ಕ್ಯಾಟರಿಂಗ್ ಕೆಲಸದ ಹುಡುಗನ ಡ್ರೋನ್ ಕನಸು ; ಅತ್ಯಂತ ಕಡಿಮೆ ವೆಚ್ಚದಲ್ಲಿ ಡ್ರೋನ್ ಹಾರಿಸಿದ ಪೋರ

ಈ ಬಾಲಕ ರಜಾ ದಿನಗಳಲ್ಲಿ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ, ಅಲ್ಲಿ ಸಿಕ್ಕ ಹಣದಲ್ಲಿ ಪಿವಿಸಿ ಪೈಪ್ ಹಾಗೂ ಇತರ ವಸ್ತುಗಳ ಸಹಾಯದಿಂದ ಕೊನೆಗೂ ಸ್ವಂತ ಡ್ರೋನ್ ತಯಾರಿಸಿದ್ದಾನೆ.

news18-kannada
Updated:July 21, 2020, 1:54 PM IST
ಕ್ಯಾಟರಿಂಗ್ ಕೆಲಸದ ಹುಡುಗನ ಡ್ರೋನ್ ಕನಸು ; ಅತ್ಯಂತ ಕಡಿಮೆ ವೆಚ್ಚದಲ್ಲಿ ಡ್ರೋನ್ ಹಾರಿಸಿದ ಪೋರ
ಎಸ್.ಜೆ.ಶಮಂತ್
  • Share this:
ಮಂಗಳೂರು(ಜುಲೈ.21): ರಾಜ್ಯದ ಇಮೇಜನ್ನುಇಡೀ ವಿಶ್ವದಲ್ಲಿ ಹಾಳು ಮಾಡಿದ ಡ್ರೋನ್ ಪ್ರತಾಪ್ ಕೇವಲ ತನ್ನ ನಾಲಿಗೆಯಿಂದಲೇ ಡ್ರೋನ್ ಹಾರಿಸಿದ್ದ. ಆದರೆ, ಇಲ್ಲೊಬ್ಬ ಬಾಲಕ ತನ್ನ ಸ್ವಂತ ಸಾಮರ್ಥ್ಯ ಬಳಸಿಕೊಂಡು ಡ್ರೋನ್ ತಯಾರಿಸಿದ್ದಾನೆ. ಡ್ರೋನ್ ಪ್ರತಾಪ್ ನಂತೆ ಕೇವಲ ಮಾತಿನಲ್ಲೇ ಅರಮನೆ ಕಟ್ಟದೆ ತಾನು ತಯಾರಿದ ಡ್ರೋನ್​​​ನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಗನದೆತ್ತರಕ್ಕೆ ಹಾರಿಸುವ ಮೂಲಕ ಮೆಚ್ಚುಗೆಯನ್ನು ಗಳಿಸಿದ್ದಾನೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಹತ್ತನೇ ತರಗತಿಯ ಪೋರನೊಬ್ಬನ ಕಥೆ.

ತಾನು ಭಾಗವಹಿಸುತ್ತಿದ್ದ ಮದುವೆ ಸಮಾರಂಭಗಳಲ್ಲಿ ಡ್ರೋನ್ ಹಾರುವುದನ್ನು ನೋಡಿ ತಾನೂ ಅಂಥದ್ದೊಂದು ಡ್ರೋನ್ ತಯಾರಿಸಬೇಕು ಎನ್ನುವ ಹಠ ಈ ಬಾಲಕನಲ್ಲಿ ಮೂಡಿತ್ತು. ಡ್ರೋನ್ ತಯಾರಿಸಲು ಸಾಕಷ್ಟು ಹಣದ ಅವಶ್ಯಕತೆ ಇರುವುದನ್ನು ಮನಗಂಡ ಈ ಬಾಲಕ ರಜಾ ದಿನಗಳಲ್ಲಿ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ, ಅಲ್ಲಿ ಸಿಕ್ಕ ಹಣದಲ್ಲಿ ಪಿವಿಸಿ ಪೈಪ್ ಹಾಗೂ ಇತರ ವಸ್ತುಗಳ ಸಹಾಯದಿಂದ ಕೊನೆಗೂ ಸ್ವಂತ ಡ್ರೋನ್ ತಯಾರಿಸಿದ್ದಾನೆ.

ಮಂಗಳೂರಿನ ರಥಬೀದಿ ನಿವಾಸಿ ಜಗದೀಶ್ ಆಚಾರ್ಯ – ಶ್ಯಾಮಲಾ ಆಚಾರ್ಯ ದಂಪತಿ ಮಗ ಎಸ್.ಜೆ.ಶಮಂತ್ ಆಚಾರ್ಯ ಈ ಡ್ರೋನ್ ನಿರ್ಮಾಪಕ. ಡೊಂಗರಕೇರಿ ಕೆನರಾ ಹೈಸ್ಕೂಲ್ 10ನೇ ತರಗತಿ ವಿದ್ಯಾರ್ಥಿಯಾಗಿದ್ದು ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ಶಮಂತ್‌ಗೆ ತಂತ್ರಜ್ಞಾನ ವಿಚಾರದಲ್ಲಿ ಅತೀವ ಆಸಕ್ತಿ. 9ನೇ ತರಗತಿಯಲ್ಲಿ ಕಲಿಯುತ್ತಿರುವಾಗ ಡ್ರೋನ್ ತಯಾರಿಸಬೇಕು ಎಂದು ನಿರ್ಧರಿಸಿದ ಶಮಂತ್ ಪರೀಕ್ಷೆ ಮುಗಿದು ವಾರ್ಷಿಕ ರಜೆಯಲ್ಲಿ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ ಅದರಲ್ಲಿ ಬಂದ ಹಣದಲ್ಲಿ ಡ್ರೋನ್‌ಗೆ ಬೇಕಾದ ವಸ್ತುಗಳನ್ನು ಖರೀದಿಸಿದ್ದಾರೆ.ಜತೆಗೆ ವೆಬ್‌ಸೈಟ್, ಯೂಟ್ಯೂಬ್ ಸಹಾಯದಿಂದ ಡ್ರೋನ್ ತಯಾರಿಸುವುದು ಹೇಗೆ ಎಂದು ಕಲಿತು, ನಿರಂತರ ಪರಿಶ್ರಮದಿಂದ ಕೊನೆಗೂ ಆಕಾಶಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದಾನೆ. ತನ್ನ ಯಶಸ್ಸಿನಲ್ಲಿ ಅಪ್ಪ-ಅಮ್ಮ ಹಾಗೂ ಅಣ್ಣ ಶಶಾಂಕ್ ಆಚಾರ್ಯ ಅವರ ಪಾತ್ರವೂ ಇದೆ ಎನ್ನುತ್ತಾರೆ ಶಮಂತ್.

ಶಮಂತ್ ಸಾಧನೆಗೆ ಹಲವು ಬಹುಮಾನ ಪ್ರಶಸ್ತಿಗಳು ಬಂದಿವೆ. ಬೆಸೆಂಟ್ ಕಾಲೇಜು, ಸುರತ್ಕಲ್‌ನ ಎನ್‌ಐಟಿಕೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾನೆ. ರಾಜ್ಯಮಟ್ಟದ ವಿಜ್ಞಾನ ಇನ್‌ಸ್ಪಯರ್ ಅವಾರ್ಡ್ ಸ್ಪರ್ಧೆಯಲ್ಲಿ 10 ಸಾವಿರ ರೂಪಾಯಿ ನಗದು ಬಹುಮಾನ ಸಿಕ್ಕಿತ್ತು. ಕಳೆದ ವರ್ಷದ ಕೇಂದ್ರ ಮೈದಾನದ ಚೌತಿ ಹಬ್ಬದ ಮೆರವಣಿಗೆ ದಿನ ಗಣೇಶನ ಮೂರ್ತಿಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ಮಾಡಿದ್ದರು.

ಮುಖ್ಯವಾಗಿ ತಾನು ತಯಾರಿಸುವ ಡ್ರೋನ್​​ ಮೂಲಕ ಔಷಧಿಗಳನ್ನು ಅಗತ್ಯ ಸ್ಥಳಗಳಿಗೆ ಪೂರೈಸಬೇಕು ಎನ್ನುವ ಇಚ್ಛೆ ಹೊಂದಿರುವ ಶಮಂತ್ ಈ ನಿಟ್ಟಿನಲ್ಲಿ ತನ್ನ ಕೆಲಸವನ್ನು ಮುಂದುವರಿಸಿದ್ದಾನೆ. ಈಗ ತಯಾರಿಸಿರುವ ಡ್ರೋನ್ 2 ಕಿಲೋ ಮೀಟರ್ ಆಸುಪಾಸಿನಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಾಮರ್ಥ್ಯ ವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು ನಾಲ್ಕೈದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ.ಇದನ್ನೂ ಓದಿ : ಕೊರೋನಾ ಸೋಂಕು ತಡೆಗೆ ಜಾರಿಗೆ ಬಂತು ದಂಡ ಪ್ರಯೋಗ : ಈ ಊರಿಗೆ ಯಾರೆ ಬಂದರೂ ಐದು ಸಾವಿರ ರೂಪಾಯಿ ದಂಡ

ಮೊದಲಿಗೆ ಡ್ರೋನ್ ನ ಲ್ಯಾಂಡಿಗ್ ಸ್ಟ್ಯಾಂಡ್ ಅನ್ನು ಪಿವಿಸಿ ಪೈಪ್ ಮೂಲಕ ತಯಾರಿಸಿದ್ದ ಶಮಂತ್ ಗೆ ಬಳಿಕ ಆನ್ ಲೈನ್ ಮೂಲಕ ಸುಧಾರಿತ ಲ್ಯಾಂಡಿಂಗ್ ಸ್ಟ್ಯಾಂಡ್ ತರಿಸಿಕೊಂಡು ಫಿಕ್ಸ್ ಮಾಡಿಕೊಂಡಿದ್ದಾನೆ.

ಡ್ರೋನ್ ನಿರ್ಮಿಸಲು ಬೇಕಾದ ಎಲ್ಲಾ ಪರಿಕರಳನ್ನು ಒಟ್ಟು ಮಾಡಿ ಅದಕ್ಕೆ ಬೇಕಾದ ಪ್ರೋಗ್ರಾಮಿಂಗ್ ಅನ್ನು ಸ್ವತಹ ಶಮಂತ್ ಮಾಡಿಕೊಂಡಿರುವುದು ವಿಶೇಷ‌ವಾಗಿದೆ. ತಂತ್ರಜ್ಞಾನ ವಿಷಯಕ್ಕೆ ಇನ್ನಷ್ಟೇ ಕಾಲಿಡಬೇಕಾದ ಈ ಪೋರನ ಸಾಧನೆ ನಿಜಕ್ಕೂ ಪ್ರಶಂಸೆಗೆ ಪಾತ್ರರಾಗಿದ್ದಾನೆ.
Published by: G Hareeshkumar
First published: July 21, 2020, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading