ಕನಕಪುರಕ್ಕೆ ಮೆಡಿಕಲ್ ಕಾಲೇಜು ಕೊಡುವ ಮನಸ್ಸು ಸರ್ಕಾರಕ್ಕೆ ಇಲ್ಲ: ಡಿ.ಕೆ.ಶಿವಕುಮಾರ್ ಆಕ್ರೋಶ

ಕನಕಪುರಕ್ಕೆ ಸರ್ಕಾರ ಮೆಡಿಕಲ್ ಕಾಲೇಜನ್ನು ಕೊಡಬಹುದಿತ್ತು, ಆದರೆ, ಅವರಿಗೆ ಕೊಡುವ ಮನಸಿಲ್ಲ. ಅದಕ್ಕಾಗಿ ಈ ರೀತಿ ತೊಂದರೆ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್​ ಕಿಡಿಕಾರಿದರು

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​

  • Share this:
ರಾಮನಗರ(ನವೆಂಬರ್​. 08): ಮೈತ್ರಿ ಸರ್ಕಾರದಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸಿಕ್ಕಿತ್ತು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪನವರು ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿದ್ದರೂ ಸ್ವತ: ನಾನು, ಸಂಸದ ಡಿ ಕೆ ಸುರೇಶ್ ಹೋಗಿ ಅವರ ಜೊತೆಗೆ ಚರ್ಚೆ ಮಾಡಿದ್ದೆವು. ಆದರೆ, ಈಗ ಅದನ್ನ ಕೇಂದ್ರ ಸರ್ಕಾರದ ಯೋಜನೆ ಎಂದು ತಡೆ ಮಾಡಿದ್ದಾರೆ. ಆದರೆ, ಅದಕ್ಕೂ ಕೇಂದ್ರ ಸರ್ಕಾರಕ್ಕೂ ಸಂಬಂಧವೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಬೇಸರ ವ್ಯಕ್ತಪಡಿಸಿದರು. ಕನಕಪುರದಲ್ಲಿ ಮಾತನಾಡಿದ ಅವರು, ಕನಕಪುರಕ್ಕೆ ಅವರು ಮೆಡಿಕಲ್ ಕಾಲೇಜನ್ನು ಕೊಡಬಹುದಿತ್ತು, ಆದರೆ, ಅವರಿಗೆ ಕೊಡುವ ಮನಸಿಲ್ಲ. ಅದಕ್ಕಾಗಿ ಈ ರೀತಿ ತೊಂದರೆ ಮಾಡಿದ್ದಾರೆಂದು ಕಿಡಿಕಾರಿದರು. ಸದ್ಯ ಸರ್ಕಾರ ನಮಗೆ ಮೆಡಿಕಲ್ ಕಾಲೇಜನ್ನೇ ಕೊಡಲಿಲ್ಲ, ಇನ್ನು ಬೇರೆಯದು ಯಾಕೆ ಅಂತಾ ನಾವೇ ಬಿಟ್ಟಿದ್ದೀವಿ ಎಂದು ಹೇಳುವ ಮೂಲಕ ಸರ್ಕಾರದಿಂದ ಕನಕಪುರಕ್ಕೆ ಯಾವ ಕೊಡುಗೆಯೂ ಇಲ್ಲ ಎಂದು ಡಿಕೆ ಶಿವಕುಮಾರ್​ ತಿರುಗೇಟು ನೀಡಿದ್ದಾರೆ.

ಅವರು ಕೆಲಸ ಮಾಡಿಕೊಟ್ಟರು, ಮಾಡಿ ಕೊಡದೇ ಇದ್ದರೂ ನಮ್ಮ ಜನಕ್ಕೆ ಗೊತ್ತಿದೆ. ನಾವು ನಿಭಾಯಿಸುತ್ತೇವೆ. ಆದರೆ, ನನಗೆ ಮಾತು ಕೊಟ್ಟಿದ್ರು, ನಿಮ್ಮ ಯೋಜನೆ ಮುಗಿಸುತ್ತೇವೆ ಎಂದು ಹೇಳಿದ್ರು. ಆದರೆ, ಅವರು ಮಾಡಲಿಲ್ಲ ಎಂದರು.

ಇನ್ನು ನಮ್ಮ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಕೇಳಿದ್ದೇವೆ. ಅವರು ಕೊಟ್ರೆ ಕೊಡಬಹುದು, ಅವರಿಗೆ ಈಗ ಅಧಿಕಾರ ಇದೆ. ಆದರೆ, ಅಧಿಕಾರದಲ್ಲಿ ಯಾರು ಶಾಶ್ವತ ಇಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿ ಕೆ ಶಿವಕುಮಾರ್​ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ನಾವೀಗ ಕೆಟ್ಟ ಕಾಲದಲ್ಲಿ ಇದ್ದೇವೆ - ನಮಗೂ ಒಳ್ಳೆಯ ಕಾಲ ಬರುತ್ತದೆ: ಮಾಜಿ ಸಚಿವ ಸಂತೋಷ ಲಾಡ್

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಡಿ.ಕೆ.ಬ್ರದರ್ಸ್ ಟಾರ್ಗೆಟ್ ಆಗಿದ್ದಾರೆಂದು ರಾಜಕೀಯ ಪಡಸಾಲೆಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ  ಚನ್ನಪಟ್ಟಣ ಕ್ಷೇತ್ರ ಹಾಗೂ ಅನಿತಾ ಕುಮಾರಸ್ವಾಮಿ ಅವರ ರಾಮನಗರ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಸರ್ಕಾರದಲ್ಲಿ ಅನುದಾನಗಳು ಸಿಕ್ಕಿದೆ. ಆದರೆ, ಕನಕಪುರ ಕ್ಷೇತ್ರಕ್ಕೆ ಮಾತ್ರ ಅನುದಾನಗಳು ಸಿಗುತ್ತಿಲ್ಲ, ಜೊತೆಗೆ ಘೋಷಣೆಯಾಗಿದ್ದ ಯೋಜನೆಗಳು ಹಿಂಪಡೆಯಲಾಗಿದೆ.

ಇನ್ನು ಇದೇ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಸಹ ಕೆಲದಿನಗಳ ಹಿಂದೆ ಮಾತನಾಡಿ ರಾಜ್ಯ ಸರ್ಕಾರದಿಂದ ಕನಕಪುರಕ್ಕೆ ಬಿಡಿಗಾಸು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಡಿ.ಕೆ.ಶಿವಕುಮಾರ್ ಕೂಡ ಸಹೋದರನ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಕನಕಪುರ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಯಾವ ರೀತಿಯ ಬೆಂಬಲ ವ್ಯಕ್ತವಾಗುತ್ತೆ ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.

ವರದಿ : ಎ ಟಿ ವೆಂಕಟೇಶ್
Published by:G Hareeshkumar
First published: