ಸೋಂಕಿತರ ಪರದಾಟ ತಪ್ಪಿಸಲು ಧಾರವಾಡ ಜಿಲ್ಲಾಡಳಿತ ಹೊಸ ಪ್ಲ್ಯಾನ್ ; ನೂತನ ಐಸೋಲೇಷನ್ ವಾರ್ಡ್ ಗೆ ಭರದ ಸಿದ್ಧತೆ

ಇದೀಗ ಧಾರವಾಡ ಜಿಲ್ಲಾಡಳಿತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿಯೇ ಹೊಸತೊಂದು ಐಸೋಲೇಷನ್ ವಾರ್ಡ್ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ

news18-kannada
Updated:July 29, 2020, 2:59 PM IST
ಸೋಂಕಿತರ ಪರದಾಟ ತಪ್ಪಿಸಲು ಧಾರವಾಡ ಜಿಲ್ಲಾಡಳಿತ ಹೊಸ ಪ್ಲ್ಯಾನ್ ; ನೂತನ ಐಸೋಲೇಷನ್ ವಾರ್ಡ್ ಗೆ ಭರದ ಸಿದ್ಧತೆ
ಐಸೋಲೇಷನ್ ವಾರ್ಡ್
  • Share this:
ಹುಬ್ಬಳ್ಳಿ(ಜುಲೈ.29): ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಲೇ ಇದೆ. ಕೊರೋನಾ ಸೋಂಕಿತರ ಚಿಕಿತ್ಸೆಗೆ ಬೆಡ್‌ಗಳ ಕೊರತೆಯಾಗುತ್ತಿದೆ. ಹೀಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೆ 300 ಹಾಸಿಗೆಯುಳ್ಳ ನೂತನ ಐಸೋಲೇಷನ್ ವಾರ್ಡ್‌ನ್ನು ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ.

ಕೊರೋನಾ ಸೋಂಕಿತರ‌ ಪರದಾಟಕ್ಕೆ ಆದಷ್ಟು ಬೇಗ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಹುಬ್ಬಳ್ಳಿಯ ಕಿಮ್ಸ್ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಈಗಾಗಲೇ 250 ಹಾಸಿಗೆಯುಳ್ಳ ಕೊರೋನಾ ಐಸೋಲೇಷನ್ ವಾರ್ಡ್ ಇದೆ. ತೀವ್ರ ಉಸಿರಾಟದ ಸಮಸ್ಯೆಯುಳ್ಳ‌ ಕೊರೋನಾ ಸೋಂಕಿತರಿಗೆ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ನಿಂದಾಗಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಸಾಗಿದೆ. ಹೀಗಾಗಿ ಕಿಮ್ಸ್ ಐಸೋಲೇಷನ್ ವಾರ್ಡ್ ಕಳೆದ 15 ದಿನಗಳ ಹಿಂದೆಯೇ ಸಂಪೂರ್ಣ ಭರ್ತಿಯಾಗಿದೆ.

ಇದೀಗ ಐಸೋಲೇಶನ್ ವಾರ್ಡ್‌ನ ಅವಶ್ಯಕತೆಯಿರುವ ಕೊರೋನಾ ಸೋಂಕಿತರಿಗೆ ಕಿಮ್ಸ್‌ನಲ್ಲಿ ಬೆಡ್‌ಗಳಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಖಾಸಗಿ ಆಸ್ಪತ್ರೆಗೆ ಆರ್ಥಿಕವಾಗಿ ಸಬಲರಾದವರು ಮಾತ್ರ ಹೋಗಿ ಚಿಕಿತ್ಸೆ ಪಡೆಯಬಹುದು. ಮಧ್ಯಮ ವರ್ಗದವರು, ಬಡವರು ಏನು ಮಾಡಬೇಕು ? ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಇದೀಗ ಧಾರವಾಡ ಜಿಲ್ಲಾಡಳಿತ  ಪರಿಹಾರ ಕಲ್ಪಿಸಲು ಮುಂದಡಿ ಇಟ್ಟಿದೆ. ಕಿಮ್ಸ್ ಆಸ್ಪತ್ರೆಯಲ್ಲಿಯೇ ಹೊಸತೊಂದು ಐಸೋಲೇಷನ್ ವಾರ್ಡ್ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ಕಿಮ್ಸ್ ಆಸ್ಪತ್ರೆಯ ಮೂರನೆಯ ಮಹಡಿಯಲ್ಲಿರುವ ವಾರ್ಡ್ ನಂಬರ್ 301 ರಿಂದ 306ರ ವರೆಗಿನ ಕೊಠಡಿಗಳನ್ನು ಕೊರೋನಾ ಐಸೋಲೇಷನ್ ವಾರ್ಡ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಆಕ್ಸಿಜನ್ ಪೈಪ್ ಲೈನ್, ವೆಂಟಿಲೇಟರ್ ಸ್ಟ್ಯಾಂಡ್, ಎಲೆಕ್ಟ್ರಿಫಿಕೇಶನ್, ಮಂಚ, ಹಾಸಿಗೆ ಸೇರಿದಂತೆ ಅಗತ್ಯ ವಸ್ತುಗಳನ್ನು ಸಜ್ಜುಗೊಳಿಸುವ ಕಾರ್ಯ ತೀವ್ರಗತಿಯಲ್ಲಿ ನಡೆದಿದೆ. ಸ್ನಾನ ಗೃಹ, ವೈದ್ಯರು, ಶುಶ್ರೂಷಕ ಸಿಬ್ಬಂದಿಗಾಗಿ ಪ್ರತ್ಯೇಕ ಕೋಣೆಗಳನ್ನೂ ಸಿದ್ಧಪಡಿಸಲಾಗುತ್ತಿದೆ.

ಈಗಾಗಲೇ ಹುಬ್ಬಳ್ಳಿಯ ಕಿಮ್ಸ್ ಸುಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ 32 ವೆಂಟಿಲೇಟರ್‌ಗಳಿವೆ. ಈಗ ಸಿದ್ಧವಾಗುತ್ತಿರುವ 300 ಹಾಸಿಗೆಯ ಆಸ್ಪತ್ರೆಗೆ 30 ವೆಂಟಿಲೇಟರ್‌ಗಳು ಬೇಕಿವೆ. ಈ ಕುರಿತು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅವರು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌ರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : Umesh Katti -ನಾನು ಹಾಗೂ ಶಾಸಕ ತಿಪ್ಪಾರೆಡ್ಡಿ ಇಬ್ಬರು ಸಚಿವರಾಗುವ ಕಾಲ ಬಹಳ ದೂರವಿಲ್ಲ ; ಶಾಸಕ ಉಮೇಶ್ ಕತ್ತಿ

ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದ್ದು ಒಂದೆರಡು‌ ದಿನಗಳಲ್ಲಿ ವೆಂಟಿಲೇಟರ್‌ಗಳು ಕಿಮ್ಸ್‌ಗೆ ಬರಲಿವೆ. ಜನರಿಗೆ ತೊಂದರೆಯಾಗದಿರಲು ಜಿಲ್ಲಾಡಳಿತ ಆದಷ್ಟು ಬೇಗ ಐಸೋಲೇಷನ್ ವಾರ್ಡ್ ಸಿದ್ಧ ಪಡಿಸುವಲ್ಲಿ ನಿರತವಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಇನ್ನೊಂದು ವಾರದಲ್ಲಿ ಹೊಸ ಕೋವಿಡ್ ಐಸೋಲೇಷನ್ ವಾರ್ಡ್ ಕಾರ್ಯಾರಂಭ ಮಾಡಲಿದೆ. ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3380ಕ್ಕೆ ತಲುಪಿದ್ದು ಇದುವರೆಗೆ 103 ಜನರು ಮೃತಪಟ್ಟಿದ್ದಾರೆ. 1888 ಸಕ್ರೀಯ ಪ್ರಕರಣಗಳಿದ್ದು ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಒಟ್ಟಾರೆ ಕೊರೋನಾ ಸೋಂಕಿನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಧಾರವಾಡ ಜಿಲ್ಲಾಡಳಿತ ಸಮಾರೋಪಾದಿಯಲ್ಲಿ ಕೆಲಸ‌ ಮಾಡುತ್ತಿದೆ. ಕಿಮ್ಸ್ ಆಸ್ಪತ್ರೆಯ ನೂತನ ಕೋವಿಡ್ ವಾರ್ಡ್ ಆದಷ್ಟು ಬೇಗ ಸಿದ್ಧಗೊಂಡರೆ ಸೋಂಕಿತರ ಚಿಕಿತ್ಸೆಗೆ ಮತ್ತಷ್ಟು ಬಲ ಬರಲಿದೆ.
Published by: G Hareeshkumar
First published: July 29, 2020, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading