ಶಿವಮೊಗ್ಗ(ಜೂನ್ 22): ಬಾಡಿಗೆ ಮನೆಯಲ್ಲಿ ಕ್ವಾರಂಟೈನ್ನಲ್ಲಿ ಇದ್ದ ವೈದ್ಯ ಮತ್ತು ಟೆಕ್ನಿಷಿಯನ್ ಅವರನ್ನ ಖಾಲಿ ಮಾಡಿಸಿದ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮನೆ ಮಾಲೀಕರ ಒತ್ತಾಯಕ್ಕೆ ಮಣಿದು, ಯಾರಿಗೂ ಹೇಳದೇ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ ವೈದ್ಯ ಮತ್ತು ಲ್ಯಾಬ್ ಟೆಕ್ನಿಷಿಯನ್.
ಕೊರೋನಾ ಬಂದ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಕಾರಣಕ್ಕೆ ತೀರ್ಥಹಳ್ಳಿಯ ವೈದ್ಯ ಮತ್ತು ಲ್ಯಾಬ್ ಟೆಕ್ನಿಷಿಯನ್ ಇಬ್ಬರೂ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದರು. ತೀರ್ಥಹಳ್ಳಿಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಡಾ. ಗಣೇಶ್ ನಾಯಕ್ ಅವರು ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿದ್ದರು. ಮೂರು ದಿನಗಳ ನಂತರ ಆ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಪತ್ತೆಯಾಗಿದೆ. ಹೀಗಾಗಿ ವೈದ್ಯರು ತಮ್ಮ ಕ್ಲಿನಿಕ್ ಬಂದ್ ಮಾಡಿ ಹೋಮ್ ಕ್ವಾರಂಟೈನ್ಗೆ ಒಳಗಾಗಲು ನಿರ್ಧರಿಸಿದ್ದರು.
ತಮ್ಮ ಮನೆಯಲ್ಲಿ ಮಗು ಮತ್ತು ವಯಸ್ಸಾದ ತಂದೆ ಇದ್ದ ಕಾರಣಕ್ಕೆ ವೈದ್ಯ ಗಣೇಶ್ ನಾಯಕ್ ಅವರು ಲ್ಯಾಬ್ ಟೆಕ್ನಿಶಿಯನ್ ಸುಖೇಶ್ ಅವರ ಬಾಡಿಗೆ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು.
ಆದರೆ, ಕೊರೋನಾ ಪಾಸಿಟಿವ್ ಬಂದಿರುವ ವ್ಯಕ್ತಿಯ ಸಂಪರ್ಕಕ್ಕೆ ವೈದ್ಯರು ಬಂದಿದ್ದರಿಂದ ಅವರು ತಮ್ಮ ಮನೆಯಲ್ಲಿರುವುದಕ್ಕೆ ಆ ಮನೆಯ ಮಾಲೀಕ ಧರ್ಮಯ್ಯ ಗಲಾಟೆ ಮಾಡಿದ್ದಾರೆ. ಇದರಿಂದ ವೈದ್ಯ ಹಾಗೂ ಲ್ಯಾಬ್ ಟೆಕ್ನೀಶಿಯನ್ ರಾತ್ರೋರಾತ್ರಿ ಮನೆ ಖಾಲಿ ಮಾಡಿದರೆನ್ನಲಾಗಿದೆ.
ಇದನ್ನೂ ಓದಿ: ಕೆರೆಗೆ ಕಾರು ಉರುಳಿದರೂ ಪವಾಡ ಸದೃಶವಾಗಿ ಯುವತಿ ಪಾರು ; ಜೀವದಾನ ಮಾಡಿದ ಬಾಲಕಿಯ ವೀಡಿಯೋ ವೈರಲ್
ದಿನ ಬೆಳಗಾದರೆ ನೂರಾರು ಜನರ ಬದುಕು ಉಳಿಸುವ ಕಾಯಕದಲ್ಲಿರುವ ಡಾ. ಗಣೇಶ್ ನಾಯಕ್ ಅವರಿಗೆ ಮಾಲೀಕರು ಮನೆ ಖಾಲಿ ಮಾಡುವಂತೆ ಹೇಳಿದ್ದು ಬೇಸರ ತಂದಿದೆ. ಸ್ವಯಂ ಕ್ವಾರಂಟೈನ್ಗೆ ಒಳಗಾಗಿ, ತಾಲೂಕು ಆಡಳಿತ, ಆರೋಗ್ಯ ಇಲಾಖೆ ನಿರ್ದೇಶನ ಪಾಲಿಸುತ್ತಿದ್ದೇವೆ. ಆದರೂ ನಮ್ಮನ್ನು ಅವಮಾನ ಮಾಡಲಾಗಿದೆ ಎಂದು ನೊಂದ ವೈದ್ಯರು ತಾಲೂಕು ಆಡಳಿತದ ಮೊರೆಹೋಗಿದ್ದಾರೆ.
ತೀರ್ಥಹಳ್ಳಿ ತಾಲೂಕು ವೈದ್ಯರ ಸಂಘದಿಂದ ತೀರ್ಥಹಳ್ಳಿ ತಹಶೀಲ್ದಾರ್ ಡಾ. ಶ್ರೀಪಾದ ಅವರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಮನೆ ಮಾಲೀಕನ ಮೇಲೆ ಕೊರೋನಾ ನಿಯಮದನ್ವಯ ಕ್ರಮ ತೆಗೆದುಕೊಳ್ಳುವಂತೆ ವಿನಂತಿ ಮಾಡಿಕೊಂಡಿದ್ದಾರೆ.
ವೈದ್ಯರು ಈಗ ಸದ್ಯ ಬೇರೆ ಮನೆಯೊಂದರಲ್ಲಿ ಕ್ವಾರಂಟೈನ್ ಆಗಿದ್ದಾರೆ. ಕೊರೋನಾ ವಾರಿಯರ್ಸ್ಗೆ, ಅದರಲ್ಲೂ ವೈದ್ಯಕೀಯ ಸಿಬ್ಬಂದಿಗೆ ಮನೆ ಮಾಲೀಕರು ಕಿರುಕುಳ ಕೊಟ್ಟರೆ ಬಿಗಿ ಕಾನೂನು ಕ್ರಮ ಜರುಗಿಸಲು ಅವಕಾಶ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ