• Home
  • »
  • News
  • »
  • district
  • »
  • ರೇಷ್ಮೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಲು ಸರ್ಕಾರಕ್ಕೆ ಡಿಕೆ ಸುರೇಶ್ ಆಗ್ರಹ; ಚೀನಾ ರೇಷ್ಮೆ ಗೂಡು ಆಮದು ನಿಲ್ಲಿಸಲು ಜನರ ಒತ್ತಾಯ

ರೇಷ್ಮೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಲು ಸರ್ಕಾರಕ್ಕೆ ಡಿಕೆ ಸುರೇಶ್ ಆಗ್ರಹ; ಚೀನಾ ರೇಷ್ಮೆ ಗೂಡು ಆಮದು ನಿಲ್ಲಿಸಲು ಜನರ ಒತ್ತಾಯ

ಸಂಸದ ಡಿ.ಕೆ.ಸುರೇಶ್​

ಸಂಸದ ಡಿ.ಕೆ.ಸುರೇಶ್​

ಚೀನಾ ಅ್ಯಪ್ಗಳನ್ನ ಬ್ಯಾನ್ ಮಾಡಿದ ರೀತಿಯಲ್ಲಿ ಚೀನಾದಿಂದ ಬರುವ ರೇಷ್ಮೆ ಗೂಡನ್ನ ಸಂಪೂರ್ಣವಾಗಿ ನಿಷೇಧ ಮಾಡಿದರೆ ರಾಜ್ಯದ ರೈತರಿಗೆ ಅನುಕೂಲವಾಗಲಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

  • Share this:

ರಾಮನಗರ: ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನೇ ನಂಬಿಕೊಂಡು ಅದೆಷ್ಟೋ ಮಂದಿ ರೈತರು ಜೀವನ ಸಾಗಿಸುತ್ತಿದ್ದಾರೆ. ಆದರೆ ಈಗ ಆ ರೈತನಿಗೆ ಸಂಕಷ್ಟ ಎದುರಾಗಿದೆ. ಬೆಂಬಲ ಬೆಲೆ ಸಿಗದೇ ಬೆಲೆ ಕುಸಿತ ಒಂದೆಡೆಯಾದರೆ ಕೊರೋನಾ ಮಹಾಮಾರಿಯಿಂದ ಬಂಡವಾಳದ ಹಣವಾದರೂ ಕೈಗೆ ಸಿಗಲಿ ಎಂದು ಗೋಳಾಡುತ್ತಿದ್ದಾನೆ. ಈ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ತಮ್ಮ ಫೇಸ್ ಬುಕ್ ಅಕೌಂಟ್ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಎಂದಿದ್ದಾರೆ.

ಬೆಲೆ ಕುಸಿತ, ರೋಗಬಾಧೆ, ಕೀಟಗಳ ಕಾಟದಿಂದ ತತ್ತರಿಸಿದ್ದ ರೇಷ್ಮೆ ಬೆಳೆಗಾರರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕೋವಿಡ್-19 ನಿಂದ ಜನರು ತೊಂದರೆ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ರೇಷ್ಮೆ ನಗರಿ ರಾಮನಗರ ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತೊಂದು ಸಂಕಷ್ಟ ಎದುರಿಸುತ್ತಿದ್ದಾರೆ.  ಒಂದು ಕೆ.ಜಿ ರೇಷ್ಮೆ ಬೆಳೆಯಲು ಒಬ್ಬ ರೈತ ಸುಮಾರು 300 ರೂಪಾಯಿ ಖರ್ಚು ಮಾಡುತ್ತಾನೆ. ಆದ್ರೆ, 300 ರೂ ಖರ್ಚು ಮಾಡಿ ಗೂಡನ್ನ ಮಾರುಕಟ್ಟೆಗೆ ಮಾರಾಟಕ್ಕೆ ತೆಗೆದುಕೊಂಡು ಹೋದರೆ, ಕೇವಲ 100-150 ರೂ ವರೆಗಷ್ಟೇ ಸಿಗುತ್ತಿದೆ. ಹೀಗಾಗಿ ರೇಷ್ಮೆ ಬೆಳೆಗಾರರು ಕೃಷಿಯಿಂದಲೇ ವಿಮುಖವಾಗುವಂತಹ ಸಂದಿಗ್ದ ಪರಿಸ್ಥಿತಿ ಎದುರಾಗಿದೆ. ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಮಿಶ್ರತಳಿಯ ಗೂಡು ಪ್ರತಿ ಕೆ.ಜಿ 150 ರೂಗಳಂತೆ ಮಾರಾಟ ನಡೆಯುತ್ತಿದೆ. ದ್ವಿತಿಯ ತಳಿ ಗೂಡು ಸರಾಸರಿ ಪ್ರತಿ ಕೆ.ಜಿಗೆ 230 ರೂಗಳಂತೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚಿನ ಧಾರಣೆ ಕಳೆದ ಒಂದು ದಶಕದ ಅವಧಿಯಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ರೈತರು ಕಂಗೆಟ್ಟಿದ್ದಾರೆ.

ಇದನ್ನೂ ಓದಿ: ಸಭೆಯಲ್ಲಿ ಮಾಸ್ಕ್ ಹಾಕದ ಮಹಿಳಾ ಅಧಿಕಾರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತರಾಟೆ

ಅಂದಹಾಗೇ, ರಾಮನಗರ ಜಿಲ್ಲೆ ಸೇರಿದಂತೆ ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚಾಗಿ ಮಿಶ್ರ ತಳಿಯ ಗೂಡುಗಳನ್ನೇ ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ, ಬೇರೆ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ದ್ವಿತಿಯ ತಳಿ ಗೂಡು ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಕಳೆದ ವರ್ಷ ಮಿಶ್ರ ತಳಿಗೂಡಿಗೆ 350-400 ಹಾಗೂ ದ್ವಿತಿಯ ತಳಿಯಗೂಡಿಗೆ 650 ರೂ ವರೆಗೆ ಮಾರಾಟ ಕಂಡಿತ್ತು. ಆದ್ರೆ, ಈಗ ರೇಷ್ಮೆಗೂಡಿನ ಧಾರಣೆ ಅರ್ಧಕ್ಕೆ ಕುಸಿದಿದೆ. ಗೂಡಿನ ಉತ್ಪಾದನಾ ವೆಚ್ಚವೇ 300 ರೂಪಾಯಿಯಾಗುತ್ತದೆ. ಆದ್ರೆ, ಇದೀಗ ಮಾರುಕಟ್ಟೆಯಲ್ಲಿ 100 ರೂಗೆ ಗೂಡು ಮಾರಾಟವಾಗುತ್ತಿದೆ. ಇದರಿಂದಾಗಿ ರೈತರು ರೇಷ್ಮೆ ಹುಳುಗಳನ್ನ ತಿಪ್ಪೆಗೆ ಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲುತೋಡಿಕೊಳ್ಳುತ್ತಾರೆ.

ಮತ್ತೊಂದೆಡೆ ಚೀನಾ ಅ್ಯಪ್ ಗಳನ್ನ ಬ್ಯಾನ್ ಮಾಡಿದ ರೀತಿಯಲ್ಲಿ ಚೀನಾದಿಂದ ಬರುವ ರೇಷ್ಮೆ ಗೂಡನ್ನ ಸಂಪೂರ್ಣವಾಗಿ ಬ್ಯಾನ್ ಮಾಡಿದರೆ ರಾಜ್ಯದ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಗ್ರಾ.ಪಂ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ ಚುನಾವಣಾ ಆಯೋಗ; ಜಿಲ್ಲಾಡಳಿತಕ್ಕೆ ಸೂಚನೆ

ಇನ್ನು, ಇದೇ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ತಮ್ಮ ಫೇಸ್​ಬುಕ್ ಅಕೌಂಟ್​ನಲ್ಲಿ ರೇಷ್ಮೆ ಬೆಳೆಗಾರರ ಸಂಕಷ್ಟದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೇಷ್ಮೆ ಬೆಳೆಗಾರರು ಹಾಗೂ ಗೂಡಿನ ಬೆಲೆ ನಿಗದಿ ಬಗ್ಗೆ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.ಒಟ್ಟಾರೆ, ಕೊರೋನಾದಿಂದಾಗಿ ರೇಷ್ಮೆ ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆಯೂ ಕೊಟ್ಟಿದ್ದಾರೆ ರೈತರು. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.

ವರದಿ: ಎ.ಟಿ. ವೆಂಕಟೇಶ್

Published by:Vijayasarthy SN
First published: