• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮದ್ಯದ ನಶೆ ಹೆಚ್ಚಾಗಿ ನದಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಮತ್ತೊಬ್ಬ ಕುಡುಕ : ಕೊಚ್ಚಿ‌ ಹೋಗುತ್ತಿದ್ದ ಕುಡುಕನಿಗೆ ಮರುಜನ್ಮ

ಮದ್ಯದ ನಶೆ ಹೆಚ್ಚಾಗಿ ನದಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಮತ್ತೊಬ್ಬ ಕುಡುಕ : ಕೊಚ್ಚಿ‌ ಹೋಗುತ್ತಿದ್ದ ಕುಡುಕನಿಗೆ ಮರುಜನ್ಮ

 ಗೃಹ ರಕ್ಷಕ ದಳದ ಸಿಬ್ಬಂದಿ

ಗೃಹ ರಕ್ಷಕ ದಳದ ಸಿಬ್ಬಂದಿ

ಉಪ್ಪಿನಂಗಡಿ ಸಮೀಪದ ಕಲ್ಲೇರಿ ಜನತಾ ಕಾಲನಿ ನಿವಾಸಿ ಸಲೀಂ (45) ನದಿಗೆ ಬಿದ್ದ ವ್ಯಕ್ತಿಯಾಗಿದ್ದು, ಇವರನ್ನು ಕೊಕ್ಕಡದ ರವಿ ಶೆಟ್ಟಿ ಎಂಬವರು ನದಿಗೆ ಹಾರಿ ರಕ್ಷಿಸಿದ್ದಾರೆ

  • Share this:

ಮಂಗಳೂರು(ಆಗಸ್ಟ್​​.21): ಕುಡುಕರನ್ನು ಕಂಡಾಗಿ ಹೆಚ್ಚಾಗಿ ಮೂಗು ಮುರಿಯುವವರೇ ಜಾಸ್ತಿ. ಆದರೆ ಇಲ್ಲೊಬ್ಬ ಕುಡುಕ ತನ್ನ ಪ್ರಾಣವನ್ನೂ ಲೆಕ್ಕಿಸದೆ ವ್ಯಕ್ತಿಯೋರ್ವನನ್ನು ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿಯ ಬಾರೊಂದರಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ ಪರಿಣಾಮ ಕಾಲು ಜಾರಿ ನೇತ್ರಾವತಿ ನದಿಗೆ ವ್ಯಕ್ತಿಯೊಬ್ಬ ಬಿದ್ದಿದ್ದಾನೆ. ಉಕ್ಕಿ ಹರಿಯುತ್ತಿದ್ದ ನದಿ ನೀರಿನಲ್ಲಿ ಇನ್ನೇನು ಆತ ಕೊಚ್ಚಿ ಹೋಗಲಿದ್ದಾನೆ ಎನ್ನುವ ಸಮಯದಲ್ಲಿ ಅಪದ್ಬಾಂಧವನಂತೆ  ಮತ್ತೊಬ್ಬ ಮದ್ಯದ ನಶೆ ಏರಿಸಿಕೊಂಡಿದ್ದ ವ್ಯಕ್ತಿ ಜೀವದ ಹಂಗು ತೊರೆದು ರಕ್ಷಿಸಿದ್ದಾನೆ.


ಇಂದು‌ ಮಧ್ಯಾಹ್ನ ಈ ಘಟನೆ ನಡೆದಿದೆ. ನದಿ ನೀರಿಗೆ ಬಿದ್ದು ತುಂಬಿ ಜೀವಭಯದಲ್ಲಿದ್ದರೂ ಮದ್ಯದ ನಶೆಯಲ್ಲಿ ವ್ಯಕ್ತಿ ನದಿ ತೀರದಲ್ಲಿ ನೆರೆದಿದ್ದವರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದ. ಉಪ್ಪಿನಂಗಡಿ ಸಮೀಪದ ಕಲ್ಲೇರಿ ಜನತಾ ಕಾಲನಿ ನಿವಾಸಿ ಸಲೀಂ (45) ನದಿಗೆ ಬಿದ್ದ ವ್ಯಕ್ತಿಯಾಗಿದ್ದು, ಇವರನ್ನು ಕೊಕ್ಕಡದ ರವಿ ಶೆಟ್ಟಿ ಎಂಬವರು ನದಿಗೆ ಹಾರಿ ರಕ್ಷಿಸಿದ್ದಾರೆ. ಉಪ್ಪಿನಂಗಡಿಯ ಬಸ್‌ನಿಲ್ದಾಣದ ಸಮೀಪವಿರುವ ಬಾರ್‌ವೊಂದರ ಹಿಂಬಾಗಿಲಲ್ಲೇ ನೇತ್ರಾವತಿ ನದಿ ಹರಿಯುತ್ತಿದ್ದು, ನದಿಯ ಬದಿಯಲ್ಲಿ ವಿಪರೀತ ಮದ್ಯ ಸೇವಿಸಿ ತೂರಾಡುತ್ತಾ ಬಂದ ಸಲೀಂ, ಜ‌ನ ನೋಡು ನೋಡುತ್ತಿದ್ದಂತೆಯೇ ಕಾಲು ಜಾರಿ ಕೆಳಗೆ ನೇತ್ರಾವತಿ ನದಿಗೆ ಬಿದ್ದಿದ್ದಾನೆ.


ಈತನನ್ನು ರಕ್ಷಿಸುವುದು ಹೇಗೆಂದು ಗೊಂದಲದಲ್ಲಿದ್ದ ಸಾರ್ವಜನಿಕರ ನಡುವಿನಿಂದ , ಅದೇ ಸಂದರ್ಭ ಅಲ್ಲಿಗೆ ಬಂದ ಮತ್ತೊಬ್ಬ ಮಧ್ಯದ ನಶೆಯಲ್ಲಿ ತೇಲಾಡುತ್ತಿದ್ದ ರವಿ ಶೆಟ್ಟಿ ಎಂಬಾತ ಈತನನ್ನು ಬಚಾವ್ ಮಾಡಲು ನೇರವಾಗಿ ನದಿಗೆ ಹಾರಿದ್ದಾನೆ. ಸ್ವಲ್ಪ ದೂರ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಸಲೀಂ, ನೀರಿನಲ್ಲಿ ಮುಳುಗೇಳುತ್ತಿದ್ದ. ನೇತ್ರಾವತಿ ತುಂಬಿ ಹರಿಯುತ್ತಿದ್ದರೂ ಕೂಡ ಸಲೀಂ ನೀರಿಗೆ ಬಿದ್ದ ಜಾಗದಲ್ಲಿ ನೀರು ನಿಂತಿದ್ದರಿಂದ ಯಾವುದೇ ಗಾಯಗಳಾಗದೆ ಬಜಾವ್ ಆಗಿದ್ದ.


ಇದನ್ನೂ ಓದಿ : ರಾಜ್ಯದಲ್ಲಿ ಸೆಪ್ಟೆಂಬರ್ 1 ರಿಂದ ಬಾರ್ ಮತ್ತು ಕ್ಲಬ್​ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಸಾಧ್ಯತೆ..!


ಬಿದ್ದ  ಜಾಗದಲ್ಲಿ ಮೊಣಕಾಲಿನ ತನಕ ಕೆಸರು ತುಂಬಿರುವುದರಿಂದ ಸಲೀಂನ ಬಳಿಗೆ ಹರಸಾಹಸ ಪಟ್ಟು ತೆರಳಿದ ರವಿ ಶೆಟ್ಟಿ, ಸುಮಾರು ಹದಿನೈದು ನಿಮಿಷದ ಸಾಹಸದ ಬಳಿಕ ಸಲೀಂನನ್ನು ನದಿ ಬದಿಗೆ ಎಳೆದುಕೊಂಡು ಬರುವ ಪ್ರಯತ್ನ ನಡೆಸಿದ್ದಾನೆ. ಈ ವೇಳೆ ಸ್ಥಳಕ್ಕಾಗಮಿಸಿದ ಗೃಹ ರಕ್ಷಕ ದಳದ ಸಿಬ್ಬಂದಿ, ಮರವೊಂದಕ್ಕೆ ಹಗ್ಗವನ್ನು ಕಟ್ಟಿ ರವಿಶೆಟ್ಟಿಗೆ ನೀಡಿದ್ದಾರೆ.


ಹಗ್ಗವನ್ನು ಹಿಡಿದ ರವಿಶೆಟ್ಟಿ, ಸಲೀಂನನ್ನು ಹಿಡಿದುಕೊಂಡು ಇಬ್ಬರೂ ದಡ ಸೇರಿದ್ದಾರೆ. ತನಗೆ ಅರ್ಧಂಬರ್ಧ ಈಜು ಬರುತ್ತಿದ್ದರೂ ಕೂಡ ಗೆಳೆಯನ ಪ್ರಾಣ ರಕ್ಷಣೆಗೆ ಹಿಂದು ಮುಂದು ನೋಡದೆ ಜೀವದ ಹಂಗು ತೊರೆದು ನದಿಗೆ ಹಾರಿದ ರವಿಶೆಟ್ಟಿ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು