HOME » NEWS » District » DRAMA ARTIST REQUEST FOR GIVE PERMISSION STAGE DRAMA PLAYING RHHSN RBK

ಕೊರೋನಾದಿಂದ ಕಲಾವಿದರ ಬದುಕು ದುಸ್ತರ; ಹಳ್ಳಿ, ಬನಶಂಕರಿ ದೇವಿ ಜಾತ್ರೆಯಲ್ಲಿ ನಾಟಕ ಪ್ರದರ್ಶನಕ್ಕೆ ಮನವಿ

ಸರ್ಕಾರ ಬಡ ಕಲಾವಿದರ ನೆರವಿಗೆ ಬರಬೇಕಿದ್ದು, ಕೊರೋನಾ ನಿಯಮಾವಳಿ ಜೊತೆಗೆ ಕಲೆ, ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡುವ ಮೂಲಕ ಕಲಾವಿದರ ಬದುಕಿಗೆ ಆಸರೆಯಾಗಬೇಕಿದೆ.

news18-kannada
Updated:December 8, 2020, 6:38 PM IST
ಕೊರೋನಾದಿಂದ ಕಲಾವಿದರ ಬದುಕು ದುಸ್ತರ; ಹಳ್ಳಿ, ಬನಶಂಕರಿ ದೇವಿ ಜಾತ್ರೆಯಲ್ಲಿ ನಾಟಕ ಪ್ರದರ್ಶನಕ್ಕೆ ಮನವಿ
ನಾಟಕ ಪ್ರದರ್ಶನಕ್ಕೆ ಮನವಿ ಮಾಡಿದ ಬಾಗಲಕೋಟೆ ಜಿಲ್ಲೆ ಕಲಾವಿದರು.
  • Share this:
ಬಾಗಲಕೋಟೆ (ಡಿಸೆಂಬರ್ 08): ತಿಂಗಳ ಪೂರ್ತಿ ಹಗಲು ರಾತ್ರಿ ನಡೆಯುತ್ತಿದ್ದ ಐತಿಹಾಸಿಕ ಬಾದಾಮಿ  ಬನಶಂಕರಿ ದೇವಿ ಜಾತ್ರೆಯನ್ನು ಈಗಾಗಲೇ ಜಿಲ್ಲಾಡಳಿತ ನಿಷೇಧಿಸಿದೆ. ಜಾತ್ರೆಯಲ್ಲಿ ನಾಟಕ ಪ್ರದರ್ಶನ ಕೂಡಾ ನಿಷೇಧಿಸಲಾಗಿದೆ. ಜೊತೆಗೆ ಕಾರ್ತಿಕ ಮಾಸದಿಂದ  ಯುಗಾದಿವರೆಗೂ ಉತ್ತರ ಕರ್ನಾಟಕದಲ್ಲಿ ಜಾತ್ರೆ, ಹಬ್ಬಗಳಲ್ಲಿ ಹಳ್ಳಿ ಹಳ್ಳಿಯಲ್ಲೂ ನಾಟಕ ಪ್ರದರ್ಶನ ಏರ್ಪಡಿಸಲಾಗುತ್ತೆ. ಹವ್ಯಾಸಿ, ವೃತ್ತಿ ರಂಗಭೂಮಿ ಕಲಾವಿದರಿಗೆ ಹೊಟ್ಟೆ ತುಂಬಿಸಿಕೊಳ್ಳಲು ಇದೇ ಜಾತ್ರೆ ಆಸರೆ. ಆದರೆ ಜಿಲ್ಲಾಡಳಿತ ಹಳ್ಳಿ ಹಳ್ಳಿಯಲ್ಲೂ ಜಾತ್ರೆ ನಿಷೇಧಿಸಿದೆ. ಹೀಗಾಗಿ ಕಲಾವಿದರು, ನಾಟಕ ಕಂಪನಿ ಮಾಲೀಕರು ಕಣ್ಣೀರು ಹಾಕುವಂತಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಹವ್ಯಾಸಿ, ವೃತ್ತಿ ರಂಗಭೂಮಿ ಕಲಾವಿದರು ಸೇರಿ ಅಂದಾಜು 4500 ಜನರಿದ್ದಾರೆ. ಬಾದಾಮಿಯ ಹಂಸನೂರು ಗ್ರಾಮದ ಕಲಾವಿದರು ಹೆಚ್ಚು ಉತ್ತರ ಕರ್ನಾಟಕ ಭಾಗದಲ್ಲಿ ನಾಟಕ ಪ್ರದರ್ಶನಕ್ಕೆ ಹೋಗುತ್ತಾರೆ. ಕಲೆಯೇ ಇವರಿಗೆ ಜೀವನಾಧಾರ. ಆದರೆ ಕೊರೋನಾ ಮಹಾಮಾರಿ ಕಲಾವಿದರ ಪಾಲಿಗೆ ಅಕ್ಷರಶಃ ಕಣ್ಣೀರು ತರಿಸಿದೆ. ಲಾಕ್ ಡೌನ್ ಸಮಯದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ತುತ್ತು ಅನ್ನಕ್ಕೂ ಪರದಾಡಿದ್ದೇವೆ. ಎಲ್ಲಿ ಹಣ ಕೇಳುತ್ತಾರೆ ಎಂದು ಫೋನ್ ಮಾಡಿದರೂ ಬಂಧು ಬಳಗದವರು ಫೋನ್ ರಿಸೀವ್ ಮಾಡುತ್ತಿಲ್ಲ. ಒಂದೊಂದು ರೂಪಾಯಿ ಕೂಡಿಸೋದಕ್ಕೂ ಪರದಾಡಿದ್ದೇವೆ. ಸಾಲ ಮಾಡಿ ಬಾಡಿಗೆ ಕಟ್ಟಿದ್ದೇವೆ. ಸರ್ಕಾರ ಕಲಾವಿದರಿಗೆ ಸಹಾಯ ಮಾಡುತ್ತೇವೆ ಎಂದಿದ್ದರು. ಆದರೆ ನಿಜವಾದ ಕಲಾವಿದರಿಗೆ ಸಹಾಯ ಸಿಕ್ಕಿಲ್ಲ ಎಂದು ಗೋಳಿಡುತ್ತಿದ್ದಾರೆ ಮುಧೋಳದ ಶಿರೋಳ ಕಲಾವಿದೆ ಲಕ್ಷ್ಮಿ ತಳಕೇರಿ.

ಈಗಾಗಲೇ ಜಿಲ್ಲಾಡಳಿತಕ್ಕೆ ಎರಡು ಬಾರಿ ಮನವಿ ಕೊಟ್ಟಿದ್ದೇವೆ. ಸರ್ಕಾರ ಸಭೆ ಸಮಾರಂಭ, ಸಮಾವೇಶಕ್ಕೆ ಅವಕಾಶ ಕೊಡುತ್ತೆ. ಆದರೆ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡುತ್ತಿಲ್ಲ. ಇದು ತಾರತಮ್ಯ ಎನ್ನುತ್ತಾರೆ ಕಲಾವಿದರು. ಕಲಾವಿದರು, ನಾಟಕ ಕಂಪನಿ ಮಾಲೀಕರು, ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಕಲಾವಿದರಿಗೆ ನಾಟಕ ಪ್ರದರ್ಶನವೇ ಹೊಟ್ಟೆ ತುಂಬಿಸೋದು. ಬನಶಂಕರಿ ದೇವಿ ಜಾತ್ರೆಯಲ್ಲಿ ನಾಟಕ ಪ್ರದರ್ಶನದಿಂದ ಬಂದ ಹಣದಿಂದ ವರ್ಷವಿಡೀ ಜೀವನ ಸಾಗಿಸುತ್ತಿದ್ದರು. ಹಳ್ಳಿ ಜಾತ್ರೆ, ಬನಶಂಕರಿ ದೇವಿ ಜಾತ್ರೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡಿ ಎಂದು ಜಿಲ್ಲಾಡಳಿತ,ಸರ್ಕಾರಕ್ಕೆ ಕಣ್ಣೀರು ಧಾರೆಯೊಂದಿಗೆ ಮನವಿ ಮಾಡಿದ್ದಾರೆ ನಾಟಕ ಕಂಪನಿ ಮಾಲೀಕರು ಹಾಗೂ ಕಲಾವಿದೆಯಾದ ಪ್ರೇಮಾ ಗುಳೇದಗುಡ್ಡ.

ಇದನ್ನು ಓದಿ: ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲಿ ಕೇಂದ್ರದ ವೈರುಧ್ಯ ಅಭಿಪ್ರಾಯಗಳು ಯಾಕೆ; ಸದನದಲ್ಲಿ ಸಿದ್ದರಾಮಯ್ಯ ಪ್ರಶ್ನೆ

ಜಿಲ್ಲಾಧಿಕಾರಿಗಳಿಗೆ ಕಲಾವಿದರ ಮೊರೆ!

ಅಖಿಲ ಕರ್ನಾಟಕ ಹವ್ಯಾಸಿ, ವೃತ್ತಿ ರಂಗಭೂಮಿ, ಸರ್ವ ಜಾನಪದ ಕಲಾವಿದರ ಸಂಘ ಬೆಂಗಳೂರು ನೇತೃತ್ವದಲ್ಲಿ ಕಲಾವಿದರು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರಿಗೆ ಹಳ್ಳಿ, ಜಾತ್ರೆ, ಬನಶಂಕರಿ ದೇವಿ ಜಾತ್ರೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡಿ ಎಂದು ಮನವಿ ಸಲ್ಲಿಸಿದ್ದಾರೆ. ಏಳೆಂಟು ತಿಂಗಳಿಂದ ಕಲಾವಿದರು ಕೊರೋನಾ ಮಹಾಮಾರಿ ರೋಗದಿಂದ ಕೆಲಸವಿಲ್ಲದೆ ಅಲೆದಾಡುತ್ತಿದ್ದಾರೆ. ಇನ್ನು ಕೆಲವು ಕಲಾವಿದರು ಹಣ್ಣು, ಬಟ್ಟೆ ವ್ಯಾಪಾರ ಮಾಡಿ ಜೀವನ ನಡೆಸಿದ್ದಾರೆ. ಇದೀಗ ಹಬ್ಬ ಹರಿದಿನಗಳು ಆರಂಭವಾಗುತ್ತವೆ. ಹಳ್ಳಿ ಜಾತ್ರೆ, ಬನಶಂಕರಿ ದೇವಿ ಜಾತ್ರೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು 200 ಜನರು ಸೇರುವ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡುತ್ತೇವೆ ಎಂದಿದ್ದಾರೆ ಎನ್ನುತ್ತಾರೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಯಪ್ಪ ದಡ್ಡಿಮನಿ.
Youtube Video
ಒಟ್ಟಿನಲ್ಲಿ ಸರ್ಕಾರ ಬಡ ಕಲಾವಿದರ ನೆರವಿಗೆ ಬರಬೇಕಿದ್ದು, ಕೊರೋನಾ ನಿಯಮಾವಳಿ ಜೊತೆಗೆ ಕಲೆ, ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡುವ ಮೂಲಕ ಕಲಾವಿದರ ಬದುಕಿಗೆ ಆಸರೆಯಾಗಬೇಕಿದೆ.
Published by: HR Ramesh
First published: December 8, 2020, 6:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories