ಡಿಕೆ ಡಿಕೆ…! ನನ್ನ ಹಾಳು ಮಾಡೋಕೆ ಈ ಕೆಲಸ ಮಾಡ್ತಿದೀರ: ಡಿಕೆ ಶಿವಕುಮಾರ್ ತರಾಟೆ

ನೀವು ಡಿಕೆ ಡಿಕೆ ಅಂತ ಕೂಗೋದು ನನ್ನ ಹಾಳು ಮಾಡೋದಕ್ಕೆ ಅಂತ ಡಿಕೆಶಿ ಹೇಳಿದ್ದು ಯಾರಿಗೆ...? ಬಾಗಲಕೋಟೆಯಲ್ಲಿ ರಸ್ತೆ ಮಧ್ಯೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದವರು ಯಾರು..?!

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

 • Share this:
  ಬಾಗಲಕೋಟೆ: ಕೊರೋನಾ ಸಂಕಷ್ಟ ಅರಿಯಲು ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೆ ನಿನ್ನೆ ಬಾಗಲಕೋಟೆ ಜಿಲ್ಲೆಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿತು. ಆದರೆ, ಕೊರೊನಾ ಮರೆತು ಕಾಂಗ್ರೆಸ್ ಕಾರ್ಯಕರ್ತರು ಜೆಸಿಬಿ ಮೂಲಕ ಹೂಮಳೆ ಸುರಿಸಿ ಪಟಾಕಿ ಸಿಡಿಸಿ ಕೆಪಿಸಿಸಿ ಅಧ್ಯಕ್ಷರನ್ನ ಅದ್ದೂರಿಯಾಗಿ ಸ್ವಾಗತಿಸಿದರು. ಜಿಲ್ಲೆಯ ಜಮಖಂಡಿಯಿಂದ ಪ್ರವಾಸ ಆರಂಭಿಸಿದ ಡಿಕೆಶಿಗೆ ಬನಹಟ್ಟಿ ಪಟ್ಟಣದ ಬಳಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ, ಬೆಳ್ಳಿ ಗದೆ ನೀಡಿದರು. ಇನ್ನು ಬಾದಾಮಿ ಮತಕ್ಷೇತ್ರಕ್ಕೆ ಸಿದ್ದರಾಮಯ್ಯ ಆಗಮಿಸಿದ ವೇಳೆ ಅಭಿಮಾನಿಗಳು ಹೂಮಳೆ ಸುರಿಸಿ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದರು. ಅದಕ್ಕೆ ಕೌಂಟರ್ ಎನ್ನುವಂತೆ ಇಂದು ಡಿಕೆಶಿಗೆ ಹೂಮಳೆ ಸುರಿಸಿ ಮುಂದಿನ ಸಿಎಂ ಡಿಕೆ ಎನ್ನುವ ಘೋಷಣೆಯನ್ನ ಕೆಲವು ಕಾರ್ಯಕರ್ತರು ಕೂಗಿದರು. ಯಾರೂ ಕೂಡ ಮುಂದಿನ ಸಿಎಂ ಯಾರೆಂದು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಬಾರದೆಂದು ಡಿಕೆ ಶಿವಕುಮಾರ್ ಅವರೇ ಈ ಹಿಂದೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಆದರೂ ಅವರ ಉಪಸ್ಥಿತಿಯಲ್ಲೇ ಕಾರ್ಯಕರ್ತರು ಮುಂದಿನ ಸಿಎಂ ಡಿಕೆ ಎಂದು ಕೂಗಿದ್ದು ವಿಪರ್ಯಾಸ.

  ಹೈಕಮಾಂಡ್ ಸೂಚನೆ ಬಳಿಕವೂ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ತಣ್ಣಗಾಗಿಲ್ಲ ಎನ್ನುವುದಕ್ಕೆ ಕಟೌಟ್ ರಾಜಕೀಯ ಕೂಡ ಸಾಕ್ಷಿಯಾಯಿತು. ನೇಕಾರರ ಜೊತೆ ಸಂವಾದ ಏರ್ಪಡಿಸಿದ್ದ ಕಲ್ಯಾಣ ಮಂಟಪದ ಆವರಣದಲ್ಲಿ ಎತ್ತ ನೋಡಿದರೂ ಡಿಕೆ ಶಿವಕುಮಾರ್ ಅವರ ಕಟೌಟ್ ಗಳು ರಾಜಾಜಿಸುತ್ತಿದ್ದವು. ಇದರ ಮದ್ಯೆ ಸಿದ್ದರಾಮಯ್ಯ ಅವರ ಬೃಹತ್ ಕಟೌಟ್ ಇದ್ದರೂ ಅದನ್ನ ಪಕ್ಕಕೆ ಇಡಲಾಗಿತ್ತು. ಇದರಿಂದ ಸಿದ್ದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು. ಸಿದ್ದು ಅಭಿಮಾನಿಗಳ ಆಕ್ಷೇಪದ ಬೆನ್ನಲ್ಲೆ ದಿಢೀರನೆ ಸಿದ್ದರಾಮಯ್ಯ ಕಟೌಟ್ ನಿಲ್ಲಿಸಲಾಯ್ತು.

  ಡಿಕೆ ಡಿಕೆ ಅನ್ನಬ್ಯಾಡ್ರಪ್ಪ…

  ನೇಕಾರರ ಜೊತೆ ಸಂವಾದದ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, “ಡಿಕೆ ಡಿಕೆ ಅಂತ ಕೂಗಬೇಡ್ರಪ್ಪಾ… ಅದ್ಯಾರೋ ಡಿಕೆ ಪಾಕೆ ಅಂತೀರಾ ಅದನ್ನೆಲ್ಲಾ ಬಿಡ್ರಪ್ಪಾ. ನನ್ನ ಹಾಳು ಮಾಡೋಕೆ ನೀವು ಈ ಕೆಲಸ ಮಾಡ್ತಿರೋದು. ಈಗಲೇ ಕೂಗಿ ನನ್ನ ಹಾಳು ಮಾಡಬೇಡಿ. ನಿಮ್ಮ ಅಭಿಮಾನ ಇದ್ದರೆ ಮುಂದೆ ತೋರಿಸುವಿರಂತೆ” ಎಂದು ಹೇಳುವ ಮೂಲಕ ಬಣ ರಾಜಕೀಯದ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದರು.

  ಇದನ್ನೂ ಓದಿ: ಮಂಕು ಬೂದಿ ಎರಚಿ ಹಣ ಲಪಟಾಯಿಸಿದ ಸಾಧುಗಳು; ಗ್ರಾಮ ಪಂಚಾಯತ್ ಸದಸ್ಯ ಮೋಸ ಹೋದ ಕಥೆಯೇ ವಿಚಿತ್ರ

  ಇನ್ನು ಕೊರೊನಾದಿಂದ ನೇಕಾರರಿಗೆ ಆಗಿರುವ ಸಮಸ್ಯೆ, ಕುಂದು ಕೊರತೆಗಳನ್ನ ಆಲಿಸಿದ ಬಳಿಕ ಮುಧೋಳ ಪಟ್ಟಣಕ್ಕೆ ಅವರು ಭೇಟಿ ನೀಡಿದರು. ಮುಧೋಳ ಪಟ್ಟಣದ ರಾಯಣ್ಣ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡ್ರು. ಹೆದ್ದಾರಿಯಲ್ಲಿ ರಾಜ್ಯ ಮಾದಿಗ ಮಹಾಸಭಾದ ಕಾರ್ಯಕರ್ತರು ಡಿಕೆಶಿಗೆ ಪ್ರತಿಭಟನೆಯ ಬಿಸಿ ಮುಟ್ಟಿಸಿದರು. ವಾಹನ ತಡೆದು ಮುತ್ತಿಗೆ ಹಾಕಿ ಡಿಕೆಶಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸದಾಶಿವ ಅಯೋಗ ವರದಿ ಜಾರಿಗೆ ದ್ವಂದ್ವ ನಿಲುವು ತೋರಿದ್ದೀರಿ. ಅಲ್ಲದೆ ಒಂದೇ ಸಮುದಾಯವನ್ನ ಓಲೈಕೆ ಮಾಡುತ್ತಿದ್ದೀರಿ ಎಂದು ಆರೋಪಿಸಿದರು. ಬಳಿಕ ಪ್ರತಿಭಟನಾಕಾರರಿಗೆ ಕೆಪಿಸಿಸಿ ಅಧ್ಯಕ್ಷರು ಸಮಜಾಯಿಷಿ ನೀಡಿದರು.

  ಇನ್ನು ಜಿಲ್ಲೆಯಲ್ಲಿ ನಡೆದ ಡಿಕೆಶಿ ಪ್ರವಾಸದ ಉದ್ದಕ್ಕೂ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ರು. ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಕೊರೊನಾ ನಿರ್ಲಕ್ಷಿಸಿ ಮೈಮರೆತಿದ್ದು ಕಂಡುಬಂತು. ಇದು ಸಾಮಾನ್ಯರಿಗೆ ಒಂದು ನಿಯಮ, ರಾಜಕಾರಣಿಗಳಿಗೆ ಮತ್ತೊಂದು ನಿಯಮವೇ ಎನ್ನುವಂತಾಯಿತು. ಒಟ್ಟಿನಲ್ಲಿ ಕೊರೊನಾ ಸಂಕಷ್ಟ ಅರಿಯುವ ನೆಪದಲ್ಲಿ ಹಿಂದುಳಿದ ಸಮುದಾಯಗಳಿಗೆ ಹತ್ತಿರವಾಗಲು ಡಿಕೆಶಿ ಕೈಗೊಂಡಿದ್ದ ಬಾಗಲಕೋಟೆ ಪ್ರವಾಸ ಪೂರ್ಣಗೊಂಡಿದೆ.

  ವರದಿ: ಮಂಜುನಾಥ್ ತಳವಾರ
  Published by:Vijayasarthy SN
  First published: