ಶುಂಠಿ ಬೆಳೆಗೆ ಕೊಳೆ ರೋಗ, ರೈತರ ಗಾಯದ ಮೇಲೆ ಬರೆ

ರೈತರಿಗೆ ಒಂದು ಎಕರೆಗೆ ಏನಿಲ್ಲವೆಂದರೂ ಒಂದು ಲಕ್ಷಕ್ಕೂ ಅಧಿಕ ಖರ್ಚಾಗುತ್ತದೆ. ಆದರೆ ಏಕಾಏಕಿ ಶುಂಠಿಗೆ ಕೊಳೆ ರೋಗ ಬಂದಿರುವುದು ಇಲ್ಲಿನ ರೈತರನ್ನು ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಅಲ್ಲದೆ ಕೃಷಿ ಇಲಾಖೆ ಅಧಿಕಾರಿಗಳು ಸ್ಪಂದಿಸದಿರುವುದು ಸಹ ರೈತರನ್ನು ಹೈರಾಣಾಗಿಸಿದೆ. 

ಕೊಳೆ ರೋಗ ಬಂದಿರುವ ಶುಂಠಿ ಬೆಳೆ.

ಕೊಳೆ ರೋಗ ಬಂದಿರುವ ಶುಂಠಿ ಬೆಳೆ.

  • Share this:
ಬೀದರ್; ಜಿಲ್ಲೆಯಲ್ಲಿ ಪ್ರತಿವರ್ಷವೂ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ಇಲ್ಲಿನ ರೈತರು ಒಂದಿಲ್ಲೊಂದು ಸಮಸ್ಯೆಯ ಸುಳಿಗೆ ಸಿಲುಕಿ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಇತ್ತೀಚೆಗೆ ಕಳೆದ ಹತ್ತು ಹದಿನೈದು ದಿನಗಳಿಂದ ಶುಂಠಿಗೆ ಕೊಳೆ ರೋಗದ ಕಾಟ ಜಾಸ್ತಿಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆಸಿದ ಶುಂಠಿ ರೋಗಕ್ಕೆ ತುತ್ತಾಗಿದ್ದು, ಬೆಳೆ ಸಂಪೂರ್ಣವಾಗಿ ಕೆಂಪು ವರ್ಣಕ್ಕೆ ತಿರುಗಿದೆ. ಜಿಲ್ಲೆಯಲ್ಲಿ ಶೇಕಡಾ 50ರಷ್ಟು ಪ್ರಮಾಣದಲ್ಲಿ ಶುಂಠಿ ಕೊಳೆ ರೋಗಕ್ಕೆ ತುತ್ತಾಗಿರುವುದು ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದೆ.

ಇನ್ನು ಈ ವರ್ಷದಲ್ಲೇ ಮೂರು ಬಾರಿ ಎಡಬಿಡದೇ ಸುರಿದ ಮಳೆಯಿಂದಾಗಿ ಶುಂಠಿ ಬೆಳೆದಿರುವ ರೈತರ ಆದಾಯದ ಆಸೆಗೆ ತಣ್ಣೀರೆರೆಚಿದೆ. ಪ್ರಸ್ತುತ ಅವಧಿಯಲ್ಲಿ ವಾಡಿಕೆಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದಿರುವುದು ಕೊಳೆ ರೋಗ ಹರಡಲು ಕಾರಣವಾಗಿದೆ. ಮಳೆ ಹೆಚ್ಚಾದ ಕಾರಣ ಬ್ಯಾಕ್ಟಿರಿಯಲ್ ವಿಲ್ಟ್, ಪಿಜೋರಿಯಂ ವಿಲ್ಟ್ ಎಂಬ ಕೀಟಾಣುಗಳ ದಾಳಿಯಿಂದ ಬೆಳೆ ಕೊಳೆಯಲು ಆರಂಭಿಸಿದೆ. ಹಂತ ಹಂತವಾಗಿ ಇಡೀ ಶುಂಠಿ ಬೆಳೆಯನ್ನು ಈ ರೋಗ ಆಕ್ರಮಿಸುತ್ತಿರುವುದು ಬೆಳೆಗಾರರನ್ನು ಹೈರಾಣಾಗಿಸಿದೆ. ಇದು ಸಹಜವಾಗಿಯೇ ರೈತರನ್ನು ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಶುಂಠಿಗೆ ತಗುಲಿರುವ ಕೊಳೆ ರೋಗಕ್ಕೆ ಬೆಳೆ ಉಳಿಸಿಕೊಳ್ಳುವ ಸಲುವಾಗಿ ರೈತರು ದುಬಾರಿ ಬೆಲೆಯ ಕ್ವಿನಾಲ್ ಫಾಸ್ಟ್, ಮಾನೋಕ್ವೇರಿ ಫಾಸ್ಟ್ಲಿಂಡನ್ ಕೀಟನಾಶಕ ಸಿಂಪಡಿಸಿದ್ದಾರೆ. ಆದರೂ ಬೆಳೆ ಉಳಿಯದೆ ಹೋದದ್ದು ರೈತರ ಆತಂಕವನ್ನು ಹೆಚ್ಚಿಸಿದೆ.

ಇದನ್ನು ಓದಿ: ಹೆಣ್ಣು ಮಕ್ಕಳ ರಕ್ಷಣೆ, ಅಪರಾಧ ಪ್ರಕರಣ ತಡೆಗಾಗಿ ಮಂಡ್ಯ ಜಿಲ್ಲೆಯಲ್ಲಿ ನಿರ್ಭಯ ಪಡೆ ರಚನೆ!

ಸಾಕಷ್ಟು ಪ್ರಯಾಸಪಟ್ಟರೂ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಷ್ಟೇ ಕೀಟನಾಶಕ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರದೆ, ಶುಂಠಿ ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದು ಶುಂಠಿ ಸಸಿಗೆ ಕೊಳೆ ರೋಗ ಬಂದರೆ ಅದು ಇಡೀ ಗದ್ದೆಯನ್ನೇ ಆಕ್ರಮಿಸುತ್ತದೆ. ಕೊಳೆ ರೋಗದಿಂದ ಶುಂಠಿಯ ಇಳುವರಿ ಕಡಿಮೆಯಾಗುತ್ತದೆ. ಮಾತ್ರವಲ್ಲದೇ ಶುಂಠಿಯ ಗಡ್ಡೆಗಳು ಬೆಳವಣಿಗೆಯನ್ನೇ ಕಾಣುವುದಿಲ್ಲ. ಇದರಿಂದ ಅನೇಕ ರೈತರು ಅವಧಿಗೂ ಮುಂಚಿತವಾಗಿಯೇ ಶುಂಠಿ ಕಿತ್ತು ಕೊಡುವ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಮೊದಲೇ ಸಾಕಷ್ಟು ಸುರಿದ ಮಳೆಯಿಂದಾಗಿ ಇದ್ದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಜಿಲ್ಲೆಯ ಶುಂಠಿ ಬೆಳೆಗಾರರು ಈಗ ಸಾಕಷ್ಟು ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿರುವುದು ನೋವಿನ ಸಂಗತಿ.

ಇನ್ನೂ ಶುಂಠಿ ಬೆಳೆ ಒಂದು ವರ್ಷದ ಬೆಳೆಯಾಗಿದ್ದು, ಶುಂಠಿ ಬೆಳೆ ಹೆಚ್ಚಿನ ಇಳುವರಿ ಪಡೆಯಬೇಕಾಗರೆ ಇದಕ್ಕೆ ಕಾಲ ಕಾಲಕ್ಕೆ ಔಷಧಿ, ಗೊಬ್ಬರ ಸಿಂಪಡಣೆ ಮಾಡಬೇಕು; ಗೊಬ್ಬರ ಹಾಕಬೇಕು, ನೀರು ಕೂಡ ಬಿಡಬೇಕು. ಹೊಲದಲ್ಲಿ ಕಳೆ ಬಾರದ ಹಾಗೇ ಸಹ ನೋಡಿಕೊಳ್ಳಬೇಕು. ಇಷ್ಟೆಲ್ಲ ಮಾಡಬೇಕಾದರೆ ರೈತರಿಗೆ ಒಂದು ಎಕರೆಗೆ ಏನಿಲ್ಲವೆಂದರೂ ಒಂದು ಲಕ್ಷಕ್ಕೂ ಅಧಿಕ ಖರ್ಚಾಗುತ್ತದೆ. ಆದರೆ ಏಕಾಏಕಿ ಶುಂಠಿಗೆ ಕೊಳೆ ರೋಗ ಬಂದಿರುವುದು ಇಲ್ಲಿನ ರೈತರನ್ನು ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಅಲ್ಲದೆ ಕೃಷಿ ಇಲಾಖೆ ಅಧಿಕಾರಿಗಳು ಸ್ಪಂದಿಸದಿರುವುದು ಸಹ ರೈತರನ್ನು ಹೈರಾಣಾಗಿಸಿದೆ.
Published by:HR Ramesh
First published: