HOME » NEWS » District » DOUBLE MURDER AT JP NAGAR BENGALURU AS TWO PERSONS HACKED TO DEATH IN NIGHT GVTV SNVS

ಬೆಂಗಳೂರಿನಲ್ಲಿ ರಾತ್ರೋರಾತ್ರಿ ಮಹಿಳೆ ಹಾಗೂ ಮಗನ ಸ್ನೇಹಿತನ ಹತ್ಯೆ; ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ

ಬೆಂಗಳೂರಿನ ಜೆಪಿ ನಗರ 7ನೇ ಹಂತದ ಸಂತೃಪ್ತಿ ನಗರದಲ್ಲಿ 72 ವರ್ಷದ ಮಮತಾ ಬಸು ಹಾಗೂ ಆಕೆಯ ಮಗನ ಸ್ನೇಹಿತ ದೇವಾಮೃತ ಮೆಹ್ರಾ ಅವರಿಬ್ಬರನ್ನು ಅಪರಿಚಿತರು ಮಧ್ಯರಾತ್ರಿ ಮನೆಗೆ ನುಗ್ಗಿ ಕೊಲೆಗೈದಿದ್ದಾರೆ.

news18-kannada
Updated:April 9, 2021, 3:39 PM IST
ಬೆಂಗಳೂರಿನಲ್ಲಿ ರಾತ್ರೋರಾತ್ರಿ ಮಹಿಳೆ ಹಾಗೂ ಮಗನ ಸ್ನೇಹಿತನ ಹತ್ಯೆ; ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ
ಬೆಂಗಳೂರಿನಲ್ಲಿ ಹತ್ಯೆಯಾದ ಮಮತಾ ಬಸು ಮತ್ತು ದೇವಾಮೃತ ಮೆಹ್ರಾ
  • Share this:
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಿನ್ನೆ ಮನೆಯೊಂದರಲ್ಲಿ ಇಬ್ಬರ ದಾರುಣ ಹತ್ಯೆಯಾಗಿದೆ. ಮನೆಯಲ್ಲಿ ಆರಾಮಾಗಿ ಮಲಗಿದ್ದ ವೃದ್ಧೆ ಹಾಗೂ ಆಕೆಯ ಮಗನ ಸ್ನೇಹಿತನನ್ನ ಹತ್ಯೆ ಮಾಡಿ ದುಷ್ಕರ್ಮಿ ಎಸ್ಕೇಪ್ ಆಗಿದ್ದಾನೆ. ಮೊನ್ನೆ ತಡರಾತ್ರಿ ಬೆಂಗಳೂರಿನ ಜೆಪಿನಗರದ ಏಳನೇ ಹಂತದಲ್ಲಿರೋ ಸಂತೃಪ್ತಿ ನಗರದಲ್ಲಿ ಇಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಳಿಗ್ಗೆ ಕೆಲಸದಾಕೆ ಬಂದು ಬಾಗಿಲು ತಟ್ಟುತ್ತಿದ್ದಂತೆ ಎರಡೆರಡು ಹೆಣ ಬಿದ್ದಿರೋದು ಕಂಡಿದೆ. ಕೂಡಲೇ ಆಕೆ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. 

72 ವರ್ಷದ ವೃದ್ಧೆ ಮಮತಾ ಬಸು ಹಾಗೂ ಆಕೆಯ ಮಗನ ಸ್ನೇಹಿತ ದೇವಾಮೃತ ಮೆಹ್ರಾ ಕೊಲೆಯಾಗಿದ್ದಾರೆ. ಕೊಲೆಗಾರ ಮನಸ್ಸಿಗೆ ಬಂದಂತೆ ಚಾಕುವಿನಿಂದ ಇರಿದು ಇಬ್ಬರನ್ನೂ ಹತ್ಯೆ ಮಾಡಿ ಪರಾರಿ ಆಗಿದ್ದಾ‌ನೆ. ಮನೆಯ ಸ್ಟೋರ್ ರೂಂನಲ್ಲಿ ದೇವಾಮೃತ ಮೆಹ್ರಾ ಹೆಣವಾದರೆ, ಮೊದಲನೇ ಫ್ಲೋರ್​ನ ಹಾಸಿಗೆಯ ಮೇಲೆ ಮಮತಾ ಬಸು ಉಸಿರು ಚೆಲ್ಲಿದ್ದಾರೆ‌.

ಇಪ್ಪತ್ತು ದಿನದ ಹಿಂದೆ ಮಮತಾರ ಮಗ ದೀಪ್ ದೇಬ್ ಬಸು ಒಡಿಶಾ ಮೂಲದ ತನ್ನ ಸ್ನೇಹಿತ ದೇವಾಮೃತರನ್ನ ತನ್ನ ತಾಯಿಯ ಮನೆಯಲ್ಲೇ ಇರುವಂತೆ ಹೇಳಿದ್ದ. ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದ್ದರಿಂದ ದೇವಾಮೃತ ಇದೇ ಮನೆಯಲ್ಲಿ ಮಮತಾರ ಜೊತೆ ವಾಸವಾಗಿದ್ದರು. ನಿನ್ನೆ ತಡರಾತ್ರಿ ದೀಪ್ ದೇವ್ ಬಸು ತಾಯಿಯ ಮನೆಯಲ್ಲೇ ಊಟ ಮುಗಿಸಿ ಮನೆಗೆ ತೆರಳಿದ್ದರಂತೆ. ಅದಾದ ಬಳಿಕ ತಡರಾತ್ರಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಮನೆಯ ಬಾಗಿಲನ್ನ ತಟ್ಟಿದ್ದಾನೆ. ಬಾಗಿಲು ತೆಗೆದ ದೇವಾಮೃತನನ್ನ ಚಾಕುವಿನಿಂದ ಮನಸೋ ಇಚ್ಚೆ ಇರಿದು ಕೊಲೆಮಾಡಿದ್ದಾನೆ. ಕೊಲೆಗಾರ ನೇರವಾಗಿ ಮೊದಲನೇ ಅಂತಸ್ತಿಗೆ ಹೋಗಿ, ಅಲ್ಲಿ ಗಾಢ ನಿದ್ರೆಯಲ್ಲಿದ್ದ ಮಮತಾ ಬಸು ಅವರನ್ನ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.

ಇದನ್ನೂ ಓದಿ: ಅನುಮತಿ ಇಲ್ಲದೇ ಲಕ್ಷದ್ವೀಪದ ಬಳಿ ಬಂದ ಅಮೆರಿಕದ ಯುದ್ಧನೌಕೆ; ಯಾರಪ್ಪಣೆಯೂ ಬೇಕಿಲ್ಲ ಎಂದು ದರ್ಪ

ಕೃತ್ಯದ ಬಳಿಕ ಮನೆಗೆ ಅಳವಡಿಸಿದ್ದ ಸಿಸಿ ಟಿವಿಯ ಡಿವಿಆರ್ ಅನ್ನ ಸಹ ಕಿತ್ಕಂಡು ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣ, ಹಣ ಎಲೆಕ್ಟ್ರಾನಿಕ್ ಐಟಂಗಳನ್ನ ಕದ್ದು ಪರಾರಿಯಾಗಿದ್ದಾನೆ. ಈ ಡಬಲ್ ಮರ್ಡರ್ ಅನ್ನ ಸೂಕ್ಷ್ಮವಾಗಿ ನೋಡುವುದಾದರೆ ಚಿನ್ನಾಭರಣಕ್ಕೇ ಕೊಲೆ ನಡೆದಿರಬಹುದು ಎಂದು ತೋರಿದರೂ ಇದರ ಹಿಂದೆ ಪರಿಚಯಸ್ಥರ ಕರಿನೆರಳು ಕಾಣಿಸುತ್ತಿದೆ. ಯಾರೇ ಆದರೂ ತಡರಾತ್ರಿ ಬಾಗಿಲು ತಟ್ಟಿದರೆ, ಯಾರಪ್ಪಾ ನೀನು ಅಂತ ಕೇಳೋದು ಮಾಮೂಲಿ. ಆದ್ರೆ ಇಲ್ಲಿ ದೇವಾಮೃತ ಮೆಹ್ರಾ ಸಲೀಸಾಗಿ ಬಾಗಿಲು ತೆಗೆದಿದ್ದಾರೆ. ಪರಿಚಯಸ್ಥರೇ ಬಂದಿದ್ದರಿಂದ ಅವರು ಹಿಂದೆಮುಂದೆ ನೋಡದೆ ಬಾಗಿಲು ತೆಗೆದಿದ್ದಿರಬಹುದು ಅನ್ನೋದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಅಷ್ಟೇ ಅಲ್ಲ ಸಿಸಿ ಟಿವಿಯ ಡಿವಿಆರ್ ಎಲ್ಲಿದೆ ಅನ್ನೋದನ್ನ ಸ್ಪಷ್ಟವಾಗಿ ಆರೋಪಿ ತಿಳಿದಿದ್ದಾನಂದ್ರೆ ಅವನು ಕೊಲೆಯಾದವರಿಗೆ ಚಿರಪರಿಚಿತನೇ ಆಗಿರಬಹುದು ಅನ್ನೋದು ಪೊಲೀಸರ ಶಂಕೆಯಾಗಿದೆ. ಇನ್ನು ಪೊಲೀಸರ ಗಮನ ಬೇರೆಡೆ ಸೆಳೆಯೋ ಉದ್ದೇಶದಿಂದ ಬೆಲೆ ಬಾಳುವ ವಸ್ತುಗಳನ್ನ ಆರೋಪಿ ಹೊತ್ತೊಯ್ದಿರಬಹುದು ಅನ್ನೋ ಅನುಮಾನವೂ ಇಲ್ಲಿ ಹೊಗೆಯಾಡ್ತಿದೆ. ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪ್ರಕರಣದಲ್ಲಿ ಸಾಕಷ್ಟು ಅನುಮಾನವಿದ್ದು, ಮೃತರ ಕುಟುಂಬಸ್ಥರನ್ನ ತೀವ್ರ ವಿಚಾರಣೆ ಮಾಡಲಾಗುತ್ತಿದೆ.

ವರದಿ: ಗಂಗಾಧರ ವಾಗಟ
Published by: Vijayasarthy SN
First published: April 9, 2021, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories