• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ವಿಜಯಪುರದ ವೈದ್ಯೆ ದಿವ್ಯಾ ಹಿರೊಳ್ಳಿ ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ

ವಿಜಯಪುರದ ವೈದ್ಯೆ ದಿವ್ಯಾ ಹಿರೊಳ್ಳಿ ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ

ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ವಿಜಯಪುರದ ದಿವ್ಯಾ ಹಿರೊಳ್ಳಿ

ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ವಿಜಯಪುರದ ದಿವ್ಯಾ ಹಿರೊಳ್ಳಿ

ವಿಜಯಪುರದ ಡಾ. ದಿವ್ಯಾ ಅರವಿಂದ್ ಹಿರೊಳ್ಳಿ ಅವರು ದೆಹಲಿಯ ಏಮ್ಸ್ ಕಾಲೇಜಿನ ಡಿಎಂ-ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಗಿಟ್ಟಿಸಿ ಹೆಮ್ಮೆ ಮೂಡಿಸಿದ್ದಾರೆ.

  • Share this:

ವಿಜಯಪುರ(ಡಿ. 07): ಸಾಧನೆಗೆ ಅಸಾಧ್ಯವಾದುದು ಯಾವೂದು ಇಲ್ಲ ಎಂಬುದಕ್ಕೆ ಸ್ಪೂರ್ತಿಯಾಗಿದ್ದಾಳೆ ಈ ವೈದ್ಯೆ.  ರೋಗಿಗಳ ಆರೈಕೆ ಮಾಡುತ್ತಲೇ ಇನ್ನೂ ಹೆಚ್ಚಿನ ಅಧ್ಯಯನ ಮಾಡಬೇಕು.  ಸಾಧನೆ ತೋರಬೇಕು ಎಂದು ಸತತ ಪ್ರಯತ್ನ ಮಾಡುತ್ತಿವ ಬಸವ ನಾಡಿನ ವೈದ್ಯೆಗೆ ಸರಸ್ವತಿ ಅಕ್ಷರಶಃ ಒಲಿದು ಬಂದಿದ್ದಾಳೆ. ದೆಹಲಿಯ ಪ್ರತಿಷ್ಠಿತ ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ವಿಜಯಪುರದ ದಿವ್ಯಾ ಅರವಿಂದ್ ಹಿರೊಳ್ಳಿ ದೇಶಕ್ಕೇ ಪ್ರಥಮ ಬಂದಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ದಿವ್ಯಾ ಅವರು ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬ ಮಾತಿಗೆ ಹೇಳಿ ಮಾಡಿಸಿದ ಪ್ರತಿಭಾವಂತೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನ್ಯೂರೊ ಕ್ರಿಟಿಕಲ್ ಕೇರ್​ನಲ್ಲಿ ಫೆಲೋಶಿಪ್ ಮುಗಿಸಿದ ವೈದ್ಯೆ ಈಗ ದೆಹಲಿಯ ಏಮ್ಸ್ ನಲ್ಲಿ ಸೂಪರ್ ಸ್ಪೇಷಿಲೈಷೇಶನ್​ಗೆ ಪ್ರವೇಶ ಪಡೆದಿದ್ದಷ್ಟೇ ಅಲ್ಲ, ಇಡೀ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಖಿಲ ಭಾರತ ಮಟ್ಟದದಲ್ಲಿ ನಡೆದ DM ಪ್ರವೇಶ ಪರೀಕ್ಷೆ ಇದಾಗಿದ್ದು, ಡಿಎಂ ವಿಭಾಗದಲ್ಲಿ ಕ್ರಿಟಿಕಲ್ ಕೇರ್ ಮೆಡಿಷಿನ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.  ನ. 2 ರಂದು ಈ ಪ್ರವೇಶ ಪರೀಕ್ಷೆ ನಡೆದಿತ್ತು.  ಈ ಪರೀಕ್ಷೆಯಲ್ಲಿ ದಿವ್ಯಾ ಅರವಿಂದ ಹಿರೊಳ್ಳಿ ಶೇ. 67.08 ಅಂಕ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.


ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಮೆಡಿಕಲ್ ಕಾಲೇಜಿನಲ್ಲಿ ಮೆರಿಟ್ ಸೀಟ್ ಪಡೆದ ದಿವ್ಯಾ ಅರವಿಂದ ಹಿರೊಳ್ಳಿ ಎಂಬಿಬಿಎಸ್(2006-2012) ಪದವಿ ಪಡೆದರು. ನಂತರ ಹುಬ್ಬಳ್ಳಿಯ ಕಿಮ್ಸ್ ನಲ್ಲಿಯೂ ಮೆರಿಟ್ ಆಧಾರದಲ್ಲಿ ಪ್ರವೇಶ ಗಿಟ್ಟಿಸಿ MD ಅನಸ್ತೇಷಿಯಾ (2013-2016) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಮೆಡಿಕಲ್ ಫೆಲೋಶಿಪ್ ಪಡೆದ ಅವರು, ಪಾಂಡಿಚೇರಿಯ ಜಿಪ್‌ಮೆರ್​ನಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಟಾಪ್ಟರ್ ಆಗಿ ಒಂದು ವರ್ಷ ಮತ್ತು ಬೆಂಗಳೂರಿನ ನಿಮ್ಹಾನ್ಸ್ ನ ನ್ಯೂರೊ ಕ್ರಿಟಿಕಲ್ ಕೇರ್ ವಿಭಾಗದಲ್ಲಿ ಒಂದು ವರ್ಷ ಫೆಲೋಶಿಪ್ ಮುಗಿಸಿದ್ದಾರೆ. ನಂತರ ಎರಡು ವರ್ಷ ಸತತ ಅಧ್ಯಯನದ ಬಳಿಕ ಈಗ ಇವರಿಗೆ ದೆಹಲಿ ಏಮ್ಸ್ ನಲ್ಲಿ DM ಸೂಪರ್ ಸ್ಪೆಷಲೈಷೇಶನ್ ಪದವಿಗೆ ಆಯ್ಕೆಯಾಗಿದ್ದಾರೆ.


ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡೇ ಮಾಡ್ತೀವಿ; ಸಿದ್ದರಾಮಯ್ಯಗೆ ಸಚಿವ ಕೆಎಸ್​ ಈಶ್ವರಪ್ಪ ಸವಾಲು


ಈ ಕುರಿತು ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ದಿವ್ಯಾ ಅರವಿಂದ ಹಿರೊಳ್ಳಿ, ಜನವರಿ ತಿಂಗಳಲ್ಲಿ ಎಡ್ಮಿಷನ್ ಮಾಡಿಸಿ ದೆಹಲಿ ಏಮ್ಸ್ ಗೆ ಅಧ್ಯಯನಕ್ಕೆ ತೆರಳುತ್ತಿದ್ದೇನೆ. ಮೂರು ವರ್ಷಗಳ ಅವಧಿಯ DM ಕೋರ್ಸ್ ಇದಾಗಿದೆ. MD ಮೆಡಿಸಿನ್ ಮತ್ತು ಅನಸ್ತೇಷಿಯಾ ಪದವಿ ಪಡೆದು 2 ವರ್ಷ ಅನುಭವ ಇದ್ದವರು ಮಾತ್ರ ಈ DM ಸೂಪರ್ ಸ್ಪೇಷಿಲೈಷೇಷನ್ ಪದವಿ ಓದಲು ಅರ್ಹರಾಗಿರುತ್ತಾರೆ.  DM ಕ್ರಿಟಿಕಲ್ ಕೇರ್ ಮೆಡಿಸಿನ್ ನಲ್ಲಿ ಒಟ್ಟು 12 ಸೀಟುಗಳಿದ್ದವು.  ಏಮ್ಸ್ ದೆಹಲಿ-5, ಜೋಧಪುರ ಏಮ್ಸ್ ನಲ್ಲಿ -5, ಭೋಪಾಲ ಏಮ್ಸ್ ನಲ್ಲಿ -1 ಹಾಗೂ ಋಷಿಕೇಶ ಏಮ್ಸ್ ನಲ್ಲಿ-1 ಸೀಟುಗಳಿದ್ದವು.  ಸುಮಾರು 2000 ದಿಂದ 2500 MD ಮೆಡಿಸೀನ್ ವೈದ್ಯರು ಈ ಪ್ರವೇಶ ಪರೀಕ್ಷೆ ಬರೆದಿರಬಹುದು. ಅವರಲ್ಲಿ ತಾನು ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ. MD ಅನಸ್ತೇಶಿಯಾ ಮುಗಿದ ಮೇಲೆ ಎರಡು ವರ್ಷ ಸತತ ಅಧ್ಯಯನ ಮಾಡಿದ್ದೇನೆ. ಈ ಪ್ರವೇಶ ಪರೀಕ್ಷೆಗೆ ಏನು ಅಧ್ಯಯನ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಮೂರ್ನಾಲ್ಕು ತಿಂಗಳು ಬೇಕು. ಅಲ್ಲದೇ, ನಂತರ ಪ್ರತಿದಿನ ಕನಿಷ್ಠ 10 ರಿಂದ 12 ಗಂಟೆ ಓದಿದಾಗ ಮಾತ್ರ ಪ್ರವೇಶ ಪಡೆಯಲು ಸಾಧ್ಯ. ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದೆ. ಈಗ ಮೂರನೇ ಬಾರಿಗೆ ಈ ಸುವರ್ಣಾವಕಾಶ ಒದಗಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


ದೆಹಲಿ ಏಮ್ಸ್ ನಲ್ಲಿ ಸೂಪರ್ ಸ್ಪೇಷಿಲೈಷೇಶನ್​ಗೆ ಆಯ್ಕೆಯಾಗಿರುವ ತಮಗೆ ಈಗ ಉಚಿತ ಪ್ರವೇಶ ನೀಡಲಾಗುತ್ತದೆ. ಅಲ್ಲದೇ, ಕೇಂದ್ರ ಸರಕಾರದ 7ನೇ ವೇತನ ಆಯೋಗದಂತೆ ಸ್ಟೈಫಂಡ್ ಕೂಡ ನೀಡುತ್ತಾರೆ. DM ಪದವಿ ಮುಗಿದ ಮೇಲೆ ಏಮ್ಸ್ ಗಳಲ್ಲಿಯೇ ನೇಮಕಾತಿಯೂ ಆಗಬಹುದು. ಅಲ್ಲದೇ, ತಾವು ಇಷ್ಟಪಟ್ಟ ಕಡೆ ಕೆಲಸ ಸಿಗಬಹುದು ಎಂದು ದಿವ್ಯಾ ಅರವಿಂದ ಹಿರೊಳ್ಳಿ ತಿಳಿಸಿದ್ದಾರೆ.


ಇದನ್ನೂ ಓದಿ: ಮೃತ್ಯುಕೂಪವಾಗುತ್ತಿದೆ ಭದ್ರಾ ಮೇಲ್ದಂಡೆ ಕಾಲುವೆ; ತಡೆಗೋಡೆ ನಿರ್ಮಿಸಲು ಸ್ಥಳೀಯರ ಆಗ್ರಹ


ಮಗಳ ಸಾಧನೆಗೆ ವಿಜಯಪುರದ ನ್ಯಾಯವಾದಿ ಅರವಿಂದ ಹಿರೊಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ. ಮಗಳು ದೆಹಲಿ ಏಮ್ಸ್ ನಲ್ಲಿ ಪ್ರವೇಶ ಪಡೆದಿರುವುದು ಅದರಲ್ಲಿಯೂ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ತಿಳಿದು ಸಂತಸವಾಗಿದೆ. ಬಾಲ್ಯದಿಂದಲೇ ಅವಳು ಪ್ರತಿಭಾವಂತೆ. ಎಲ್ಲ ಕಡೆಯೂ ಮೆರಿಟ್ ಆಧಾರದಲ್ಲಿಯೇ ಪ್ರವೇಶ ಪಡೆಯುವ ಮೂಲಕ ತನ್ನ ಪ್ರತಿಭೆಯನ್ನು ತೋರಿಸಿದ್ದಾಳೆ. ಸ್ನಾತಕೋತ್ತರ ಪದವಿ, ಫೆಲೋಶಿಪ್ ಮಾಡುವಾಗಲೂ ಅಷ್ಟೇ, ನಯವಿನಯದಿಂದ ಮತ್ತು ಅದರಲ್ಲಿಯೂ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ನೆರವಾಗುವ ಮೂಲಕ ಹೆಮ್ಮೆ ಪಡುವ ಕೆಲಸ ಮಾಡಿದ್ದಾಳೆ. ಅಲ್ಲದೇ, ಈಕೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಗಳ ಹಿರಿಯ ವೈದ್ಯರೂ ಕೂಡ ದಿವ್ಯಾ ಬಗ್ಗೆ ಹೆಮ್ಮೆಯ ಮಾತುಗಳನ್ನು ಹೇಳುವುದನ್ನು ನೋಡಿದರೆ ಇದಕ್ಕಿಂತ ಸಂತೋಷ ಬೇರೊಂದಿಲ್ಲ ಎಂದು ನ್ಯಾಯವಾದಿ ಅರವಿಂದ ಹಿರೊಳ್ಳಿ ಸಂತಸ ಹಂಚಿಕೊಂಡಿದ್ದಾರೆ.


ಅಂದಹಾಗೆ, ನ್ಯಾಯವಾದಿ ಅರವಿಂದ ಹಿರೊಳ್ಳಿ ಅವರ ಮೂರೂ ಜನ ಮಕ್ಕಳು ಪ್ರತಿಭಾವಂತರೆ. ಎಲ್ಲರೂ ಮೆರಿಟ್ ಆಧಾರದ ಮೇಲೆಯೇ ಉತ್ತಮ ಶಿಕ್ಷಣ ಪಡೆದಿದ್ದಾರೆ. ಇವರ ಹಿರಿಯ ಮಗಳು ಕಾನೂನು ಪದವಿಧರಳಾಗಿದ್ದು, ಬೆಂಗಳೂರಿನಲ್ಲಿ ನಾನಾ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿದ್ದಾರೆ.


ವರದಿ: ಮಹೇಶ ವಿ. ಶಟಗಾರ

First published: