ರಂಟೆ ಹೊಡಿಯೋಕೆ, ಹಾಲು ಕರೆಯೋಕೆ, ಚಕ್ಕಡಿ ಗಾಡಿ ಹೂಡುವುದಕ್ಕೂ ಸೈ ಈ ವಿಶೇಷ ಚೇತನ ಯುವತಿ

ಸದ್ಯ ಆದರಳ್ಳಿ ತಾಂಡಾದಲ್ಲಿ ಮೂರು ಎಕರೆ ಜಮೀನು ಹೊಂದಿರುವ ಇವರ ಕುಟುಂಬ ಸರಸ್ವತಿಯಂಥ ಮಗಳನ್ನ ಪಡೆದಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಅಂತಿದ್ದಾರೆ ಕಿವಿ‌ ಕೇಳೋದಿಲ್ಲ, ಮಾತು ಬರೋಲ್ಲ, ಇಷ್ಟೆಲ್ಲ ಮಾನಸಿಕವಾಗಿ ನೋವಿದ್ದರೂ ಸಹ ಕೈ ಕಟ್ಟಿ ಕೂತಿಲ್ಲ‌ ಈ ಯುವತಿ.

ಹೊಲದಲ್ಲಿ ರಂಟೆ ಹೊಡೆಯುತ್ತಿರುವ ಸರಸ್ವತಿ

ಹೊಲದಲ್ಲಿ ರಂಟೆ ಹೊಡೆಯುತ್ತಿರುವ ಸರಸ್ವತಿ

  • Share this:
ಗದಗ: ಜೀವನ ಪೂರ್ತಿ ಕಲಿಯಲು ಯಾವುದಾದರೂ ಕ್ಷೇತ್ರ ಇದೇ ಎಂದಾರೆ ಅದು ಕೃಷಿ ಮಾತ್ರ. ರೈತನ ಕೃಷಿ ಜೀವನದಂತಹ ಕಠಿಣ ಕ್ಷೇತ್ರದಲ್ಲೇ ನಾನು ಯಾರಿಗಿಂತಲೂ ಕಡಿಮೆ ಅಲ್ಲ, ನಾನು ಎಲ್ಲರಂತೆ ಬದುಕಬಲ್ಲೆ, ಸಾಧಿಸಬಲ್ಲೆ. ಛಲವೊಂದಿದ್ದರೆ ಸಾಕು ಮನುಷ್ಯ ಏನು ಬೇಕಾದರೂ ಮಾಡುತ್ತಾನೆ ಎನ್ನುವುದಕ್ಕೆ ಗದಗ ಜಿಲ್ಲೆಯ ಈ  ಸರಸ್ವತಿ ಎಂಬ ಯುವತಿಯೇ ಎಲ್ಲರಿಗೂ ಮಾದರಿ.

ಹೌದು.. . ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು ದೇಹದ ವೈಕಲ್ಯತೆಯನ್ನೇ ಮೀರಿ, ಕಷ್ಟವನ್ನು ಮೆಟ್ಟಿ ನಿಂತ ಶ್ರೇಷ್ಟ ರೈತನ ಮಗಳ ಕತೆ.   ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಲ್ಲಳು ಅನ್ನುವ  ಯುವತಿಯೊಬ್ಬಳ ಕೃಷಿಗಾಥೆಯೇ ನಾವು ಹೇಳಲು ಹೊರಟಿರುವ ಸಂಗತಿ.

ಬಾರುಕೋಲ ಹಿಡಿದು ಜಮೀನಿನಲ್ಲಿ ಎಡೆ ಹೊಡೆಯುತ್ತಿರುವ ಈ ಯುವತಿ ಹೆಸರು ಸರಸ್ವತಿ ಲಮಾಣಿ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ತಾಂಡಾದಲ್ಲಿ ನೆಲೆಸಿರೋ ಬಡಕುಟುಂಬದ ಹೆಣ್ಣು ಮಗಳು.ಸಾಮಾನ್ಯವಾಗಿ ಎಲ್ಲವೂ ಸರಿ ಇದ್ದವರೇ ಇಂದು ಕೃಷಿ ಜೀವನಕ್ಕೆ ಹೊಂದಿಕೊಳ್ಳುವುದಕ್ಕೆ ಆಗುತ್ತಿಲ್ಲ. ಯುವಕರಂತೂ ಕೃಷಿ ಅಂದರೆ ಮೂಗು ಮುರಿಯುವ ಕಾಲ ಬಂದಿದೆ. ಆದರೆ ಸರಸ್ವತಿ ಮಾತ್ರ ತಾನು ಹೆಣ್ಣಾಗಿದ್ದರೂ ಸಹ, ಒಬ್ಬ ಅನುಭವಸ್ಥ ರೈತ ಏನೆಲ್ಲ ಕೃಷಿ ಚಟುವಟಿಕೆ ಮಾಡುತ್ತಾನೋ ಅವೆಲ್ಲವುಗಳನ್ನೂ ಬಹಳ ಸಲೀಸಾಗಿ ಮಾಡಿ ಮುಗಿಸುವಷ್ಟು ಪರಿಣತಿ ಪಡೆದಿದ್ದಾಳೆ.

ತಂದೆ ಅಪಘಾತವಾಗಿ ನೆಲ ಹಿಡಿದ ಪರಿಣಾಮ ಹಾಗೂ ಸಹೋದರರು ಯಾರೂ, ಮನೆ ಜವಾಬ್ದಾರಿ ತೆಗೆದುಕೊಳ್ಳದ ಕಾರಣ, ಸರಸ್ವತಿ ಮನೆಯ ಹಿರಿಯ ಮಗನಂತೆ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದಾಳೆ..

ಇನ್ನು ಕೃಷಿಯನ್ನ ಸಂಪೂರ್ಣ ಅರಿತಿರುವ ಈಕೆಗೆ ಜಮೀನಿನಲ್ಲಿನ ಎಂಥಹದೇ ಕೆಲಸ ಬಹಳ ಸರಳ. 6 ನೇ ತರಗತಿವರೆಗೂ ಮಾತ್ರ ಶಾಲೆಗೆ ಹೋಗಿ ಕಲಿತಿರುವ ಸರಸ್ವತಿ, ಸುಮಾರು ವರ್ಷದಿಂದ ಈ ಕಾಯಕದಲ್ಲಿ ತೊಡಗಿದ್ದಾಳೆ. ತಂದೆ ಮಾರುತಿ ಲಮಾಣಿ, ಬೈಕ್ ಅಪಘಾತದಲ್ಲಿ ಬಿದ್ದು ನರಗಳ ಶಕ್ತಿ ಕಳೆದುಕೊಂಡ ಕಾರಣ, ಇಡೀ ಕುಟುಂಬದ ನೊಗ ಸರಸ್ವತಿ ಹೆಗಲಿಗೆ ಬಿದ್ದಿದೆ. ಇಬ್ಬರು ಗಂಡು ಮಕ್ಕಳಿದ್ದರೂ ತಂದೆ ಮಾರುತಿಗೆ ಪ್ರಯೋಜನವಿಲ್ಲದಂತಾಗಿದೆ.

ಇಬ್ಬರು ಹೆಣ್ಣುಮಕ್ಕಳಲ್ಲಿ ಓರ್ವ ಮಗಳನ್ನ ಮದುವೆ ಮಾಡಿಕೊಡಲಾಗಿದೆ. ಆದರೆ ಕೊನೆ ಮಗಳು ಸರಸ್ವತಿ ಮಾತ್ರ ಹಾಸಿಗೆ ಹಿಡಿದಿದ್ದ ತಂದೆ ಆರೈಕೆ ಮಾಡುತ್ತಲೆ ವ್ಯವಸಾಯ ಕಲಿತಿದ್ದಾಳೆ. ಸರಸ್ವತಿ ಜಮೀನಿಗೆ ಇಳಿದರೆ ಸಾಕು ಎಂಥಹ ರೈತನೇ ಆಗಲಿ ಬೆರಗಾಗುವಂತೆ ಒಕ್ಕಲುತನ ಮಾಡ್ತಾಳೆ.

ಇನ್ನು ಮಗಳನ್ನ ಮದುವೆ ಮಾಡಿ ಗಂಡನ ಮನೆಗೆ ಕಳಿಸೋಣ ಅಂದ್ರೆ ಸರಸ್ವತಿ ಬಿಲ್ ಕುಲ್ ಒಪ್ಪುತ್ತಿಲ್ಲವಂತೆ. ನಾನು ಮದುವೆಯಾಗಿ ಹೋದರೆ ನಿಮ್ಮನ್ನ ನೋಡುವವರು ಯಾರು ಎಂಬುದು ಸರಸ್ವತಿಯ ಅಳಲು, ಮದುವೆ ವಿಚಾರ ಪ್ರಸ್ತಾಪಿಸಿದರೆ ಮನೆ ಬಿಟ್ಟು ಹೋಗ್ತಿನಿ ಎಂದು ಎಚ್ಚರಿಕೆ ನೀಡಿದ್ದಾಳೆ.

ಇದನ್ನೂ ಓದಿ: ನವಿಲು ತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ನೀರು ಬಿಡುಗಡೆ: 30 ಗ್ರಾಮಗಳಲ್ಲಿ ಹೈ ಅಲರ್ಟ್

ಸದ್ಯ ಆದರಳ್ಳಿ ತಾಂಡಾದಲ್ಲಿ ಮೂರು ಎಕರೆ ಜಮೀನು ಹೊಂದಿರುವ ಇವರ ಕುಟುಂಬ ಸರಸ್ವತಿಯಂಥ ಮಗಳನ್ನ ಪಡೆದಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಅಂತಿದ್ದಾರೆ
ಕಿವಿ‌ ಕೇಳೋದಿಲ್ಲ, ಮಾತು ಬರೋಲ್ಲ, ಇಷ್ಟೆಲ್ಲ ಮಾನಸಿಕವಾಗಿ ನೋವಿದ್ದರೂ ಸಹ ಮನೇಲಿ ಕೈ ಕಟ್ಟಿ ಕೂತಿಲ್ಲ‌ ಈ ಯುವತಿ. ಬಡಕುಟುಂಬದಲ್ಲಿ ಜನಿಸಿ, ಕೃಷಿಯಲ್ಲೇ ತನ್ನ ಇಡೀ ಜೀವನವನ್ನ ಖುಷಿಯಿಂದಾ ಕಾಣುತ್ತಾ ಯುವಕ, ಯುವತಿಯರಿಗೆ ಸರಸ್ವತಿ ಮಾದರಿ ಆಗಿರುವುದಂತೂ ಸುಳ್ಳಲ್ಲ‌. ಇತ್ತ ಕೃಷಿ ಸಾಧನೆ ಮಾಡೋ ರೈತರನ್ನ ಗುರುತಿಸುವ ಸರಕಾರ, ಸಾಧಾರಣ ಮಹಿಳೆಯಾಗಿ ಕೃಷಿಯಲ್ಲಿ ನೈಪುಣ್ಯತೆ ಪಡೆದು, ಇತ್ತ ಬಡ ತಂದೆ ತಾಯಿಗಳ ಜವಾಬ್ದಾರಿಯನ್ನೂ ಹೊತ್ತು ಮನೆಗೆ ಒಳ್ಳೆ ಹಿರಿಯ ಮಗನಾಗಿರುವ ಅನ್ನದಾತೆ ಸರಸ್ವತಿಯನ್ನ ಇ‌ನ್ನಾದರೂ ಗುರುತಿಸಬೇಕಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: