• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮಳೆಗೆ ನಲುಗಿದ ರೈತರ ಬದುಕು; ಧಾರವಾಡ ಜಿಲ್ಲೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ

ಮಳೆಗೆ ನಲುಗಿದ ರೈತರ ಬದುಕು; ಧಾರವಾಡ ಜಿಲ್ಲೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ

ರೋಗಕ್ಕೆ ತುತ್ತಾಗಿರುವ ಬೆಳೆ

ರೋಗಕ್ಕೆ ತುತ್ತಾಗಿರುವ ಬೆಳೆ

ಸತತವಾಗಿ ಸುರಿಯುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾದ ಪರಿಣಾಮ ಬೆಳೆಗಳು ಹಳದಿ-ಕಂದು ವರ್ಣಕ್ಕೆ ತಿರುಗಿ ಕೆಲ ರೋಗಗಳಿಗೆ ತುತ್ತಾಗಿವೆ.

  • Share this:

ಧಾರವಾಡ(ಆಗಸ್ಟ್​.17): ಮುಂಗಾರು ಮಾನ್ಸೂನ್ ರೈತರ ಬದುಕಿನಲ್ಲಿ ಜಲ್ಲಾಟವಾಡುತ್ತಿದೆ. ಕಳೆದ ವರ್ಷವು ಮುಂಗಾರು ಮಳೆ ಆರ್ಭಟಕ್ಕೆ ಅದೇಷ್ಟೂ ಕುಟುಂಬಗಳು ಬಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದವು. ಈಗ ಮತ್ತೆ ಧಾರವಾಡ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನರ ಬದುಕು ದುಸ್ತರಗೊಂಡಿದೆ. ನಿರಂತರ ಸುರಿಯುವ ಮಳೆಯಿಂದ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ನೀರು ಪಾಲಾಗಿವೆ. ಇದರಿಂದ ರೈತರು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸ್ಥಿತಿ ಬಂದೊದಗಿದೆ.


ಕೆಲವು ದಿನ ಕೊಂಚ ಬಿಡುವ ನೀಡಿದ ಮಳೆರಾಯ, ಮೂರು ದಿನಗಳಿಂದ ಅಬ್ಬರಸಿ ಬೊಬ್ಬೆ ಹಾಕುತ್ತಿದ್ದಾನೆ. ವರುಣನ ರೌದ್ರ ನರ್ತನಕ್ಕೆ ಜಿಲ್ಲೆಯಲ್ಲಿ ಸುಮಾರು 250ಕ್ಕೂ ಅಧಿಕ ಮನೆಗಳಗೆ ಹಾನಿಯಾಗಿವೆ. ಅಲ್ಲದೇ, ಒಬ್ಬರು ಬಲಿಯಾಗಿದ್ದಾರೆ. ಅತಿವೃಷ್ಟಿಯಿಂದ 13 ಜಾನುವಾರುಗಳು ಸಹ ಮೃತಪಟ್ಟಿವೆ. ಇದರಿಂದ ಸಾರ್ವಜನಿಕರು ಹಾಗೂ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ.


ಕಳೆದ ವರ್ಷ ಈ ಅವಧಿಯಲ್ಲಿ ಜಿಲ್ಲೆಯಲ್ಲಿ 103 ಮಿಮೀ ವಾಡಿಕೆ ಮಳೆ ಪೈಕಿ 363 ಮಿಮೀ ಮಳೆ ಸುರಿದಿತ್ತು. (ಆಗಸ್ಟ್ ತಿಂಗಳಲ್ಲಿ) ಈ ಬಾರಿ ಕಳೆದ ಜೂನ್​​ 1 ರಿಂದ ಆಗಸ್ಟ್ 1ವರೆಗೆ 337 ಮಿಮೀ ವಾಡಿಕೆ ಮಳೆ ಪೈಕಿ 405 ಮಿಮೀ ಮಳೆ ಸುರಿದಿದೆ. ಈ ವರ್ಷ ಆಗಸ್ಟ್ 1 ರಿಂದ 13 ರವರೆಗೆ 63 ಮಿ ಮೀ ವಾಡಿಕೆ ಮಳೆ ಪೈಕಿ 138 ಮಿ ಮೀ ಮಳೆ ಸುರಿದಿದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ಸಧ್ಯಕ್ಕೆ ಮಳೆ ಪ್ರಮಾಣ ಕಡಿಮೆ ಇದ್ದರೂ ಮುಂದೆ ಹೆಚ್ಚಾಗುವ ಸಾಧ್ಯತೆ ಇದೆ.


ಕಳೆದ ವರ್ಷ ಧಾರವಾಡ ಜಿಲ್ಲೆಯಲ್ಲಿ ಒಟ್ಟು 20,975 ಮನೆಗಳು ಹಾನಿಯಾಗಿದ್ದು, ಪ್ರಸಕ್ತ ವರ್ಷ 250 ಮನೆಗಳು ಹಾನಿ ಸಂಭವಿಸಿದೆ. ಕಳೆದ ವರ್ಷ ಮಳೆಯಿಂದ ಭತ್ತ-3,970, ಮೆಕ್ಕೆಜೋಳ-34,921, ಸೋಯಾಬಿನ್ -26,763, ಹೆಸರು-26,931, ಉದ್ದು- 3,144, ತೊಗರಿ-608, ಶೇಂಗಾ-10,982, ಹತ್ತಿ-40,235, ಕಬ್ಬು-2,374 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 16,3903 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ. ಪ್ರಸಕ್ತ ವರ್ಷವೂ ಬರೋಬ್ಬರಿ 12,857 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು ರೈತರನ್ನು ಕಂಗಾಲಾಗಿಸಿದೆ.


ಈಗ ಮತ್ತೆ ಮಳೆ ಆರಂಭವಾದ ಹಿನ್ನೆಲೆ ಕೊಯ್ಲಿಗೆ ಬಂದ ಹೆಸರು ಬೆಳೆ ವರುಣನ ರೌದ್ರ ನರ್ತನಕ್ಕೆ ಹೊಲದಲ್ಲಿಯೇ ಮೊಳಕೆ ಒಡೆದಿವೆ. ಇದರಿಂದ ಜಿಲ್ಲೆಯ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ಉಂಟಾಗಿದೆ.


ಇದನ್ನೂ ಓದಿ : ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆಗೆ ಒತ್ತಾಯ ; ಎಜ್ಯುಕೇಷನ್ ತುಳು ಹ್ಯಾಷ್ ಟ್ಯಾಗ್ ಅಭಿಯಾನಕ್ಕೆ ನಟ ಜಗ್ಗೇಶ್ ಬೆಂಬಲ


ಸತತವಾಗಿ ಸುರಿಯುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾದ ಪರಿಣಾಮ ಬೆಳೆಗಳು ಹಳದಿ-ಕಂದು ವರ್ಣಕ್ಕೆ ತಿರುಗಿ ಕೆಲ ರೋಗಗಳಿಗೆ ತುತ್ತಾಗಿವೆ. ಮೆಕ್ಕೆಜೋಳಕ್ಕೆ ಸೂಳಿನೊಣ ಬಾಧೆ, ಹತ್ತಿ ಬೆಳೆಗೆ ಕುಳೆ ರೋಗ ಕಾಣಿಸಿಕೊಂಡರೆ, ಈರಳ್ಳಿ ಹೊಲದಲ್ಲಿಯೇ ಕೊಳೆಯುತ್ತಿದೆ.ಈ ವರ್ಷವು ಮುಂಗಾರು ಬೆಳೆಗಳು ಸಮೃದ್ಧವಾಗಿ ಬೆಳೆದು ಇನ್ನೆನು ಕಟಾವು ಮಾಡಬೇಕೆನ್ನುವಷ್ಟರಲ್ಲಿ‌ ಮಳೆ‌ ಮತ್ತೆ ತನ್ನ ಅಟ್ಟಹಾಸ ಪ್ರದರ್ಶನ ಮಾಡಿ ಬೆಳೆದ ಬೆಳೆ ನೆಲಕಚ್ಚುವಂತೆ‌ ಮಾಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ರೈತರ ಬಾಳು.

First published: