ಕೊಡಗು: ಕನ್ನಡ ಸಿನಿಮಾ ಇಂಡಸ್ಟ್ರೀಸ್ ವಿರುದ್ಧ ಹತ್ತು ಹಲವು ಕೆಲಸಗಳು ನಡೆಯುತ್ತಿದ್ದು ಅವುಗಳನ್ನು ವಿರೋಧಿಸುವ ಕೆಲಸ ಆಗಬೇಕಾಗಿದೆ ಎಂದು ಖ್ಯಾತ ನಿರ್ದೇಶಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಡಿಕೇರಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೊಡಗು ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ, ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ಕನ್ನಡ ಸಿನಿಮಾಗಳ ಬಿಡುಗಡೆಗೆ ತೊಡಕಾಗುತ್ತಿದೆ ಎಂದು ನಟ ದರ್ಶನ್ ಫಿಲ್ಮ್ ಛೇಂಬರ್ ಮೊರೆ ಹೋಗಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, "ನಾನು ಹಲವು ವರ್ಷಗಳ ಕಾಲ ಡಬ್ಬಿಂಗ್ ವಿರೋಧಿ ಕ್ರಿಯಾ ಸಮಿತಿಯಲ್ಲಿ ಕೆಲಸ ಮಾಡಿದ್ದೇನೆ. ಅದು ಅಣ್ಣಾವ್ರು ಇದ್ದ ಸಂದರ್ಭ ಉತ್ತಮ ಕೆಲಸ ಆಗುತ್ತಿತ್ತು. ಡಬ್ಬಿಂಗ್ ಬೇಕು ಎಂದಾದ ಮೇಲೆ ಡಬ್ಬಿಂಗ್ ಗೆ ಅವಕಾಶ ನೀಡಲಾಯಿತು. ಸಿಂಪಲ್ ಲಾಜಿಕ್ ಎಂದರೆ ಡಬ್ಬಿಂಗ್ ಸಿನಿಮಾಗಳು ಬಂದಾದ ಮೇಲೆ ಬೇರೆ ಭಾಷೆಗಳ ಸಿನಿಮಾಗಳನ್ನು ನೇರವಾಗಿ ಕನ್ನಡದಲ್ಲಿ ಬಿಡುಗಡೆಗೆ ಅವಕಾಶ ನೀಡುವ ಅಗತ್ಯವೇನಿದೆ. ಕನ್ನಡ ಫಿಲ್ಮ್ ಇಂಡಸ್ಟ್ರೀಸ್‍ಗೆ ಸಾಕಷ್ಟು ಕಂಟಕ ಎದುರಾಗುವಂತ ಕೆಲಸ, ಪಿತೂರಿಗಳು ನಡೆಯುತ್ತಿವೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ನಾನು ಫಿಲ್ಮ್ ಛೇಂಬರ್ ಗೆ ಹೋಗಿಲ್ಲ. ಆದರೆ ಇದೊಂದು ಭಾಷೆಯ ವಿಷಯವಾಗಿರುವುದರಿಂದ ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರಲ್ಲಿ ಇದ್ದುಕೊಂಡೇ ಈ ಕುರಿತು ಕೆಲಸ ಮಾಡುತ್ತೇನೆ. ಯಾವುದೇ ಕ್ರಮ ನಿರ್ಧಾರ ತೆಗೆದುಕೊಳ್ಳುವಾಗ ಭಾವನಾತ್ಮಕ ವಿಷಯವಾಗಿ ತೆಗೆದುಕೊಳ್ಳಬಾರದು, ಅದಕ್ಕೆ ಬದಲಾಗಿ ಕಾನೂನಾತ್ಮಕವಾಗಿ ಕೆಲಸಗಳಾದರೆ ಅದು ಶಾಶ್ವತವಾಗಿ ಉಳಿಯುತ್ತದೆ. ಹೀಗಾಗಿ ನಟ ದರ್ಶನ್ ಅಷ್ಟೇ ಅಲ್ಲ, ಎಲ್ಲರೂ ಹೊಂದಾಗಿ ತಮ್ಮ ಶಕ್ತಿಯಾಗಬೇಕಾಗಿದೆ" ಎಂದು ನಾಗಭರಣ ಹೇಳಿದ್ದಾರೆ.
ಇನ್ನು ಬೆಳಗಾವಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಮರಾಠಿಗರೇ ಇರುವುದರಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎನ್ನೋ ಮಹಾರಾಷ್ಟ್ರ ಸಿಎಂ ಉದ್ಭವ್ ಠಾಕ್ರೆ ಮಾತಿಗೆ ತಿರುಗೇಟು ನೀಡಿರುವ ಟಿ.ಎಸ್. ನಾಗಾಭರಣ, "ಹುಚ್ಚನ ಮಾತನ್ನು ನೆಗ್ಲೇಟ್ ಮಾಡೋದು ಒಳ್ಳೇಯದು. ಉದ್ಧವ್ ಠಾಕ್ರೆ ಮಾತು ಸಾಂಧರ್ಭಿಕವಾಗಿಯೂ ಇರಲ್ಲ, ಅವರ ಮಾತಿನಲ್ಲಿ ತಾತ್ವಿಕತೆಯೂ ಇರಲ್ಲ. ಅದಕ್ಕೆ ಉತ್ತರ ನೀಡದೇ ಇದ್ದರೆ ಒಳ್ಳೆಯದು.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ವಿರುದ್ಧ ಟೀಕೆ, ನ್ಯಾಯಾಂಗ ನಿಂದನೆ ಕೇಸ್; ಕ್ಷಮೆ ಕೇಳಲು ನಿರಾಕರಿಸಿದ ಕುನಾಲ್ ಕಮ್ರಾ
ನಾವು ಪ್ರತಿಕ್ರಿಯಿಸುತ್ತಲೇ ಇದ್ದರೆ, ಅದನ್ನೇ ಹೇಗೆ ಬೆಂಕಿ ಹಚ್ಚಬಹುದೆಂದು ಹೀಗೆ ಮಾತನಾಡುತ್ತಲೇ ಇರುತ್ತಾರೆ. ಆದ್ದರಿಂದ ಹುಚ್ಚುನ ಮಾತನ್ನು ಕಡೆಗಣಿಸುವುದೇ ಒಳ್ಳೆಯದು" ಎಂದು ನಾಗಾಭರಣ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ