ಮೈಸೂರು: ನಾನು ರಾಜಕೀಯದಲ್ಲಿ ಇರೋವರೆಗೂ ಜಿ.ಟಿ. ದೇವೇಗೌರನ್ನು ವಾಪಸ್ ಜೆಡಿಎಸ್‌ಗೆ ಸ್ವೀಕರಿಸೋದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇಂದು ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬೆಳಗ್ಗೆ ಕಾಂಗ್ರೆಸ್, ಮಧ್ಯಾಹ್ನ ಜೆಡಿಎಸ್, ರಾತ್ರಿ ಬಿಜೆಪಿಯವ್ರ ಮನೆಗಳಿಗೆ ಹೋಗ್ತಾರೆ. ಎಲ್ಲರ ವಿಶ್ವಾಸಗಳಿಸೋಕೆ ಓಡಾಡ್ತಿದ್ದಾರೆ, ಎಲ್ಲೂ ಗಿಟ್ಟಲ್ಲ ಅಂದ್ರೆ ಕೊನೆಗೆ ನಮ್ಮತ್ರಾನೆ ಬರ್ತಾರೆ ಅಂತಾನೂ ಗೊತ್ತು. ಆದ್ರೆ ಎಲ್ಲ ಸುತ್ತಿಕೊಂಡು ವಾಪಸ್ ಬಂದಾಗ ಜೆಡಿಎಸ್ ಅವರನ್ನ ಸ್ವೀಕರಿಸೋದಿಲ್ಲ. ಅದರಲ್ಲೂ ನಾನು ರಾಜಕೀಯದಲ್ಲಿ ಇರೋವರೆಗೂ ಅವರನ್ನ ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳಲ್ಲ" ಎಂದು ಜಿ.ಟಿ. ದೇವೇಗೌಡ ವಿರುದ್ದ ಗುಡುಗಿದ್ದಾರೆ.
"ನನ್ನ ಕೆಲವು ನಾಯಕರು ಕೇಳಿದ್ರು ಅವರಿಗೆ ಸ್ವಲ್ಪ ಸಮಯ ಕೊಡಿ ಅಂತ, ಅದಕ್ಕೆ ಸಮಯ ಕೊಟ್ಟಿದ್ದೆ. ಆದರೆ, ಇನ್ನು ಸಮಯ ಕೊಡೋಕೆ ಆಗೋಲ್ಲ. ಇನ್ನು ಇವರ ಆಟ ನಡೆಯೋಲ್ಲ. ಮೈಸೂರಿನ ಜಲದರ್ಶಿನಿಯಲ್ಲಿ ಸಾ.ರಾ.ಮಹೇಶ್ ಭೇಟಿ ಮಾಡಿದ್ದಾಗಲು ಇದೆ ಹೇಳಿದ್ರು. ಸಾ.ರಾ.ಮಹೇಶ್ ಸಹ ಅವರನ್ನ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ರು. ಆದರೆ, ಇವರು ಒಳಗೊಂದು ಮಾತನಾಡಿ ಹೊರಗೆ ಪಕ್ಷಕ್ಕೆ ಡ್ಯಾಮೇಜ್ ಮಾಡ್ತಿದ್ದಾರೆ ಈಗ ಆಗಿರುವ ಡ್ಯಾಮೇಜ್ ಸಾಕು ಮತ್ತೆ ಇವರಿಗೆ ಟೈಂ ಕೊಡೋಕೆ ಸಾಧ್ಯವೇ ಇಲ್ಲ ಅವರನ್ನ ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
"ಜಿ.ಟಿ. ದೇವೇಗೌಡ ಒಬ್ಬ ಮಹಾನ್ ಸುಳ್ಳುಗಾರ. ತುಂಬಾ ದಿನ ಸುಳ್ಳು ಹೇಳಿಕೊಂಡು ತಿರುಗೋಕಾಗೋಲ್ಲ. ಸಾ.ರಾ. ಮಹೇಶ್‌ರನ್ನ ನಾನು ಬೆಳೆಸಿದೆ ಅಂತ ಹೇಳಿದ್ದರು. ದೇವೇಗೌಡರ ಜೊತೆ ಮಾತನಾಡಿದ್ದೇನೆ ಬೆಳಗ್ಗೆ ಮಂತ್ರಿಯಾಗ್ತಿಯಾ ಹೋಗು ಅಂತ ಹೇಳಿದ್ದರು. ಆದ್ರೆ ಯಾರ ಜೊತೆಯೂ ಅವರು ಮಾತುಕತೆ ನಡೆಸಿರಲಿಲ್ಲ. ಸಾ.ರಾ.ಮಹೇಶ್‌ರನ್ನ ಮಂತ್ರಿ ಮಾಡಿದವನು ನಾನು ಇವರಲ್ಲ.
ಅಷ್ಟೇ ಯಾಕೇ ಜಿ.ಟಿ. ದೇವೇಗೌಡರನ್ನ ಸಹಕಾರಿ ಕ್ಷೇತ್ರಕ್ಕೆ ಪರಿಚಯಿಸಿದ್ದೆ ನಾನು. ಆಗ ನಾನು ರಾಜಕಾರಣದಲ್ಲಿ ಇರಲಿಲ್ಲ. ಆದ್ರೂ ಮನೆಯಲ್ಲಿ ಮಲಗಿದ್ದ ಇವರನ್ನ ಕರೆದು ಸಹಕಾರ ಮಹಾಮಂಡಳಿ ಅಧ್ಯಕ್ಷರಾಗಿ ಮಾಡಿದ್ವಿ. ಇವರು ಸಹಕಾರಿ ಕ್ಷೇತ್ರಕ್ಕೆ ಬರೋಕೆ ನನ್ನ ಪಾತ್ರವು ಇದೆ" ಎಂದು ತಿಳಿಸಿದ್ದಾರೆ.
ಜೆಡಿಎಸ್ ದೇವೆಗೌಡರ ಹಿಡಿತದಲ್ಲಿಲ್ಲ ಎಂಬ ಜಿಟಿಡಿ ಹೇಳಿಕೆಗೆ ಹೆಚ್‌ಡಿಕೆ ತಿರುಗೇಟು ನೀಡಿದ ಕುಮಾರಸ್ವಾಮಿ, "ನನ್ನ ತಂದೆಗೆ ಗೌರವ ಕೊಡೋದನ್ನ ಇವರಿಂದ ಕಲಿಯಬೇಕಿಲ್ಲ. ನಾಲಿಗೆ ಮೇಲೆ ಹಿಡಿತ ಇಟ್ಕೊಂಡು ನಮ್ಮ ಕುಟುಂಬದ ಬಗ್ಗೆ ಮಾತನಾಡಲಿ. ನಮ್ಮ ಕುಟುಂಬದ ಬಗ್ಗೆ ಇವರು ಚರ್ಚೆ ಮಾಡೋದು ಬೇಡ. ನಮ್ಮ ತಂದೆಗೆ ಗೌರವ ಕೊಡೋದನ್ನ ಇವರಿಂದ ಕಲಿಯಬೇಕಿಲ್ಲ. ನಿಮ್ಮಂತವರನ್ನ ನಂಬೀಯೆ ಪಕ್ಷ ಹೀಗೆ ಆಗಿದೆ. ನಿಮ್ಮಂತವರನ್ನ ಬೆಳೆಸಿದ್ದಕ್ಕೆ ಈ ಪಕ್ಷ ಹೀಗೆ ಆಗಿದೆ" ಎಂದು ಜಿಟಿಡಿ ವಿರುದ್ದ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.
"ಜೆಡಿಎಸ್‌ನಿಂದ ಜಿಟಿಡಿರನ್ನ ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ. ಆದ್ರೆ ಮೈಸೂರು ಭಾಗದ ಬೆಳಗವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕಾರ್ಯಕರ್ತರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ. ನಾನು ಉಚ್ಚಾಟನೆ ಮಾಡಿದರೆ ಜನರ ಅನುಕಂಪದ ಲಾಭ ಗಿಟ್ಟಿಸಬಹುದೆಂದು ಕಾಯುತ್ತಿದ್ದಾರೆ. ಯಾವಾಗ ಕ್ರಮ ತೆಗೆದುಕೊಳ್ಳಬೇಕು ಅವಾಗ ತಗೊಳ್ತೀನಿ
ಏಕೆಂದರೆ ಪ್ರತಿ ದಿನ ನಮಗೆ ಹೂ ಮುಡಿಸಲು ಆಗೋಲ್ಲ. ಇವರ ಪಕ್ಷ ನಿಷ್ಠೆ ಎಷ್ಟಿದೆ? ಎಂದು ಕಾರ್ಯಕರ್ತರಿಗೆ ಗೊತ್ತಾಗಲಿದೆ. ನಿನ್ನೆ ಮಗನ ಕಾರ್ಯಕ್ರಮ ಮಾಡಿದ್ದಾರೆ. ಮೈದಾನ ದೊಡ್ಡದಾಗಿದೆ ಯಾರಾದ್ರು ಕಾರ್ಯಕ್ರಮ ಮಾಡಬಹುದು. ಆದ್ರೆ ಪ್ರತಿ ದಿನ ನಮಗೆ ಹೂ ಮೂಡಿಸಲು ಆಗೋಲ್ಲ. ಸಾ.ರಾ. ವಿರುದ್ದ ಸ್ಪರ್ಧಿಸಿದ್ದ ಅಭ್ಯರ್ಥಿ ಜೊತೆ ಮೆರವಣಿಗೆ ಹೋಗ್ತಾರೆ ಅಂದ್ರೆ ಇವರಿಗೆ ಪಕ್ಷ ನಿಷ್ಟೆ ಎಷ್ಟಿದೆ? ಎಂದು ಕಾರ್ಯಕರ್ತರು ಮಾತನಾಡೋದಿಲ್ವಾ. ಅವರದ್ದೆ ದೊಡ್ಡ ಶಕ್ತಿ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ