HOME » NEWS » District » DOCTORS SHOULD HAVE CONCERN ON RURAL PEOPLE SAYS DR ASHWATH NARAYANA SHTV SNVS

ವೈದ್ಯರಿಗೆ ನೈತಿಕತೆ ಇರಲಿ, ಹಳ್ಳಿ ಜನರ ಬಗ್ಗೆ ಕಾಳಜಿಯೂ ಇರಲಿ: ಡಿಸಿಎಂ ಡಾ. ಅಶ್ವಥ್ ನಾರಾಯಣ

ಕೋರಮಂಗಲದ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಘಟಿಕೋತ್ಸವದಲ್ಲಿ ಮಾತನಾಡುತ್ತಿದ್ದ ಡಿಸಿಎಂ ಅಶ್ವಥ ನಾರಾಯಣ, ವೈದ್ಯರು ಹಣದ ಹಿಂದೆ ಬೀಳುವ ಬದಲು ಮನುಷ್ಯತ್ವ, ಸೇವೆಗೆ ಹೆಚ್ಚು ಒತ್ತುಕೊಡಬೇಕು ಎಂದು ಕರೆ ನೀಡಿದ್ದಾರೆ.

news18-kannada
Updated:March 11, 2021, 1:13 PM IST
ವೈದ್ಯರಿಗೆ ನೈತಿಕತೆ ಇರಲಿ, ಹಳ್ಳಿ ಜನರ ಬಗ್ಗೆ ಕಾಳಜಿಯೂ ಇರಲಿ: ಡಿಸಿಎಂ ಡಾ. ಅಶ್ವಥ್ ನಾರಾಯಣ
ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಘಟಿಕೋತ್ಸವದಲ್ಲಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ
  • Share this:
ಬೆಂಗಳೂರು: ವೈದ್ಯಕೀಯ ಕ್ಷೇತ್ರಕ್ಕೆ ಬಂದ ಮೇಲೆ ನೈತಿಕತೆಯನ್ನು ರೂಢಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ನೂತನ ವೈದ್ಯರಿಗೆ ಕಿವಿಮಾತು ಹೇಳಿದರು. ಕೋರಮಂಗಲದ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಘಟಿಕೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಕ್ಷೇತ್ರಕ್ಕೆ ಬಂದ ಮೇಲೆ ಲಾಭದ ಬಗ್ಗೆ ಯೋಚನೆ ಮಾಡಬಾರದು. ಲಾಭದ ಹಿಂದೆ ಹೋದರೆ ಯಾಂತ್ರಿಕರಾಗಿಬಿಡುತ್ತೇವೆ. ಮನುಷ್ಯತ್ವ ಬಹಳ ಪ್ರಮುಖವಾದುದು. ಸೇವೆಯ ಬಗ್ಗೆ ಚಿಂತಿಸಬೇಕು ಎಂದು ಕರೆ ನೀಡಿದರು. 

ಕೊರೋನ ಬಿಕ್ಕಟ್ಟು ಬಂದ ಮೇಲೆ ವೈದ್ಯರಿಗೆ ಸಾಕಷ್ಟು ಸವಾಲುಗಳು ಇವೆ. ಅವುಗಳನ್ನು ಸಮರ್ಥವಾಗಿ ಎದುರಿಸಬೇಕು. ನಾನು ಒಬ್ಬ ವೈದ್ಯನಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದ ಅವರು, ಹಣ ಮಾಡಲು ಬೇರೆ ಅನೇಕ ಕ್ಷೇತ್ರಗಳಿವೆ. ವೈದ್ಯರಿಗೆ ನೈತಿಕತೆ ಇರಲಿ, ಹಳ್ಳಿ ಜನರ ಬಗ್ಗೆ ಕಾಳಜಿಯೂ ಇರಲಿ ಎಂದರು.

ಗ್ರಾಮಗಳಿಗೆ ಹೋಗಿ: ವೈದ್ಯರಾದ ಮೇಲೆ ಕೇವಲ ನಗರಕ್ಕೆ ಸೀಮಿತ ಆದರೆ ಉಪಯೋಗವಿಲ್ಲ. ಮುಖ್ಯವಾಗಿ ಹಳ್ಳಿ ಜನರಿಗೆ ನಿಮ್ಮ ಸೇವೆ ಸಿಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಸೇವೆ ಸಿಗಬೇಕು. ಇದನ್ನು ಗಮನದಲ್ಲಿ ಇಟ್ಟುಕೊಂಡು ಸೇಂಟ್ ಜಾನ್ಸ್ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಿದೆ. ಇದು ಅನುಕರಣೀಯವಾದ ಕೆಲಸ ಎಂದು ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Covid Vaccination - ಮುಂದಿನ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಸಾಧ್ಯತೆ

ಉನ್ನತ ಶಿಕ್ಷಣದಲ್ಲಿ ಸುಧಾರಣೆ: ಸದ್ಯಕ್ಕೆ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಗುರುತರ ಸುಧಾರಣೆಗಳನ್ನು ತರುತ್ತಿದೆ. ಉತ್ತಮ ಕಲಿಕೆ ಮತ್ತು ಉತ್ತಮ ಬೋಧನೆ ಗುರಿಗಳನ್ನು ಇಟ್ಟುಕೊಂಡು ಹೆಜ್ಜೆಗಳನ್ನು ಇಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಇದೇ ವರ್ಷ ಜಾರಿ ಆಗುತ್ತಿದೆ. ಹೀಗಾಗಿ ಬಹು ವಿಷಯಗಳ ಆಯ್ಕೆ ಹಾಗೂ ಸಂಶೋಧನೆಗೆ ಹೆಚ್ಚು ಒತ್ತು ಕೊಡುವ ಕೆಲಸ ಮುಂದಿನ ದಿನಗಳಲ್ಲಿ ಅಗುತ್ತದೆ ಎಂದು ಡಾ. ಕೆ ಅಶ್ವಥ್ ನಾರಾಯಣ ಹೇಳಿದರು.

ಎಂಬಿಬಿಎಸ್, ಸ್ನಾತಕೋತ್ತರ ವೈದ್ಯಕೀಯ, ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಡಿಸಿಎಂ ಅವರು ಪದವಿ ಪ್ರದಾನ ಮಾಡಿದರು. ಅತ್ಯುತ್ತಮ ವಿದ್ಯಾರ್ಥಿ ಹಾಗೂ ಬೋಧಕ ಸಿಬ್ಬಂದಿಗೂ ಸನ್ಮಾನ‌ ಮಾಡಲಾಯಿತು. ಸೇಂಟ್ ಜಾನ್ಸ್ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಬೆಂಗಳೂರಿನ ಶೈಕ್ಷಣಿಕ ಘನತೆಯನ್ನು ಹೆಚ್ಚಿಸಿದೆ. ಇಂತಹ ಸಂಸ್ಥೆಗಳು ಇನ್ನು ಹೆಚ್ಚು ಬೇಕಿವೆ.‌ ಸ್ವಾತಂತ್ರ್ಯ ಪೂರ್ವದಿಂದಲೂ ಈ ಸಂಸ್ಥೆಗಳು ಶಿಕ್ಷಣಕ್ಕೆ ಕೊಡುಗೆ ನೀಡಿವೆ. ಸರಕಾರ ಈ ರೀತಿಯ ಸಂಸ್ಥೆಗಳ ಜತೆ ಕೆಲಸ ಮಾಡಲು ಯಾವಾಗಲೂ ಸಿದ್ಧವಿದೆ ಎಂದು ಉಪ ಮುಖ್ಯಮಂತ್ರಿ ನುಡಿದರು.

ಕಾರ್ಯಕ್ರಮದಲ್ಲಿ ರೆವರೆಂಡ್ ಆರ್ಚ್ ಬಿಷಪ್ ಡಾ.ಜಾರ್ಜ್, ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ಡಾ. ಪಾಲ್, ಸಂಸ್ಥೆಯ ಡೀನ್ ಡಾ. ಡಿಸೋಜ ಮುಂತಾದವರು ಉಪಸ್ಥಿತರಿದ್ದರು.ವರದಿ: ಶರಣು ಹಂಪಿ
Published by: Vijayasarthy SN
First published: March 11, 2021, 1:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories