ಕೊಲೆ ಮಾಡಿಲ್ಲ, ರೇಪ್ ಮಾಡಿಲ್ಲ, ಆಸ್ತಿ ಹೊಡೆದಿಲ್ಲ: ಹಾಸನದಲ್ಲಿ ಗರಂ ಆದ ಡಿಕೆ ಸುರೇಶ್

DK Suresh- ಕಾಂಗ್ರೆಸ್ ಪಕ್ಷವನ್ನ ಮುಗಿಸಲು ರೇವಣ್ಣ ಅಲ್ಲ, ಯಾರಿಂದಲೂ ಆಗಲ್ಲ. ನಾವು ಯಾರನ್ನೂ ಕೊಲೆ ಮಾಡಿಲ್ಲ, ರೇಪ್ ಮಾಡಿಲ್ಲ, ಯಾರದ್ದು ಆಸ್ತಿ ಹೊಡೆದಿಲ್ಲ ಎಂದು ಹೇಳಿರುವ ಡಿ.ಕೆ. ಸುರೇಶ್, ರಾಜ್ಯದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಡಿಕೆ ಸುರೇಶ್

ಡಿಕೆ ಸುರೇಶ್

  • Share this:
ಹಾಸನ: ಮುಖ್ಯಮಂತ್ರಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮೂರನೇ ಮುಖ್ಯಮಂತ್ರಿಗಳು ಬರೊ ಸಾಧ್ಯತೆ ಜಾಸ್ತಿ ಇದೆ ಅಂತ ಈಶ್ವರಪ್ಪ, ಯತ್ನಾಳ್ ಅವರು ಈಗಾಗಲೇ ಹೇಳಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ವ್ಯಂಗ್ಯ ಮಾಡಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್ ಬೆಂಬಲಿತ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಭೆ ನಂತರ ಮಾತನಾಡಿದ ಅವರು, ಏನೇನು ಆಗುತ್ತೆ ಅಂಥ ಹೇಳಲು ಸಾಧ್ಯವಿಲ್ಲ, ಬಿಟ್ ಕಾಯಿನ್, ಗಿಟ್ ಕಾಯಿನ್ ಏನೇನೋ ನಡೀತಿದೆ‌‌. ಬಿಟ್ ಕಾಯಿನ್ ಅಂಥಾ ಒಬ್ಬರು ಹೇಳ್ತಾರೆ, ಇನ್ನೊಬ್ಬರು ಇನ್ಯಾವುದೋ ಅಂಥಾ ಹೇಳ್ತಿದ್ದಾರೆ. ಒಟ್ಟಾರೆ ಬದಲಾವಣೆ ಗಾಳಿ ಬೀಸುತ್ತಿದೆ ಎಂದರು.

ಬಿಟ್ ಕಾಯಿನ್ ಹಗರಣ ಕಾಂಗ್ರೆಸ್ ಅಧಿಕಾರದ ಕಾಲದಲ್ಲಿ ಆಗಿದ್ದರೆ ಸಾಬೀತು ಮಾಡಲಿ. ಇಂಟರ್ ಪೋಲ್ ನಿಂದ ಹಿಡಿದು ಪ್ರತಿಯೊಂದು ಕೂಡ ಕೇಂದ್ರ ಸರ್ಕಾರದ ಕೈಯಲ್ಲಿದೆ. ಪ್ರಧಾನಮಂತ್ರಿ, ಗೃಹಸಚಿವರು, ನಿರ್ಮಲಾ ಸಿತಾರಾಮನ್ ಬಳಿ‌ ಎಲ್ಲಾ ಇಲಾಖೆಗಳು ಇವೆ. ಎಲ್ಲವನ್ನೂ ಸತ್ಯಶೋಧನೆ ಸಮಿತಿಗೆ ಒಪ್ಪಿಸಿ ತನಿಖೆ ಮಾಡಲಿ. ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನವರು ಇದ್ದರೆ ಆ ಶಿಕ್ಷೆಯನ್ನು ಅನುಭವಿಸಲು ಕಾಂಗ್ರೆಸ್ ಪಕ್ಷ ಸಿದ್ದವಿದೆ. ಬಿಟ್ ಕಾಯಿನ್ ಲಾಭ ಯಾರು ಉಂಡವರು ಅದು ತಿಳಿಯಲಿ ಎಂದು ಅಭಿಪ್ರಾಯಪಟ್ಟರು.

ಜೈಲಲ್ಲಿ ಇದ್ದಾಗ ಬಿಟ್ ಕಾಯಿನ್ ಮೂವ್ಮೆಂಟ್ ಆಗಿದೆ ಅಂಥಾ ಪೊಲೀಸರೇ ಹೇಳಿದ್ದಾರೆ. ನ್ಯಾಯಾಲಯಕ್ಕೆ ಪೊಲೀಸರು ಕೊಟ್ಟಿರುವ ವರದಿಯಲ್ಲಿ ಬಿಟ್ ಕಾಯಿನ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬಿಟ್ ಕಾಯಿನ್ ಎಲ್ಲಿ ಹೋಯ್ತು ಅನ್ನೋದು ಕೂಡ ಪೊಲೀಸರ ವರದಿಯಲ್ಲಿದ್ದು, ಆ ಸಂದರ್ಭದಲ್ಲಿ ಗೃಹ ಸಚಿವರಾಗಿದ್ದವರು ಈಗಿನ ಮುಖ್ಯಮಂತ್ರಿಗಳು. ಎಲ್ಲಾ ವಿಚಾರಗಳು ಕೂಡ ಚರ್ಚೆಯಾಗಬೇಕಿದೆ. ಕೇಂದ್ರ ಸಚಿವರನ್ನು ಈ ವಿಚಾರವಾಗಿ ಪ್ರಶ್ನೆ‌ ಮಾಡಿದ್ರೆ ಏನೂ ಗೊತ್ತಿಲ್ಲ ಅಂಥಾ ಹೇಳುತ್ತಿದ್ದಾರೆ. ಇದರಲ್ಲಿ ಎಲ್ಲರೂ ಕೂಡ ಶಾಮೀಲೂ ಆಗಿರುವುದು ಕಂಡು ಬರುತ್ತಿದೆ ಎಂದು ಡಿಕೆ ಸುರೇಶ್ ಅನುಮಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಇವತ್ತು ಮೊಟ್ಟೆ ಕೊಡ್ತಾರೆ... ನಾಳೆ ಮಾಂಸಾನೂ ಮಾಡ್ತಾರೆ; ಚನ್ನಬಸವಾನಂದ ಶ್ರೀಗಳ ಕಿಡಿನುಡಿ

ಯಾರನ್ನೂ ಕೊಂದಿಲ್ಲ, ರೇಪ್ ಮಾಡಿಲ್ಲ, ಆಸ್ತಿ ಹೊಡೆದಿಲ್ಲ ಎಂದ ಡಿಕೆ:

ಕಾಂಗ್ರೆಸ್​ನ ಕೆಲ ನಾಯಕರು ಬೇಲ್ ಮೇಲೆ ಇದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ. ಸುರೇಶ್, ಬೇಲ್‌ ಮೇಲೂ ಇರ್ತಿವಿ, ಜೈಲಲ್ಲೂ ಇದ್ದೀವಿ, ನಾವು ಯಾರನ್ನೂ ಕೊಲೆ ಮಾಡಲಿಲ್ಲ, ಯಾರನ್ನೂ ರೇಪ್ ಮಾಡಲಿಲ್ಲ, ಯಾರದ್ದೂ ಆಸ್ತಿ ಹೊಡಿಲಿಲ್ಲ. ಬಿಜೆಪಿಯವರ ದೌರ್ಜನ್ಯ, ಬಿಜೆಪಿಯವರ ಕೇಸ್ ಗಳಿಂದ ರಾತ್ರಿ ಹೊತ್ತು ನಾವು ಯಾರ ಕಾಲು ಹಿಡಿಯಲು ಹೋಗಲ್ಲ. ರಾತ್ರಿ ಕಾಲು ಹಿಡಿಯುವಂತಹ ಪ್ರಮೇಯ ನಮಗೆ ಬಂದಿಲ್ಲ. ಎಲ್ಲದಕ್ಕೂ ಸಿದ್ಧರಾಗಿರುವಂತಹವರು ನಾವು. ಕಾಲು ಹಿಡಿದು ಇನ್ನೊಂದು ಮಾಡಿಕೊಳ್ಳುವಂತಹ ಕೆಲಸ ನಮ್ಮ ಹತ್ರ ಇಲ್ಲಾ. ರಾತ್ರಿ ಹೋಗುವವರು ಇರ್ತಾರೆ. ಬೆಳಿಗ್ಗೆ ಆರು ಗಂಟೆಗೆ ಮನೆಗೆ ಹೋಗಿ ಮನೇಲಿ ಕೂತ್ಕಂಡು ಕೆಲಸ ಮಾಡಿಸಿಕೊಂಡು ಬರುವಂತಹವರು ಇರ್ತಾರೆ. ಯಾರ್ಯಾರು ಅಂಥಾ ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ರೇವಣ್ಣ ಅವರ ಹೆಸರು ಎತ್ತದೆಯೇ ಪರೋಕ್ಷವಾಗಿ ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷ ಮುಗಿಸಲು ರೇವಣ್ಣ, ಅಲ್ಲ ಯಾರಿಂದಲೂ ಆಗಲ್ಲ:

ಕಾಂಗ್ರೆಸ್ ಪಕ್ಷದವರೇ ಕಾಂಗ್ರೆಸ್ ಮುಗಿಸುತ್ತಾರೆ ಎಂಬ ಎಚ್.ಡಿ. ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅನ್ನು ಮುಗಿಸಲಿಕ್ಕೆ ರೇವಣ್ಣ ಅಲ್ಲಾ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಅದರ ಬಗ್ಗೆ ಯಾರೂ ಆತಂಕಪಡುವುದು ಬೇಡ. ಭವಿಷ್ಯದಲ್ಲಿ ‌ಹಾಸನ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಉದ್ಭವವಾಗುತ್ತದೆ. ಹೊಸ ನಾಯಕತ್ವ ಕೊಡುವ ಕೆಲಸ ಆಗುತ್ತದೆ. ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜನ ಬದಲಾವಣೆಯನ್ನ ಬಯಸುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಬೆಂಗಾವಲು ವಾಹನ ಅಪಘಾತ; ಸಿಬ್ಬಂದಿಯೊಬ್ಬರಿಗೆ ತೀವ್ರ ಗಾಯ

ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಇವರೇ ಅವಾಗಾವಾಗ ಹೊಂದಾಣಿಕೆ ಮಾಡ್ಕಳದು. ಎರಡು ರಾಷ್ಟ್ರೀಯ ಪಕ್ಷಗಳು ಏನೇನ್ ಕೆಲಸ ಮಾಡಿದೆ ಅಂತ ನಾನು ಈ ಜಿಲ್ಲೆಯ ಜನರಿಗೆ ಹೇಳ್ಬೇಕಾದದ್ದು ಇಲ್ಲಾ. ರೇವಣ್ಣ ಅವರು ಕೆಲಸ ಮಾಡಿಸಿಕೊಂಡಿದ್ದಾರಲ್ಲಾ ಅವರಿಗೆ ಚೆನ್ನಾಗಿ ಗೊತ್ತಿದೆ. ರಾಜ್ಯದಲ್ಲಿ ಯಾವ್ಯಾವ ಪಕ್ಷಗಳು ಅಧಿಕಾರಕ್ಕೆ ಬಂದಾಗ ಏನೇನ್ ಕೆಲಸ ಮಾಡಿದ್ದಾರೆ ಎಂದು, ಯಾವ್ಯಾವ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ, ಬಡವರ ಪರವಾದದಂತಹ ಏನೇನ್ ಕೆಲಸಗಳು ಆಗಿದೆ ಎಂದು ಎಲ್ಲರಿಗಿಂತ ಚೆನ್ನಾಗಿ ಹಿರಿಯ ನಾಯಕರಾದ ರೇವಣ್ಣ ಅವರಿಗೆ ಗೊತ್ತಿದೆ ಎಂದು ಕುಟುಕಿದರು.

ಸೂರಜ್ ರೇವಣ್ಣ ವಿರುದ್ಧ ವಕೀಲ ದೇವರಾಜೇಗೌಡ ಎಂಬುವವರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಹೋರಾಟ ಮಾಡುವ ಸಮಯವಲ್ಲ‌, ಚುನಾವಣಾ ಅಧಿಕಾರಿ ಅವರ ನಾಮಪತ್ರವನ್ನು ಸಿಂಧುತ್ವ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಸತ್ಯಾಸತ್ಯತೆ ಏನು ಅಂಥಾ ಹೇಳಿ ಚರ್ಚೆ ಮಾಡಬೇಕಿದೆ., ಅದನ್ನು ಅಡ್ವಕೇಟ್ಸ್, ನಮ್ಮ ಪಕ್ಷದ ಮುಖಂಡರುಗಳ‌ ಜೊತೆ ಚರ್ಚೆ ಮಾಡುತ್ತೇವೆ. ಹೈಕೋರ್ಟ್ ನಲ್ಲಿ ಏನು ಪ್ರಶ್ನೆ ಎತ್ತಿದ್ದಾರೆ ಅದರ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ವರದಿ: ಶಶಿಧರ್ ಬಿ.ಸಿ.
Published by:Vijayasarthy SN
First published: