ದೊಡ್ಡಬಳ್ಳಾಪುರದಲ್ಲಿ ಅಕ್ರಮ ಲೇಔಟ್ ತೆರವು ಕಾರ್ಯಾಚರಣೆ; ಇನ್ನೂ 111 ಬಡಾವಣೆಗಳಿಗೆ ನೋಟೀಸ್

ಅನಧಿಕೃತವಾಗಿ ಬಡಾವಣೆ ನಿರ್ಮಿಸಿ ಅಮಾಯಕ ಜನರಿಗೆ ವಂಚನೆ ಮಾಡುತ್ತಿದ್ದವರ ವಿರುದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸಮರ ಸಾರಿದೆ. ಅದರಂತೆ ದೊಡ್ಡಬಳ್ಳಾಪುರದಲ್ಲಿ 17 ಎಕರೆಯಷ್ಟು ಜಾಗವನ್ನು ತೆರವುಗೊಳಿಸಲಾಯಿತು.

ದೊಡ್ಡಬಳ್ಳಾಪುರದಲ್ಲಿ ಅಕ್ರಮ ಲೇಔಟ್​ಗಳನ್ನ ತೆರವುಗೊಳಿಸುತ್ತಿರುವುದು

ದೊಡ್ಡಬಳ್ಳಾಪುರದಲ್ಲಿ ಅಕ್ರಮ ಲೇಔಟ್​ಗಳನ್ನ ತೆರವುಗೊಳಿಸುತ್ತಿರುವುದು

  • Share this:
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕಂದಾಯ ಇಲಾಖೆಯ ಪರವಾನಿಗೆ ಇಲ್ಲದೆ ಅಕ್ರಮವಾಗಿ ನಿರ್ಮಿಸಿದ್ದ ಲೇಔಟ್​ಗಳನ್ನ ದೊಡ್ಡಬಳ್ಳಾಪುರ ತಹಶಿಲ್ದಾರ್ ಶಿವರಾಜ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ತಾಲೂಕಿನ ವಿವಿಧೆಡೆ ನಿರ್ಮಾಣವಾಗಿದ್ದ 17 ಎಕರೆ 11ಗುಂಟೆ ಜಾಗವನ್ನು ಜೆ.ಸಿ.ಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಆದೇಶದಂತೆ ದೊಡ್ಡಬಳ್ಳಾಪುರ ತಹಶಿಲ್ದಾರ್ ಟಿ ಶಿವರಾಜ್ ನೇತೃತ್ವದಲ್ಲಿ ಅನಧಿಕೃತ ಬಡಾವಣೆಗಳ ತೆರವು ಕಾರ್ಯ ನಡೆದಿದೆ. ಅನಧಿಕೃತ ಬಡಾವಣೆಗಳ ತೆರವು ಭೂ ಪರಿವರ್ತನೆ ಆಗದೇ ಇರುವ ಮತ್ತು ಯೋಜನಾ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ನಿರ್ಮಾಣವಾಗಿದ್ದ ಅನಧಿಕೃತ ಬಡಾವಣೆಗಳ ವಿರುದ್ಧ ಮೊದಲ ಹಂತದ ತೆರವು ಕಾರ್ಯಾಚರಣೆ ಮಾಡಲಾಯಿತು.

ಕಂದಾಯ ಜಮೀನಿನಲ್ಲಿ ಯಾವುದೇ ಪುರ್ವಾನುಮತಿ ಇಲ್ಲದೆ, ನಿಯಮ ಪಾಲಿಸದೆ ಬಡಾವಣೆ ನಿರ್ಮಿಸಿ ಅಮಾಯಕ ಜನರಿಗೆ ವಂಚನೆ ಮಾಡುತ್ತಿದ್ದವರ ವಿರುದ್ದ ಜಿಲ್ಲಾಡಳಿತ ಸಮರ ಸಾರಿದೆ. ಕಂದಾಯ ಇಲಾಖೆ ಅಧಿನಿಯಮ 96 ರ ಪ್ರಕಾರ ಕೃಷಿ ಬಳಕೆಗೆ ಇರುವ ಜಮೀನಿನಲ್ಲಿ ಕೃಷಿಯೇತರ ಚಟುವಟಿಕೆಗಳನ್ನ ನಡೆಸುವ ಹಾಗೆ ಇಲ್ಲ. ಅದಾಗಿ ಸರ್ಕಾರದ ನಿಯಮಗಳನ್ನು ಪಾಲಿಸದೆ ಇದ್ದಲ್ಲಿ ಅಂತಹಾ ಜಾಗಗಳನ್ನ ಸರ್ಕಾರ ವಶಕ್ಕೆ ಪಡೆದು ಪಹಣಿಯಲ್ಲಿ ಸರ್ಕಾರ ಎಂದೂ, ಜಮೀನನ್ನು ಸರ್ಕಾರದ ವಶಕ್ಕೂ ಪಡೆಯಬಹುದಾಗಿದೆ.

ಇದನ್ನೂ ಓದಿ: ಎಂಬಿ ಪಾಟೀಲ, ಕಟೀಲ್ ವಾಕ್ಸಮರ; ಬಿಜೆಪಿ ರಾಜ್ಯಾಧ್ಯಕ್ಷರ ಹೆಸರೇಳದೆಯೇ ಸಾಧನೆ ನೆನಪಿಸಿ ತಿರುಗೇಟು ಕೊಟ್ಟ ಪಾಟೀಲ

ಇದೇ ವರ್ಷದ ಜನವರಿ 23 ನೇ ತಾರೀಖು ನ್ಯೂಸ್18 ನಲ್ಲಿ ಕೃಷಿ ಭೂಮಿ ಕೃಷಿಯೇತರ ಬಳಕೆ ಬಗ್ಗೆ ವಿಸ್ತೃತ ವರದಿ ಬಿತ್ತರಿಸಿದ್ದ ಬೆನ್ನಲ್ಲೇ ಕಂದಾಯ ಸಚಿವ‌ ಆರ್. ಅಶೊಕ್ ಕಂದಾಯ ನಿವೇಶನ ನೊಂದಣೆ ಮತ್ತು ಕಾವೇರಿ ತಂತ್ರಾಂಶ ಸ್ಥಗಿತಗೊಳಿಸಿ ಆದೇಶ ಮಾಡಿದ್ದರು. ನ್ಯೂಸ್18 ವರದಿ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಇದೀಗ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಂದಾಯ ಜಮೀನು, ಕೃಷಿ ಜಮೀನಿನು ಕೃಷಿಯೇತರ ಬಳಕೆ ಬಗ್ಗೆ ಸಮರ ಸಾರಿದ್ದು ಜಿಲ್ಲಾಡಳಿತ ಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ಅಕ್ರಮ ಬಡಾವಣೆಗಳ ವಿರುದ್ದ ಕ್ರಮಕ್ಕೆ ಮುಂದಾಗಿದೆ. ಅದಾಗಿ ಕಂದಾಯ ನಿಯಮ 96 ಪ್ರಕಾರ ಮದುರೆ ಹೋಬಳಿಯ ಸುತ್ತಮುತ್ತ ಕೃಷಿ ಭೂಮಿಯಲ್ಲಿ ಕಳೆದ ಕೆಲ ವರ್ಷಗಳಿಂದ ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡಲಾಗಿತ್ತು. ಮೊದಲು ಕೆರೆಯ ಸ್ವಲ್ಪ ಭಾಗ ಅಕ್ರಮವಾಗಿ ಬಳಸಿಕೊಳ್ಳಲಾಗಿತ್ತು. ಮದುರೆ ಹೋಬಳಿಯ ಹೊನ್ನಾವರ ಸರ್ವೆ ನಂ. 73 ರಲ್ಲಿ 3 ಎಕರೆ, ನಾಗೇನಹಳ್ಳಿ ಗ್ರಾಮದ ಸರ್ವೆ ನಂ 54/9 ರ 9 ಎಕರೆ 20 ಗುಂಟೆ, ಕೆಂಜಿಗದಹಳ್ಳಿಯ ಸರ್ವೆ ನಂ 69/1 ರ 1 ಎಕರೆ 30 ಗುಂಟೆ ಮತ್ತು 69/2 ರ 3 ಎಕರೆ ಸೇರಿದಂತೆ ಒಟ್ಟು 17 ಎಕರೆ 11 ಗುಂಟೆ ತೆರವು ಮಾಡಲಾಯಿತು. ಸ್ಥಳದಲ್ಲಿ ತಹಶಿಲ್ದಾರ್ ಟಿ. ಶಿವರಾಜ್, ರಾಜಸ್ವ ನಿರೀಕ್ಷಕ ಮುನಿರಾಜು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿದ್ದರು.

ಇದನ್ನೂ ಓದಿ: ದಸರಾ ಜಂಬೂ ಸವಾರಿಗೆ 300 ಮಂದಿಗೆ ಮಾತ್ರ ಅವಕಾಶ; ತಾಂತ್ರಿಕ ಸಲಹಾ ಸಮಿತಿ ವರದಿ ಸಲ್ಲಿಕೆ

ನ್ಯೂಸ್18 ಜೊತೆ ಮಾತನಾಡಿದ ದೊಡ್ಡಬಳ್ಳಾಪುರ ತಹಶಿಲ್ದಾರ್ ಟಿ. ಶಿವರಾಜ್, ಸದನ ಸಮಿತಿಯ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಭೂ ಪರಿವರ್ತನೆ ಮಾಡಿಸದೆ ಅಕ್ರಮವಾಗಿ ಕೃಷಿ ಜಮೀನುಗಳಲ್ಲಿ ನಿರ್ಮಿಸಿರುವ ಬಡಾವಣೆಗಳು ಸೇರಿದಂತೆ ಕೃಷಿ ಉದ್ದೇಶಿತ ಜಾಗಗಳಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಆಗುತ್ತಿರುವ ಜಮೀನಿನಲ್ಲಿ ಏನೇ ಇದ್ದರೂ ತೆರವುಗೊಳಿಸಲಾಗುವುದು. ತಾಲೂಕಿನಲ್ಲಿ 111 ಲೇಔಟ್​ಗಳಿಗೆ ನೋಟೀಸ್ ನೀಡಲಾಗಿದೆ. ಮೊದಲನೆ ಹಂತವಾಗಿ ಮದುರೆಯಲ್ಲಿ ತೆರವು ಕಾರ್ಯ ಪ್ರಾರಂಭ ಮಾಡಿದ್ದೇವೆ. ತೆರವು ಕಾರ್ಯಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು. ಸರ್ಕಾರದ ಉದ್ದೇಶಗಳು, ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಬಡವರಿಗೆ ಜೀವನಾಧಾರವಾದ ಕೃಷಿ ಭೂಮಿಯನ್ನು ಬಡಾವಣೆ ಸೇರಿದಂತೆ ಕೃಷಿಯೇತರ ಬಳಕೆಗೆ ಪ್ರಚೋದಿಸುವ ಮತ್ತು ಬಳಕೆ ಮಾಡುತ್ತಿರುವವರಿಗೆ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಂಡು ಸರ್ಕಾರದ ಉದ್ದೇಶಗಳನ್ನ ಸಾಕಾರ ಮಾಡಲು ಸದಾ ಬದ್ದ ಎಂದರು.

ವರದಿ: ನವೀನ್ ಕುಮಾರ್
Published by:Vijayasarthy SN
First published: