• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕೋವಿಡ್‌ ನಿರ್ವಹಣೆಯಲ್ಲಿ ಲೋಪವಾದರೆ ಜಿಲ್ಲಾಧಿಕಾರಿಗಳೇ ಸಂಪೂರ್ಣ ಹೊಣೆ; ಡಿಸಿಎಂ ಅಶ್ವಥ್ ನಾರಾಯಣ ಎಚ್ಚರಿಕೆ

ಕೋವಿಡ್‌ ನಿರ್ವಹಣೆಯಲ್ಲಿ ಲೋಪವಾದರೆ ಜಿಲ್ಲಾಧಿಕಾರಿಗಳೇ ಸಂಪೂರ್ಣ ಹೊಣೆ; ಡಿಸಿಎಂ ಅಶ್ವಥ್ ನಾರಾಯಣ ಎಚ್ಚರಿಕೆ

ಅಶ್ವತ್ಥನಾರಾಯಣ

ಅಶ್ವತ್ಥನಾರಾಯಣ

ಡಿಸಿಎಂ ಸಲಹೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಆನಂದ್‌ ಸಿಂಗ್‌ ಅವರು, ತಮ್ಮ ಎಲ್ಲ ಸಲಹೆಗಳನ್ನು ಈ ಕೂಡಲೇ ಜಾರಿಗೆ ತರುತ್ತೇವೆ. ಈ ಸಭೆಯ ನಂತರ ಮತ್ತೆ ಸಭೆ ನಡೆಸಿ ಎಲ್ಲ ಕೊರತೆಗಳನ್ನು ನೀಗಿಸಲಾಗುವುದು ಎಂದು ಭರವಸೆ ನೀಡಿದರು.

  • Share this:

ಬೆಂಗಳೂರು: ಜಿಲ್ಲೆಗಳ ಕೋವಿಡ್‌ ಪರಿಸ್ಥಿತಿ ನಿಯಂತ್ರಣ ಹಾಗೂ ವ್ಯವಸ್ಥೆ ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳದ್ದೇ ಆಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು. ವರ್ಚುವಲ್‌ ವೇದಿಕೆಯ ಮೂಲಕ ಬುಧವಾರ ಬೆಂಗಳೂರಿನಿಂದಲೇ ಬಳ್ಳಾರಿ ಜಿಲ್ಲೆಯ ಕೋವಿಡ್‌ ಪರಿಸ್ಥಿತಿಯನ್ನು ಅವಲೋಕನ ಮಾಡಿದ ವೇಳೆ ಮಾತನಾಡಿದ ಡಿಸಿಎಂ, ಜಿಲ್ಲೆಯಲ್ಲಿ ಕೋವಿಡ್‌ ನಿರ್ವಹಣೆಯಲ್ಲಿ ಕಂಡುಬಂದಿರುವ ಲೋಪದೋಷಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಳ್ಳಾರಿ ಜಿಲ್ಲಾ ಕೇಂದ್ರದಿಂದಲೇ ವರ್ಚುಯಲ್‌ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಎಲ್ಲ ತಾಲೂಕುಗಳ ತಹಸೀಲ್ದಾರ್‌ಗಳೊಂದಿಗೆ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಜತೆ ಮಾತನಾಡಿದ ಡಿಸಿಎಂ, ಕೋವಿಡ್‌ ನಿರ್ವಹಣೆ ಏನೇ ಲೋಪವಾದರೂ ಜಿಲ್ಲಾಧಿಕಾರಿಯೇ ಹೊಣೆ ಎಂದರು.


ನಿರೀಕ್ಷಿತ ಪ್ರಮಾಣದಲ್ಲಿ ಕೋವಿಡ್‌ ಪರೀಕ್ಷೆ ನಡೆಯುತ್ತಿಲ್ಲ. ಇದರಲ್ಲಿ ಬಹಳ ಲೋಪ ಕಂಡುಬರುತ್ತಿದೆ. ರಿಸಲ್ಟ್‌ ಕೂಡ ತುಂಬಾ ತಡವಾಗಿ ನೀಡಲಾಗುತ್ತಿದೆ. ರಿಸಲ್ಟ್‌ ಎಷ್ಟು ತಡವಾಗುತ್ತೋ ರೋಗವು ಅಷ್ಟು ಉಲ್ಬಣವಾಗುತ್ತದೆ. ಹೀಗಾಗಿ ಸಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದೆ ಎಂದು ಡಿಸಿಎಂ ಹೇಳಿದರಲ್ಲದೆ, ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿ ತಮ್ಮ ಬಳಿಯಿದ್ದ ಮಾಹಿತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಜೊತೆಗೆ ಈ ಬಗ್ಗೆ ಕೂಡಲೇ ಎಚ್ಚರಿಕೆ ವಹಿಸದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ಆನಂದ್‌ ಸಿಂಗ್‌ ಅವರಿಗೆ ವಿವರಿಸಿದರು.


ಯಾವ ಕಾರಣಕ್ಕೂ ರೋಗ ಉಲ್ಬಣವಾಗುವ ಹಂತಕ್ಕೆ ಬಿಡಲೇಬಾರದು. ವ್ಯಕ್ತಿಯಿಂದ ಸ್ಯಾಂಪಲ್‌ ಸ್ವೀಕರಿಸಿದ 24  ಗಂಟೆಯೊಳಗೆ ಫಲಿತಾಂಶ ಕೊಡಬೇಕು. ಒಂದು ಫಲಿತಾಂಶ ಪಾಸಿಟಿವ್‌ ಬಂದರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡುವುದೋ ಅಥವಾ ಅವರ ಮನೆಯಲ್ಲೇ ಐಸೋಲೇಷನ್‌ ಮಾಡಿ ಸೂಕ್ತ ಔಷಧಗಳನ್ನು ಫೂರೈಕೆ ಮಾಡಬೇಕು. ಈ ಪ್ರಕ್ರಿಯೆ ಅತ್ಯಂತ ತ್ವರಿತವಾಗಿ ಆಗಬೇಕು ಹಾಗೂ ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕು. ರೋಗ ನಿರೋಧಕ ಚಿಕಿತ್ಸೆ ತ್ವರಿತವಾಗಿ ಆರಂಭಿಸದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ಡಿಸಿಎಂ ಅವರು ಸಚಿವ ಆನಂದ ಸಿಂಗ್‌ ಹಾಗೂ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಟ್ಟಿ ಅವರಿಗೆ ತಿಳಿಸಿದರು.


ಈಗ ಬಳ್ಳಾರಿ ಜಿಲ್ಲೆಯಲ್ಲಿ ತುರ್ತಾಗಿ ಆಗಬೇಕಿರುವ ಕೆಲಸವೆಂದರೆ, ರಿಸಲ್ಟ್‌ ಕೊಡುವ ಲ್ಯಾಬ್‌ಗಳನ್ನು ಹೆಚ್ಚಿಸಬೇಕು ಹಾಗೂ ಇರುವ ಲ್ಯಾಬ್‌ಗಳಿಗೆ ಶಕ್ತಿ ತುಂಬಬೇಕು. ಒಂದು ಸ್ಯಾಂಪಲ್‌ಗಳು ಹೋಗುತ್ತಿದ್ದರೆ, ಇನ್ನೊಂದೆಡೆ ರಿಸಲ್ಟ್‌ ಬರುತ್ತಿರಬೇಕು. ಅಗತ್ಯವಾದರೆ ರಿಸಲ್ಟ್‌ ನೀಡುವ ಎಕ್ಸ್‌ಟ್ರಾಕ್ಸಿನ್‌ ಯಂತ್ರವನ್ನು ಇನ್ನಷ್ಟು ಖರೀದಿ ಮಾಡಿ. ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ಕ್ರಮ ಕೈಗೊಳ್ಳಬೇಕು. ಯಾವುದಕ್ಕೂ ಕೊರತೆ ಆಗಬಾರದು, ಬಳ್ಳಾರಿ ಮಾತ್ರವಲ್ಲ, ಎಲ್ಲ ಜಿಲ್ಲೆಗಳಿಗೂ ನಾನು ಇದೇ ಸಲಹೆಯನ್ನೇ ಮಾಡುತ್ತೇನೆಂದು ಡಾ.ಅಶ್ವತ್ಥನಾರಾಯಣ ಹೇಳಿದರು.


ಇದನ್ನು ಓದಿ: ಸರಕಾರ ನೀಡಿರುವ ಅವಧಿಯಲ್ಲಿ ವ್ಯಾಪಾರ ಆಗಲ್ಲ ಎಂದು ಪರದಾಡುತ್ತಿರುವ ಬೀದಿಬದಿ ವ್ಯಾಪಾರಿಗಳು


ಔಷಧ ಕೊರತೆ ಆಗಬಾರದು


ಇದೇ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ವೈದ್ಯಾಧಿಕಾರಿಗಳ ಜತೆಯೂ ಸಂವಾದ ನಡೆಸಿದ ಡಿಸಿಎಂ ಅವರು, ರೋಗ ಲಕ್ಷಣ ಇರುವವರಿಗೆ ಯಾವ ಔಷಧ ನೀಡಬೇಕು ಎಂಬುದನ್ನು ತಿಳಿಸಿದರಲ್ಲದೆ ಯಾವುದೇ ಕಾರಣಕ್ಕೂ ಔಷಧ ಕೊರತೆ ಆಗದಂತೆ ನೋಡಿಕೊಳ್ಳಿ. ಎಲ್ಲಿಯೂ ಆಮ್ಲಜನಕ, ವೆಂಟಿಲೇಟರ್‌, ರೆಮಿಡಿಸ್ವಿರ್‌ ಕೊರತೆ ಆಗದಂತೆ ಎಚ್ಚರ ವಹಿಸಿ. ಯಾವುದೇ ಸಮಸ್ಯೆ ಇದ್ದರೂ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕೊರತೆ ಆಗದಂತೆ ನೋಡಿಕೊಳ್ಳಿ. ಸಮಸ್ಯೆ ಎದುರಾದಾಗ ಒದ್ದಾಡುವುದು ಬೇಡ ಎಂದು ಸೂಚಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್‌ ನಿರ್ವಹಣೆಗೆ ಪರಿಣಾಮಕಾರಿ ಸೌಲಭ್ಯಗಳ ಕೊರತೆ ಇದೆ ಎಂದು ಆನಂದ ಸಿಂಗ್‌ ಅವರ ಗಮನ ಸೆಳೆದ ಡಿಸಿಎಂ, ರೋಗ ಲಕ್ಷಣಗಳಿರುವ ಜನರಿಗೆ ತತ್‌ಕ್ಷಣದಿಂದಲೇ ಚಿಕಿತ್ಸೆ ಆಗತ್ಯವಿರುತ್ತದೆ ಎಂದು ಡಿಸಿಎಂ ಒತ್ತಿ ಹೇಳಿದರು.


ಆನಂದ ಸಿಂಗ್‌ ಸ್ಪಂದನೆ


ಡಿಸಿಎಂ ಸಲಹೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಆನಂದ್‌ ಸಿಂಗ್‌ ಅವರು, ತಮ್ಮ ಎಲ್ಲ ಸಲಹೆಗಳನ್ನು ಈ ಕೂಡಲೇ ಜಾರಿಗೆ ತರುತ್ತೇವೆ. ಈ ಸಭೆಯ ನಂತರ ಮತ್ತೆ ಸಭೆ ನಡೆಸಿ ಎಲ್ಲ ಕೊರತೆಗಳನ್ನು ನೀಗಿಸಲಾಗುವುದು ಎಂದು ಭರವಸೆ ನೀಡಿದರು.

Published by:HR Ramesh
First published: