆ ಆಗಿರುವ ಆನೆಗಳಿಗೆ ಶಿಬಿರದಲ್ಲಿ ನಿತ್ಯವೂ ಬೆಳಿಗ್ಗೆ 6 ಕೆಜಿ ಭತ್ತದ ಹುಲ್ಲು, 6 ಕೆಜಿ ಭತ್ತ, ಬೆಲ್ಲ ಮತ್ತು ಅದರ ಜೊತೆಗೆ ವಿಶೇಷ ಆಹಾರವಾಗಿ ಜೋಳ, ಕುಚಲಕ್ಕಿ, ರಾಗಿಯಿಂದ ಸಿದ್ದಪಡಿಸಿದ ಮುದ್ದೆಯನ್ನು ಆಹಾರವಾಗಿ ನೀಡಿ ದಸಾರಕ್ಕೆ ತಯಾರು ಮಾಡಲಾಗುತ್ತಿದೆ.

ಇದನ್ನು ಓದಿ: HD Devegowda: ಆಂಜನೇಯ ದೇಗುಲಕ್ಕೆ ಬಂದ ಎಚ್.ಡಿ.ದೇವೇಗೌಡರಿಗೆ ಪೂರ್ಣಕುಂಭ ಸ್ವಾಗತ ಮಾಡಿದ ಉರುವಾರೆ ಗ್ರಾಮಸ್ಥರು

ಈ ಬಾರಿ ಪ್ರತಿ ಆನೆಯೊಂದಿಗೆ ಮಾವುತ, ಕಾವಾಡಿಗಳು ಮಾತ್ರವೇ ತೆರಳಲಿದ್ದು ಮಾವುತ ಕವಾಡಿಗರ ಕುಟುಂಬಗಳು ಭಾಗವಹಿಸದಂತೆ ಸೂಚನೆ ನೀಡಲಾಗಿದೆ. ಇದು ಮಾವುತ ಮತ್ತು ಕವಾಡಿಗರ ಕುಟುಂಬಕ್ಕೆ ಒಂದಷ್ಟು ಬೇಸರ ತರಿಸಿದೆ. ಆದರೆ ಕೋವಿಡ್ ಇರುವ ಕಾರಣದಿಂದ ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕಾಗಿರುವುದು ಅನಿವಾರ್ಯ ಎನ್ನುತ್ತಾರೆ ಧನಂಜಯ ಆನೆಯ ಮಾವುತ ಭಾಸ್ಕರ್.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
Published by:HR Ramesh
First published: