ಕೋಲಾರ; ಅಪಹರಣ ಕೃತ್ಯದಲ್ಲಿ ಹಣಕಾಸು, ಮಹಿಳೆ, ಹಳೆ ವೈಷಮ್ಯ ಎಂಬೆಲ್ಲ ಆರೋಪಗಳು ಸುಳ್ಳಾಗಿವೆ. ಊಹಾಪೋಹದ ಆರೋಪಗಳಿಂದ ಸಾಮಾಜಿಕ ಜಾಲತಾಣದಲ್ಲಿ ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ದಯವಿಟ್ಟು ಯಾರೂ ಸುಳ್ಳು ಮಾಹಿತಿ ಹಾಕಿ ನನ್ನ ಜೀವನ ಹಾಳು ಮಾಡಬೇಡಿ. ನಾನು ಮತ್ತೆ ಎಲೆಕ್ಷನ್ ಗೆ ನಿಲ್ಲಬೇಕು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಮನವಿ ಮಾಡಿಕೊಂಡಿದ್ದಾರೆ.
ಕೋಲಾರ ಎಸ್ಪಿ ಕಚೇರಿಗೆ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವರ್ತೂರು ಪ್ರಕಾಶ್, ಹೆಣ್ಣು, ಹೊನ್ನು, ಮಣ್ಣು ಎಲ್ಲಾ ಸುಳ್ಳು. ಸಗಣಿ ಬಾಚಿಕೊಂಡು ಜೀವನ ಮಾಡುತ್ತಿದ್ದೇನೆ. ಕಿಡ್ನಾಪ್ ಘಟನೆಯ ಹಿಂದೆ ಮಹಿಳೆಯೊಂದಿಗೆ ಅಕ್ರಮ ವಿಚಾರವು ಚರ್ಚೆಗೆ ಬಂದಿದೆ. ಅದರ ಜೊತೆಗೆ ಮಹಾರಾಷ್ಟ್ರ ಮೂಲದಿಂದ ಹೈಬ್ರಿಡ್ ತಳಿಯ ಹಸುಗಳನ್ನು ಖರೀದಿ ಮಾಡಿ 10 ಕೋಟಿ ಬಾಕಿ ಹಣ ನೀಡದೆ ಸತಾಯಿಸಿದ್ದಕ್ಕೆ, ಮುಂಬೈ ಮೂಲದವರು ಸುಪಾರಿ ಹಂತಕರನ್ನು ಬಿಟ್ಟು ಬೆದರಿಸಿದ್ದಾರೆ ಎನ್ನುವ ವಿಚಾರಗಳು ಹರಿದಾಡುತ್ತಿದೆ. ಈ ಕುರಿತ ಪ್ರಶ್ನೆಗಳಿಗೆ ವರ್ತೂರು ಕಿಡಿಕಾರಿದ್ದಾರೆ.
ದ್ವೇಷ, ಅಸೂಯೆಯಿಂದ ಈ ಕೃತ್ಯ ನಡೆದಿಲ್ಲ. ನನ್ನ ಬಳಿ ಹಣವಿದೆ ಎಂದ ತಿಳಿದುಕೊಂಡು ಕಿಡ್ನಾಪ್ ಮಾಡಿದ್ದಾರೆ. ಬೆಂಗಳೂರು ಮೂಲದ ದರೋಡೆಕೋರರೇ ಈ ಕೃತ್ಯ ಎಸಗಿದ್ದಾರೆ. ನನ್ನ ಮಗನೇ ನನ್ನ ಕಿಡ್ನಾಪ್ ಮಾಡಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಅದೆಲ್ಲಾ ಸತ್ಯಕ್ಕೆ ದೂರವಾದದ್ದು. ಒಂದು ವಾರದಲ್ಲಿ ಪೊಲೀಸರು ಆರೋಪಿಗಳನ್ನು ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದು, ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಘಟನೆ ವಿವರಿಸಿದ್ದೇನೆ ಎಂದು ತಿಳಿಸಿದರು.
ಹೊಂಚು ಹಾಕಿ ಕಿಡ್ನಾಪ್ ಮಾಡಿದ್ದಾರೆ; ಚಾಲಕ ಸುನೀಲ್
ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್ ನ ಪ್ರತ್ಯಕ್ಷ ಸಾಕ್ಷಿಯಾಗಿರುವ ವರ್ತೂರು ಪ್ರಕಾಶ್ ಕಾರು ಚಾಲಕ ಸುನೀಲ್, ಕಿಡ್ನಾಪ್ ನಡೆದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಿಡ್ನಾಪ್ ಆದ ಬಗ್ಗೆ ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ಜಂಗಾಲಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಸುಧಾರಿಸಿಕೊಳ್ಳುತ್ತಿರುವ ಸುನೀಲ್, ಘಟನೆಯ ದಿನದಂದು ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ, ಬಲಗೈಗೆ ಗಂಭೀರ ಗಾಯವಾಗಿದೆ, ಇನ್ನು ಕಾಲಿಗೂ ಮಚ್ಚಿನಿಂದ ಹೊಡೆದಿದ್ದು, ಇನ್ನು ರಕ್ತಸ್ರಾವ ನಿಂತಿಲ್ಲ. ತಮಗೆ ಜೀವಬೆದರಿಕೆ ಇದೆಯೆಂದು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಅವರು ನವೆಂಬರ್ 25 ರಂದು ರಾತ್ರಿ 7 ಗಂಟೆಗೆ ಜಂಗಾಲಹಳ್ಳಿ ಬಳಿ ವರ್ತೂರು ಪ್ರಕಾಶ್ ರೊಂದಿಗೆ ತೆರಳುತ್ತಿರುವಾಗ, ರಸ್ತೆಯಲ್ಲಿ ಕಾರು ಅಡ್ಡಗಟ್ಟಿದ 8 ಜನ ದುಷ್ಕರ್ಮಿಗಳು ಗನ್, ಮಚ್ಚು ತೋರಿಸಿ ಅಪಹರಿಸಿದರು. ಬಳಿಕ ಆಂಧ್ರದ ಗಡಿ ಸೇರಿದಂತೆ ಶ್ರೀನಿವಾಸಪುರ, ಮುಳಬಾಗಿಲು ತಾಲೂಕುಗಳ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲೇ ಕೂಡಿ ಹಾಕಿದ್ದರು ಎಂದು ತಿಳಿಸಿದ್ದಾರೆ.
ಇದನ್ನು ಓದಿ: ರಾಜಕೀಯ, ಮಾನಸಿಕ ಒತ್ತಡದಿಂದ ಚನ್ನರಾಯಪಟ್ಟಣ ಪಿಎಸ್ಐ ಕಿರಣ್ ಕುಮಾರ್ ಆತ್ಮಹತ್ಯೆ; ತನಿಖಾ ವರದಿ
ಇನ್ನು ಕಳೆದ ಶುಕ್ರವಾರ ರಾತ್ರಿ ನಾನು ಕಷ್ಟಪಟ್ಟು ತಪ್ಪಿಸಿಕೊಂಡು, ಶ್ರೀನಿವಾಸಪುರಕ್ಕೆ ಬಂದು, ಶನಿವಾರ ಬೆಳಗ್ಗೆ ಕೋಲಾರದ ಚೌಡೇಶ್ವರಿ ಆಸ್ಪತ್ರೆಗೆ ದಾಖಲಾದೆ. ಕೃತ್ಯ ಎಸಗಿದವರು ಕನ್ನಡದಲ್ಲೇ ಮಾತನಾಡುತ್ತಿದ್ದರು. ಕಳೆದ ಒಂದು ತಿಂಗಳಿಂದ ಕಿಡ್ನಾಪ್ ಮಾಡಲು ಹೊಂಚು ಹಾಕಿದ್ದಾಗಿ, ಕಿಡ್ನಾಪರ್ಸ್ ನನ್ನ ಬಳಿ ಮಾತನಾಡುತ್ತಾ ಹೇಳಿದ್ದರು ಎಂದು ಚಾಲಕ ಸುನೀಲ್ ಘಟನೆಯನ್ನು ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ