ಸುಮಲತಾರ ಸಿನಿಮಾ ಡೈಲಾಗ್ ಸೀರಿಯಸ್ ಆಗಿ ತಗೋಬೇಡಿ: ಪೇಟೆರೌಡಿ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು

ಆ ಯಮ್ಮ ಏನೂ ಕೆಲಸ ಮಾಡಲ್ಲ ಎಂದಿದ್ದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಯಾಗಿ ಅವರನ್ನು ಸುಮಲತಾ ಪೇಟೆರೌಡಿ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮೈಸೂರು ಸಂಸದ, ಸುಮಲತಾರ ಸಿನಿಮಾ ಡೈಲಾಗ್​ಗಳನ್ನ ಯಾರೂ ಗಂಭೀರವಾಗಿ ಪರಿಗಣಿಸಬೇಡಿ ಎಂದಿದ್ದಾರೆ.

ಸಂಸದ ಪ್ರತಾಪ್​​ ಸಿಂಹ.

ಸಂಸದ ಪ್ರತಾಪ್​​ ಸಿಂಹ.

  • Share this:
ಮೈಸೂರು(ಡಿ. 18): ‘ಆ ಯಮ್ಮ ಏನು ಕೆಲಸ ಮಾಡ್ತಿಲ್ಲ, ಏನೇ ಕೆಲಸ ಇದ್ರೂ ನನಗೆ ಹೇಳಿ’ - ಹೀಗಂತ ಮಂಡ್ಯ ಸಂಸದೆ ಸುಮಲತಾ ಅವರ ಬಗ್ಗೆ ಮೈಸೂರು ಸಂಸದ ಪ್ರತಾಪ್‌ಸಿಂಹ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಸಂಸದೆ ಸುಮಲತಾ ಅವರು ಪ್ರತಾಪ್‌ ಸಿಂಹ ಅವರನ್ನ ಪೇಟೆ ರೌಡಿಗೆ ಹೋಲಿಸಿದ್ದರು. ಇದೀಗ ಪೇಟೆ ರೌಡಿ ಎಂಬ ಸುಮಲತಾ ಹೇಳಿಕೆಯನ್ನ ಯಾರೂ ಸೀರಿಯಸ್‌ ಆಗಿ ತಗೋಬೇಡಿ ಅಂತ ಮೈಸೂರು ಸಂಸದ ಪ್ರತಾಪ್‌ಸಿಂಹ ಟಾಂಗ್‌ ನೀಡಿದ್ದಾರೆ.

“ಸುಮಲತಾ ಅವರ ಹೇಳಿಕೆಯನ್ನ ಸೀರಿಯಸ್ ಆಗಿ ತಗೋಬೇಡಿ. ಸುಮಲತಾ ಅವರ ಹೇಳಿಕೆ ಬಗ್ಗೆ ನನಗ್ಯಾಕೋ ನಂಬಿಕೆ ಬರುತ್ತಾ ಇಲ್ಲ. ಸುಮಲತಾ ಅವರು ಸಿನಿಮಾ ಜಗತ್ತಿನಿಂದ ಬಂದವರು. ಬಣ್ಣದ ಲೋಕದಿಂದ ಬಂದವರು. ಮಾಧ್ಯಮದವರ ಪ್ರಶ್ನೆಗೆ ನಾಗರಹಾವು ಸಿನಿಮಾ ಜಲೀಲ‌ ನೆನಪಾಗಿ ಡೈಲಾಗ್ ಹೊಡೆದಿರ್ತಾರೆ. ಹಾಗಾಗಿ ನೀವುಗಳು ಅದನ್ನ ಸೀರಿಯಸ್ ಆಗಿ ತಗೋಬೇಡಿ” ಎಂದು ಹೇಳುವ ಮೂಲಕ ಅವರ ಹೇಳಿಕೆಗೆ ಪ್ರತಾಪ್ ಸಿಂಹ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.

ಮುಂದುವರೆದು ಮಾತನಾಡಿದ ಸಂಸದ ಪ್ರತಾಪ್‌ಸಿಂಹ, ನಾನು ಯಾವ ಸ್ಟಾರ್ ಅಲ್ಲ, ನನಗೆ ಯಾವ ಅಭಿಮಾನಿಯೂ ಬಂದು ಓಟು ಹಾಕೋಲ್ಲ‌. ನನಗೆ ನನ್ನ ಕೆಲಸವೇ ಕಾಯೋದು. ಹಾಗಾಗಿ ನನಗೆ ಕೆಲಸದ ಮೇಲೆ ನಂಬಿಕೆ ಇದೆ. ನಾನು ಬಸವಣ್ಣನವರ ಕಾಯಕನಿಷ್ಠೆಯಲ್ಲಿ ನಂಬಿಕೆ ಇಟ್ಟವನು. ವ್ಯರ್ಥ ಹೇಳಿಕೆ ಕೊಟ್ಟು ಸಮಯ ವ್ಯರ್ಥ ಮಾಡೋಲ್ಲ. ಚಪ್ಪಲಿ ಹೊಲಿಯುವವನ ಮಗ ಅಮೇರಿಕಾದ ಅಧ್ಯಕ್ಷ ಆಗಿದ್ದಾರೆ, ಟೀ ಮಾರುತ್ತಿದ್ದ ಮೋದಿ ಪ್ರಧಾನಿ ಆಗಿದ್ದಾರೆ. ರಾಜಕೀಯದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಇಲ್ಲಿ ಪಾಳೆಗಾರಿಕೆ ಸಂಸ್ಕೃತಿಗೆ ಅವಕಾಶ ಇಲ್ಲ. ನಾನು ನನ್ನ ಕುಟುಂಬ ಅನ್ನೋ ಮಾತುಗಳು ಜನಪ್ರತಿನಿಧಿಗಳ ಬಾಯಿಂದ ಬರಬಾರದು ಎಂದು ಹೇಳುವ ಮೂಲಕ, ಸುಮಲತಾ ಅವರ ‘ಅಂಬರೀಷ್ ಇದ್ದಾಗ ಯಾರು ಮಾತನಾಡುತ್ತಿರಲಿಲ್ಲ’ ಎಂಬ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಇದನ್ನೂ ಓದಿ: ರಾಜ್ಯದ ಮರಾಠ ಜನರ ಅಭಿವೃದ್ಧಿಗೆ ಪ್ರಾಧಿಕಾರ; ಮರಾಠಿ ಭಾಷೆಗೂ ಇದಕ್ಕೂ ಸಂಬಂಧವಿಲ್ಲ; ಸಿಎಂ ಬಿಎಸ್​ವೈ ಸ್ಪಷ್ಟನೆ

ಅಂದು ನಡೆದ ಘಟನೆಯನ್ನ ವಿವರಿಸಿದ ಸಂಸದ ಪ್ರತಾಪ್‌ ಸಿಂಹ, 10 ಪಥದ ಹೆದ್ದಾರಿ‌ ಕಾಮಗಾರಿ ವಿಚಾರದಲ್ಲಿ ನಾನು ಬೆಂಗಳೂರಿನಿಂದ ಬರುವಾಗ ಮಂಡ್ಯ ಜನರೇ ಅಡ್ಡ ಹಾಕಿ ನನ್ನನ್ನ ಕೇಳಿದ್ರು. ಎಲಿಯೂರು ಬಳಿ ಅಂಡರ್‌ಪಾಸ್‌ ಹಾಗೂ ಫ್ಲೈಓವರ್ ವಿವರವಾಗಿ ಮನವಿ ಮಾಡಿಕೊಂಡರು. ಆಗ ನಾನು ಅಂಡರ್ ಪಾಸ್ ಹಾಗೂ ಫ್ಲೈಓವರ್ ಮಾಡಿಸಿಕೊಡುವ ಭರವಸೆ ಕೊಟ್ಟೆ. 10 ಪಥದ ಹೆದ್ದಾರಿ ರಸ್ತೆಯಿಂದ ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಯ ಜನರಿಗೆ ಅನುಕೂಲ ಆಗಲಿದೆ. ಅದಕ್ಕಾಗಿ ನಾನು ಭರವಸೆ ಕೊಟ್ಟೆ ವಿನಹ ಬೇರೆ ಏನು ಮಾತನಾಡಿಲ್ಲ. ಆದರಾಚೆಗೆ ನನಗೆ ರಾಜಕೀಯ ಹೇಳಿಕೆ ಕೊಡುವ ಅಥವಾ ಇನ್ನೊಬ್ಬರ ಬಗ್ಗೆ ಮಾತನಾಡುವ ಇರಾದೆ ಇಲ್ಲ. ಇನ್ನು ಸುಮಲತಾ ಅವರು ಕೊಡಗಿನ ರಸ್ತೆಗಳ ಬಗ್ಗೆ ಮಾತನಾಡಿದ್ದಾರೆ. ಗ್ರಾಮಪಂಚಾಯಿತಿ ಸದಸ್ಯನಿಗೆ ಯಾವ ರಸ್ತೆ ಬರುತ್ತೆ, ಜಿಲ್ಲಾ ಪಂಚಾಯಿತಿ ಸದಸ್ಯನಿಗೆ ಯಾವ ರಸ್ತೆ ಬರುತ್ತೆ. ಎಂಎಲ್‌ಎಗೆ ಯಾವ ರಸ್ತೆ ಹಾಗೂ ಎಂಪಿಗೆ ಯಾವ ರಸ್ತೆ ಬರುತ್ತೆ ಅನ್ನೋ ಕನಿಷ್ಢ ಜ್ಞಾನ ಇದ್ದರೆ ಅಪದ್ದವಾದ ಹೇಳಿಕೆ ನಿಲ್ಲುತ್ತವೆ. 10 ಪಥದ ಹೆದ್ದಾರಿ ಅನುಕೂಲ ಮಾಡೋದು ನನ್ನ ಉದ್ದೇಶ. ಅದನ್ನ ಬಿಟ್ಟು ಬೇರೇನೂ ನನಗೆ ಗೊತ್ತಿಲ್ಲ. ಹಾಗಾಗಿ ಬೇರೆಯವರ ಬಗ್ಗೆ ನಾನು ಮಾತನಾಡೋದಿಲ್ಲ ಎಂದು ಹೇಳುವ ಮೂಲಕ ಸುಮಲತಾ ಹೇಳಿಕೆಗೆ ಖಾರವಾಗಿಯೇ ತಿರುಗೇಟು ನೀಡಿದರು.

ಮಂಡ್ಯ ಮೈಸೂರು ರಾಮನಗರದ ಮೇಲೆ ಹಾದು ಹೋಗುತ್ತಿರುವ 10ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನ ಸ್ವತಃ ಮುಂದೆ ನಿಂತು ಮಾಡಿಸುತ್ತಿರುವ ಸಂಸದ ಪ್ರತಾಪ್‌ ಸಿಂಹ ನವೆಂಬರ್ 12ರಂದು ಮಂಡ್ಯದಲ್ಲಿ ಸುಮಲತಾ ವಿರುದ್ದ ಹೇಳಿಕೆ ನೀಡಿದ್ದ ಪ್ರತಾಪ್‌ ಸಿಂಹ ವಿರುದ್ದ. ಸುಮಲತಾ ಹಾಗೂ ಅಂಬರೀಷ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಮೊನ್ನೆ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಸುಮಲತಾ, ಪ್ರತಾಪ್‌ ಸಿಂಹರನ್ನ ಪೇಟೆರೌಡಿಗೆ ಹೋಲಿಕೆ ಮಾಡಿದ್ದರು. ನಿನ್ನೆ ಅದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್‌ ಸಿಂಹ ಸುಮಲತಾ ಹೇಳಿಕೆಯನ್ನ ಸೀರಿಯಸ್‌ ಆಗಿ ತಗೋಬೇಡಿ ಎನ್ನುವ ಮೂಲಕ ಮಾತಿನ ಚಕಮಕಿಗೆ ಚುಕ್ಕಿ ಇಟ್ಟಿದ್ದಾರೆ.

ವರದಿ: ಪುಟ್ಟಪ್ಪ
Published by:Vijayasarthy SN
First published: