ಲಂಪಿಸ್ಕಿನ್ ರೋಗ ನಿಯಂತ್ರಣಕ್ಕೆ ಬರುವಷ್ಟರಲ್ಲೇ ಕತ್ತೆಗಳಲ್ಲಿ ‘ಸುರ್ರಾ’ ಎಂಬ ವಿಚಿತ್ರ ವೈರಸ್ ಪತ್ತೆ!

ಈ ರೋಗದಿಂದ ಮನುಷ್ಯರಿಗೆ ಅಪಾಯವಿಲ್ಲವಾದರೂ ಅದೆಷ್ಟೋ ಜನರ ಅನ್ನದ ಮೂಲವಾಗಿರುವ ಜಾನುವಾರುಗಳಿಗೆ ಈ ರೋಗ ತಗುಲಿದರೆ ನಷ್ಟಕ್ಕೆ ಕಾರಣವಾಗಲಿದೆ. ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಈ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ಕತ್ತೆಗಳು

ಕತ್ತೆಗಳು

  • Share this:
ಬೀದರ್;‌ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಜಾನುವಾರುಗಳಲ್ಲಿ ಕಾಣಿಸಿಕೊಂಡಿದ್ದ ಚರ್ಮ ಗಡ್ಡೆ (ಲಂಪಿಸ್ಕಿನ್) ರೋಗವೇ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆಗಲೇ ಮತ್ತೊಂದು ಬಗೆಯ ವಿಚಿತ್ರ ರೋಗ ಬೀದರ್ ಜಿಲ್ಲೆಯ ಕತ್ತೆಗಳಲ್ಲಿ ಕಾಣಿಸಿಕೊಂಡಿದೆ. ಔರಾದ್ ತಾಲೂಕೊಂದರಲ್ಲೇ 11 ಕತ್ತೆಗಳು ಮೃತಪಟ್ಟಿವೆ.

ಲಂಪಿಸ್ಕಿನ್ ರೋಗ ಜಾನುವಾರುಗಳಲ್ಲಿ ಕಾಣಿಸಿಕೊಂಡು, ಸೃಷ್ಟಿಸಿದ್ದ ಆತಂಕವೇ ದೂರವಾಗಿಲ್ಲ. ಅಷ್ಟರಲ್ಲೇ ಬೀದರ್ ಜಿಲ್ಲೆಯ ಕತ್ತೆಗಳಲ್ಲಿ ಮತ್ತೆ ಸುರ್ರಾ ವೈರಸ್ ಪತ್ತೆಯಾಗಿದೆ. ಇದರಿಂದ ಜಿಲ್ಲೆಯ ಔರಾದ್‌ ತಾಲ್ಲೂಕಿನ ಹಾಲಹಳ್ಳಿ, ಬಳತ (ಬಿ), ನಿಡೋದಾ ಹಾಗೂ ಕೊಳ್ಳೂರ್ ಗ್ರಾಮಗಳಲ್ಲಿ ಕತ್ತೆಗಳು ನಿಗೂಢವಾಗಿ ಸಾವಿಗೀಡಾಗುತ್ತಿವೆ. ಈ ಬಗ್ಗೆ ಕತ್ತೆ ಮಾಲೀಕರೊಬ್ಬರು ದೂರು ನೀಡಿದ ನಂತರ ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಅತಿಯಾದ ಜ್ವರ, ಉಸಿರಾಟದ ತೊಂದರೆ ಹಾಗೂ ಕಾಲುಗಳಲ್ಲಿ ಊತ ಬಂದು ಕತ್ತೆಗಳು ಮೃತಪಟ್ಟಿರುವುದು ದೃಢಪಟ್ಟಿತ್ತು.

ಜಿಲ್ಲೆಯ ಔರಾದ್‌ ಹಾಗೂ ಕಮಲನಗರದ ಗಡಿ ಗ್ರಾಮಗಳಲ್ಲಿ ಸಾರಿಗೆ ಸಂಪರ್ಕದ ಕೊರತೆ ಇದೆ. ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆದ ಆಹಾರ ಧಾನ್ಯಗಳನ್ನು ತರಲು ಹಾಗೂ ಅಗತ್ಯ ಸಾಮಗ್ರಿಗಳನ್ನು ಗ್ರಾಮಗಳಿಗೆ ಒಯ್ಯಲು ಈಗಲೂ ಕೆಲವರು ಕತ್ತೆಗಳನ್ನೇ ಬಳಸುತ್ತಾರೆ. ಅವಿಭಜಿತ ಔರಾದ್‌ ತಾಲ್ಲೂಕಿನಲ್ಲಿ 1,680 ಕತ್ತೆಗಳು ಹಾಗೂ ಒಟ್ಟು 42 ಕುದುರೆಗಳಿವೆ. ಇನ್ನು ಸತ್ತ ಕತ್ತೆಗಳ ರಕ್ತದ ಮಾದರಿ ಪರೀಕ್ಷಿಸಿದಾಗ ಟ್ರಿಪನಾಸೋಮಾ ಎನ್ನುವ ರಕ್ತದ ಪರಾವಲಂಬಿ (ಪ್ರೊಟೋಝೋವಾ) ಜೀವಿಯಿಂದ ಬರುವ ‘ಸುರ್ರಾ’ ರೋಗ ಬಂದಿರುವುದು ದೃಢಪಟ್ಟಿದೆ. ಈ ವೈರಾಣುಗಳು ಕತ್ತೆಗಳ ದೇಹದಲ್ಲಿ ಪರಾವಲಂಬಿ ಸೇರಿಕೊಂಡು ರಕ್ತ ಹೀರಿ ನಿತ್ರಾಣಗೊಳಿಸುತ್ತವೆ. ಇದರಿಂದ ರಕ್ತ ಹೀನತೆಯಿಂದ ಬಳಲುವ ಕತ್ತೆಗಳು ಸಾವಿಗೀಡಾಗುತ್ತವೆ’ ಎನ್ನುತ್ತಾರೆ ಪಶುವೈದ್ಯರು‌.

ಇದನ್ನು ಓದಿ: ಪುತ್ತೂರು ಮೆಡಿಕಲ್ ಕಾಲೇಜು ಜಾಗವನ್ನು ಇತರೆ ಉದ್ಧೇಶಗಳಿಗೆ ಬಳಸದಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಕಲ್ಯಾಣ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ರೋಗ ಕಾಣಿಸಿಕೊಂಡಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಜಾನುವಾರು ಮಾಲೀಕರಿಗೆ ಈಗಾಗಲೇ ಸೂಚಿಸಲಾಗಿದೆ. ಮುಂಜಾಗ್ರತೆಯಾಗಿ ಕತ್ತೆಗಳಲ್ಲಿ ರಕ್ತ ಹೀನತೆ ಉಂಟಾಗದಂತೆ ಔಷಧ ಹಾಗೂ ಮಾತ್ರೆಗಳನ್ನು ಸಹ ಕೊಡಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಕತ್ತೆ ಹಾಗೂ ಕುದುರೆಗಳ ಮೇಲೆ ನಿಗಾ ಇಡಲಾಗಿದೆ. ರೋಗ ಲಕ್ಷಣ ಕಂಡು ಬಂದ 150 ಕತ್ತೆಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಸುರ್ರಾ ರೋಗ ಕುದುರೆ, ನಾಯಿ, ಬೆಕ್ಕು, ಕುರಿ ಹಾಗೂ ಮೇಕೆಗಳಲ್ಲೂ ಕಾಣಿಸಿಕೊಳ್ಳುತ್ತದೆ.

ಪಶು ವೈದ್ಯಕೀಯ ಇಲಾಖೆಯಲ್ಲಿ ರೋಗ ನಿರೋಧಕ ಚುಚ್ಚುಮದ್ದು, ಮಾತ್ರೆ ಹಾಗೂ ಔಷಧಗಳು ಸಹ ಲಭ್ಯ ಇವೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಕತ್ತೆ ಮಾಲೀಕರಿಗೆ ಔಷಧಗಳನ್ನು ಸಹ ವಿತರಿಸಲಾಗಿದೆ. ಈ ರೋಗದಿಂದ ಮನುಷ್ಯರಿಗೆ ಅಪಾಯವಿಲ್ಲವಾದರೂ ಅದೆಷ್ಟೋ ಜನರ ಅನ್ನದ ಮೂಲವಾಗಿರುವ ಜಾನುವಾರುಗಳಿಗೆ ಈ ರೋಗ ತಗುಲಿದರೆ ನಷ್ಟಕ್ಕೆ ಕಾರಣವಾಗಲಿದೆ. ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಈ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.
Published by:HR Ramesh
First published: