ಎಚ್​ಡಿಕೆ ವಿರೋಧ ಕಟ್ಟಿಕೊಂಡರೆ ಡಿಕೆಶಿಗೆ ರಾಜ್ಯದಲ್ಲಿ ಕಷ್ಟ, ಡಿ.ಕೆ.ಸುರೇಶ್​ಗೆ ಜಿಲ್ಲೆಯಲ್ಲಿ ನಷ್ಟ

ಈ ಭಾಗದಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಮುಂದಾಳತ್ವದಲ್ಲಿ ಜೆಡಿಎಸ್ ಪಕ್ಷ ದೊಡ್ಡ ಹೆಮ್ಮರವಾಗಿ ಬೆಳೆದಿರುವ ಪರಿಣಾಮ ಡಿ.ಕೆ.ಶಿಗೆ ಈಗಲೂ ಕೂಡ ರಾಜಕೀಯವಾಗಿ ಅಷ್ಟೇನು ಲಾಭವಾಗಲ್ಲ. ಜೊತೆಗೆ ದೊಡ್ಡಗೌಡರ ಕುಟುಂಬವನ್ನ ಹಿಂದಿಕ್ಕಿ ಬೆಳೆಯಲು ಸಾಧ್ಯವಿಲ್ಲ ಎನ್ನಬಹುದಾಗಿದೆ.

ಎಚ್​ಡಿಕೆ- ಡಿಕೆಶಿ

ಎಚ್​ಡಿಕೆ- ಡಿಕೆಶಿ

  • Share this:
ರಾಮನಗರ; ಕಳೆದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಕುಚಿಕುಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಈಗ ರಾಜಕೀಯವಾಗಿ ಸಣ್ಣ ವೈಮನಸ್ಸು ಉಂಟಾಗಿದೆ.

ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಮಾತನಾಡಿ ನನಗೆ ಕಾಂಗ್ರೆಸ್‌ನವರ ಋಣವಿಲ್ಲ, ಈ ರಾಜ್ಯದ ರೈತರ ಋಣವಷ್ಟೇ ಇರೋದು ಎನ್ನುವ ಮೂಲಕ ಕೈ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಜೊತೆಗೆ ಕೆಲವರು ನನಗೆ ಸಪೋರ್ಟ್ ಮಾಡಿದ್ದೀನಿ ಎಂದು, ಅನುಕಂಪ ಗಿಟ್ಟಿಸಿಕೊಂಡು ಜೆಡಿಎಸ್ ಪಕ್ಷವನ್ನೇ ಮುಗಿಸುವ ಡಬಲ್ ಗೇಮ್ ರಾಜಕಾರಣ ಮಾಡಲು ಹೊರಟ್ಟಿದ್ದಾರೆ. ಇದನ್ನ ಬಿಡಬೇಕು ಎನ್ನುವ ಮೂಲಕ ಡಿ.ಕೆ.ಬ್ರದರ್ಸ್ ವಿರುದ್ಧ ಹೆಸರೇಳದೆ ಮಾರ್ಮಿಕವಾಗಿ ಕಿಡಿಕಾರಿದ್ದಾರೆ.

ಕನಕಪುರ ಶಾಸಕ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲೆಯ ಪ್ರಭಾವಿ ರಾಜಕಾರಣಿ. ಆದರೆ ಇಷ್ಟುದಿನಗಳ ಕಾಲ ಕೇವಲ ಕನಕಪುರ ಕ್ಷೇತ್ರದ ಬಗ್ಗೆ ಮಾತ್ರ  ತಲೆಕೆಡಿಸಿಕೊಳ್ಳುತ್ತಿದ್ದ ಡಿಕೆಶಿ ಉಳಿದ ಚನ್ನಪಟ್ಟಣ, ರಾಮನಗರ, ಮಾಗಡಿ ಕ್ಷೇತ್ರದ ಬಗ್ಗೆ ಖ್ಯಾರೇ ಎನ್ನುತ್ತಿರಲಿಲ್ಲ. ಪ್ರಭಾವಿ ಕಾಂಗ್ರೆಸ್ ನಾಯಕನಾದರೂ ಕನಕಪುರ ಬಿಟ್ಟು ಬೇರೆ ಕ್ಷೇತ್ರಗಳ ಗಮನ ಇರಲಿಲ್ಲ. ಯಾಕಂದರೆ ಈ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವೇ ಪ್ರಬಲವಾಗಿದೆ. ಹಾಗಾಗಿ ಉಳಿದ ಕ್ಷೇತ್ರಗಳ ಬಗ್ಗೆ ಕಾಳಜಿ ವಹಿಸಿದರೆ ಕನಕಪುರದಲ್ಲಿ ಮುಂದೆ ನನಗೆ ಹೆಚ್ಡಿಕೆಯಿಂದ ರಾಜಕೀಯವಾಗಿ ತೊಂದರೆಯಾಗಲಿದೆ ಎಂಬ ಅರಿವು ಡಿ.ಕೆ.ಶಿಗೆ ಇತ್ತು. ಆದರೆ ಈಗ ಕೆ.ಪಿ.ಸಿ.ಸಿ ಅಧ್ಯಕ್ಷರಾಗುತ್ತಿದ್ದಂತೆ ಡಿಕೆಶಿಯ ರಾಜಕೀಯ ವರಸೆಯೇ ಬದಲಾಗಿದೆ. ಯಾವುದೇ ಅಬ್ಬರವಿಲ್ಲದೇ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಟಾಂಗ್ ಕೊಟ್ಟು ಕಾಂಗ್ರೆಸ್ ನೆಲೆಯನ್ನ ಗಟ್ಟಿಗೊಳಿಸುವ ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ. ಹಾಗಾಗಿ ಕಳೆದ ಕೆಲ ದಿನಗಳ ಹಿಂದೆ ನಡೆದ ರಾಮನಗರ ತಾಲೂಕು ಪಂಚಾಯತ್ ಚುನಾವಣೆಯಲ್ಲಿ‌ ಜೆಡಿಎಸ್‌ ಸದಸ್ಯರನ್ನ ಕಾಂಗ್ರೆಸ್ ಗೆ ಸೆಳೆದು ಜೆಡಿಎಸ್ ನಿಂದ ಅಧಿಕಾರ ಕಿತ್ತುಕೊಂಡು ಕಾಂಗ್ರೆಸ್ ವಶಮಾಡಿಕೊಂಡಿದ್ದೆ ಸ್ಪಷ್ಟ ಉದಾಹರಣೆ.

ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಸಹೋದರ ಡಿ.ಕೆ.ಸುರೇಶ್ ಮೂರು ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದಾರೆ. ಆದರೂ ಸಹ ಹೆಚ್.ಡಿ.ಕುಮಾರಸ್ವಾಮಿಯನ್ನು ವಿರೋಧ ಮಾಡಿಕೊಂಡರೆ ರಾಜಕೀಯವಾಗಿ ಡಿ.ಕೆ.ಬ್ರದರ್ಸ್ ಗೆ ಭಾರೀ ಪೆಟ್ಟಾಗಲಿದೆ ಅನ್ನೋದು ಅಷ್ಟೇ ಸತ್ಯ. ಡಿ.ಕೆ.ಬ್ರದರ್ಸ್ ಗೆ ಕನಕಪುರ ಕ್ಷೇತ್ರವನ್ನ ಹೊರತುಪಡಿಸಿ ರಾಮನಗರ ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲಿ ಅಷ್ಟೇನು ಹಿಡಿತವಿಲ್ಲ. ಯಾಕಂದ್ರೆ ಕನಕಪುರ ಕ್ಷೇತ್ರವನ್ನ ಬಿಟ್ಟು ಉಳಿದ ಮೂರು ಕ್ಷೇತ್ರಗಳಲ್ಲೂ ಸಹ ಜೆಡಿಎಸ್ ಪಕ್ಷದ ಶಾಸಕರಿರೋದೆ ಇದಕ್ಕೆ ಸಾಕ್ಷಿ. ಇನ್ನು ರಾಜ್ಯಮಟ್ಟದಲ್ಲಿ ನೋಡಿದರೆ ಇಬ್ಬರು ಕೂಡ ಒಕ್ಕಲಿಗ ಸಮುದಾಯದವರೆ. ಆದರೆ ಈಗಲೂ ಸಹ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹೆಚ್.ಡಿ.ದೇವೇಗೌಡರ ಬೆನ್ನಿಗೆ ಸಮುದಾಯ ಪ್ರಬಲವಾಗಿ ನಿಂತಿದೆ. ಇನ್ನು ಡಿ.ಕೆ.ಬ್ರದರ್ಸ್ ಎಷ್ಟೇ ದೊಡ್ಡಸ್ಥಾನಕ್ಕೇರಿದರು ಸಹ ಒಕ್ಕಲಿಗರು ಮಾತ್ರ ದೊಡ್ಡಗೌಡರ ಕುಟುಂಬಕ್ಕೆ ಸಾಥ್ ಕೊಡುವಷ್ಟು ಡಿ.ಕೆ.ಬ್ರದರ್ಸ್ ನ ಒಪ್ಪಲ್ಲ ಅನ್ನೋದು ವಾಸ್ತವ.

ಕನಕಪುರದಲ್ಲಿ ಈಗಲೂ 45-50 ಸಾವಿರ ಮತಗಳು ಜೆಡಿಎಸ್‌ಗೆ ಫಿಕ್ಸ್

ಹೌದು, ಡಿ.ಕೆ.ಶಿವಕುಮಾರ್ ಸಾತನೂರು ಕ್ಷೇತ್ರದಿಂದ ಕನಕಪುರ ಕ್ಷೇತ್ರದವರೆಗೆ ರಾಜಕಾರಣ ಮಾಡಿದ್ದಾರೆ. ಈ ಕ್ಷೇತ್ರದಿಂದ ಕಳೆದ 7 ಬಾರಿ ಸತತವಾಗಿ ಶಾಸಕರಾಗಿ, ಹಲವು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ಮಂತ್ರಿಯಾಗಿ, ಈಗ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಸಹೋದರ ಡಿ.ಕೆ.ಸುರೇಶ್ ಸಹ ಕನಕಪುರದಲ್ಲಿ ತಮ್ಮದೇ ಆದ ಬಿಗಿಹಿಡಿತವನ್ನು ಕಾಪಾಡಿಕೊಂಡಿದ್ದಾರೆ. ಆದರೂ ಸಹ ಇಲ್ಲಿ ಜೆಡಿಎಸ್ ಪಕ್ಷದ ತಾಕತ್ತು ಇನ್ನು ಕಡಿಮೆಯಾಗಿಲ್ಲ ಅಂದರೆ ನಾವು ನೀವು ನಂಬ್ಲೇಬೇಕಿದೆ. ಯಾಕಂದ್ರೆ ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಸಹ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಯಾರೇ ಸ್ಪರ್ಧೆ ಮಾಡಿದರೂ ಹಣ, ಹೆಂಡ ಕೊಡದಿದ್ದರೂ ಕೂಡ ಈಗಲೂ 45 ರಿಂದ 50 ಸಾವಿರ ಮತಗಳು ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಕಟ್ಟಿಟ್ಟಬುತ್ತಿ ಅನ್ನೋದು ಕಟುಸತ್ಯ. ಹಾಗಾಗಿ ಕನಕಪುರದಲ್ಲಿ ಈಗಲೂ ಜೆಡಿಎಸ್ ಪಕ್ಷದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ದೊಡ್ಡಗೌಡರು ಅಖಾಡಕ್ಕಿಳಿದು ಕಟ್ಟುನಿಟ್ಟಿನ ಚುನಾವಣೆ ಮಾಡಿದ್ದೇ ಆದಲ್ಲಿ ಡಿ.ಕೆ.ಬ್ರದರ್ಸ್ ಲೆಕ್ಕಚಾರವೂ ಉಲ್ಟಾ ಆಗಲಿದೆ ಎಂಬುದು ಕನಕಪುರ ಕ್ಷೇತ್ರದ ಕೆಲವರ ಅಭಿಪ್ರಾಯ. ಜೊತೆಗೆ ಡಿ.ಕೆ.ಸುರೇಶ್ ಮುಂದೆ ಎಂ.ಪಿ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆಲ್ಲಬೇಕಾದ್ರೆ ಜೆಡಿಎಸ್ ಪಕ್ಷದ ಬೆಂಬಲ ಅನಿವಾರ್ಯ ಅನ್ನೋದು ಅಷ್ಟೇ ಸತ್ಯ.

ಗೌಡರ ಕುಟುಂಬದ ವಿರುದ್ಧ ಹೋಗಿದ್ದೆ ಯೋಗೇಶ್ವರ್, ಬಾಲಕೃಷ್ಣಗೆ ಕಂಟಕ

ಜಿಲ್ಲೆಯಲ್ಲಿ ಈಗಾಗಲೇ ದೇವೇಗೌಡರು ಹಾಗೂ ಕುಮಾರಸ್ವಾಮಿಯನ್ನ ರಾಜಕೀಯವಾಗಿ ಎದುರು ಹಾಕಿಕೊಂಡು ತಮ್ಮ ಪೊಲಿಟಿಕಲ್ ಲೈಫ್‌ನಲ್ಲಿ ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹಿನ್ನಡೆ ಅನುಭವಿಸಿದ್ದಾರೆ. ಆದರೆ ಈ ತಪ್ಪನ್ನು ಡಿ.ಕೆ.ಶಿವಕುಮಾರ್ ಎಂದೂ ಮಾಡಿಕೊಂಡಿಲ್ಲ. ಹಾಗಾಗಿಯೇ ಇಲ್ಲಿಯವರೆಗೆ ಕನಕಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುತ್ತ ಬಂದಿದ್ದಾರೆ. ಹೊರಗಡೆ ಗೌಡರ ಕುಟುಂಬದ ವಿರುದ್ಧ ಎಷ್ಟೇ ಒರಟಾಗಿ ಮಾತನಾಡಿದ್ದರೂ ಸಹ ಚುನಾವಣಾ ಸಂದರ್ಭಗಳಲ್ಲಿ ಗೌಡರ ಕುಟುಂಬದ ಜೊತೆಗೆ ಡಿಕೆಶಿ ಹೊಂದಾಣಿಕೆ ಮಾಡಿಕೊಂಡಿರುವ ಉದಾಹರಣೆಗಳು ಇದ್ದಾವೆ. ಇದಕ್ಕೆ ಸಾಕ್ಷಿ ಅಂದ್ರೆ ಪ್ರತಿಬಾರಿಯ ಚುನಾವಣೆಯಲ್ಲೂ ಸಹ ಜಿಲ್ಲೆಯ ಚನ್ನಪಟ್ಟಣ, ಮಾಗಡಿ, ರಾಮನಗರದಲ್ಲಿ ದೊಡ್ಡಗೌಡರು ಹಾಗೂ ಕುಮಾರಸ್ವಾಮಿಯವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿದ್ದರು. ಆದರೆ ಕನಕಪುರ ಕ್ಷೇತ್ರದ ಕಡೆಗೆ ಮಾತ್ರ ಈ ಇಬ್ಬರು ನಾಯಕರು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಅನ್ನೋದು ವಾಸ್ತವ. ಹಾಗೇ ಈ ಹಿಂದೆ ಇಬ್ಬರು ನಾಯಕರ ನಡುವೆ ನಡೆದಿರುವ ರಾಜಕೀಯ ಒಪ್ಪಂದಗಳು ಎನ್ನಬಹುದು.

ಇದನ್ನು ಓದಿ: ಡಿ.ಕೆ. ಶಿವಕುಮಾರ್ ಮಗಳಿಗೂ, ಸಿದ್ಧಾರ್ಥ್​ ಹೆಗ್ಡೆ ಮಗನಿಗೂ ಮದುವೆ; ಎಸ್​.ಎಂ. ಕೃಷ್ಣ ಕುಟುಂಬದ ಜೊತೆ ಡಿಕೆಶಿ ನೆಂಟಸ್ತನ?

ಒಟ್ಟಾರೆ ಹೆಚ್.ಡಿ.ಕುಮಾರಸ್ವಾಮಿ ಜೊತೆಗೆ ಡಿ.ಕೆ.ಶಿವಕುಮಾರ್ ತಮ್ಮ ಹಳೇ ವೈರತ್ವವನ್ನ ಕಟ್ಟಿಕೊಂಡರೆ ಭವಿಷ್ಯದಲ್ಲಿ ಡಿ.ಕೆ.ಶಿವಕುಮಾರ್‌ಗೆ ರಾಜಕೀಯವಾಗಿ ಭಾರೀ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ. ಇನ್ನು ಡಿ.ಕೆ.ಶಿವಕುಮಾರ್ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿರುವವರೆಗೆ ರಾಮನಗರ ಜಿಲ್ಲೆ ಹಾಗೂ ಹಳೇ ಮೈಸೂರು ಭಾಗದ ಕೆಲ ಜಿಲ್ಲೆಗಳಲ್ಲಿ ಸ್ವಲ್ಪ ಹಿಡಿತ ಸಾಧಿಸಬಹುದಾಗಿದೆ. ಆದರೆ ಈಗಾಗಲೇ ಈ ಭಾಗದಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಮುಂದಾಳತ್ವದಲ್ಲಿ ಜೆಡಿಎಸ್ ಪಕ್ಷ ದೊಡ್ಡ ಹೆಮ್ಮರವಾಗಿ ಬೆಳೆದಿರುವ ಪರಿಣಾಮ ಡಿ.ಕೆ.ಶಿಗೆ ಈಗಲೂ ಕೂಡ ರಾಜಕೀಯವಾಗಿ ಅಷ್ಟೇನು ಲಾಭವಾಗಲ್ಲ. ಜೊತೆಗೆ ದೊಡ್ಡಗೌಡರ ಕುಟುಂಬವನ್ನ ಹಿಂದಿಕ್ಕಿ ಬೆಳೆಯಲು ಸಾಧ್ಯವಿಲ್ಲ ಎನ್ನಬಹುದಾಗಿದೆ.
First published: