ರಾಜ್ಯದ ವಿವಿಧೆಡೆಯೂ ಡ್ರಗ್ಸ್ ಮಾಫಿಯಾ ವಿಸ್ತರಣೆ - ಸಿಸಿಬಿಯಿಂದ ತನಿಖೆ ಚುರುಕು : ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್
ಸಿಸಿಬಿಯವರು ದಾಳಿ ನಡೆಸಿ ಡ್ರಗ್ಸ್ ಜಾಲವನ್ನು ಭೇದಿಸುತ್ತಿದ್ದಾರೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿದೆಡೆ ಕೂಡ ಡ್ರಗ್ಸ್ ಮಾಫಿಯಾ ಇದೆ. ರಾಜ್ಯಕ್ಕೆ ಆಂಧ್ರಪ್ರದೇಶ ಹಾಗೂ ಗೋವಾದಿಂದ ಡ್ರಗ್ಸ್ ಪೂರೈಕೆ ಆಗುತ್ತಿದೆ
ಹುಬ್ಬಳ್ಳಿ(ಸೆಪ್ಟೆಂಬರ್. 02): ಡ್ರಗ್ಸ್ ಮಾಫಿಯಾ ರಾಜ್ಯದ ವಿವಿಧ ನಗರಗಳಿಗೂ ವ್ಯಾಪಿಸಿದ್ದು, ಇದೊಂದು ನಿರಂತರವಾದ ಜಾಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎನ್ಸಿಬಿ ಹಾಗೂ ಸಿಸಿಬಿಯಿಂದ ಚುರುಕಾಗಿ ತನಿಖೆ ನಡೆಯುತ್ತಿದೆ. ತನಿಖೆ ಒಂದು ಹಂತಕ್ಕೆ ತಲುಪಿದ ನಂತರ ಅಕ್ರಮದಲ್ಲಿ ಶಾಮಿಲಾಗಿರುವವರ ಹೆಸರು ಹಾಗೂ ಇನ್ನಿತರ ವಿವರಗಳನ್ನುಬಹಿರಂಗ ಪಡಿಸಬಹುದು ಎಂದಿದ್ದಾರೆ.
ಸಿಸಿಬಿಯವರು ದಾಳಿ ನಡೆಸಿ ಡ್ರಗ್ಸ್ ಜಾಲವನ್ನು ಭೇದಿಸುತ್ತಿದ್ದಾರೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿದೆಡೆ ಕೂಡ ಡ್ರಗ್ಸ್ ಮಾಫಿಯಾ ಇದೆ. ರಾಜ್ಯಕ್ಕೆ ಆಂಧ್ರಪ್ರದೇಶ ಹಾಗೂ ಗೋವಾದಿಂದ ಡ್ರಗ್ಸ್ ಪೂರೈಕೆ ಆಗುತ್ತಿದೆ. ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆಯಿದೆ. ಕೊರೋನಾ ನಂತರ ಅಪರಾಧ ಚಟುವಟಿಕೆಗಳು ಹೆಚ್ಚಳವಾಗುವ ಸಾಧ್ಯತೆಯಿದೆ. ಪೊಲೀಸರು ಮತ್ತಷ್ಟು ಜಾಗ್ರತೆಯಿಂದ ಕೆಲಸ ಮಾಡಬೇಕಿದೆ ಎಂದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹುಬ್ಬಳ್ಳಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಅಪರಾಧ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಉತ್ತರ ವಲಯದ ಐಜಿಪಿ, ಕಮೀಷನರ್, ಎಸ್.ಪಿ, ಡಿಸಿಪಿಗಳು, ಎಸಿಪಿ, ಇನ್ಸ್ಪೆಕ್ಟರ್ಗಳು ಸಭೆಯಲ್ಲಿ ಭಾಗವಹಿಸಿದ್ದರು. ಹುಬ್ಬಳ್ಳಿಯ ಡೆನಿಸನ್ಸ್ ಹೊಟೆಲ್ನಲ್ಲಿ ಮೂರು ಗಂಟೆಗಳ ಕಾಲ ನಿರಂತರ ಸಭೆ ನಡೆಯಿತು.
ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳ ಕುರಿತು ಡಿಜಿ, ಐಜಿಪಿ ಮಾಹಿತಿ ಪಡೆದರು. ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರನ್ನು ತರಾಟೆಗೆ ತೆಗೆದುಕೊಂಡರು. ಶೂಟೌಟ್, ಸರಣಿ ಕೊಲೆ, ಗಾಂಜಾ ಪೂರೈಕೆ ಬಗ್ಗೆ ತೀವೃ ಅಸಮಾಧಾನ ವ್ಯಕ್ತಪಡಿಸಿದರು. ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಹುಬ್ಬಳ್ಳಿ - ಧಾರವಾಡ ಕಮಿಷನರ್ ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಸಭೆಯ ನಂತರ ಮಾತನಾಡಿದ ಡಿಜಿ, ಐಜಿಪಿ ಪ್ರವೀಣ್ ಸೂದ್ ಅವರು, ಹುಬ್ಬಳ್ಳಿ- ಧಾರವಾಡದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಳವಾಗುತ್ತಿರುವ ಬಗ್ಗೆ ಚರ್ಚೆ ಮಾಡಿದ್ದೇನೆ. ಕೆಲವೊಂದು ಪ್ರಕರಣಗಳು ತನಿಖಾ ಹಂತದಲ್ಲಿವೆ. ಆದಷ್ಟು ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಿರಿಯ ಅಧಿಕಾರಿಗಳಿಗೂ ಕಾನೂನು ಸುವ್ಯವಸ್ಥಿತೆ ಕಾಪಾಡುವಂತೆ ಸೂಚನೆ ನೀಡಿರುವೆ.ಕೋವಿಡ್ ಸಂದರ್ಭದಲ್ಲಿ ಪೊಲೀಸರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರಿಗೆಲ್ಲಾ ಧನ್ಯವಾದಗಳನ್ನ ತಿಳಿಸಲು ರಾಜ್ಯ ಪ್ರವಾಸ ಮಾಡುತ್ತೇನೆ ಎಂದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ