• Home
  • »
  • News
  • »
  • district
  • »
  • ಡಿಸಿಎಂಗೆ ಪಂಚಾಯತ್ ಗೊತ್ತಿಲ್ಲ, ಕುಮಾರಸ್ವಾಮಿಗೆ ಕಾರ್ಯಕರ್ತರು ಬೇಕಿಲ್ಲ: ಡಿಕೆ ಸುರೇಶ್, ಬಾಲಕೃಷ್ಣ ಕಿಡಿ

ಡಿಸಿಎಂಗೆ ಪಂಚಾಯತ್ ಗೊತ್ತಿಲ್ಲ, ಕುಮಾರಸ್ವಾಮಿಗೆ ಕಾರ್ಯಕರ್ತರು ಬೇಕಿಲ್ಲ: ಡಿಕೆ ಸುರೇಶ್, ಬಾಲಕೃಷ್ಣ ಕಿಡಿ

ಹೆಚ್.ಸಿ. ಬಾಲಕೃಷ್ಣ ಮತ್ತು ಡಿಕೆ ಸುರೇಶ್

ಹೆಚ್.ಸಿ. ಬಾಲಕೃಷ್ಣ ಮತ್ತು ಡಿಕೆ ಸುರೇಶ್

ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರಿಗೆ ಪಂಚಾಯಿತಿ ಅಂದ್ರೆಯೇ ಗೊತ್ತಿಲ್ಲ. ನರೇಗಾ ಯಾರು ತಂದಿದ್ದು ಎಂದೂ ಗೊತ್ತಿಲ್ಲ. ಸುಮ್ಮನೆ ಮಾತನಾಡ್ತಾರೆ. ರಾಮನಗರದಲ್ಲಿ ಒಂದು ವರ್ಷದಿಂದ ಏನು ಕಡಿದು ಕಟ್ಟೆ ಹಾಕಿದ್ದಾರೆ? ಎಂದು ಸಂಸದ ಡಿ.ಕೆ. ಸುರೇಶ್ ಪ್ರಶ್ನಿಸಿದ್ದಾರೆ.

  • Share this:

ರಾಮನಗರ: ಡಿಸಿಎಂ ಡಾ. ಅಶ್ವಥ್ ನಾರಾಯಣ ವಿರುದ್ಧ ಕಾಂಗ್ರೆಸ್ ಮುಖಂಡರಾದ ಸಂಸದ ಡಿ.ಕೆ. ಸುರೇಶ್ ಹಾಗೂ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಗ್ರಾ.ಪಂ ಚುನಾವಣೆಯ ಹಿನ್ನೆಲೆ ರಾಮನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನ ಶಾನುಭೋಗನಹಳ್ಳಿ ಸಮೀಪದ ತೋಟದ ಮನೆಯಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ವಿರುದ್ಧ ಮಾತನಾಡಿದ ಡಿ.ಕೆ. ಸುರೇಶ್, “ಅವನಿಗೆ ಪಂಚಾಯಿತಿ ಅಂದ್ರೆ ಏನು ಅಂತಾ ಗೊತ್ತಿಲ್ಲ, ಗ್ರಾಮ ಸ್ವರಾಜ್ಯ ಅಂದರೆ ಗೊತ್ತಿದೆಯೋ ಇಲ್ಲವೋ. ಅದನ್ನ ಮೊದಲು ಅರ್ಥ ಮಾಡಿಕೊಳ್ಳಲಿ. ನರೇಗಾ ತಂದಿದ್ದು ಪ್ರಧಾನಿ ಮೋದಿನಾ? ಅದೇ ಅವರಿಗೆ ಗೊತ್ತಿಲ್ಲ, ಸುಮ್ಮನೆ ಮಾತನಾಡ್ತಾರೆ. ಇವರು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಕಡಿದುಕಟ್ಟೆ ಹಾಕಿರೋದು ಏನನ್ನ?” ಎಂದು ಕಿಡಿಕಾರಿದರು.


ಜಿಲ್ಲೆಯಲ್ಲಿ ನರೇಗಾದಿಂದ 250 ಕೋಟಿ ಹಣ ಖರ್ಚು ಮಾಡಿದ್ದಾರೆ. ಇದೆಲ್ಲ ಏನ್ ಡಿಸಿಎಂ ಬಂದ್ಮೇಲೆ ಹಣ ಖರ್ಚು ಮಾಡಿದ್ದಾರಾ? ಇವರಿಗೆ ನರೇಗಾ ಅಂದರೆ ಏನು ಅಂತಾ ಗೊತ್ತಿಲ್ಲ. ಆದರೆ ಹಳೇ ಕಲ್ಲಿಗೆ ಹೊಸ ಬಿಲ್ ಮಾಡಿಕೊಳ್ಳುವ ಗಿರಾಕಿ. ಅವರ ಹತ್ತಿರ ಮೈಕ್ ಇಡಿದರೆ ಇನ್ನೇನ್ ಮಾತನಾಡ್ತಾರೆ? ಎಂದು ಅಶ್ವಥ್ ನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾದ ಅವರು ತರಾಟೆಗೆ ತೆಗೆದುಕೊಂಡರು.


ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. “ಉಪ ಮುಖ್ಯಮಂತ್ರಿಗಳು ಮೊದಲು ಈ ಭಾಗದಲ್ಲಿ ಪಕ್ಷ ಕಟ್ಟಲಿ. ಹಾಗೆಯೇ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡೋದನ್ನ ಬಿಡಲಿ. ಜೊತೆಗೆ ಅವರು ಅಡ್ಜಸ್ಟ್​ಮೆಂಟ್ ರಾಜಕಾರಣ ಮಾಡೋದನ್ನ ಬಿಡಲಿ. ಕಾಂಗ್ರೆಸ್ ಪಕ್ಷ ಗರಿಕೆ ಬೇರಿನ ರೀತಿ. ಹಾಗಾಗಿ ಯಾರು ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು.


ಇದನ್ನೂ ಓದಿ: IMA Scam: ಮಾಜಿ ಸಚಿವ ರೋಷನ್​ ಬೇಗ್​​ಗೆ ಷರತ್ತುಬದ್ಧ ಜಾಮೀನು ಮಂಜೂರು


ಅಧಿಕಾರದಲ್ಲಿದ್ದರೆ ಯಾರು ಬೇಕಾಗಲ್ಲ, ಅಧಿಕಾರ ಇಲ್ಲದಿದ್ದರೆ ಕಾರ್ಯಕರ್ತರು ಬೇಕು: ಕುಮಾರಸ್ವಾಮಿ ವಿರುದ್ಧ ವ್ಯಂಗ್ಯ


ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಈಗ ಬಹಳ ಸೀರಿಯಸ್ ಆಗಿದ್ದಾರೆ. ಪಕ್ಷದ ಕಾರ್ಯಕರ್ತರು ಬೇರೆ ಪಕ್ಷಕ್ಕೆ ಹೋಗ್ತಿದ್ದಾರೆ. ಅದಕ್ಕಾಗಿ ಈಗ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ನಾವಿದ್ದಾಗ ಏನ್ ಅಧಿಕಾರ ಕೊಟ್ಟರು? ನನ್ನನ್ನ ಮಂತ್ರಿ ಮಾಡಿದ್ರಾ ಎಂದು ಮಾಜಿ ಸಿಎಂಗೆ ಪ್ರಶ್ನೆ ಮಾಡಿದ ಹೆಚ್.ಡಿ. ಬಾಲಕೃಷ್ಣ, ಆ ಪಕ್ಷ ಅಧಿಕಾರಕ್ಕೆ ಬರಲ್ಲ ಅಂತಾ ನಾನೇ ಕಾಂಗ್ರೆಸ್​ಗೆ ಬಂದೆ. ಇವರು ಸರಿಯಾಗಿ ಕಾರ್ಯಕರ್ತರ ಪರವಾಗಿ ಇದ್ದಿದ್ದರೆ ನಾವೇಕೆ ಪಕ್ಷ ಬಿಡುತ್ತಿದ್ದೆವು ಎಂದು ಕಿಡಿಕಾರಿದರು.


ಕುಮಾರಸ್ವಾಮಿ ಮತ್ತೆ ಸಿಎಂ ಆಗಲ್ಲ. ಅದಕ್ಕೆ ಜನರು ನಮಗೆ ಅವಕಾಶ ಕೊಡಲಿ ಎಂದು ಕೇಳುತ್ತೇವೆ. ಇವರು ಮಾಜಿ ಸಿಎಂ ಆಗಿ ಯಡಿಯೂರಪ್ಪ ಅವರ ಮನೆ ಮುಂದೆ ಹೋಗುತ್ತಾರೆ. ನಮ್ಮ ಜಿಲ್ಲೆಯ ಜನ ಸ್ವಾಭಿಮಾನದಿಂದ ಮತ ಕೊಟ್ಟಿದ್ದಾರೆ ಅವರಿಗೆ. ಆದರೆ ಇವರು ಯಡಿಯೂರಪ್ಪನವರ ಮನೆಗೆ ಹೋಗುತ್ತಾರೆ. ಕುಮಾರಸ್ವಾಮಿಯವರು ಅಧಿಕಾರಿಗಳಿಂದ ಕೆಲಸ ಮಾಡಿಸಬೇಕು. ಆದರೆ ಇವರೇ ಅವರ ಮನೆ ಬಳಿ ಹೋಗ್ತಿದ್ದಾರೆ. ಇದು ನಮ್ಮ ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಧಕ್ಕೆ ಎಂದರು.


“ಯಡಿಯೂರಪ್ಪ ನವರು ವಿಧಾನಸಭೆಯಲ್ಲಿ ಹೇಳಿರಲಿಲ್ಲವೆ, ‘ಶಿವಕುಮಾರ್ ಮಾಡು ಮಾಡು ನಿನಗೆ ಅಪ್ಪ ಮಕ್ಕಳು ಮಾಡ್ತಾರೆ’ ಅಂತಾ. ಈಗ ನೋಡಿ” ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಮಾಗಡಿ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ರಾಮನಗರದಲ್ಲಿ ಮಾರ್ಮಿಕವಾಗಿ ಮಾತನಾಡಿದರು.


ವರದಿ: ಎ.ಟಿ. ವೆಂಕಟೇಶ್

Published by:Vijayasarthy SN
First published: