HOME » NEWS » District » DR K SUDHAKAR SAYS FARMERS CAN PROTEST WITHOUT TRACTORS RRK SNVS

ಟ್ರಾಕ್ಟರ್ ಮಾತ್ರವೇ ರೈತರ ಸಂಕೇತವಲ್ಲ, ಹಸಿರು ಶಾಲು ಧರಿಸಿ ಹೋರಾಡಬಹುದು: ಸಚಿವ ಕೆ ಸುಧಾಕರ್

ಪ್ರತಿಭಟನೆಯಲ್ಲಿ ಟ್ರಾಕ್ಟರ್ ಬಳಕೆ ಮಾಡದಂತೆ ರೈತ ಮುಖಂಡರ ಮನವೊಲಿಸಲು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನಿನ್ನೆ ಕೋಲಾರದಲ್ಲಿ ಸಭೆ ನಡೆಸಿದರು. ಟ್ರಾಕ್ಟರ್ ಮಾತ್ರವೇ ರೈತರ ಸಂಕೇತವಲ್ಲ. ಹಸಿರು ಶಾಲೂ ಧರಿಸಿ ಹೋರಾಟ ಮಾಡಬಹುದು ಎಂದು ರೈತರಿಗೆ ಅವರು ತಿಳಿಹೇಳಿದರು.

news18-kannada
Updated:January 26, 2021, 8:43 AM IST
ಟ್ರಾಕ್ಟರ್ ಮಾತ್ರವೇ ರೈತರ ಸಂಕೇತವಲ್ಲ, ಹಸಿರು ಶಾಲು ಧರಿಸಿ ಹೋರಾಡಬಹುದು: ಸಚಿವ ಕೆ ಸುಧಾಕರ್
ಕೋಲಾರ ಜಿಲ್ಲಾಡಳಿತದೊಂದಿಗೆ ಸಚಿವ ಡಾ. ಕೆ ಸುಧಾಕರ್
  • Share this:
ಕೋಲಾರ: ಕೃಷಿ ಕಾಯ್ದೆಗಳನ್ನ ಬೆಂಬಲಿಸಿ ಗಣರಾಜ್ಯೋತ್ಸವ ದಿನದಂದು ರೈತರಿಂದ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಕ್ಟರ್ ಪೆರೇಡ್​ಗೆ ಕರೆ ಹಿನ್ನೆಲೆ, ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಕೆ ಸುಧಾಕರ್ ರೈತಪರ ಮುಖಂಡರ ಜೊತೆಗೆ ನಿನ್ನೆ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಡಿಸಿ ಸತ್ಯಭಾಮ, ಎಸ್​ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ನೂರಕ್ಕು ಹೆಚ್ಚು ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು. ರೈತರೊಂದಿಗೆ ಸಚಿವ ಸುಧಾಕರ್ ಸಭೆ ನಡೆಸಲು ಸಂಜೆ 5 ಗಂಟೆಗೆ ಸಮಯ ನಿಗದಿ ಮಾಡಿ,  6 ಗಂಟೆಯಾದರೂ ಆಗಮಿಸದೆ ತಡವಾಗಿ ಆಗಮಿಸಿದರು. ಇದರಿಂದ ಸಚಿವರು ಬರುವ ಮುನ್ನವೇ ಸಭೆಯಿಂದ ಹೊರನಡೆಯಲು ರೈತ ಸಂಘಟನೆಗಳ ಮುಖಂಡರು ಮುಂದಾದಾಗ, ಅಧಿಕಾರಿಗಳು ರೈತ ಮುಖಂಡರ ಬಳಿ ಮನವಿ ಮಾಡಿ ತಡೆದ ಪ್ರಸಂಗ ನಡೀತು.

ಸಭೆಯಲ್ಲಿ ಸಂಘಟನೆ ಮುಖಂಡರೊಂದಿಗೆ ಮನವಿ ಮಾಡಿದ ಸಚಿವ ಸುಧಾಕರ್, ರೈತರೆಲ್ಲರೂ ಪ್ರತಿಭಟನೆ ನಡೆಸಲು ಸರ್ವ ಸ್ವತಂತ್ರರು. ಪ್ರತಿಭಟನೆಗೆ ಸರ್ಕಾರದ ವಿರೋಧವಿಲ್ಲ. ಆದರೆ ಸಾವಿರಾರು ರೈತರು ಟ್ರಾಕ್ಟರ್ ನಲ್ಲಿ ಬಂದರೆ, ಬೆಂಗಳೂರಲ್ಲಿ ವಾಹನ ದಟ್ಟಣೆ ಉಂಟಾಗುತ್ತೆ. ರೈತ ಮುಖಂಡರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಹಾಗೆಯೇ, ಕೃಷಿ ಕಾಯ್ದೆಯ ವಿರುದ್ದ ಪ್ರಚೋದಿತ ಪ್ರತಿಭಟನೆ ನಡೆಯುತ್ತಿದೆ ಎಂದು ಆರೋಪ ಮಾಡಿದರು.

ಸಚಿವರು ಮಾತನಾಡಿದ ನಂತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ರೈತ ಮುಖಂಡರು, ದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ, ನಾವೂ ಟ್ರಾಕ್ಟರ್ ಪೆರೇಡ್ ಮಾಡಲು ತೀರ್ಮಾನಿಸಿದ್ದೇವೆ. ಟ್ರಾಕ್ಟರ್ ಅಥವಾ ಎತ್ತಿನ ಬಂಡಿ ಇಲ್ಲದೆ ಹೋದಲ್ಲಿ ಹೋರಾಟಕ್ಕೆ ಅರ್ಥವಿರಲ್ಲ. ಹಾಗಾಗಿ ಕೆಲ ಟ್ರಾಕ್ಟರ್ ಬಳಸಲು ಅನುಮತಿ ನೀಡಬೇಕೆಂದು ಸಂಘಟನೆಗಳ ಮುಖಂಡರು ಸಚಿವರಿಗೆ ಒತ್ತಾಯಿಸಿದರು.

ರೈತರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಸಚಿವ ಕೆ ಸುಧಾಕರ್, ಟ್ರಾಕ್ಟರ್ ಪೆರೇಡ್ ಕೈ ಬಿಡಿ ಎಂದು ರೈತ ಸಂಘಟನೆ ಮುಖಂಡರ ಜೊತೆಗೆ ಮನವಿ ಮಾಡಿದ್ದೇನೆ. ಆದರೆ ಕೆಲ ಸಂಘಟನೆಯ ಮುಖಂಡರು‌ ಟ್ರಾಕ್ಟರ್ ಬಳಸುವುದಾಗಿ ತಿಳಿಸಿದ್ದಾರೆ. ಟ್ರಾಕ್ಟರ್ ನಮ್ಮ ಸಂಕೇತ ಎಂದು ಅವರು ಹೇಳುತ್ತಾರೆ. ಹಸಿರು ಶಾಲೂ ಹಾಕಿಕೊಂಡರೂ ರೈತ ಮುಖಂಡರೇ ಎಂದು ನಾನು ತಿಳಿಸಿದ್ದೇನೆ. ಬಹುತೇಕ ರೈತರು ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತ ಹೋರಾಟ ನಡೆಸಲು ಒಪ್ಪಿದ್ದಾರೆ. ರೈತರು ಸದಾ ಸರ್ಕಾರದ ವಿರುದ್ದ ಹೋರಾಟ ಮಾಡಲು ನಾವು ಸ್ವಾಗತ ಮಾಡುತ್ತೇವೆ. ಅವರ ಹೋರಾಟಕ್ಕೆ ಸರ್ಕಾರದ ವಿರೋಧವಿಲ್ಲ  ಎಂದು ಸಚಿವ ಸುಧಾಕರ್ ತಿಳಿಸಿದರು.

ಇದನ್ನೂ ಓದಿ: Farmers Protest | ಬೆಂಗಳೂರಿನಲ್ಲಿ ಆರು ಕಡೆಯಿಂದ ಇಂದು ರೈತರ ಮೆರವಣಿಗೆ; ಟ್ರಾಕ್ಟರ್ ತಡೆಯಲು ಪೊಲೀಸ್ ಮಾಸ್ಟರ್ ಪ್ಲಾನ್

ವೈದ್ಯಕೀಯ ಶಿಕ್ಷಣ ಖಾತೆ ವಾಪಸ್ಸು ಕೊಟ್ಟಿದ್ದಕ್ಕೆ ಸಿಎಂಗೆ ಅಭಿನಂದನೆ ಸಲ್ಲಿಸುವೆ - ಸಚಿವ ಸುಧಾಕರ್ 

ಸಚಿವ ಸಂಪುಟದ ಖಾತೆ ಮರುಹಂಚಿಕೆ ವೇಳೆ ಡಾ. ಸುಧಾಕರ್ ಅವರಿಂದ ವೈದ್ಯಕೀಯ ಶಿಕ್ಷಣ ಖಾತೆಯನ್ನ ಹಿಂಪಡೆದು ಮಾಧುಸ್ವಾಮಿಗೆ ನೀಡಲಾಗಿತ್ತು. ಇದರಿಂದ ಕೆಂಡಾಮಂಡಲವಾಗಿದ್ದ ಸುಧಾಕರ್ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಎರಡೂ ಕೂಡ ಒಬ್ಬರ ಕೈಲಿರಬೇಕು ಎಂದು ಹೇಳಿದ್ದರು. ಅಲ್ಲದೇ, ಸರ್ಕಾರ ರಚನೆಯ ಮುನ್ನ ಆದ ಮಾತುಗಳನ್ನ ನೆನಪಿಸಿಕೊಳ್ಳುವಂತೆ ಸಿಎಂ ಯಡಿಯೂರಪ್ಪ ಹೇಳಿ ತಮ್ಮ ಕೋಪ ಹೊರಹಾಕಿದ್ದರು. ಅದರ ಬೆನ್ನಲ್ಲೇ ನಿನ್ನೆ ಯಡಿಯೂರಪ್ಪ ಅವರು ವೈದ್ಯಕೀಯ ಶಿಕ್ಷಣ ಖಾತೆಯನ್ನ ಸುಧಾಕರ್ ಅವರಿಗೆ ಮರಳಿಸಿದ್ದಾರೆ.ಈ ಬಗ್ಗೆ ಕೋಲಾರದಲ್ಲಿ ಮಾತನಾಡಿದ ಸಚಿವರು, ಆರೋಗ್ಯ ಹಾಗು ವೈದ್ಯಕೀಯ ಶಿಕ್ಷಣ ಇಲಾಖೆ ಒಬ್ಬರ ಬಳಿ ಇರಬೇಕು. ಕೋವಿಡ್ 19 ಕಂಟ್ರೋಲ್, ಲಸಿಕೆ ವಿಚಾರವಾಗಿ ಒಬ್ಬರ ಬಳಿ ಇರಬೇಕು. 7 ಆಕಾಂಕ್ಷಿಗಳಿಗೆ ಖಾತೆಯನ್ನ ಕೊಡುವ ಸಂದರ್ಭದಲ್ಲಿ ಅನಿವಾರ್ಯವಾಗಿ ಸಿಎಂ ಹಾಗೆ ಮಾಡಿದ್ದಾರೆ. ಈಗ ಮತ್ತೆ ವಾಪಸ್ಸು ಕೊಟ್ಟಿರೋದಕ್ಕೆ ಸಿಎಂಗೆ ಅಭಿನಂದನೆ ಸಲ್ಲಿಸುವೆ. ನಾವ್ಯಾರು ಒತ್ತಡ ತಂದು ಸಚಿವ ಸ್ಥಾನ ಪಡೆದುಕೊಂಡಿಲ್ಲ. ಸಿಎಂ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಯಾರಿಗೆ ಯಾವ ಖಾತೆ ಕೊಡಬೇಕು ಅನ್ನೋದು ಸಿಎಂಗೆ ಗೊತ್ತಿದೆ ಎಂದು ಅಭಿಪ್ರಾಯಪಟ್ಟರು‌.

ವರದಿ: ರಘುರಾಜ್
Published by: Vijayasarthy SN
First published: January 26, 2021, 8:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories