ಕೊಡಗು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಒಂದು ವಾರಗಳ ಕಾಲ ಮಡಿಕೇರಿಯಲ್ಲಿ ಏರ್ಪಡಿಸಿರುವ ಅರೆಭಾಷೆ, ಸಂಸ್ಕೃತಿ, ಪ್ರಕೃತಿ ಚಿತ್ರಕಲಾ ಶಿಬಿರಕ್ಕೆ ಕೊಡಗು ಗೌಡ ಅರೆಭಾಷೆ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಕ ಅಧ್ಯಕ್ಷರಾದ ತುಂತಜೆ ಗಣೇಶ್ ಅವರು ಗುರುವಾರ ಚಾಲನೆ ನೀಡಿದರು. ನಗರದ ಅರೆಭಾಷೆ ಸಂಸ್, ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರೆಭಾಷೆ, ಸಂಸ್ಕೃತಿ, ಕಲೆ ವಿಭಿನ್ನವಾಗಿವೆ. ಆ ದಿಸೆಯಲ್ಲಿ ಇಲ್ಲಿನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಲ್ಲಿ ಚಿತ್ರಕಲಾ ಶಿಬಿರ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಪ್ರಾಕೃತಿಕ, ಪರಿಸರ ಹಾಗೂ ಉಡುಗೆ ತೊಡುಗೆ ಅವರ ಆಚಾರ ವಿಚಾರ ಹೀಗೆ ವಿಭಿನ್ನ ಕಲೆಗಳನ್ನು ಪರಿಚಯಿಸುವಲ್ಲಿ ಈ ಚಿತ್ರಕಲಾ ಶಿಬಿರ ಅನುಕೂಲವಾಗಲಿದೆ ಎಂದು ತುಂತಜೆ ಗಣೇಶ್ ಅವರು ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಮಾತನಾಡಿ, ಕೋವಿಡ್ ವೈರಸ್ ನಿಂದಾಗಿ ಇಡೀ ಜಗತ್ತು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ. ಕೊರೋನಾ ವೈರಸ್ ನ ಅಡೆತಡೆಗಳ ನಡುವೆಯು ಅಕಾಡೆಮಿ ವತಿಯಿಂದ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರೆಭಾಷೆ ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸಲಾಗುತ್ತಿದೆ. ಇದು ನಿಜಕ್ಕೂ ಒಂದು ಅಪರೂಪ ಸಂಸ್ಕೃತಿಯ ಬೆಳವಣಿಗೆಗೆ ಶ್ರದ್ದೆಯಿಂದ ದುಡಿಯುವ ಪರಿ ಎಂದು ಅವರು ಹೇಳಿದರು.
ಕೊಡಗು ಮತ್ತು ದಕ್ಷಿಣ ಕನ್ನಡದ ಸುಳ್ಯ ಭಾಗದಲ್ಲಿ ವ್ಯಾಪಕವಾಗಿ ಪಸರಿಸಿರುವ ಅರೆಭಾಷೆ ಸಂಸ್ಕೃತಿ, ಆಚಾರ-ವಿಚಾರ, ಉಡುಗೆ-ತೊಡುಗೆಯನ್ನು ಪರಿಚಯಿಸುವಲ್ಲಿ ಚಿತ್ರಕಲಾ ಶಿಬಿರ ಸಹಕಾರಿಯಾಗಲಿದೆ. ಆ ಮೂಲಕ ಒಂದು ಜನಾಂಗದ ಬೆಳವಣಿಗೆಗೆ ಪೂರಕವಾಗಲಿದೆ ಎಂದರು. ಸುಳ್ಯ ಮತ್ತು ಕೊಡಗು ಭಾಗದಲ್ಲಿ ಹರಡಿರುವ ಅರೆಭಾಷೆ ಸಮುದಾಯದ ಸಂಸ್ಕೃತಿ ಕಲೆಗಳನ್ನು ದಾಖಲಿಸುವುದು ಅತ್ಯಗತ್ಯವಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಮೂಲ ಸಂಸ್ಕೃತಿ ಆಚಾರ ವಿಚಾರಗಳಿಗೆ ಧಕ್ಕೆ ಆಗುತ್ತಿದ್ದು, ಸಂಸ್ಕೃತಿಗಳೇ ನಾಶವಾಗುವ ಸ್ಥಿತಿ ಬಂದೊದಗಿದೆ. ಹೀಗಾಗಿ ವಿವಿಧ ಸಂಸ್ಕೃತಿಗಳನ್ನು ಪೋಷಿಸಿ ಬೆಳೆಸಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿದೆ ಎಂದು ಅಧ್ಯಕ್ಷರು ನುಡಿದರು.
ಇದನ್ನು ಓದಿ: Coronavirus: ಬೆಂಗಳೂರು ನಗರ ಜಿಲ್ಲೆಯಲ್ಲಿ 6-9ನೇ ತರಗತಿ ಸ್ಥಗಿತ; ಶಿಕ್ಷಣ ಸಚಿವ ಸುರೇಶ್ ಕುಮಾರ್
ಅರೆಭಾಷಿಕರು ಮುಖ್ಯವಾಗಿ ಇಂದಿಗೂ ಕೃಷಿ ಚಟುವಟಿಕೆಯನ್ನು ನಂಬಿ ಬದುಕುತ್ತಾರೆ. ಜೊತೆಗೆ ಅವರ ಅಪರೂಪವಾದ ಕಲೆ, ಸಂಸ್ಕೃತಿ ಆಚಾರ ವಿಚಾರಗಳನ್ನು ಹೊಂದಿದ್ದಾರೆ. ಇವುಗಳನ್ನು ಎಲ್ಲವನ್ನೂ ಪ್ರತಿಬಿಂಬಿಸುವಲ್ಲಿ ಈಗ ಆಯೋಜಿಸಿರುವ ಕಾರ್ಯಕ್ರಮ ಸಫಲವಾಗಬಲ್ಲದು. ಅಷ್ಟೇ ಅಲ್ಲ ನಾಟಕ, ಸಂಗೀತ, ಸಾಹಿತ್ಯ, ಚಿತ್ರಕಲೆ, ಹೀಗೆ ವಿವಿಧ ವಿಭಿನ್ನ ವಿಶಿಷ್ಟ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಅರೆಭಾಷೆ ಸಮುುದಾಯದ ಆಚಾರ ವಿಚಾರಗಳನ್ನು ಪರಿಚಯಿಸುವಲ್ಲಿ ಪ್ರಯತ್ನಿಸಲಾಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ