ದೊಡ್ಡಬಳ್ಳಾಪುರದ ಆಟೋಗಳ ಜಾಡು ಹಿಡಿಯಲು ಪೊಲೀಸರಿಂದ ಯೂನಿಕ್ ಕೋಡ್ ಬಳಕೆ

ಆಟೋ ಪ್ರಯಾಣಿಕರಿಗೆ ಏನಾದರೂ ಸಮಸ್ಯೆ ಎದುರಾದರೆ, ಅಥವಾ ಲಗೇಜ್ ಮರೆತರೆ, ಅಥವಾ ಏನಾದರೂ ಕಳೆದುಕೊಂಡಿದ್ರೆ ಆ ಆಟೋವನ್ನ ತಕ್ಷಣ ಗುರುತು ಹಿಡಿಯಬಹುದು. ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್ಪೆಕ್ಟರ್ ಸೋಮಶೇಖರ್ ಅವರ ಈ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರದ ಇನ್ಸ್​ಪೆಕ್ಟರ್ ಸೋಮಶೇಖರ್

ದೊಡ್ಡಬಳ್ಳಾಪುರದ ಇನ್ಸ್​ಪೆಕ್ಟರ್ ಸೋಮಶೇಖರ್

  • Share this:
ದೊಡ್ಡಬಳ್ಳಾಪುರ: ಹೆಚ್ಚು ಅಪರಾಧ ಪ್ರಕರಣಗಳು, ಕಳವು, ಪ್ರಯಾಣಿಕರು ಲಗೇಜ್ ಕಳೆದುಕೊಳ್ಳೋದು ಸಾಮಾನ್ಯವಾಗಿ ಆಟೋಗಳಲ್ಲೇ. ಒಮ್ಮೆ ಹತ್ತಿ ಹೊರಟ ಆಟೋ ಮತ್ತೆ ಎಲ್ಲಪ್ಪ ಹುಡುಕೋದು ಅನ್ನೋ ಆತಂಕ ಎಲ್ಲರಲ್ಲೂ ಇರುತ್ತದೆ. ಆಟೋ ಒಂದ್ಸಾರಿ ಹೊರಟ ಮೇಲೆ ನಿಲ್ಲಿಸದೇ ಇದ್ದರೆ ಅವರನ್ನ ಸಂಪರ್ಕಿಸಲು ಬಹುತೇಕ ಬಾರಿ ಸಾಧ್ಯವೇ ಆಗುವುದಿಲ್ಲ. ಆ ಆಟೋ ಪತ್ತೆಗೆ ಹರಸಾಹಸ ಪಡಬೇಕು. ಆಟೋರಿಕ್ಷಾದ ನೊಂದಣಿ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಲು ಬಹುತೇಕ ಮಂದಿಗೆ ಸಾಧ್ಯವಾಗುವುದಿಲ್ಲ. ಆದ್ರೆ ಇನ್ನುಂದೆ ಹಾಗೆ ಆಗಿಲ್ಲ. ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್​ಪೆಕ್ಟರ್ ಸೋಮಶೇಖರ್ ಅವರು ವಿನೂತನ ಪ್ರಯೋಗ ಮಾಡಿದ್ದು, ಪಟ್ಟಣದ ಎಲ್ಲಾ ಆಟೋಗಳಿಗೆ ಯೂನಿಕ್ ನಂಬರ್ ನೀಡಿದ್ದಾರೆ. ಆಟೋಗಳಲ್ಲಿ ಚಾಲಕರು ಮತ್ತು ಆಟೋ ಮಾಲೀಕರ ವಿವರ ಪ್ರಯಾಣಿಕರಿಗೆ ಕಾಣಿಸುವ ಹಾಗೆ ಅಂಟಿಸುವ ಪ್ರಯತ್ನಕ್ಕಿಂತ ಇದು ಸುಲಭ ಮತ್ತು ಜನರಿಗೆ ಅನುಕೂಲವಾಗುವ ವಿನೂತನ ಪ್ರಯತ್ನ ಇದಾಗಿದೆ.

ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಸುಮಾರು 1,500 ಆಟೋಗಳು ಚಾಲನೆಯಲ್ಲಿ ಇದ್ದು ಗುರುತಿಸುವುದೇ ದೊಡ್ಡ ತಲೆ ನೋವಾಗಿತ್ತು. ಅದಕ್ಕೊಂದು ಸುಲಭ ಉಪಾಯ ಮಾಡಿರುವ ಸೋಮಶೇಖರ್ ಆಟೋ ಹಿಂಭಾಗ ಮತ್ತು ಮುಂಭಾಗಗಳಲ್ಲಿ ಯೂನಿಕ್ ಕೋಡ್ ಮಾದರಿಯ ಸ್ಟಿಕರ್ ಅಂಟಿಸಿದ್ದು ಪ್ರತ್ಯೇಕ ನಂಬರ್ ನೀಡಲಾಗಿದೆ. ಈ ನಂಬರ್ ಪಡೆದ ಆಟೋದ ಚಾಲಕ ಮತ್ತು ಮಾಲೀಕನ ವಿವರಗಳೂ ಪೊಲೀಸ್ ಠಾಣೆಯಲ್ಲಿ ನೊಂದಣಿ ಮಾಡುವ ಮೂಲಕ ಆಟೋ ಬಗ್ಗೆ ಸಂಪೂರ್ಣ ಮಾಹಿತಿ ಇಡಲಾಗುತ್ತೆ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದ 57 ಅನಧಿಕೃತ ಬಡಾವಣೆಗಳ ತೆರವಿಗೆ ನೋಟೀಸ್; ಕಾರ್ನರ್ ನಿವೇಶನಗಳ ಹರಾಜು

"ಡಿಬಿಪಿಟಿ" ಸಾಮಾನ್ಯವಾಗಿದ್ದು ಅದರ ಜೊತೆ 1, 2, 3 ರೀತಿ ನಂಬರ್ ನೀಡಿ ಆಟೋ ಸಂಪೂರ್ಣ ಜಾತಕ ಭದ್ರಪಡಿಸಲಾಗುತ್ತೆ, ಒಳ್ಳೆಯದು-ಕೆಟ್ಟದ್ದು ಯಾವುದಕ್ಕಾದರೂ ಈ ನಂಬರ್ ಸಹಾಯಕ್ಕೆ ಬರುತ್ತದೆ. ಆಟೋ ನಂಬರ್ ಜ್ಞಾಪಕ ಇದ್ರೆ ಸಾಕು ಒಳ್ಳೆಯವರನ್ನೂ ನಮ್ಮ ಜನ ಗುರುತಿಸುತ್ತಾರೆ. ಮತ್ತೆ ಮತ್ತೆ ಅವರನ್ನೆ ಕರೆಯಲೂಬಹುದು. ಅಪರಾದ, ಸಾರ್ವಜನಿಕರಿಗೆ ತೊಂದರೆ, ಕಿರಿಕಿರಿ ಮಾಡಿದರೂ ಇದನ್ನ ಸಹಾಯಕ್ಕೆ ಬಳಸಬಹುದು. ಆಟೋ ಸಂಪೂರ್ಣ ನಂಬರ್ ನೆನಪಿನಲ್ಲಿ ಇಡಲು ಕಷ್ಟ. ಹಾಗಾಗಿ ಈ ವಿನೂತನ ಪ್ರಯತ್ನ ಮಾಡಲಾಗಿದೆ ಎಂದು ಇನ್ಸ್​ಪೆಕ್ಟರ್ ಸೋಮಶೇಖರ್ ನ್ಯೂಸ್18 ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಇನ್ಸ್​ಪೆಕ್ಟರ್ ಸೋಮಶೇಖರ್ ಅವರ ಈ ಐಡಿಯಾಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪ್ರಯೋಗ ಉಪಯೋಗಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
First published: