news18-kannada Updated:October 12, 2020, 10:27 PM IST
ಕೊಡಗಿನ ಪ್ರವಾಹ ಸಂತ್ರಸ್ತ ಜನರು
ಕೊಡಗು: ‘ದೇವರು ಕೊಟ್ಟರೂ ಪೂಜಾರಿ ಕೊಡ’ ಎನ್ನೋ ಹಾಗೆ ಸರ್ಕಾರ ಸಂತ್ರಸ್ತರಿಗೆ ನಿವೇಶನ ಹಂಚಿದ್ದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ವರ್ಷ ಕಳೆದರೂ ಸಂತ್ರಸ್ತರು ನಿವೇಶನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ತಮ್ಮ ನಿವೇಶನ ಇಲ್ಲೇ ಇದೆ ಎಂದು ಗೊತ್ತಿದ್ದರೂ ಮನೆ ನಿರ್ಮಿಸಿಕೊಳ್ಳಲು ನಿವೇಶನದ ಜಾಗದಲ್ಲಿರುವ ಮರಗಳು ಅಡ್ಡಿಯಾಗುತ್ತಿವೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿದು ನೂರಾರು ಜನರು ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದರು. ಅವರಲ್ಲಿ ಸೋಮವಾರಪೇಟೆ ತಾಲ್ಲೂಕಿನ ಕಾವೇರಿ ನದಿತಟದ ನೆಲ್ಯಹುದಿಕೇರಿ, ಕುಂಬಾರಗುಂಡಿ, ಬೆಟ್ಟದ ಕಾಡು ಗ್ರಾಮಗಳ 140 ಕುಟುಂಬಗಳು ಕಳೆದ ವರ್ಷ ಮನೆ ಕಳೆದುಕೊಂಡಿದ್ದವು. ನಂತರ ಶಾಶ್ವತ ಪರಿಹಾರ ಬೇಕೆಂದು ಮೂರು ವರ್ಷಗಳ ಕಾಲ ಈ ಕುಟುಂಬಗಳು ನಿರಂತರ ಧರಣಿ ನಡೆಸಿದ್ದವು. ಅವರ ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ಕೊನೆಗೂ ಅಬ್ಯತ್ಮಂಗಲ ಸಮೀಪದ ಸರ್ಕಾರಿ ಜಾಗವನ್ನು ಗುರುತ್ತಿಸಿ ನಿವೇಶನ ಹಂಚಿಕೆ ಮಾಡಿತ್ತು.
ಅಕ್ಟೋಬರ್ 2019 ರಲ್ಲೇ ಸಂತ್ರಸ್ತರಿಗೆ ಉಪವಿಭಾಗಧಿಕಾರಿಯವರ ನೇತೃತ್ವದಲ್ಲಿ ಟೋಕನ್ ಕೂಡ ವಿತರಿಸಲಾಗಿತ್ತು. ಅದು ಅರಣ್ಯ ಇಲಾಖೆ ಜಾಗವಾಗಿದ್ದು, ಅದರಲ್ಲಿ ನೂರಾರು ಮರಗಳಿವೆ. ಅವುಗಳನ್ನು ತೆರವು ಮಾಡಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಡಳಿತವು ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ಪತ್ರವನ್ನು ಬರೆದಿದೆ. ಆದರೂ ಅರಣ್ಯ ಇಲಾಖೆ ಮಾತ್ರ ಒಂದು ವರ್ಷ ಪೂರೈಸಿದರೂ ಇನ್ನೂ ಮರಗಳನ್ನು ತೆರವು ಮಾಡಿಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ರೋಸಿಹೋಗಿದ್ದ ನಿರಾಶ್ರಿತರು ಮಡಿಕೇರಿಯ ಅರಣ್ಯಭವನದ ಎದುರು ಪ್ರತಿಭಟನೆ ನಡೆಸಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗಂಡನ ಮನೆ ಬಿಡಲು ಕೊರೋನಾ ಕಥೆ ಕಟ್ಟಿದ ಮದನಾರಿ; ಬಾಯ್ಫ್ರೆಂಡ್ ಜೊತೆ ಆಂಬುಲೆನ್ಸ್ ಏರಿ ಪರಾರಿ
ಕೊಡಗಿನಲ್ಲಿ ಮರ ಕಡಿಯುವುದು ದೊಡ್ಡ ಆದಾಯದ ಮೂಲವಾಗಿ ಹೋಗಿದೆ. ಆದರೆ ನಿರಾಶ್ರಿತರಿಗೆ ಹಂಚಿಕೆ ಮಾಡಿರುವ ಜಾಗದಲ್ಲಿರುವ ಮರಗಳನ್ನು ಕಡಿಯುವುದರಿಂದ ಅರಣ್ಯ ಇಲಾಖೆಗೆ ಯಾವುದೇ ಲಾಭವಿಲ್ಲ. ಹೀಗಾಗಿ ನಿರ್ಲಕ್ಷ್ಯವಹಿಸಿದೆ ಎಂದು ಸಂತ್ರಸ್ತರ ಹೋರಾಟ ಮುಖಂಡ ಪಿ.ಆರ್. ಭರತ್ ಆಕ್ರೋಶ ವ್ಯಕ್ತಡಿಸಿದರು.
ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಸೋಮವಾರಪೇಟೆ ಎಸಿಎಫ್ ನೆಹರು, 50 ಮರಗಳಿಗಿಂತ ಹೆಚ್ಚಿನ ಮರಗಳಿದ್ದರೆ ಅದಕ್ಕೆ ನೋಟಿಫಿಕೇಷನ್ ಆಗಬೇಕು. ಜೊತೆಗೆ ಅಕ್ಟೋಬರ್ ತಿಂಗಳು ಮುಗಿಯುವರೆಗೆ ಮಳೆಗಾಲವಿರುವುದರಿಂದ ಮರಕಡಿತಕ್ಕೆ ಅವಕಾಶ ನೀಡಿಲ್ಲ. ಇದರಿಂದಾಗಿ ವಿಳಂಬವಾಗಿದೆಯೇ ಹೊರತು ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ಮಾಡಿಲ್ಲ ಎಂದು ಇಲಾಖೆಯ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಕೋಲಾರ ಡಿಸಿಸಿ ಬ್ಯಾಂಕ್ನಿಂದ ಹೊಸ ಹೆಜ್ಜೆ; ಗ್ರಾಹಕರ ಮನೆ ಬಾಗಿಲಿಗೆ ಮೈಕ್ರೋ ಎಟಿಎಂ ಸೇವೆಒಟ್ಟಿನಲ್ಲಿ ಸಂತ್ರಸ್ತರ ಹೋರಾಟಕ್ಕೆ ಮಣಿದಿದ್ದ ಸರ್ಕಾರ ನಿವೇಶನ ಹಂಚಿಕೆ ಮಾಡಿ ವರ್ಷ ಕಳೆದಿದ್ದರೂ, ನಿವೇಶನದ ಜಾಗದಲ್ಲಿರುವ ಮರಗಳನ್ನು ತೆರವು ಮಾಡುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದರಿಂದ ಸಂತ್ರಸ್ತರು ಮನೆ ನಿರ್ಮಾಣ ಸಾಧ್ಯವಿಲ್ಲದೆ ಪರದಾಡುವಂತಾಗಿದೆ.
ವರದಿ: ರವಿ.ಎಸ್ ಹಳ್ಳಿ
Published by:
Vijayasarthy SN
First published:
October 12, 2020, 10:27 PM IST