ಈ ಪೋರನಿಗೆ ಅಡ್ಡಿಯಾಗಿಲ್ಲ ಅಂಗವೈಕಲ್ಯ; ಎರಡು ಕೈ ಇಲ್ಲದಿದ್ದರೂ ಕಾಲಿನಲ್ಲೇ ಈತ ಬರೀತಾನೆ ಪರೀಕ್ಷೆ

ಹುಟ್ಟಿನಿಂದಲೇ ಕೈಗಳೇ ಇಲ್ಲದ ಪೋರನೊಬ್ಬ ಕಾಲಿನಲ್ಲೇ SSLC ಪರೀಕ್ಷೆ ಬರೆಯುತ್ತಿರುವುದು ಈಗ ರಾಜ್ಯದ ಗಮನ ಸೆಳೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೌಶಿಕ್ ಕಾಲಿನಲ್ಲಿ ಪರೀಕ್ಷೆ ಬರೆಯುತ್ತಿರುವ ಚಿತ್ರವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಲಿನಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ ಕೌಶಿಕ್.

ಕಾಲಿನಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ ಕೌಶಿಕ್.

  • Share this:
ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗಲ್ಲ ಎನ್ನುವ ಮಾತು ಕೇಳಿದ್ದೇವೆ. ಕೆಲವು ವಿಭಿನ್ನ ವ್ಯಕ್ತಿಗಳ ವಿಭಿನ್ನ ಸಾಹಸವನ್ನೂ ಕೇಳಿದ್ದೇವೆ. ಅಂಥ ವಿಭಿನ್ನ ವ್ಯಕ್ತಿತ್ವಗಳ ಸಾಲಿನಲ್ಲಿ ಇಲ್ಲೊಬ್ಬ ಪುಟ್ಟ ಪೋರ ಎದ್ದು ಬಂದಿದ್ದಾನೆ.

ಹೌದು..‌ ಹುಟ್ಟಿನಿಂದಲೇ ಕೈಗಳೇ ಇಲ್ಲದ ಪೋರನೊಬ್ಬ ಕಾಲಿನಲ್ಲೇ SSLC ಪರೀಕ್ಷೆ ಬರೆಯುತ್ತಿರುವುದು ಈಗ ರಾಜ್ಯದ ಗಮನ ಸೆಳೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೌಶಿಕ್ ಕಾಲಿನಲ್ಲಿ ಪರೀಕ್ಷೆ ಬರೆಯುತ್ತಿರುವ ಚಿತ್ರವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಂಥವರು ಬದುಕಿನ ಸಾರ್ಥಕತೆಯನ್ನು ಬಿಂಬಿಸುತ್ತಾರೆ. ಸಮಾಜದಲ್ಲಿ ಆತ್ಮವಿಶ್ವಾಸದ ಬದುಕನ್ನು ಸಮರ್ಥಿಸುತ್ತಾರೆ ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ.

ವಿಶೇಷ ಅಂದ್ರೆ ಬಂಟ್ವಾಳ ಪೇಟೆಯ ರಾಜೇಶ್ ಆಚಾರ್ಯ- ಜಲಜಾಕ್ಷಿ ದಂಪತಿಯ ಪುತ್ರನಾಗಿರುವ ಕೌಶಿಕ್, ಹುಟ್ಟಿನಿಂದಲೇ ಅಂಗವಿಕಲ. ಹಾಗಂತ, ತನ್ನ ವೈಕಲ್ಯದಿಂದ ಆತ ಹೆತ್ತವರಿಗೆ ಹೊರೆಯಾಗಿಲ್ಲ. ತನ್ನ ವೈಕಲ್ಯವನ್ನೇ ಮೆಟ್ಟಿ ನಿಂತು ಹೆತ್ತವರೇ ಬೆರಗಾಗುವ ರೀತಿ ಸಾಧನೆ ಮೆರೆದಿದ್ದಾನೆ. ಕೈ ಇಲ್ಲ ಎಂದು ನೊಂದುಕೊಳ್ಳುವ ಬದಲು ಕೈಗಳಿದ್ದವರೇ ನಾಚುವ ರೀತಿ ಪ್ರತಿಭೆ ತೋರುತ್ತಾನೆ. ಶಾಲೆಗಳಲ್ಲಿ ಡ್ಯಾನ್ಸ್ , ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಾಧನೆ ಮೆರೆದಿದ್ದಾನೆ.

ಕೈಯ ಬದಲು ಕಾಲು ಇದೆಯಲ್ಲ, ತನಗೆ ಕಾಲೇ ಎಲ್ಲವೂ ಅನ್ನುವ ರೀತಿ ಕಾಲ್ಚಳಕ ತೋರಿದ್ದಾನೆ. ಕ್ರಿಕೆಟ್ ಆಟದಲ್ಲಿ ಊನದ ಕೈಯಲ್ಲಿಯೇ ಬೌಲ್ ಮಾಡುವುದು ಬೆರಗು ಹುಟ್ಟಿಸುತ್ತದೆ. ಬ್ಯಾಟ್ಸ್ ಮನ್ ಹೊಡೆದ ಚೆಂಡನ್ನು ಕಾಲಿನಲ್ಲೇ ಹಿಡಿಯುವುದು ಕೈಗಳಿರುವ ಯುವಕರನ್ನು ನಾಚಿಸುತ್ತೆ. ಕೈ ಇಲ್ಲದಿದ್ದರೂ, ಮನೆ ಎದುರಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಈಜಾಡಿ ಸಾಹಸ ಮೆರೆಯುತ್ತಾನೆ. ಕಾಲಿನಲ್ಲಿ ನೃತ್ಯ ಮಾಡುತ್ತಲೇ ಬಾಯಲ್ಲಿ ಚಾಲಾಕಿ ತೋರುವ ಈತನ ಡ್ಯಾನ್ಸ್ ಕಂಡರೆ ವೈಕಲ್ಯ ಇದೆಯೆಂದು ಅನಿಸುವುದೇ ಇಲ್ಲ.

ಇದನ್ನೂ ಓದಿ : Banglore Rain: ಬೆಂಗಳೂರು ಇತಿಹಾಸದಲ್ಲೇ ಅತೀ ಹೆಚ್ಚು ದಾಖಲೆಯ ಮಳೆ; ನಿನ್ನೆ ಒಂದೇ ದಿನ ದಾಖಲಾಯ್ತು 185.5 ಮಿ.ಮೀ

ಈ ಬಾರಿ SSLC ಪಬ್ಲಿಕ್ ಪರೀಕ್ಷೆ ಆದರೂ ಯಾರದೇ ಸಹಾಯ ಪಡೆಯದೆ ನೆಲದಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿರುವುದು ಕೌಶಿಕ್ ಆತ್ಮವಿಶ್ವಾಸಕ್ಕೆ ಕನ್ನಡಿ. ಪರೀಕ್ಷೆ ಬರೆಯಲು ತೆರಳಲು ರಸ್ತೆ ಸರಿಯಿಲ್ಲ, ವಾಹನ ವ್ಯವಸ್ಥೆಯಿಲ್ಲ ಎನ್ನುವ ಇಲ್ಲಗಳ ಪಟ್ಟಿ ಮಾಡುವವರು ಕೌಶಿಕ್ ನಿಂದ ಕಲಿಯುವುದು ಸಾಕಷ್ಟಿದೆ.
First published: